ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೊ ಪ್ರೈಮ್‌ ಅವಧಿ ಮತ್ತೆ ಒಂದು ವರ್ಷ ವಿಸ್ತರಣೆ

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮೊಬೈಲ್‌ ನೆಟ್‌ವರ್ಕಿಂಗ್‌ ಕ್ಷೇತ್ರದಲ್ಲಿ ನವ ಸಂಚಲನ ಮೂಡಿಸಿದ್ದ ರಿಲಯನ್ಸ್‌ ಜಿಯೊ ಕಂಪೆನಿ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಬಂಪರ್ ಕೊಡುಗೆ ನೀಡಿದೆ.

ಜಿಯೊ ಪ್ರೈಮ್‌ ಸದಸ್ಯರ ಮೊಬೈಲ್‌ ಬಳಕೆ ಸೇವೆಯನ್ನು ಗ್ರಾಹಕರು ಯಾವುದೇ ಶುಲ್ಕ ನೀಡದೆ ಮತ್ತೊಂದು ವರ್ಷ ಉಚಿತವಾಗಿ ಬಳಕೆ ಮಾಡಬಹುದು. ಈಗಾಗಲೇ ಪ್ರೈಮ್‌ ಸದಸ್ಯರಾಗಿರುವ ಬಳಕೆದಾರರು ಈ ಸೇವೆಯನ್ನು ಬಳಕೆ ಮಾಡಬಹುದಾಗಿದೆ. ಈ ಹಿಂದೆ ಪ್ರೈಮ್ ಸದಸ್ಯರು ವಾರ್ಷಿಕ 99 ರೂಪಾಯಿ ಪಾವತಿಸಿ ಮುಂದಿನ 12 ತಿಂಗಳವರೆಗೆ ಬಳಕೆ ಮಾಡಬಹುದಿತ್ತು. ಇದನ್ನು ರದ್ದು ಮಾಡಿ ವಿಸ್ತರಣೆಯ ಹೊಸ ಕೊಡುಗೆ ನೀಡಿದೆ.

ಇದೀಗ ಮತ್ತೆ 12 ತಿಂಗಳ ಪ್ರೈಮ್‌ ಸದಸ್ಯತ್ವವನ್ನು ವಿಸ್ತರಣೆ ಮಾಡಿರುವುದು ಜಿಯೊ ಬಳಕೆದಾರರಿಗೆ ಅನುಕೂಲವಾಗಲಿದೆ.

**

ಆಫ್ರಿಕಾ ದೇಶಗಳಿಗೂ ಮಹಿಳಾ ಸುರಕ್ಷಾ ಆ್ಯಪ್‌

ಮೊಬೈಲ್‌ ಹಾಗೂ ಇಂಟರ್‌ನೆಟ್‌ ಬಳಕೆಯಲ್ಲಿ ಹಿಂದುಳಿದಿರುವ ಆಫ್ರಿಕಾ ದೇಶಗಳಲ್ಲಿ ಮುಂದಿನ ವರ್ಷ ಮಹಿಳಾ ಸುರಕ್ಷತೆ ಆ್ಯಪ್‌ ಕಾರ್ಯಾರಂಭ ಮಾಡಲಿದೆ.

ಅಮೆರಿಕದ ಬಾಲ್ಟಿಮೋರ್ ಮಹಾನಗರದ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ ಮಹಿಳಾ ಸುರಕ್ಷತೆ ಆ್ಯಪ್ ರೂಪಿಸುತ್ತಿದೆ. ಇದಕ್ಕೆ ‘ಮೈಪ್ಲಾನ್‌’ ಎಂದು ಹೆಸರಿಡಲಾಗಿದೆ. ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಹಿರಿಯ ಪ್ರಾದ್ಯಾಪಕ ನ್ಯಾನ್ಸಿ ಗ್ಲಾಸ್‌  ಈ ಆ್ಯಪ್ ನಿರ್ವಹಣೆಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

ಇದೇ ಆ್ಯಪ್‌ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌  ದೇಶಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದು ಇದನ್ನು ಲಕ್ಷಾಂತರ ಮಹಿಳೆಯರು ಬಳಕೆ ಮಾಡುತ್ತಿದ್ದಾರೆ.

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ, ಅಪಹರಣ ಮತ್ತು ಅತ್ಯಾಚಾರಗಳನ್ನು ಈ ಆ್ಯಪ್ ನೆರವಿನ ಮೂಲಕ ಸಾಧ್ಯವಾದಷ್ಟು ಮಟ್ಟಿಗೆ ತಡೆಯಬಹುದು. ಅಲ್ಲದೆ ದುಷ್ಕೃತ್ಯ ನಡೆಸುವ ಅಪರಾಧಿಗಳನ್ನು ಸುಲಭವಾಗಿ ಪತ್ತೆ ಮಾಡಲು ಈ ಆ್ಯಪ್ ಸಹಕಾರಿಯಾಗಲಿದೆ ಎಂದು ನ್ಯಾನ್ಸಿ ಗ್ಲಾಸ್‌ ತಿಳಿಸಿದ್ದಾರೆ.

ಮುಂದಿನ ವರ್ಷ ಆಫ್ರಿಕಾ ದೇಶಗಳಾದ ಕೀನ್ಯಾ, ಸೋಮಾಲಿಯಾ, ಉಗಾಂಡ, ಘಾನಾ ಸೇರಿದಂತೆ ಇನ್ನು ಕೆಲವು ಬಡ ದೇಶಗಳಲ್ಲಿ ಈ ಆ್ಯಪ್‌ ಪರಿಚಯಿಸಲಾಗುವುದು ಎಂದು ‘ಮೈಪ್ಲಾನ್‌’  ಆ್ಯಪ್‌ ತಂಡ ತಿಳಿಸಿದೆ.

**

ಹ್ಯಾಕಿಂಗ್‌ ತಡೆಗೆ ಹೊಸ ಅಪ್ಲಿಕೇಷನ್‌

ಅಮೆರಿಕದ ನ್ಯೂರ್ಯಾಕ್‌ ಸಿಟಿಯ ಸ್ಥಳೀಯ ಆಡಳಿತ ಹ್ಯಾಕಿಂಗ್‌ ತಡೆಗೆ ಉಚಿತ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಇದನ್ನು ಸ್ಮಾರ್ಟ್‌ಪೋನ್‌ ಹಾಗೂ ಕಂಪ್ಯೂಟರ್‌ ಬಳಕೆದಾರರು ಉಚಿತವಾಗಿ ಪಡೆಯಬಹುದು ಎಂದು ನ್ಯೂರ್ಯಾಕ್‌ ಸ್ಥಳೀಯ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವಾರ ಅಟ್ಲಾಂಟದಲ್ಲೂ ಹ್ಯಾಕಿಂಗ್ ದಾಳಿ ನಡೆದಿತ್ತು. ಸಾರ್ವಜನಿಕ ವೈಫೈ ಕೇಂದ್ರಗಳ ಮೂಲಕ ಹ್ಯಾಕಿಂಗ್ ಮಾಡಲಾಗಿತ್ತು. ಇದನ್ನು ಮನಗಂಡಿರುವ ತಂತ್ರಜ್ಞರು ನ್ಯೂರ್ಯಾಕ್‌ ನಗರಕ್ಕೆ ಸೀಮಿತವಾಗಿರುವಂತೆ ಹ್ಯಾಕಿಂಗ್ ತಡೆ ಅಪ್ಲಿಕೇಶನ್‌ ಅಭಿವೃದ್ದಿ ಮಾಡಿದೆ. ಈ ಅಪ್ಲಿಕೇಶನ್‌ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಹ್ಯಾಕಿಂಗ್‌ ಹಾಗೂ ವೈರಸ್‌ ದಾಳಿಯನ್ನು ತಡೆಯುತ್ತದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.

**

ಯುರೋಪ್‌ ದೇಶಗಳಲ್ಲಿ ದತ್ತಾಂಶ ಸುರಕ್ಷೆ ಕಾಯ್ದೆ

ಯುರೋಪ್‌ ದೇಶಗಳಲ್ಲಿ ಜಾರಿಗೆ ಬಂದಿರುವ ಹೊಸ ದತ್ತಾಂಶ ಸುರಕ್ಷತೆ ಕಾಯ್ದೆಗೆ ಅನುಗುಣವಾಗಿ ಆ್ಯಪಲ್‌ ಕಂಪೆನಿ ಹೊಸ ಅಪ್ಲಿಕೇಶನ್‌ ಸಿದ್ದಪಡಿಸಿರುವುದಾಗಿ ತಿಳಿಸಿದೆ.

ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಈ ಅಪ್ಲಿಕೇಶನ್‌ ಬಳಕೆ ಮಾಡಬಹುದು. ಇದು ಬಳಕೆದಾರರ ವೈಯಕ್ತಿಕ ದತ್ತಾಂಶವನ್ನು ಸಂರಕ್ಷಣೆ ಮಾಡುತ್ತದೆ. ಅಲ್ಲದೇ ವೈರಸ್‌ ಅಥವಾ ಹ್ಯಾಕಿಂಗ್‌ ದಾಳಿಯನ್ನು ಸಮರ್ಪಕವಾಗಿ ತಡೆಯುತ್ತದೆ ಎಂದು ಹೇಳಲಾಗಿದೆ.  ಆ್ಯಪಲ್‌ ಅಕೌಂಟ್‌, ದತ್ತಾಂಶ ನಿಯಂತ್ರಣ, ಬಳಕೆ ವಿಧಾನದಲ್ಲೂ ಬದಲಾವಣೆ ಮಾಡಲಾಗಿದೆ ಎಂದು ಆ್ಯಪಲ್‌ ಕಂಪೆನಿ ತಿಳಿಸಿದೆ.

**

ಆಲ್ಟ್‌ಬಾಲಾಜಿ ಟಿವಿ ಕಾರ್ಯಕ್ರಮ

ಏರ್‌ಟೆಲ್‌ ಟಿವಿ ಆ್ಯಪ್‌ ಗ್ರಾಹಕರಿಗೆ ಒಂದು ಸಿಹಿ ಸುದ್ದಿ ಬಂದಿದೆ.  ಏರ್‌ಟೆಲ್‌ ಟಿವಿ ಆ್ಯಪ್‌ನಲ್ಲಿ ದಕ್ಷಿಣ ಭಾರತದ ಜನಪ್ರಿಯ ಆಲ್ಟ್‌ಬಾಲಾಜಿ ಟಿವಿ ‌ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಇದರಲ್ಲಿ 10 ಸಾವಿರ ಸಿನಿಮಾಗಳು ಸೇರಿವೆ ಎಂದು ಏರ್‌ಟೆಲ್‌ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಏರ್‌ಟೆಲ್‌ ಪ್ರವರ್ತಕರಾದ ಭಾರ್ತಿ ಏರ್‌ಟೆಲ್‌ ಕಂಪೆನಿ ಮತ್ತು ಆಲ್ಟ್‌ಬಾಲಾಜಿ ಟಿವಿ ಆ್ಯಪ್‌ ಕಂಪೆನಿ ಈ ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಹಾಗೇ ಆಲ್ಟ್‌ಬಾಲಾಜಿ ಟಿವಿ ಕಾರ್ಯಕ್ರಮಗಳನ್ನು ಏರ್‌ಟೆಲ್‌ ಟಿವಿ ಆ್ಯಪ್‌ನಲ್ಲಿ ವೀಕ್ಷಣೆ ಮಾಡಬಹುದು. 10 ಸಾವಿರ ಸಿನಿಮಾಗಳು ಮತ್ತು 350 ಲೈವ್‌ ಚಾನೆಲ್‌ಗಳನ್ನು ವೀಕ್ಷಣೆಗೆ ಲಭ್ಯವಿವೆ . 2018ರ ಜೂನ್‌ 30ರವರೆಗೂ ಏರ್‌ಟೆಲ್‌ ಗ್ರಾಹಕರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT