ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಕಾದಲ್ಲಿ ರಷ್ಯಾದಿಂದ ನರಮೇಧ; ಹ್ಯಾಷ್‌ಟ್ಯಾಗ್‌ಗಳಿಗೆ ಫೇಸ್‌ಬುಕ್‌ ನಿರ್ಬಂಧ

Last Updated 5 ಏಪ್ರಿಲ್ 2022, 2:47 IST
ಅಕ್ಷರ ಗಾತ್ರ

ರಾಯಿಟರ್ಸ್‌: ಉಕ್ರೇನ್‌ನ ಉತ್ತರ ಭಾಗ ಬುಕಾದಲ್ಲಿ ರಷ್ಯಾ ಪಡೆಗಳು ನಡೆಸಿರುವ ನರಮೇಧಕ್ಕೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ನೂರಾರು ನಾಗರಿಕರ ಹತ್ಯೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಟೀಕಿಸಲಾಗುತ್ತಿದೆ. ಈ ನಡುವೆ ಫೇಸ್‌ಬುಕ್‌ ಮಾಲೀಕತ್ವ ಹೊಂದಿರುವ ಮೆಟಾ ಪ್ಲಾಟ್‌ಫಾರ್ಮ್ಸ್‌ 'ಬುಕಾ ನರೇಮೇಧ'ಕ್ಕೆ ಸಂಬಂಧಿಸಿದ ಹ್ಯಾಷ್‌ಟ್ಯಾಗ್‌ಗಳನ್ನು ನಿರ್ಬಂಧಿಸಿದೆ.

ಕೀವ್‌ನ ಹೊರಭಾಗದ ಬುಕಾ ಪ್ರದೇಶದಲ್ಲಿ ಉಕ್ರೇನ್‌ ನಾಗರಿಕರನ್ನು ಅತ್ಯಂತ ಸಮೀಪದಿಂದ ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಮೃತ ದೇಹಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಇದರ ಬೆನ್ನಲ್ಲೇ ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರುವಂತೆ ಹಲವು ರಾಷ್ಟ್ರಗಳು ಒತ್ತಾಯಿಸಿವೆ.

ಬುಕಾ ನರಮೇಧಕ್ಕೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗಿರುವ ಹಿಂಸಾತ್ಮಕ ಚಿತ್ರಗಳನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಸ್ವಯಂಚಾಲನೆ ವ್ಯವಸ್ಥೆಯು ಸ್ಕ್ಯಾನ್‌ ಮಾಡಿದೆ, ಬುಕಾ (#bucha) ಮತ್ತು ಬುಕಾ ಸಾಮೂಹಿಕ ಹತ್ಯೆ (#buchamassacre) ಎಂಬಂತಹ ಹ್ಯಾಷ್‌ಟ್ಯಾಗ್‌ಗಳನ್ನು ನಿರ್ಬಂಧಿಸಿದೆ.

'ಈ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ಜನರು ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದು, ಅದರಲ್ಲಿರುವ ಚಿತ್ರಗಳನ್ನು ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ವ್ಯವಸ್ಥೆಯು ಗ್ರಾಫಿಕ್‌ ಮತ್ತು ಹಿಂಸಾತ್ಮಕ ವಿಷಯಗಳೆಂದು ತಾನಾಗಿಯೇ ಗುರುತಿಸುತ್ತವೆ. ಅದಕ್ಕೆ ಸಂಬಂಧಿಸಿದ ಹ್ಯಾಷ್‌ಟ್ಯಾಗ್‌ಗಳು ನಿರ್ಬಂಧಕ್ಕೆ ಒಳಪಟ್ಟಿವೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಬಳಕೆಯಾಗಿರುವ ಹ್ಯಾಷ್‌ಟ್ಯಾಗ್‌ಗಳನ್ನು ನಿರ್ಬಂಧದಿಂದ ಸಡಿಲಗೊಳಿಸಲು ಪ್ರಯತ್ನಿಸಿದ್ದೇವೆ' ಎಂದು ಮೆಟಾದ ವಕ್ತಾರ ಆ್ಯಂಡಿ ಸ್ಟೋನ್‌ ಪ್ರಕಟಿಸಿದ್ದಾರೆ.

ಚಿತ್ರಗಳನ್ನು ಒಳಗೊಂಡಿರುವ ಪೋಸ್ಟ್‌ಗಳಿಗೆ ಮೆಟಾ, ಎಚ್ಚರಿಕೆಯ ಗುರುತು ಪಟ್ಟಿಯನ್ನು ಸೇರಿಸಿದೆ. ಬಳಕೆದಾರರು ಚಿತ್ರಗಳನ್ನು ಕಾಣುವುದಕ್ಕೂ ಮುನ್ನ ಅದರ ಮೇಲೆ ಕ್ಲಿಕ್‌ ಮಾಡಬೇಕಾಗುತ್ತದೆ.

ಸಂಘರ್ಷದ ಸಮಯದಲ್ಲಿ ಹಿಂಸಾತ್ಮಕ ವಿಷಯಗಳನ್ನು ತೆಗೆದು ಹಾಕುವ ಮೆಟಾ ಕಂಪನಿಯ ಕ್ರಮವನ್ನು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಗುಂಪುಗಳು ಟೀಕಿಸಿವೆ. 90 ದಿನಗಳಲ್ಲಿ ತಮ್ಮ ಸರ್ವರ್‌ಗಳಿಂದ ಮಾಹಿತಿಗಳನ್ನು ಅಳಿಸಿ ಹಾಕುವುದರಿಂದ ಯುದ್ಧ ಅಪರಾಧಗಳು ಹಾಗೂ ಸಂಘರ್ಷಕ್ಕೆ ಸಂಬಂಧಿಸಿದ ಪ್ರಮುಖವಾದ ಸಾಕ್ಷ್ಯಾಧಾರಗಳು ಇಲ್ಲವಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದೆ.

ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದ ವಿಷಯಗಳನ್ನು ತೆಗೆದು ಹಾಕಿದರೂ, ಅವುಗಳು ಸಂಗ್ರಹವಾಗಿರುವಂತೆ ಮಾಡುವ ವ್ಯವಸ್ಥೆಗಾಗಿ ಮೆಟಾ ಹುಡುಕಾಟ ನಡೆಸಿರುವುದಾಗಿ ಸ್ಟೋನ್‌ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ನಾಗರಿಕರ ಹತ್ಯೆ ಕುರಿತ ಆರೋಪಗಳನ್ನು ರಷ್ಯಾ ಅಲ್ಲಗಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT