1962 ಚೀನಾ-ಭಾರತ ಯುದ್ಧದಲ್ಲಿ ಸೋತಿದ್ದಕ್ಕೆ ನೆಹರು ಮೇಲೆ ಹಲ್ಲೆ ನಡೆದಿತ್ತೇ?

7

1962 ಚೀನಾ-ಭಾರತ ಯುದ್ಧದಲ್ಲಿ ಸೋತಿದ್ದಕ್ಕೆ ನೆಹರು ಮೇಲೆ ಹಲ್ಲೆ ನಡೆದಿತ್ತೇ?

Published:
Updated:

ಬೆಂಗಳೂರು: 1962ರಲ್ಲಿ ನಡೆದ ಚೀನಾ- ಭಾರತ ನಡುವಿನ ಯುದ್ದದಲ್ಲಿ ಭಾರತ ಪರಾಭವಗೊಂಡಿದ್ದಕ್ಕೆ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಮೇಲೆ ಹಲ್ಲೆ ನಡೆದಿತ್ತು ಎಂಬ ಚಿತ್ರವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ವೈರಲ್ ಚಿತ್ರದ ಹಿಂದಿನ ಸತ್ಯ ಏನೆಂಬುದನ್ನು ಆಲ್ಟ್ ನ್ಯೂಸ್ ವರದಿ ಮಾಡಿದೆ.


ಫೋಟೊ ಕೃಪೆ: ಆಲ್ಟ್ ನ್ಯೂಸ್

2016ರಲ್ಲಿ ಟ್ವೀಟಿಗ ಮಹವೀರ್ ಮೆಹ್ತಾ ಎಂಬವರು ಈ ಚಿತ್ರವನ್ನು ಹರಿಬಿಟ್ಟಿದ್ದರು. ಚೀನಾ ಯುದ್ಧದಲ್ಲಿ ಪರಾಭವಗೊಂಡಿದ್ದಕ್ಕೆ ಜನರು ನೆಹರು ಅವರಿಗೆ ಥಳಿಸುತ್ತಿರುವುದು ಎಂಬ ಶೀರ್ಷಿಕೆ ನೀಡಿ ಫೋಟೊ ಟ್ವೀಟಿಸಿದ್ದರು. ರೈಲ್ವೆ ಸಚಿವ ಪೀಯುಷ್ ಗೋಯಲ್ ಅವರ ಕಚೇರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮೆಹ್ತಾ ಅವರ ಟ್ವಿಟರ್ ಖಾತೆ ಫಾಲೋ ಮಾಡುತ್ತಿದ್ದಾರೆ. ಮೆಹ್ತಾ ಪ್ರಕಾರ ಆ ಫೋಟೊ 1962ರಲ್ಲಿ ಇಂಡಿಯಾ-ಚೀನಾ ಯುದ್ದ ನಡೆದ ನಂತರ ಕ್ಲಿಕ್ಕಿಸಿದ್ದಾಗಿದೆ.  

ಮೋದಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಫಾಲೋ ಮಾಡುತ್ತಿರುವ ಹಲವಾರು ಟ್ವೀಟಿಗರು ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.  ಆಲ್ಟ್ ನ್ಯೂಸ್‍ಗೆ ಸಿಕ್ಕಿದ ಅತೀ ಹಳೆ ಫೋಟೊ ಎಂದರೆ 2013ರಲ್ಲಿ ಶೇರ್ ಮಾಡಿದ ಫೋಟೊ.

ಕೆಲವು ವರ್ಷಗಳಿಂದ ಹಲವಾರು ವೆಬ್‌ಸೈಟ್/ ಬ್ಲಾಗ್‍ಗಳು ಈ ಚಿತ್ರವನ್ನು ಹಂಚಿಕೊಂಡಿವೆ 

ಚಿತ್ರ ಅದೇ ವಿಷಯ ಬೇರೆ

ಈ ತಿಂಗಳ ಆರಂಭದಲ್ಲಿ ಇದೇ ಚಿತ್ರ ಶೇರ್ ಆಗಿದ್ದು, ಅಲ್ಲಿ ನೀಡಿದ ಒಕ್ಕಣೆ ಬೇರೆಯಾಗಿತ್ತು. ವಿಸಾ ಇಲ್ಲದೆ ಕಾಶ್ಮೀರಕ್ಕೆ ಪ್ರವೇಶಿಸಲು ಯತ್ನಿಸಿದಾಗ ಮಾಜಿ ಪ್ರಧಾನಿಯನ್ನು ಬಂಧಿಸಿರುವುದು ಎಂದು ಈ ಚಿತ್ರಕ್ಕೆ ನೀಡಿದ ಒಕ್ಕಣೆಯಾಗಿತ್ತು, ಫೇಸ್‍ಬುಕ್‍ನಲ್ಲಿ 2018ರಲ್ಲಿ ವ್ಯಕ್ತಿಯೊಬ್ಬರು ಇದೇ ಫೋಟೊ ಶೇರ್ ಮಾಡಿದ್ದು, ಆ ಪೋಸ್ಟ್ 3,400ಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿತ್ತು,

ಇನ್ನೂ ಹಲವು ಪೇಜ್‍ಗಳಲ್ಲಿ  ಈ ಚಿತ್ರ ಶೇರ್ ಆಗಿದೆ

ಫೋಟೊದ ಮೂಲ ಯಾವುದು? 
ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ 2014ರಲ್ಲಿ ಔಟ್ ಲುಕ್ ನಲ್ಲಿ ಪ್ರಕಟವಾದ ಫೋಟೊ ಅದಾಗಿದೆ. ಅಲ್ಲಿ ಈ ಫೋಟೊಗೆ ನೀಡಿದ ಶೀರ್ಷಿಕೆ Braced for the worst: Nehru is prevented from plunging into a riotous crowd in 1962, before the war”.  ಅಂದರೆ 1962ರಲ್ಲಿ ಯುದ್ಧಕ್ಕಿಂತ ಮುನ್ನ ದಂಗೆಕೋರರ ಗುಂಪಿನತ್ತ ಹೋಗದಂತೆ ನೆಹರು ಅವರನ್ನು ತಡೆ ಹಿಡಿದಿರುವ ಫೋಟೊ ಇದು ಎಂದು ಹೇಳಲಾಗಿದೆ.  ಅಸೋಸಿಯೇಟೆಡ್ ಪ್ರೆಸ್ ಈ ಫೋಟೊ ಕ್ಲಿಕ್ಕಿಸಿತ್ತು.

ಅಸೋಸಿಯೇಟೆಡ್ ಪ್ರೆಸ್ ಆಕ್ರೈವ್‍ನಲ್ಲಿ 'Nehru 1962'  ಎಂಬ ಕೀವರ್ಡ್ ನೀಡಿ ಹುಡುಕಿದಾಗ ಆ ಚಿತ್ರ ಸಿಕ್ಕಿದೆ. ಚಿತ್ರ ಕ್ಲಿಕ್ಕಿಸಿದ ಇಸವಿ ಸರಿಯಾಗಿದ್ದರೂ ಅಲ್ಲಿ ನೀಡಿದ ಶೀರ್ಷಿಕೆ ಬೇರೆಯಾಗಿತ್ತು, ಅಸೋಸಿಯೇಟೆಡ್ ಪ್ರೆಸ್ ಈ ಚಿತ್ರದ ಬಗ್ಗೆ ನೀಡಿದ ಮಾಹಿತಿ ಈ ರೀತಿ ಇದೆ.'  ಜನವರಿ 1962ರಲ್ಲಿ ಭಾರತದ ಪಟನಾ ನಗರದಲ್ಲಿ ಕಾಂಗ್ರೆಸ್ ಪಕ್ಷದ ಸಭೆ ವೇಳೆ ದಂಗೆಯೆದ್ದ ಗುಂಪಿನತ್ತ ಹೋಗದಂತೆ ನೆಹರೂ ಅವರನ್ನು ತಡೆಹಿಡಿದಿರುವ ರಕ್ಷಣಾ ಸಿಬ್ಬಂದಿ. ಅದೇ ವರ್ಷ ಕಮ್ಯೂನಿಸ್ಟ್ ಚೀನಾ ಭಾರತದ ಮೇಲೆ ದಾಳಿ ನಡೆಸಿ ನೆಹರು ಅವರನ್ನು ಸಂಕಷ್ಟಕ್ಕೆ ದೂಡಿತು'.
ಅಂದರೆ 1962ರಲ್ಲಿ ಭಾರತ-ಚೀನಾ ಯುದ್ಧಕ್ಕೆ ಮುನ್ನ ತೆಗೆದ ಫೋಟೊ ಇದಾಗಿದ್ದು, ನೆಹರು ಮೇಲೆ ಹಲ್ಲೆ ನಡೆದಿದೆ ಎಂಬ ವಾದ ಸುಳ್ಳು ಎಂಬುದು ಸಾಬೀತಾಗಿದೆ.

1962ರಲ್ಲಿ ಪಟನಾದಲ್ಲಿ ಕಾಂಗ್ರೆಸ್ ಪಕ್ಷದ ಸಭೆ ಎಂದು ಫೋಟೊ ಶೀರ್ಷಿಕೆ ಇದ್ದಿದ್ದರಿಂದ ಆಗಿನ ಪತ್ರಿಕೆಗಳನ್ನು ಈ ಫೋಟೊ ಹುಡುಕಿದಾಗ ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿನ ಲೇಖನ ಸಿಕ್ಕಿದೆ. 


ಜನವರಿ 6, 1962ರಲ್ಲಿ ದಿ ಇಂಡಿಯುನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಶೀರ್ಷಿಕೆ- ಸಭೆಯಲ್ಲಿ ಗದ್ದಲ, ಕಲಾಪ ಮುಂದೂಡಲಾಗಿದೆ. ಸಭೆಯ ಅಂಗಳಕ್ಕಿಳಿದ ಗುಂಪು,  ಕೆಲವರು ಪ್ರಜ್ಞೆತಪ್ಪಿದರು, ಶಾಂತಿಗಾಗಿ ನೆಹರು ವಿನಂತಿ ಎಂದಿದೆ.

ಜನವರಿ 5, 1962ರಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಿರುವಂತೆ ಇಡೀ ಜೀವನದಲ್ಲಿ ಗುಂಪನ್ನು ನಿಯಂತ್ರಿಸಿದ್ದ ನೆಹರೂ ಇಲ್ಲಿನ ಗುಂಪನ್ನು ಸ್ವಲ್ಪವೇ ನಿಯಂತ್ರಿಸುವುದರಲ್ಲಿ ಯಶಸ್ವಿಯಾದರು, ಒಂದು ಹಂತದಲ್ಲಿ ಸಿಟ್ಟಿಗೆದ್ದ ನೆಹರು, ತಮ್ಮ ರಕ್ಷಣೆಯ ಬಗ್ಗೆಯೂ ಯೋಚಿಸದೆ ಮುಷ್ಠಿ ಮುಗಿದು ರಕ್ಷಣಾ ಸಿಬ್ಬಂದಿಯತ್ತ ಧುಮುಕಿದರೂ, ಗುಂಪಿನತ್ತ ಧುಮುಕದಂತೆ ಕಾಂಗ್ರೆಸ್ ನೇತಾರರು ಅವರನ್ನು ತಡೆ ಹಿಡಿದರು ಎಂದಿದೆ.

ಜನವರಿ 8, 1962ರಲ್ಲಿ ಪ್ರಕಟವಾದ The Florence Times ಪತ್ರಿಕೆಯ ವರದಿ ಪ್ರಕಾರ ಪಟನಾದಲ್ಲಿ ಕಾಂಗ್ರೆಸ್ ಪಕ್ಷದ ಉದ್ರಿಕ್ತ ಗುಂಪಿನ ಮೇಲೆ ಧುಮುಕುವುದನ್ನು ರಕ್ಷಣಾ ಸಿಬ್ಬಂದಿ ತಡ ಹಿಡಿದರು. ಪಕ್ಷದ ಸಭೆಯಲ್ಲಿ ಪ್ರತಿಭಟನೆ ನಡೆದಿದ್ದು, ಇಲ್ಲಿ ಉಂಟಾದ ಗದ್ದಲ ನೂಕು ನುಗ್ಗಾಟದಲ್ಲಿ  24 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಈ ಲೇಖನಗಳು ಮತ್ತು ಅಸೋಸಿಯೇಟೆಡ್ ಪ್ರೆಸ್ ತಮ್ಮ ಚಿತ್ರದಲ್ಲಿ ನೀಡಿದ ಮಾಹಿತಿ ಎರಡೂ ಒಂದೇ ಆಗಿರುವುದರಿಂದ ಚೀನಾ ಯುದ್ಧ ಸೋತಿದ್ದಕ್ಕೆ ನೆಹರು ಮೇಲೆ ಹಲ್ಲೆ ನಡೆಯಿತು ಎಂಬ ವಾದ ಸುಳ್ಳು ಎಂದು ಇಲ್ಲಿ ಸಾಬೀತಾಗಿದೆ.

ಅದೇ ರೀತಿ ಪಾಸ್ ಪೋರ್ಟ್ ಇಲ್ಲದೆ ಕಾಶ್ಮೀರಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದಾಗ ನೆಹರು ಅವರ ಬಂಧನ ನಡೆದಿದೆ ಎಂದು ಹೇಳಿರುವುದು ಕೂಡಾ ಸುಳ್ಳು. 1946ರಲ್ಲಿ  ನೆಹರು ಅವರನ್ನು ಕಾಶ್ಮೀರಕ್ಕೆ ಪ್ರವೇಶಿಸದಂತೆ ತಡೆಯಲಾಗಿತ್ತು. ಆದರೆ ನೆಹರು ಅವರನ್ನು ತಡೆದಿರುವ ಫೋಟೊ ಇದಲ್ಲ.
 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !