ನಿಮ್ಮ ಮನೆಯಲ್ಲಿ ಇರುವ ಪೀಠೋಪಕರಣಗಳು ಪ್ಲಾಸ್ಟಿಕ್ಕಿನವೋ? ಮರದವೋ? ಮರದವಾದರೆ ಎಷ್ಟು ಕಾಡನ್ನು ಕಡಿದೆವು - ಎನ್ನುವ ಅಳುಕು ಇರಬಹುದು. ಪ್ಲಾಸ್ಟಿಕ್ಕು ಅಥವಾ ಲೋಹದ್ದಾದರೆ, ಪರಿಸರಕ್ಕೆ ಹಾನಿ ಮಾಡುತ್ತಿದ್ದೇವಲ್ಲ ಎನ್ನುವ ಕಾಳಜಿಯೂ ಕಾಡುತ್ತಿರಬಹುದು. ಇವೆರಡನ್ನೂ ದೂರವಿಡುವ ಕಥೆ ಇಲ್ಲಿದೆ. ಇಂಗ್ಲೆಂಡಿನ ದಂಪತಿಯೊಂದು ಕಾಡು ಕಡಿದು, ಪೀಠೋಪಕರಣಗಳನ್ನು ಮಾಡುವ ಬದಲಿಗೆ, ನೇರವಾಗಿ ಪೀಠೋಪಕರಣಗಳ ಕಾಡನ್ನೇ ಬೆಳೆಯಲು ಹೊರಟಿದ್ದಾರೆ.

ಪೀಠೋಪಕರಣಗಳನ್ನು ಬೆಳೆಯುವುದೇ? ಹೌದು. ಇಂಗ್ಲೆಂಡಿನ ಡರ್ಬಿಶೈರ್ ಪ್ರಾಂತ್ಯದಲ್ಲಿರುವ ‘ಫುಲ್ ಗ್ರೋನ್’ ಎನ್ನುವ ಕಂಪನಿಯು ಮರದಲ್ಲಿ ಮಾಡಿದ ಪೀಠೋಪಕರಣಗಳನ್ನು ಒದಗಿಸುತ್ತಿದೆ. ವಿಶೇಷ ಎಂದರೆ ಕಂಪೆನಿ ಮಾರುವ ಕುರ್ಚಿ, ಮೇಜುಗಳು ಅಪ್ಪಟ ಮರದ ರಚನೆಗಳು. ಕೊಡಗು, ಚಿಕ್ಕಮಗಳೂ ರಿನ ಕಾಫಿ ತೋಟಗಳಲ್ಲಿ ಮುರಿದು ಬಿದ್ದ ಗಂಟು ಗಂಟಾದ ಕಾಫಿ ಬೊಡ್ಡೆಗಳನ್ನು ಉಜ್ಜಿ, ತಿದ್ದಿ, ಹೂದಾನಿಯನ್ನು ಇಡುವ ಮೇಜೋ, ಆಲಂಕಾರಿಕ ಗೊಂಬೆಯನ್ನಾಗಿಯೋ ಮಾಡುವುದನ್ನು ನೋಡಿರುವವರಿಗೆ, ಕೊಂಡಿರುವವರು ಇದರಲ್ಲೇನು ವಿಶೇಷ ಎನ್ನಬಹುದು. ವಿಶೇಷ ಇದೆ. ಫುಲ್ ಗ್ರೋನ್ ಕಂಪೆನಿ ಮಾರುವ ಕುರ್ಚಿ, ಮೇಜುಗಳನ್ನು ಯಾವುದೇ ಬಡಗಿಯೂ ತಯಾರಿಸುವುದಿಲ್ಲ. ಉಳಿ, ಚಾಣ ಬಳಸುವುದಿಲ್ಲ. ಮೊಳೆಗಳ ಸದ್ದೂ ಇರುವುದಿಲ್ಲ. ಕೇವಲ ರೆಂಬೆ, ಕೊಂಬೆಗಳನ್ನು ಬೇಕಾದ ಆಕಾರಕ್ಕೆ ಬೆಳೆಯುವಂತೆ ಬಾಗಿಸಿ, ತಿದ್ದಿ, ರೂಪು ಕೊಟ್ಟು ಪಡೆದ ಪೀಠೋಪಕರಣಗಳು. ಇವು. ನೇರವಾಗಿ ಮರದಿಂದ ಕತ್ತರಿಸಿ, ಒಣಗಿಸಿ, ಒಂದಿಷ್ಟು ಉಜ್ಜಿ ನಯವಾಗಿಸಿ, ಹೊಳಪು ನೀಡಿದರೆ ಕುರ್ಚಿ ಸಿದ್ಧ. ಸಂಪೂರ್ಣ ನೈಸರ್ಗಿಕ ಕುರ್ಚಿ ರೆಡಿ.

ಫುಲ್ ಗ್ರೋನ್ ಕಂಪೆನಿಯ ರೂವಾರಿಗಳಾದ ಗೇವಿನ್ ಮನ್ರೋ ಮತ್ತು ಅಲೀಸ್ ಮನ್ರೊ. ಡರ್ಬಿಶೈರ್ ಸಮೀಪದಲ್ಲಿ ಪೀಕ್ ಡಿಸ್ಟ್ರಿಕ್ಸ್ ಎನ್ನುವೆಡೆ ಎರಡೂವರೆ ಎಕರೆ ಜಮೀನಿನ ಒಡೆಯರು. ಈ ಜಮೀನಿನಲ್ಲಿ ಬೆಳೆಯುವ ಮರಗಳೆಲ್ಲವೂ ಕುರ್ಚಿ, ಮೇಜು, ತೂಗುದೀಪಗಳ ಆಕಾರದಲ್ಲಿವೆ. ಕಲೆ, ವಿಜ್ಞಾನ, ತಾಳ್ಮೆ ಹಾಗೂ ಕೌಶಲದಿಂದ ಮೂರು ಸಾವಿರಕ್ಕೂ ಹೆಚ್ಚು ಮರಗಳನ್ನು ಹೀಗೆ ವಿವಿಧ ಪೀಠೋಪಕರಣಗಳನ್ನಾಗಿ ತಿದ್ದಿ, ಬೆಳೆಸುತ್ತಿದ್ದಾರೆ.

ಕುರ್ಚಿ, ತೂಗುದೀಪಗಳನ್ನು ಬೆಳೆಸಲು ಫುಲ್ ಗ್ರೋನ್ ಸಾಮಾನ್ಯವಾಗಿ ಪೀಠೋಪಕರಣಗಳಿಗೆ ಬಳಸುವ ಓಕ್, ವಿಲ್ಲೋ ಹಾಗೂ ಆಶ್ ಎನ್ನುವ ಇಂಗ್ಲೆಂಡಿನಲ್ಲಿ ಪೀಠೋಪಕರಣಗಳಿಗೆ ಬಳಸುವ ಮೃದುಮರಗಳನ್ನು ಬಳಸುತ್ತಾರೆ. ಮೊಳಕೆಯಲ್ಲಿ ಬಗ್ಗದ್ದು, ದೊಡ್ಡದಾದ ಮೇಲೆ ಬಗ್ಗೀತೇ ಎನ್ನುವ ತತ್ವ ಇವರಿಗೆ ಮೂಲಮಂತ್ರ. ಈ ಮರಗಳು ಸಸಿಯಾಗಿರುವಾಗಲೇ, ಅವುಗಳಿಗೆ ಬೇಕಾದ ಆಕಾರದ ಚೌಕಟ್ಟನ್ನು ಒದಗಿಸುತ್ತಾರೆ. ಈ ಚೌಕಟ್ಟನ್ನೂ ಪ್ಲಾಸ್ಟಿಕ್ ತ್ಯಾಜ್ಯದಿಂದ ರೂಪಿಸಿರುತ್ತಾರೆ. ಈ ಚೌಕಟ್ಟಿನೊಳಗೆ ಬಂಧಿತವಾದ ರೆಂಬೆಕೊಂಬೆಗಳು ಅದೇ ಆಕಾರದಲ್ಲಿ ಬೆಳೆಯಲು ಆರಂಭಿಸುತ್ತವೆ. ಸುಪ್ರಸಿದ್ಧ ಬೊನ್ಸಾಯಿ ತಂತ್ರದಲ್ಲಿ ಮಾಡುವಂತೆಯೇ, ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ರೆಂಬೆ, ಕೊಂಬೆಗಳನ್ನು ತರಿದು, ಅಕ್ಕ ಪಕ್ಕದಲ್ಲಿರುವ ರೆಂಬೆಗಳನ್ನು ಕೂಡಿಸಿ ಕಸಿ ಮಾಡುತ್ತಾರೆ. ಹೀಗೆ ಜೋಡಿಸಿದ ರೆಂಬೆ ಕೊಂಬೆಗಳು ಒಟ್ಟಾಗಿ ಗಟ್ಟಿಯಾದ ಮೇಲ್ಮೈಯನ್ನು ಒದಗಿಸುತ್ತವೆ. ಕುರ್ಚಿಹೀಗೆ ಬೆಳೆಯತೊಡಗುತ್ತದೆ.

ಕುರ್ಚಿ ಬೆಳೆದ ನಂತರ ಅದನ್ನು ಕತ್ತರಿಸಿ, ಒಣಗಿಸಿ, ನಯಗೊಳಿಸಿ ಮಾರಾಟ ಮಾಡುವುದಷ್ಟೆ ಕೆಲಸ. ಆದರೆ ಹೀಗೆ ಒಂದೊಂದು ಕುರ್ಚಿಯನ್ನು ಬೆಳೆಯಲೂ ಆರೇಳು ವರ್ಷಗಳ ಕಾಲ ಬೇಕು ಎನ್ನುತ್ತಾರೆ, ಗೇವಿನ್. ಗೇವಿನ್ನನಿಗೆ ಪೀಠೋಪಕರಣಗಳನ್ನು ಬೆಳೆಯುವ ಐಡಿಯಾ ಬಂದಿದ್ದೂ ಒಂದು ಕಥೆಯೇ. ಚಿಕ್ಕಂದಿನಿಂದಲೇ ಗೇವಿನ್ನನಿಗೆ ಬೊನ್ಸಾಯಿ ಕಲೆಯ ಬಗೆ ಆಸಕ್ತಿ ಇತ್ತು. ಮರಗಳನ್ನು ಪುಟ್ಟದಾಗಿಸಿ ಬೆಳೆಸುವಂತೆಯೇ, ಅವಕ್ಕೆ ಬೇಕಿದ್ದ ಆಕಾರ ನೀಡಲು ಸಾಧ್ಯವೇ ಎಂದೂ ಯೋಚಿಸುತ್ತಿದ್ದ. ಈ ಯೋಚನೆಗೆ ಇಂಬುಕೊಟ್ಟದ್ದು ಅವನ ಕಾಯಿಲೆ. ಗೇವಿನ್ನನಿಗೆ ಹುಟ್ಟಾ ಬಂದ ಕಾಯಿಲೆ ಯಿಂದಾಗಿ ಆತನ ಬೆನ್ನುಮೂಳೆಗಳು ಬೆಸೆದುಕೊಳ್ಳುತ್ತಿದ್ದುವು. ದೇಹದ ಆಕಾರ ಅಷ್ಟಾವಕ್ರವಾಗುತ್ತಿತ್ತು. ಹೀಗಾಗಿ ಆತ ಹಲವು ಬಾರಿ ಶಸ್ತ್ರಕ್ರಿಯೆಗೆ ಒಳಗಾದ. ಪ್ರತಿ ಬಾರಿಯೂ ಮೂಳೆಗಳನ್ನು ನಿರ್ದಿಷ್ಟ ಆಕಾರದಲ್ಲಿ ಬೆಳೆಯಲು ಲೋಹದ ಚೌಕಟ್ಟನ್ನು ಧರಿಸಬೇಕಾಗುತ್ತಿತ್ತು. ಅನಂತರ ಈತ ಶಿಲ್ಪಕಲೆಯನ್ನು ಕಲಿತ. ಆ ಸಂದರ್ಭದಲ್ಲಿ ಕೈಗೆ ಸಿಕ್ಕ ವಸ್ತುಗಳಿಂದಲೇ ಪೀಠೋಪಕರಣಗಳನ್ನು ವಿನ್ಯಾಸ ಮಾಡುವ ಸವಾಲು ಮುಂದಾಗಿತ್ತು. ಇವೆಲ್ಲವೂ ಒಟ್ಟಾಗಿ, ಮರಗಳನ್ನೇ ನೇರವಾಗಿ ತಿದ್ದಿ, ಬೆಳೆಸಬಹುದಲ್ಲ ಎಂಬ ವಿಚಿತ್ರ ಕಲ್ಪನೆಗೆ ಮೂಲವಾದುವಂತೆ.

ಗಿಡ, ಮರಗಳ ಬೆಳವಣಿಗೆಯ ಅರಿವು. ಕಸಿ ತಂತ್ರಜ್ಞಾನದ ಕೌಶಲ. ಕಲಾವಿದನ ಕಲ್ಪನೆಗಳನ್ನು ಒಟ್ಟುಗೂಡಿಸಿ ಹೀಗೊಂದು ಪ್ರಯತ್ನಕ್ಕೆ ಈತ ಮುಂದಾದ. ಇಪ್ಪತ್ತು ವರ್ಷಗಳ ಪರಿಶ್ರಮದ ನಂತರ ಹಲವು ಮರಗಳನ್ನು ಹೀಗೆ ಬೆಳೆಸುವುದರಲ್ಲಿ ಸಫಲನಾದ. ಮಡದಿಯ ಜೊತೆಗೂಡಿ ಫುಲ್ಗ್ರೋನ್ ಕಂಪೆನಿಯನ್ನು ಸ್ಥಾಪಿಸಿದ. ಕಂಪೆನಿ ಸ್ಥಾಪನೆಯಾದ ಆರು ವರ್ಷಗಳ ನಂತರ ಮೊತ್ತಮೊದಲ ಕಾಡಿನಲ್ಲಿ ಬೆಳೆದ ಕುರ್ಚಿ ಮಾರಾಟವಾಯಿತು. ಇದೀಗ ಕುರ್ಚಿಗಳನ್ನಷ್ಟೆ ಅಲ್ಲ, ಸ್ಟೂಲು, ತೂಗುದೀಪಗಳು, ಮೇಜು ಮೊದಲಾದ ಪೀಠೋಪಕರಣಗಳನ್ನೂ ವಿನ್ಯಾಸ ಮಾಡಿ ಬೆಳೆಸುತ್ತಿದ್ದಾರೆ.

ಹಾಂ. ಒಂದು ಸಮಸ್ಯೆ ಇದೆ. ಅಂಗಡಿಗೆ ಹೋಗಿ, ನಾಲ್ಕೈದು ಬಗೆಯನ್ನು ನೋಡಿ, ಖರೀದಿ ಮಾಡುವಂತೆ ಈ ಕುರ್ಚಿಗಳನ್ನು ಮಾಡಲು ಆಗುವುದಿಲ್ಲ. ಮುಂದಾಗಿಯೇ ಎಂತಹ ಕುರ್ಚಿ ಬೇಕು ಎಂದು ಆರ್ಡರು ಕೊಡಬೇಕು. ಕನಿಷ್ಠ ಎಂದರೆ ಆರೇಳು ವರ್ಷ, ಕುರ್ಚಿ ಬೆಳೆಯುವವರೆಗೆ ಕಾಯಬೇಕು. ಅನಂತರ ಮನೆಗೆ ಕೊಂಡು ತರಬೇಕು. ಬೆಳೆಯುವವರಿಗೂ ಕೊಳ್ಳುವವರಿಗೂ ತಾಳ್ಮೆ ಇದ್ದರಷ್ಟೆ ಈ ಕಾಡಿನ ಕುರ್ಚಿಗಳು ದೊರಕಿಯಾವು.

ಈ ಇಪ್ಪತ್ತು ವರ್ಷಗಳಲ್ಲಿ ಫುಲ್ ಗ್ರೋನ್ ಕೆಲವು ನೂರು ಕುರ್ಚಿಗಳನ್ನು ಮಾರಿರಬಹುದು. ಅವನ್ನು ಪೀಠೋಪಕರಣವಾಗಿ ಬಳಸುವುದಕ್ಕಿಂತಲೂ ಕೊಂಡವರು ಕಲಾಕೃತಿಯಂತೆ ಬಳಸಿಕೊಂಡಿದ್ದೇ ಹೆಚ್ಚು. ಫುಲ್ಗ್ರೋನ್ ಮಾರಾಟ ಮಾಡಿರುವ ಬಹುತೇಕ ಕುರ್ಚಿ, ಪೀಠೋಪಕರಣಗಳು ವಿಶ್ವದ ಅತ್ಯಂತ ಪ್ರಸಿದ್ಧ ಮ್ಯೂಸಿಯಮ್ಮುಗಳಲ್ಲಿ ಕಲಾಕೃತಿಯಾಗಿ ಪ್ರದರ್ಶನಕ್ಕೆ ಇವೆ. ಈ ಕುರ್ಚಿಗಳನ್ನು ಬೆಳೆಯುವ ಆಸಕ್ತಿ ಇರುವವರು ಅಥವಾ ಆ ಬಗ್ಗೆ ತಿಳಿದುಕೊಳ್ಳುವವರನ್ನು ಗೇವಿನ್, ಅಲಿಸರ ತೋಟಕ್ಕೆ ಭೇಟಿ ನೀಡಬಹುದು. ವಿವಿಧ ಸ್ಥಿತಿಯಲ್ಲಿ ಬೆಳೆಯುತ್ತಿರುವ ಕುರ್ಚಿ–ಮರಗಳನ್ನು ನೋಡಬಹುದು. ಇನ್ನೂರು ಪೌಂಡು ಹಣ ಕೊಟ್ಟು ಪೀಠೋಪಕರಣಗಳ ಈ ಕಾಡನ್ನು ನೋಡಲು ಹೋಗುವವರೇ ಫುಲ್ ಗ್ರೋನ್ ಕಂಪನಿಗೆ ಆದಾಯ. ತಮ್ಮ ತೋಟದಲ್ಲಿ ಇಂತಹ ಮರಗಳನ್ನು ಬೆಳೆಯಲು ಆಸೆ ಇರುವವರಿಗೆ ಗೇವಿನ್-ಅಲೀಸ್ ಕಂಪನಿ ನೆರವಾಗುತ್ತದೆಯಂತೆ.

ನಮ್ಮೂರಿನ, ತೇಗ, ಮತ್ತಿ, ಗಂಧದ ಮರಗಳನ್ನೂ ಹೀಗೆ ತಿದ್ದಿ ಬೆಳೆಸುವಂತಾದರೆ ಎಷ್ಟು ಚೆನ್ನ ಅಲ್ಲವೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.