ಸೋಮವಾರ, ಡಿಸೆಂಬರ್ 9, 2019
23 °C

ಮಂಗಳನ ಅಂಗಳದಲ್ಲಿ ಕೀಟ, ಸರೀಸೃಪಗಳು; ಫೋಟೊ ದಾಖಲೆ ಮುಂದಿಟ್ಟ ಸಂಶೋಧಕ

Published:
Updated:
ಮಂಗಳ ಗ್ರಹದಲ್ಲಿ ಕೀಟಗಳ ಇರುವಿಕೆ ಕುರುಹು – ಚಿತ್ರ ಕೃಪೆ: phys.org

ನ್ಯೂಯಾರ್ಕ್‌: ಮಂಗಳ ಗ್ರಹದಲ್ಲಿ ಜೀವ ಜಗತ್ತಿನ ಇರುವಿಕೆ ಪತ್ತೆಗಾಗಿ ಹಲವು ವರ್ಷಗಳಿಂದ ವಿಜ್ಞಾನಿಗಳು ನಿರಂತರ ಪ್ರಯತ್ನದಲ್ಲಿದ್ದಾರೆ. ಇದೀಗ ಅಮೆರಿಕದ ಓಹಿಯೊ ವಿಶ್ವವಿದ್ಯಾಲಯದ ಸಂಶೋಧಕರೊಬ್ಬರು ಮಂಗಳನ ಅಂಗಳದಲ್ಲಿ ಕೀಟದ ರೀತಿಯ ಜೀವಿಗಳು ಇರುವುದಕ್ಕೆ ಸಾಕ್ಷ್ಯ ಇರುವುದಾಗಿ ಹೇಳುತ್ತಿದ್ದಾರೆ.

ಕೆಂಪು ಗ್ರಹದ ಮೇಲೆ ಓಡಾಟ ನಡೆಸಿರುವ ರೋವರ್‌ಗಳು ತೆಗೆದಿರುವ ಚಿತ್ರಗಳನ್ನು ಆಧಾರವಾಗಿಟ್ಟು ಅಧ್ಯಯನ ನಡೆಸಿರುವ ಪ್ರೊ.ಎಮಿರಿಟಸ್‌ ವಿಲಿಯಮ್‌ ರೊಮೊಸರ್‌, ದುಂಬಿ ಹಾಗೂ ಹಲ್ಲಿಗಳ ಅವಶೇಷಗಳಂತೆ ಕಾಣುವ ರಚನೆಗಳನ್ನು ಗುರುತಿಸಿದ್ದಾರೆ. 

'ಮಂಗಳ ಗ್ರಹದಲ್ಲಿ ಜೀವಿಗಳು ಇದ್ದವು ಹಾಗೂ ಈಗಲೂ ಇವೆ' ಎಂದು ಸಂಶೋಧಕ ರೊಮೊಸರ್‌ ಹೇಳಿದ್ದಾರೆ. 

ಮಂಗಳನ ಮೇಲೆ ಓಡಾಡಿರುವ, ರೋವರ್‌ಗಳಿಂದ ಅದರಲ್ಲೂ ನಾಸಾದ 'ಕ್ಯೂರಿಯಾಸಿಟಿ' ರೋವರ್ ಅಲ್ಲಿನ ಜೈವಿಕ ಚಟುವಟಿಕೆಗಳ ಮೇಲೆ ನಿಗಾವಹಿಸಿ ಹಲವು ಚಿತ್ರಗಳನ್ನು ಸೆರೆ ಹಿಡಿದಿದೆ. ಭೂಮಿಯ ಮೇಲಿನ ಜೀವಿಗಳಿಗೆ ಸಾಮ್ಯತೆ ಇರುವಂತೆ ಕಾಣುವ ಕೀಟಗಳು ಹಾಗೂ ಸರೀಸೃಪ ರಚನೆಗಳು ಚಿತ್ರಗಳಲ್ಲಿ ಸ್ಪಷ್ಟವಾಗಿವೆ ಎಂದಿದ್ದಾರೆ. 

ಕೀಟಗಳ ರೆಕ್ಕೆ, ಕಾಲುಗಳು, ಆಂಟೆನಾ ಒಳಗೊಂಡ ರಚನೆಗಳನ್ನು ಚಿತ್ರಗಳಲ್ಲಿ ಸೂಕ್ಷ್ಮವಾಗಿ ಗಮನಿಸಲಾಗಿದೆ. ಫೋಟೊಗಳನ್ನು ಹಲವು ಹಂತಗಳಲ್ಲಿ ಉತ್ತಮ ಪಡಿಸಿ ಅಧ್ಯಯನ ನಡೆಸಲಾಗಿದ್ದು, ಹೊಳೆಯುವ ಕಣ್ಣುಗಳು ಈಗಲೂ ಜೀವ ಸಂಕುಲದ ಇರುವಿಕೆಯನ್ನು ಸೂಚಿಸುತ್ತಿದ್ದೆ ಎಂದು ವಿಶ್ಲೇಷಿಸಿದ್ದಾರೆ. 

ಕೀಟಗಳಂತಹ ಜೀವಿಗಳು ಮಂಗಳ ಗ್ರಹದಲ್ಲಿ ಇರುವುದಾದರೆ, ಅದಕ್ಕೆ ಅಗತ್ಯವಿರುವ ಆಹಾರ ಮೂಲ, ಅದನ್ನು ಅವಲಂಬಿಸಿರುವ ಜೀವಿಗಳು, ನೀರು ಮತ್ತು ಜೀವಿಗಳ ಬೆಳವಣಿಗೆಗೆ ಅಗತ್ಯವಿರುವ ವಾತಾವರಣದ ಇರುವಿಕೆಯನ್ನೂ ಸೂಚಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು