ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಕದ್ದ ಮೇಲೆ… ‘ವಾಟ್ಸ್‌ಅ(ಆ್ಯ)ಪ್’

Last Updated 28 ನವೆಂಬರ್ 2019, 12:11 IST
ಅಕ್ಷರ ಗಾತ್ರ

ವೈಯಕ್ತಿಕ ಮಾಹಿತಿ ಕಳವು ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದರೆ, ಈ ಫೇಸ್‌ಬುಕ್, ವಾಟ್ಸ್‌ಆ್ಯಪ್ ಬಳಸದೇ ಇರಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಯಾವುದೇ ಸೇವಾದಾತ ಕಂಪನಿಯೂ ಬಳಕೆದಾರರ ಖಾಸಗೀತನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಊರನ್ನು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರಂತೆ, ಹಾಗಾಯ್ತು ವಾಟ್ಸ್‌ಆ್ಯಪ್ ಕಥೆ. ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸಲಾಗುತ್ತಿದೆ ಎಂದು ವರದಿ ಬಂದು, ಅದಕ್ಕೆ ಜನ ಗಾಬರಿಬಿದ್ದು, ಸರ್ಕಾರವೂ ಏನೂ ಆಗಿಲ್ಲ ಎಂದು ಹೇಳುವ ಹೊತ್ತಿಗಾಗಲೇ ಚೋರರು ತಮಗೆ ಬೇಕಾಗಿದ್ದೆಲ್ಲವನ್ನೂ ದೋಚಿಕೊಂಡು ಹೋಗಾಗಿದೆ.

ಇಸ್ರೇಲ್‌ನ ಸೈಬರ್‌ ಇಂಟೆಲಿಜೆನ್ಸ್‌ ಕಂಪನಿ ಎನ್‌ಎಸ್‌ಒ ಗ್ರೂಪ್‌ ತಂತ್ರಾಂಶದ ಮೂಲಕ ‌ಭಾರತದಲ್ಲಿ ನಡೆಸಿದ ದಾಳಿಯಲ್ಲಿ 121 ಬಳಕೆದಾರರನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಅವರಲ್ಲಿ 20 ಬಳಕೆದಾರರ ಮಾಹಿತಿ ಕದಿಯುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಇದು ಸ್ವತಃ ವಾಟ್ಸ್ಆ್ಯಪ್ ಸರ್ಕಾರಕ್ಕೆ ನೀಡಿರುವ ಮಾಹಿತಿ.

ತಮಾಷೆಯ ವಿಷಯ ಎಂದರೆ, ಬಳಕೆದಾರರ ಯಾವೆಲ್ಲಾ ಮಾಹಿತಿಗಳನ್ನು ಕದ್ದಿರಬಹುದು ಅಥವಾ ಹಾನಿಯಾಗಿರಬಹುದು ಎನ್ನುವುದನ್ನು ನಿರ್ಧರಿಸುವುದು ಅಥವಾ ಖಚಿತವಾಗಿ ಹೇಳುವುದು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಿದ್ದ ಮೇಲೆ ನಮ್ಮದು ಎಂಡ್‌-ಟು-ಎಂಡ್ ಎನ್ ಕ್ರಿಪ್ಟೆಡ್ ವ್ಯವಸ್ಥೆ, ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆ ಕೊಟ್ಟಿದ್ದೇವೆ ಎಂದೆಲ್ಲಾ ಬಡಾಯಿ ಕೊಚ್ಚಿಕೊಳ್ಳುವುದೇಕೊ ಗೊತ್ತಿಲ್ಲ. ಇಷ್ಟೆಲ್ಲಾ ದಾಳಿ ಆದ ಮೇಲೆಯೂ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಸುರಕ್ಷತೆಯನ್ನು ಇನ್ನಷ್ಟು ಬಲಗೊಳಿಸಲಾಗುತ್ತಿದೆ ಎಂದು ಹೇಳುತ್ತಿರುವುದನ್ನು ನಿಲ್ಲಿಸಿಲ್ಲ.

ಭಾರತದ ಬಳಕೆದಾರರ ಪರಿಸ್ಥಿತಿ ಹೀಗಿದ್ದರೆ, ಜಾಗತಿಕ ಬಳಕೆದಾರರಲ್ಲಿ 1,400 ಜನರು ಪೆಗಾಸಸ್ ದಾಳಿಗೆ ತುತ್ತಾಗಿದ್ದಾರೆ.

ಈ ಡಿಜಿಟಲ್‌ ಯುಗದಲ್ಲಿ ವೈಯಕ್ತಿಕ ಮಾಹಿತಿ ಕೇವಲ ಮಾರಾಟದ ಸರಕಾಗಿಯಷ್ಟೇ ಉಳಿದಿದ್ದರೆ ಸಮಸ್ಯೆಯೇನೂ ಆಗುತ್ತಿರಲಿಲ್ಲವೇನೊ. ಕೆಲವು ಆ್ಯಪ್‌ಗಳನ್ನು ಬಳಕೆ ಮಾಡುವಾಗ ಏನೆಲ್ಲಾ ಮಾಹಿತಿಗಳನ್ನು ಪಡೆಯುತ್ತೇವೆ ಎನ್ನುವ ಪಟ್ಟಿಗೆ ಅನುಮತಿ ಒತ್ತಿದ ಬಳಿಕವಷ್ಟೇ ಇನ್‌ಸ್ಟಾಲ್‌ ಮಾಡಲು ಸಾಧ್ಯ. ಹೀಗಾಗಿ ಅಗತ್ಯ ಇರಲಿ, ಇಲ್ಲದಿರಲಿ ನಿರ್ದಿಷ್ಟ ಆ್ಯಪ್‌ ಬೇಕು ಎಂದಾದರೆ ಅವರು ಕೇಳಿದ್ದೆಲ್ಲಕ್ಕೂ ಒಪ್ಪಿಗೆ ಕೊಡಲೇಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಹಾಗಾಗುತ್ತಿಲ್ಲ. ಫೇಸ್‌ಬುಕ್‌, ವಾಟ್ಸ್ಆ್ಯಪ್‌ ಒಳಗೊಂಡು ಜನಪ್ರಿಯ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಕದಿಯುವುದಷ್ಟೇ ಅಲ್ಲದೆ ಗೂಢಚಾರಿಕೆಯೂ ನಡೆಯುತ್ತಿದೆ. ಇದು ಜನರಲ್ಲಿ ಭೀತಿ ಮೂಡಿಸುತ್ತಿದೆ.

‘ನಿಮ್ಮ ಮೆಸೇಜ್‌ ಮತ್ತು ಫೋಟೊಗಳು ಸಾರ್ವಜನಿಕವಾಗಿ ಬಹಿರಂಗವಾಗುವುದು ಇಷ್ಟವಿಲ್ಲ ಎಂದಾದರೆ ನಿಮ್ಮ ವಾಟ್ಸ್ಆ್ಯಪ್‌ ಖಾತೆಯನ್ನು ಡಿಲೀಟ್‌ ಮಾಡಿ’ ಎಂದು ಟೆಲಿಗ್ರಾಂನ ಸ್ಥಾಪಕ ಪರೇಲ್‌ ಡುರೋವ್ ಅವರು ನೀಡಿರುವ ಹೇಳಿಕೆಯನ್ನೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಷ್ಟೆಲ್ಲಾ ಆದ ಮೇಲೆಯೂ ಸಾಮಾಜಿಕ ಮಾಧ್ಯಮಗಳಿಲ್ಲದೇ ಜೀವನ ಕಷ್ಟವೇ ಎನ್ನುವ ಪ್ರಶ್ನೆಯಂತೂ ಮೂಡದೇ ಇರದು.

ವಾಟ್ಸ್‌ಆ್ಯಪ್‌: ಮತ್ತಷ್ಟು ಹೊಸತು

ವಾಟ್ಸ್‌ಆ್ಯಪ್‌ ಹೊಸ ಫೀಚರ್‌ಗಳನ್ನು ಸೇರಿಸುತ್ತಲೇ ಇರುತ್ತದೆ. ಅವುಗಳಲ್ಲಿ ಕೆಲವು ಬಳಕೆಯನ್ನು ಸುಲಭಗೊಳಿಸಲಾದರೆ ಇನ್ನೂ ಕೆಲವು ಸುರಕ್ಷತೆಯ ದೃಷ್ಟಿಯಿಂದ ಮಹತ್ವದ್ದಾಗಿವೆ. ತನ್ನ ಮುಂದಿನ ಅಪ್‌ಡೇಟ್‌ ವರ್ಷನ್‌ 2.19.345ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆ.

ಅದರಲ್ಲಿ ಮೊದಲನೆಯದು ಫೋಟೊ ಐಕಾನ್‌. ಕಳುಹಿಸಿದ ಮತ್ತು ಪಡೆದ ಮೆಸೇಜ್‌ಗಳ ಐಕಾನ್‌ ಬದಲಾವಣೆ ಆಗಲಿದೆ. ಜತೆಗೆ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರುವ ಗ್ಯಾಲರಿ ಐಕಾನ್‌ನಂತೆಯೇ ಇಮೇಜ್‌ಗಳಲ್ಲಿ ಇರುವ ಕ್ಯಾಮೆರಾ ಐಕಾನ್‌ ಅನ್ನು ಬದಲಾಯಿಸಲಿದೆ.

ಅದೇ ರೀತಿ ಆಂಡ್ರಾಯ್ಡ್ ಆ್ಯಪ್‌ಗೆ ಬೇರೆ ಬೇರೆ ಸಾಧನಗಳು ಬೆಂಬಲಿಸುವಂತಹ ವೈಶಿಷ್ಟ್ಯವನ್ನೂ ಶೀಘ್ರದಲ್ಲಿಯೇ ಜಾರಿಗೊಳಿಸಲಿದೆ. ಐಒಎಸ್‌ನ ಬೇಟಾ ವರ್ಷನ್‌ನಲ್ಲಿ ಇಂತಹದ್ದೇ ವೈಶಿಷ್ಟ್ಯ ಜಾರಿಗೊಳಿಸಲಾಗಿದೆ.

ಸುರಕ್ಷತಾ ಸೌಲಭ್ಯ: ಐಒಎಸ್‌ನಲ್ಲಿ ವಾಟ್ಸ್‌ಆ್ಯಪ್‌ನ ಬೇಟಾ ವರ್ಷನ್‌ 2.19.120.20 ನಲ್ಲಿ ರಿಜಿಸ್ಟ್ರೇಷನ್‌ ನೋಟಿಫಿಕೇಷನ್‌ ಸೌಲಭ್ಯ ಒದಗಿಸಲಾಗಿದೆ.ಒಬ್ಬರ ಫೋನ್‌ ನಂಬರ್‌ ಬಳಸಿ ಇನ್ನೊಬ್ಬರು ಲಾಗಿನ್‌ ಆಗಲು ಪ್ರಯತ್ನಿಸಿದರೆ ಅಥವಾ ಹೊಸ ಖಾತೆ ತೆರೆಯಲು ಮುಂದಾದರೆ ಆಗ, New security code ನೀಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT