ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇನೂ ಬಳೆ ತೊಟ್ಟಿಲ್ಲ: ನಳಿನ್ ಎಚ್ಚರಿಕೆ

ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಯೋಜಿತ ಗೂಂಡಾಗಿರಿ ಬಿಜೆಪಿ ಪ್ರಮುಖರ ಆರೋಪ
Last Updated 21 ಮೇ 2018, 10:01 IST
ಅಕ್ಷರ ಗಾತ್ರ

ಪುತ್ತೂರು: ‘ಕಾಂಗ್ರೆಸ್‌ ಪ್ರಾಯೋಜಿತ ದ್ವೇಷದ ರಾಜಕಾರಣಕ್ಕೆ ಉತ್ತರ ಕೊಡಬಲ್ಲೆವು; ನಾವೇನು ಬಳೆ ತೊಟ್ಟಿಲ್ಲ’ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.

ವಿಟ್ಲ ಠಾಣಾ ವ್ಯಾಪ್ತಿಯ ಕೆಲಿಂಜ ಮತ್ತು ಕುಡ್ತಮುಗೇರು ಎಂಬಲ್ಲಿ ಶನಿವಾರ ಸಂಜೆ ನಡೆದಿದ್ದ ಹಲ್ಲೆ ಯಲ್ಲಿ ಗಾಯಗೊಂಡಿದ್ದ  ಚಂದ್ರ ಶೇಖರ್, ಸಚ್ಚಿದಾನಂದ, ಲಕ್ಷ್ಮೀಶ, ಶರತ್,ಧನರಾಜ್,ಮುದ್ದ, ಗಣೇಶ್ ಮತ್ತು ಅಕ್ಷತ್ ಹಾಗೂ ಪೊಲೀಸ್ ದೌರ್ಜನ್ಯಕ್ಕೊಳಗಾದ ಪುರಂದರ ಮತ್ತು ಕಮಲ ಎಂಬವರು ಇಲ್ಲಿನ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು, ಸಂಸದ ನಳಿನ್‌ಕುಮಾರ್ ಕಟೀಲ್‌ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಬಿಜೆಪಿ ಮುಖಂಡರ ಜೊತೆ ಭಾನುವಾರ ಆಸ್ಪತ್ರೆಗೆ ಬಂದು ಗಾಯಾಳುಗಳನ್ನು ಭೇಟಿಯಾದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರೊಯೋಜಿತವಾದ ಗೂಂಡಾಗಿರಿ ರಾಜಕಾರಣ ಆರಂಭವಾಗಿದೆ. ಸೋಲಿನ ಹತಾಶ ಭಾವನೆಯಿಂದ ಹಿಂದೂ ಸಮಾಜವನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮತ್ತು ಹಲ್ಲೆ ನಡೆಸುವ ದ್ವೇಷದ ರಾಜಕಾರಣ ಆರಂಭಗೊಂಡಿದ್ದು, ಇಂತಹ ಘಟನೆಯನ್ನು ನಾವು ಸಹಿಸುವುದಿಲ್ಲ’ ಎಂದರು.

‘ಚುನಾವಣೆಯಲ್ಲಿ ಬಿಜೆಪಿಯ ಏಳು ಶಾಸಕರು ಗೆಲುವಿನ ಮೂಲಕ ಜನರ ಆಶೀರ್ವಾದ ಪಡೆದಿದ್ದಾರೆ. ಇದನ್ನು ಸಹಿಸದಿರುವ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವಗಳ ಮೂಲಕ ಹಲ್ಲೆ ಮಾಡುವುದನ್ನು ಆರಂಭಿಸಿದ್ದಾರೆ. ನಿನ್ನೆ ಸರ್ಕಾರ ಬದಲಿ ಆದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ನೇರವಾಗಿ ಮನೆಗಳಿಗೆ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಎರಡು ಕಡೆಗಳಲ್ಲಿ ಪೊಲೀಸರೇ ನೇರವಾಗಿ ಎರಡು ಮನೆಗಳಿಗೆ ದಾಳಿ ಮಾಡಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತಿದ್ದೇನೆ. ಮುಂದೆ ಉಗ್ರವಾದ ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಹಲ್ಲೆ ಮತ್ತು ಆಕ್ರಮಣವನ್ನು ನಾವು ಸಹಿಸುವುದಿಲ್ಲ. ದ್ವೇಷದ ರಾಜಕಾರಣಕ್ಕೆ ಉತ್ತರ ಕೊಡಲು ನಾವೇನು ಬಲೆ ತೊಟ್ಟಿಲ್ಲ’ ಎಂದು ಅವರು ಎಚ್ಚರಿಸಿದರು

‘ಸೋತ ಅಭ್ಯರ್ಥಿಗಳು ಸೋಲಿನ ಪಾಠವನ್ನು ಇನ್ನೂ ಅರಿತಿಲ್ಲ.ಅವರು ಸೋಲಿನ ಆತ್ಮಾವಲೋಕನ ಮಾಡುವುದನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರ ಮೇಲೆ ಚೂಬಿಟ್ಟು ಹಲ್ಲೆ ಮಾಡಿಸುತ್ತಿದ್ದಾರೆ. ಹತಾಶ ಭಾವನೆಯಿಂದ ಇಂತಹ ಘಟನೆಗಳಿಗೆ ಪ್ರೇರಣೆ ಕೊಡುತ್ತಿದ್ದಾರೆ. ಅಧಿಕಾರ ಇಲ್ಲದಿದ್ದರೂ ಹಿಂದಿನ ಹಿಂದಿನ ಬಾಗಿಲಿನ ಮೂಲಕ ಬಂದು ಅಧಿಕಾರ ಹಿಡಿದ ನೀವು ಅಭಿವೃದ್ಧಿಗಾಗಿ ಒಳ್ಳೆಯ ಕೆಲಸ ಮಾಡಿದರೆ ಸರಿ, ಅದನ್ನು ಬಿಟ್ಟು ಇಂತಹ ಕೃತ್ಯ ಮುಂದುವರಿಸಿದರೆ ಉತ್ತರ ಕೊಡಲು ಬಿಜೆಪಿ ಮತ್ತು ನಾವೆಲ್ಲರೂ ಸಿದ್ದರಿದ್ದೇವೆ’ ಎಂದು ನಳಿನ್‌ ಹೇಳಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಹಿಂದೂ ಸಂಘಟನೆಯ ಮುಖಂಡ ಅರುಣ್‌ ಕುಮಾರ್ ಪುತ್ತಿಲ, ಅಜಿತ್ ರೈ ಹೊಸಮನೆ  ಇದ್ದರು.

ತನಿಖೆಗೆ ಆಗ್ರಹ

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಭಾಗಿಯಾದ ಪೊಲೀಸರ ಬಗ್ಗೆ ತನಿಖೆಯನ್ನು ಕೈಗೊತ್ತಿಕೊಳ್ಳಬೇಕು. ಪೊಲೀಸರು ರಾಜಕಾರಣ ಮಾಡುವುದನ್ನು ಬಿಟ್ಟು ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಜಿಲ್ಲಾ ಎಸ್‌ಪಿಗೆ ಸಂಸದ ನಳಿನ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT