ಇಂಟರ್‌ನೆಟ್ ವ್ಯಸನ ಮನಸ್ಸಿನ ತಳಮಳಕ್ಕೆ ಆಹ್ವಾನ

7

ಇಂಟರ್‌ನೆಟ್ ವ್ಯಸನ ಮನಸ್ಸಿನ ತಳಮಳಕ್ಕೆ ಆಹ್ವಾನ

Published:
Updated:
Deccan Herald

ಬದಲಾವಣೆ ಜಗದ ನಿಯಮ. ತಾಂತ್ರಿಕ ವಿಜ್ಞಾನ ಅಭಿವೃದ್ಧಿಯಾದಂತೆ ಸಮಾಜವು ಬದಲಾಗುತ್ತಿದೆ. ಪ್ರಾಚೀನ ಕಾಲದಲ್ಲಿ ತಮ್ಮೆಲ್ಲ ಭಾವನೆಗಳನ್ನು ಕಲ್ಲಿನ ಮೇಲೆ, ಗೋಡೆಗಳ ಮೇಲೆ ಚಿತ್ರಗಳ ಮೂಲಕ ಬರೆಯುತ್ತಿದ್ದರು. ನಂತರದ ಕಾಲದಲ್ಲಿ ಪತ್ರಗಳಲ್ಲಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮನದ ಭಾವನೆಗಳನ್ನು ಬರೆಯಲಾರಂಭಿಸಿದರು. ಆದರೆ ಆಧುನಿಕ ಯುಗದಲ್ಲಿ ನಮ್ಮೆಲ್ಲರ ಭಾವನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದೇವೆ.

ಸಮಾಜ ಮತ್ತು ಸುತ್ತಲಿನ ಪರಿಸರದಿಂದ ಕಲಿಯಬೇಕಾದ ಜೀವನದ ಪಾಠಗಳನ್ನು ಇಂಟರ್‌ನೆಟ್‌ನಿಂದ ಕಲಿಯುತ್ತಿದ್ದೇವೆ ಮತ್ತು ಇಂಟರ್‌ನೆಟ್ ಮೂಲಕ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇವೆ. ಭಾವನೆಗಳು ಎಲ್ಲಾ ಜೀವಿಗಳಲ್ಲಿದ್ದರೂ, ಮನುಷ್ಯರಂತೆ ಪರಿಸ್ಥಿತಿಗೆ ಅನುಗುಣವಾಗಿ ವ್ಯಕ್ತಿಪಡಿಸುವ ಇನ್ನೊಂದು ಜೀವಿ ಭೂಮಿಯಲ್ಲಿಲ್ಲ.

ಎಲ್ಲಾ ಸಂಬಂಧಗಳಿಗಿಂತ ಮಿಗಿಲಾದದ್ದು ಗೆಳತನ, ಗೆಳತನ ಒಳ್ಳೆಯ ಸ್ನೇಹಿತರನ್ನು ಕೊಡುತ್ತದೆ ಮತ್ತು ಕೆಟ್ಟ ಸ್ನೇಹಿತರನ್ನು ಕೊಡುತ್ತದೆ. ಆದರೆ ಕಟ್ಟ ಸಹವಾಸದಿಂದ ಡ್ರಗ್ಸ್, ಗಾಂಜಾ, ಅಫೀಮು, ಕೊಕೈನ್ ಮತ್ತು ಮದ್ಯ ಸೇವನೆಯಂಥ ಈ ಪದಾರ್ಥಗಳಿಗೆ ವ್ಯಸನಿಗಳಾಗಿ ಬಿಡುತ್ತಾರೆ. ಅಷ್ಟೇ ಅಲ್ಲದೇ ಹದಿಹರೆಯದವರು ಮತ್ತು ಪ್ರೌಢವ್ಯವಸ್ಥೆಯ ಮಕ್ಕಳು ಪೆಟ್ರೋಲ್, ವೈಟ್‌ನರ್, ಬಣ್ಣ, ಹೊಸ ಚಪ್ಪಲಿ ಮತ್ತು ಅಂಟು ಪದಾರ್ಥಗಳ ವಾಸನೆಯಿಂದ ನಶೆಯನ್ನು ಪಡೆಯುವುದರ ಮೂಲಕ ವ್ಯಸನಿಗಳಾಗುತ್ತಿರುವುದು ಆಶ್ಚರ್ಯದ ವಿಷಯ.

ಆದರೆ ಇವೆಲ್ಲ ವಿಷಯಗಳಿಗಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ, ಸಣ್ಣಪುಟ್ಟ ಸಂದೇಹಗಳಿಂದ  ಹಿಡಿದು ಅಡುಗೆ ಕಲಿಯುವ ವಿಧಾನದವರೆಗೂ ಇಂಟರ್‌ನೆಟ್‌ನ್ನೇ ಬಳಸಿ ಪ್ರತಿನಿಮಿಷವೂ ಇಂಟರ್‌ನೆಟ್‌ಗೆ ವ್ಯಸನಿಗಳಾಗುತ್ತಿದ್ದೇವೆ. ಈ ವ್ಯಸನಕ್ಕೆ ಹೆಚ್ಚಾಗಿ ಸರಿಸುಮಾರು 18-40 ವರ್ಷ ವಯಸ್ಸಿನ ಯುವಜನರು ಮತ್ತು ವಯಸ್ಕರು ಅಂತರ್ಜಾಲಕ್ಕೆ ಸಿಲುಕಿರುವುದು ದುರದೃಷ್ಟಕರ ಸಂಗತಿ.

ಇಂಟರ್‌ನೆಟ್ ವ್ಯಸನದ ವಿಧಗಳು

ಸಾಮಾಜಿಕ ಜಾಲಾತಾಣಗಳ ವ್ಯಸನ : ನಿರಂತರವಾಗಿ ಫೇಸ್‌ಬುಕ್, ವಾಟ್ಸ್‌ ಆ್ಯಪ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಸ್ಟೇಟಸ್ ಮತ್ತು ಪ್ರೊಫೈಲ್ ಪೋಟೊಗಳನ್ನು ಹಾಕುವುದು, ಹೆಚ್ಚು ಹೆಚ್ಚು ಫ್ರೆಂಡ್ಸ್ ಮಾಡಿಕೊಳ್ಳುವುದು, ಸಾಮಾನ್ಯಕ್ಕಿಂತ ಹೆಚ್ಚಾಗಿ ಲೈಕ್ ಮತ್ತು ಕಮೆಂಟಗಳನ್ನು ಕೊಡುವುದು ಹಾಗೂ ಬೇರೆಯವರ ಪ್ರೊಫೈಲ್ ನೋಡುವುದು.

ವಿಡಿಯೊ ಗೇಮ್ ವ್ಯಸನ: ಕುತೂಹಲ ಭರಿತ ಆಟಗಳನ್ನು ಬಿಡುವಿನ ಸಮಯದಲ್ಲದೇ, ಕೆಲಸದಲ್ಲಿರುವಾಗ, ಶಾಲಾ ಕಾಲೇಜಿನಲ್ಲಿರುವಾಗಲೂ ಆಟದ ವಿವಿಧ ಹಂತಗಳನ್ನು ಪೂರ್ಣಗೊಳಿಸಲು ಪೂರ್ತಿ ದಿವಸ ಕಂಪ್ಯೂಟರ್ ಗೇಮ್ಸ್‌ ಮತ್ತು ವಿಡಿಯೊ ಗೇಮ್ಸ್‌ಗಳಲ್ಲಿ ಕಾಲ ಕಳೆಯುವುದು. ಬೇಸರದ ಸಂಗತಿಯೆಂದರೆ ಈ ವ್ಯಸನಕ್ಕೆ ಮಕ್ಕಳೇ ಹೆಚ್ಚಾಗಿ ತುತ್ತಾಗುತ್ತಾರೆ.

ಸೈಬರ್‌ ಸೆಕ್ಸ್ ವ್ಯಸನ: ಅಶ್ಲೀಲ ಲೈಂಗಿಕ ವಿಡಿಯೊ, ಫೋಟೊ, ಮೆಸೇಜುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು, ಅಶ್ಲೀಲ ವೆಬ್‌ಸೈಟ್‌ಗಳಿಗೆ ಪದೇ ಪದೇ ಲಾಗಿನ್ ಆಗುವುದು ಮತ್ತು ನಿರಂತರವಾಗಿ ವಿಡಿಯೊಗಳನ್ನು ನೋಡುವುದು. ಇವೆಲ್ಲ ಹದಿಹರೆಯದವರಲ್ಲಿ ಹೆಚ್ಚಾಗಿರುತ್ತದೆ.

ಆನ್‌ಲೈನ್‌ನಲ್ಲಿ ಜೂಜಾಡುವ ವ್ಯಸನ: ಹಣದ ಆಸೆಯಿಂದ ಆನ್‌ಲೈನ್‌ನಲ್ಲಿ ಜೂಜಾಡುವುದು, ಪದೇ ಪದೇ ಜೂಜಾಡುವ ವೆಬ್‌ಸೈಟ್‌ಗಳನ್ನು ನೋಡುವುದು.

ಇಂಟರ್‌ನೆಟ್ ವ್ಯಸನದ ಲಕ್ಷಣಗಳು

1.ಆನ್‌ಲೈನ್‌ಗೆ ಹೋಗಲು ಸಾಧ್ಯವಾಗದಿದ್ದಾಗ ಹತಾಶೆ, ಒತ್ತಡದ ಭಾವನೆಗಳು ಬರುವುದು.

2.ಸಾಲಾಗಿ ಕೆಲವು ದಿನಗಳವರೆಗೆ ಮನರಂಜನೆ ಬಳಕೆಗಾಗಿ ಇಂಟರ್‌ನೆಟ್ ಬಳಸುವುದನ್ನು ನಿಯಂತ್ರಿಸುವುದು ಬಹಳ ಕಷ್ಟವೆನಿಸುವುದು.   

3. ಆನ್‌ಲೈನ್‌ನಲ್ಲಿದ್ದಾಗ ಮಾತ್ರ ಮನಸ್ಸು ಶಾಂತವೆನಿಸುವುದು ಮತ್ತು ಸಂತೋಷದ ಭಾವನೆಗಳು ಬರುವುದು.

4. ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಸಮಯವನ್ನು ಕಳೆಯುವಾಗ ಕೆಲವು ನಿಮಿಷಗಳು ಆನ್‌ಲೈನ್‌ನಲ್ಲಿರುವಾಗ ಕೆಲವು ಗಂಟೆಗಳೇ ಕಳೆದು ಹೋಗಿವೆ ಎಂದೆನಿಸುವುದು.

5.ಇತರೆ ಚಟುವಟಿಕೆಗಳಲ್ಲಿ ತೊಡಗಿರುವಾಗ ಆನ್‌ಲೈನ್‌ಗೆ ಹೋಗಬೇಕೆಂಬ ಆಲೋಚನೆ ಬರುವುದು (ಉದಾಹರಣೆ:- ಶಾಲೆಯಲ್ಲಿದ್ದಾಗ, ಕೆಲಸಮಾಡುವಾಗ ಮತ್ತು ಸ್ನೇಹಿತರ ಜೊತೆ ಹೊರಗಡೆ ಹೋದಾಗ)

6.ಇಂಟರ್‌ನೆಟ್‌ನಲ್ಲಿ ಇಲ್ಲದಿರುವಾಗ ಋಣಾತ್ಮಕ ಯೋಚನೆಗಳು ಬರುವುದು ಅಥವಾ ಖಿನ್ನತೆ, ಆತಂಕ ಅನುಭವಿಸುವಂತಾಗುವುದು.

7. ಇಷ್ಟಪಟ್ಟ ದಿನನಿತ್ಯದ ಹವ್ಯಾಸಗಳು ಮತ್ತು ಚಟುವಟಿಕೆಗಳಲ್ಲಿ ಕಾಲಕ್ರಮೇಣ ಆಸಕ್ತಿ ಕಡಿಮೆಯಾಗುವುದು ಅಥವಾ ಭಾಗವಹಿಸದೆ ಇರುವುದು.

8. ಅತೀ ಹೆಚ್ಚು ಅನಾರೋಗ್ಯಕರ ಆನ್‌ಲೈನ್ ಬಳಕೆಗೆ ಅಸಮಂಜಸವಾದ ಸಮರ್ಥನೆಗಳನ್ನು ಕೊಡುವುದು, ಉದಾಹರಣೆ ಇತರೇ ಜನರು ನಾನು ಇರುವುದಕ್ಕಿಂತ ಹೆಚ್ಚು ಆನ್‌ಲೈನ್‌ನಲ್ಲಿದ್ದಾರೆ ಎನ್ನುವುದು...

9. ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆದನಂತರ ಅಪರಾಧದ ಭಾವನೆಗಳು ಮೂಡುವುದು.

10.ಸದ್ಯ ನಾನು ಡ್ರಗ್ಸ್ ಅಥವಾ ಇತರೇ ವ್ಯಸನಗಳಿಗೆ ವ್ಯಸನಿಯಾಗಿಲ್ಲವೆಂದು ಅತೀಯಾದ ಇಂಟರ್‌ನೆಟ್ ಬಳಕೆಯನ್ನು ಸಮರ್ಥಿಸಿಕೊಳ್ಳುವುದು.

ಇಂಟರ್‌ನೆಟ್ ವ್ಯಸನದ ವರ್ತನೆಗಳು

1.ಇಂಟರ್‌ನೆಟ್ ಬಳಕೆ ಮಾಡುವಾಗ ಆಗಾಗ ಊಟ ಮಾಡುವುದು ಅಥವಾ ಊಟವನ್ನು ಸಂಪೂರ್ಣವಾಗಿ ಬಿಡುವುದು.

2.ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆಯಾಗುವುದು.

3. ನಿಜವಾದ ಸ್ನೆಹಿತರನ್ನು ಕಳೆದುಕೊಳ್ಳುವುದು, ಆನ್‌ಲೈನ್ ಗೆಳೆಯರನ್ನು ಸಂಪಾದಿಸುವುದು.

4. ಕುಟುಂಬ ಮತ್ತು ಸ್ನೇಹಿತರ ಜೊತೆ ಕಾಲಕಳೆಯುವ ಸಮಯವನ್ನು ಕಡಿಮೆ ಮಾಡುವುದು, ಮನೆಯ ಜವಾಬ್ದಾರಿಯಲ್ಲಿ ನಿರಾಸಕ್ತಿ ತೋರುವುದು.

5. ಓದುವುದರಲ್ಲಿ ನಿರಾಸಕ್ತಿ ಮತ್ತು ಶಾಲಾ-ಕಾಲೇಜು ಚಟುವಟಿಕೆಗಳಲ್ಲಿ ಹಿಂದೆ ಬೀಳುವುದು.

6. ತಡರಾತ್ರಿಯವರೆಗೂ ನಿರಂತರವಾಗಿ ಇಂಟರ್‌ನೆಟ್ ಬಳಸುವುದು ಬೆಳಗ್ಗೆ ತಡವಾಗಿ ಏಳುವುದು.

7. ಇಂಟರ್‌ನೆಟ್ ಬಳಕೆ ಬಗ್ಗೆ ಪ್ರಶ್ನೆ ಮಾಡಿದಾಗ ಕೋಪಿಸಿಕೊಳ್ಳುವುದು ಮತ್ತು ವಾಪಾಸು ಬೈಯುವುದು.

ನೀವು ಇಂಟರ್‌ನೆಟ್ ವ್ಯಸನಕ್ಕೆ ಒಳಗಾಗಿರುವರೇ? ಹಾಗಾದರೆ ನಿಮ್ಮ ಮನಸ್ಸಿನಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸಿ.

1. ನನ್ನ ಆನ್‌ಲೈನ್ ಬಳಕೆಯಿಂದ ನನ್ನ ಸಂಬಂಧಗಳಲ್ಲಿ, ಕಾಲೇಜಿನಲ್ಲಿ, ಕೆಲಸದಲ್ಲಿ ಮತ್ತು ನನ್ನ ಭಾವನೆಗಳಿಗೆ ತೊಂದರೆಯಾಗುತ್ತಿದೆಯೇ?

2.ನಾನು ನಿರಂತರವಾಗಿ ಆನ್‌ಲೈನ್‌ಗೆ ಹೋಗುತ್ತಿರುವುದರಿಂದ ನನ್ನ ಪ್ರಮುಖ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಿದ್ದೇನೆಯೇ?

3. ನಾನು ಇಂಟರ್‌ನೆಟ್‌ನ್ನು ನಿತ್ಯಜೀವನದಲ್ಲಿ ಎಷ್ಟು ಬಳಸುತ್ತಿದ್ದೇನೆ ಎಂಬುದರ ಬಗ್ಗೆ ಇತರ ಜನರು ಯೋಚಿಸುತ್ತಿದ್ದಾರೆಯೇ?

4. ದಿನದಿಂದ ದಿನಕ್ಕೆ ನನ್ನ ಇಂಟರ್‌ನೆಟ್ ಬಳಕೆ ಹೆಚ್ಚಾಗುತ್ತಿದೆಯೇ?

5. ನಾನು ಆನ್‌ಲೈನ್‌ಗೆ ಹೋಗುವುದರಿಂದ ಸಮಸ್ಯೆಗಳಿಂದ ನನ್ನ ಮನಸ್ಸು ನಿರಾಳವಾಗುತ್ತಿದೆಯೇ?

6. ಆನ್‌ಲೈನ್ ನಲ್ಲಿ ಕಳೆಯುತ್ತಿರುವ ಸಮಯದಿಂದ ನನ್ನ ಜೀವನದ ಗುಣಮಟ್ಟ ಹದಗೆಟ್ಟಿದೆಯಾ?

ಇಂಟರ್‌ನೆಟ್ ವ್ಯಸನವು ಮಾನಸಿಕ ಕಾಯಿಲೆಯೆಂದು ICD(International Classification of Disease) ಮತ್ತು DSM (Diagnastic and Statistical Manual of Mental Disorder) ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ ಕೆಲವು ಸಂಶೋಧನೆಗಳು ಇಂಟರ್‌ನೆಟ್ ವ್ಯಸನದಿಂದ ಮೆದುಳಿನಲ್ಲಿ ರಾಸಾಯನಿಕ ಬದಲಾವಣೆಯಾಗುತ್ತವೆ ಮತ್ತು ಆತಂಕದ ಖಿನ್ನತೆಯ ಭಾವನೆಗಳು ಬರುತ್ತವೆ. ಹಾಗೂ ನಿದ್ರಾಹೀನತೆಗೆ ದಾರಿ ಮಾಡಿಕೊಡುತ್ತದೆ ಎಂದು ದೃಢಪಡಿಸಿವೆ.

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಇಂಟರ್‌ನೆಟ್‌ನ ಹೆಚ್ಚು ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಗಂಭೀರ ವಿಷಯದ ಬಗ್ಗೆ ಮತ್ತು ಅಪಾಯ ಸಂಭವಿಸುವ ಮೊದಲು ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು, ವೈದ್ಯರು, ಮತ್ತು ಪೋಷಕರು ಗಮನಹರಿಸುವುದು ಒಳ್ಳೆಯದು.

ನೆಹರು ಎಚ್. ಜೆ.
ಶುಶ್ರೂಷಕ, ಡಿಮ್ಹಾನ್ಸ್‌

 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !