ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಾಗಿ 'ಪ್ರಧಾನಿ ಮೋದಿ ರಾಜೀನಾಮೆ' ಹ್ಯಾಷ್‌ಟ್ಯಾಗ್‌ ನಿರ್ಬಂಧ: ಫೇಸ್‌ಬುಕ್‌

#ResignModi
Last Updated 29 ಏಪ್ರಿಲ್ 2021, 8:23 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೋವಿಡ್‌–19 ಪರಿಸ್ಥಿತಿ ತೀವ್ರವಾಗುತ್ತಿದ್ದು, ಸೋಂಕು ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ 'ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ನೆಟ್ಟಿಗರು ಅಭಿಯಾನ ನಡೆಸಿದ್ದಾರೆ. ರಿಸೈನ್‌ ಮೋದಿ (#ResignModi) ಹ್ಯಾಷ್‌ಟ್ಯಾಗ್‌ ಬಳಸಿ ಮಾಡಿರುವ ಪೋಸ್ಟ್‌ಗಳನ್ನು ಫೇಸ್‌ಬುಕ್‌ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು.

ಪೋಸ್ಟ್‌ಗಳು ಬ್ಲಾಕ್‌ ಆಗುತ್ತಿದ್ದಂತೆ ನೆಟ್ಟಿಗರು ಮತ್ತೆ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರದ ಆದೇಶದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಲಾಯಿತು. ಈ ಬಗ್ಗೆ ಫೇಸ್‌ಬುಕ್‌ ಸ್ಪಷ್ಟನೆ ನೀಡಿದ್ದು, 'ತಪ್ಪಾಗಿ ರಿಸೈನ್‌ ಮೋದಿ ಹ್ಯಾಷ್‌ಟ್ಯಾಗ್‌ಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು, ಸರ್ಕಾರದ ಆದೇಶದಿಂದಾಗಿ ಕ್ರಮಕೈಗೊಂಡಿಲ್ಲ' ಎಂದಿದೆ.

'ತಪ್ಪಾಗಿ ನಾವು ಈ ಹ್ಯಾಷ್‌ಟ್ಯಾಗ್‌ನ್ನು ನಿರ್ಬಂಧಿಸಿದೆವು, ಭಾರತ ಸರ್ಕಾರ ಈ ಬಗ್ಗೆ ಕ್ರಮವಹಿಸಲು ಕೇಳಿರಲಿಲ್ಲ, ಅದರ ಮೇಲಿನ ತಾತ್ಕಾಲಿಕ ನಿರ್ಬಂಧ ತೆರವುಗೊಳಿಸಲಾಗಿದೆ' ಎಂದು ಫೇಸ್‌ಬುಕ್‌ನ ವಕ್ತಾರರೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರಕಟಿಸಲಾಗಿರುವ ಹ್ಯಾಷ್‌ಟ್ಯಾಗ್‌ನ್ನು ಬುಧವಾರ ನಿರ್ಬಂಧಿಸಲಾಗಿತ್ತು. ಫೇಸ್‌ಬುಕ್‌ ಬಳಕೆದಾರರು ರಿಸೈನ್‌ ಮೋದಿ ಹ್ಯಾಷ್‌ಟ್ಯಾಗ್‌ ಹುಡುಕಾಡಿದರೆ, 'ಪೋಸ್ಟ್‌ಗಳಲ್ಲಿನ ವಿಷಯಗಳು ಫೇಸ್‌ಬುಕ್‌ನ ನಿಯಮಗಳನ್ನು ಉಲ್ಲಂಘಿಸಿವೆ, ಅವುಗಳು ತಾತ್ಕಾಲಿಕ ನಿರ್ಬಂಧಕ್ಕೆ ಒಳಪಟ್ಟಿವೆ' ಎಂದು ಗೋಚರಿಸಿತ್ತು.

ದೇಶದಲ್ಲಿ ಕೋವಿಡ್‌ ಎರಡನೇ ಅಲೆಯ ತೀವ್ರತೆಯಿಂದಾಗಿ ಹಲವು ರಾಜ್ಯಗಳಲ್ಲಿ ವೈದ್ಯಕೀಯ ವ್ಯವಸ್ಥೆಯ ಮೇಲೆ ಅಧಿಕ ಒತ್ತಡ ಉಂಟಾಗಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳು ಹಾಗೂ ಆಮ್ಲಜನಕದ ಕೊರತೆ ಎದುರಾಗಿದೆ. ಕೋವಿಡ್‌ ಹೋರಾಟದಲ್ಲಿರುವವರಿಗೆ ತುರ್ತು ಆಕ್ಸಿಜನ್‌ ಸಿಲಿಂಡರ್‌ಗಳು, ಆಸ್ಪತ್ರೆ ಬೆಡ್‌ಗಳು, ಪ್ಲಾಸ್ಮಾ ಡೋನರ್‌ಗಳು ಹಾಗೂ ವೆಂಟಿಲೇಟರ್‌ ಲಭ್ಯತೆಗೆ ಸಂಬಂಧಿಸಿದಂತೆ ಬಹುತೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಕಟಿಸಿಕೊಳ್ಳುತ್ತಿದ್ದಾರೆ.

ಕೋವಿಡ್‌ ಬಗ್ಗೆ ಸುಳ್ಳು ಸುದ್ದಿಗಳನ್ನು ಹಂಚುತ್ತಿರುವ ಪೋಸ್ಟ್‌ಗಳು ಹಾಗೂ ಜಾಲತಾಣಗಳ ಲಿಂಕ್‌ಗಳನ್ನು ಟ್ವಿಟರ್‌ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಿಂದ ತೆಗೆದು ಹಾಕುವಂತೆ ಸರ್ಕಾರ ಕೇಳಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಇವುಗಳು ತೊಡಕಾಗಿವೆ ಎಂದು ತಿಳಿಸಿತ್ತು. ಅದರಂತೆ ಸುಮಾರು 100 ಪೋಸ್ಟ್‌ಗಳು ಹಾಗೂ ವೆಬ್‌ಸೈಟ್‌ ಲಿಂಕ್‌ಗಳನ್ನು ತೆಗೆದು ಹಾಕಲಾಗಿತ್ತು.

ಸರ್ಕಾರದ ಮನವಿ ಮೇರೆಗೆ ಟ್ವಿಟರ್‌ ಇತ್ತೀಚೆಗಷ್ಟೇ ಸಂಸದರು, ಶಾಸಕರು ಹಾಗೂ ಸಿನಿಮಾ ಕ್ಷೇತ್ರದ ಸುಮಾರು 50 ಪೋಸ್ಟ್‌ಗಳನ್ನು ತೆಗೆದು ಹಾಕಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT