ಗುರುವಾರ , ಡಿಸೆಂಬರ್ 3, 2020
18 °C

ಪಬ್‌ಜಿ ನಿಷೇಧ?: ಸಾಮಾಜಿಕ ತಾಣದಲ್ಲಿ ತೀವ್ರ ಚರ್ಚೆ, ಟ್ರೆಂಡ್‌ ಆದ #pubgban

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಕ್‌ಟಾಕ್, ವೀಚಾಟ್, ಯುಸಿ ಬ್ರೌಸರ್ ಸೇರಿದಂತೆ 59 ಚೀನಾ ಆ್ಯಪ್‌ಗಳನ್ನು ನಿಷೇಧಿಸಿದ ಭಾರತ ಸರ್ಕಾರವು ಇನ್ನೂ 49 ಚೀನಾ ಅಪ್ಲಿಕೇಶನ್‌ಗಳನ್ನು ಕಿತ್ತೊಗೆಯುವ ಚಿಂತನೆಯಲ್ಲಿದೆ. ಈ ಬಾರಿ ‘ಬ್ಯಾಟಲ್‌ಗ್ರೌಂಡ್ಸ್ (ಪಬ್‌ಜಿ)’ ನಿಷೇಧಗೊಳ್ಳುವ ಸಾಧ್ಯತೆಗಳಿವೆ.

ದಕ್ಷಿಣ ಏಷ್ಯಾ ಭಾಗದಲ್ಲಿ ಪಬ್‌ಜಿ ಭಾರಿ ಜನಪ್ರಿಯ ಗೇಮ್‌. ಅದರಲ್ಲೂ, ಭಾರತ ಮತ್ತು ಪಾಕಿಸ್ತಾನದಲ್ಲಿ ಇದು ಜನಪ್ರಿಯತೆಯ ಉತ್ತುಂಗದಲ್ಲಿದೆ. ಭಾರತವೊಂದರಲ್ಲಿ ಈ ಗೇಮ್‌ನ ಅಪ್ಲಿಕೇಷನ್‌ ಅನ್ನು 1.75 ಕೋಟಿ ಮಂದಿ ಮೊಬೈಲ್‌ಗಳಲ್ಲಿ ಅನುಸ್ಥಾಪಿಸಿಕೊಂಡಿದ್ದಾರೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಪಬ್‌ಜಿ ₹9,731 ಲಾಭಗಳಿಸಿದೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ.

ಆಟಗಾರರೂ ಈ ಗೇಮ್‌ನಿಂದ ಆದಾಯ ಗಳಿಸುತ್ತಿದ್ದು, ವಾರದಲ್ಲಿ ₹1 ಲಕ್ಷದಿಂದ ರೂ. ತಿಂಗಳಿಗೆ ನಿಂದ ₹10 ಲಕ್ಷದ ವರೆಗೆ ಗಳಿಸಬಹುದಾಗಿದೆ. ಈ ಮೂಲಕ ಪಬ್‌ಜಿ ಯುವ ಸಮುದಾಯವನ್ನು ತನ್ನತ್ತ ಆಕರ್ಷಿಸಿಕೊಂಡಿದೆ. ಗೇಮರ್‌ಗಳ ಮೇಲೆ ಪಬ್‌ಜಿ ನಕಾರಾತ್ಮಕ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ವರದಿಗಳು ಹೇಳುತ್ತಿವೆ.

ಪಬ್‌ಜಿ ಚೀನಾ ಮೂಲದ್ದೇ?

ಭಾರತದಲ್ಲಿ ಸದ್ಯ ನಿಷೇಧಕ್ಕೆ ಒಳಗಾಗಿರುವ ಆ್ಯಪ್‌ಗಳಂತೆ ಪಬ್‌ಜಿ ಸಂಪೂರ್ಣವಾಗಿ ಚೀನಾ ಮೂಲದ್ದಲ್ಲ. ದಕ್ಷಿಣ ಕೊರಿಯಾದ ‘ಬ್ಲೂಹೋಲ್‌’ ಎಂಬ ಅಂಗ ಸಂಸ್ಥೆಯು ಇದನ್ನು ಅಭಿವೃದ್ಧಿಪಡಿಸಿದೆ. ಯಾವಾಗ ಪಬ್‌ಜಿ ಜನಪ್ರಿಯತೆ ಗಳಿಸುತ್ತಾ ಹೋಯಿತೋ ಆಗ, ಚೀನಾದ ‘ಟೆನ್ಸೆಂಟ್‌’ ಎಂಬ ಕಂಪನಿಯು ‘ಬ್ಲೂಹೋಲ್‌’ನೊಂದಿಗೆ ಕೈ ಜೋಡಿಸಿತು. ಚೀನಾದಲ್ಲೂ ಮಾರುಕಟ್ಟೆ ಪಡೆಯುವುದರತ್ತ ಎರಡೂ ಕಂಪನಿಗಳು ಸಹಯೋಗದಲ್ಲಿ ಕೆಲಸ ಮಾಡಿದವು. ಚೀನಾ ಮತ್ತು ದಕ್ಷಿಣ ಕೊರಿಯಾ ಸಹಭಾಗಿತ್ವದ ಈ ಅಪ್ಲಿಕೇಷನ್‌ ಅನ್ನು ಭಾರತದ ಮಾರುಕಟ್ಟೆಗೆ ತಂದಿರುವುದು ಚೀನಾದ ‘ಟೆನ್ಸೆಂಟ್‌’. ಹೀಗಾಗಿಯೇ ಭಾರತ ಪಬ್‌ಜಿ ಮೇಲೆ ಅನುಮಾನಗೊಂಡಿದೆ. ಇದು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದ್ದು ರವಾನಿಸುತ್ತಿರುವ ಆತಂಕ ಭಾರತ ಸರ್ಕಾರದ್ದಾಗಿದೆ. ಇದೇ ಕಾರಣಕ್ಕೇ ಪಬ್‌ಜಿ ಮೇಲೆ ನಿಷೇಧದ ತೂಗುಗತ್ತಿ ತೂಗುತ್ತಿದೆ.

ಪಾಕಿಸ್ತಾನದಿಂದ ನಿಷೇಧ!

ಪಬ್‌ಜಿ ಕಾರಣದಿಂದಾಗಿ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದುದ್ದನ್ನು ಮನಗಂಡ ಪಾಕಿಸ್ತಾನ ಈ ತಿಂಗಳ ಆರಂಭದಲ್ಲಿ ಅದನ್ನು ನಿಷೇಧಿಸಿತ್ತು. ಪಾಕಿಸ್ತಾನದಲ್ಲಿ ಅದರ ವ್ಯಸನ ಏರುತ್ತಿದ್ದ ಹಿನ್ನೆಲೆಯಲ್ಲಿ ನಿಷೇಧದ ನಿರ್ಧಾರ ಕೈಗೊಳ್ಳಲಾಯಿತು ಎಂದು ವರದಿಗಳು ಹೇಳಿವೆ. ಪಾಕಿಸ್ತಾನದಲ್ಲಿ ದಾಖಲಾಗುತ್ತಿದ್ದ ಆತ್ಮಹತ್ಯೆ ಪ್ರಕರಣಗಲ್ಲಿ ಪಬ್‌ಜಿ ಗೇಮ್‌ನ ವೈಫಲ್ಯದ ಕಾರಣ ಗಣನೀಯವಾಗಿ ಹೆಚ್ಚಾಗುತ್ತಿತ್ತು. ಪಬ್‌ಜಿ ಗೇಮ್‌ನಲ್ಲಿನ ಟಾಸ್ಕ್‌ಗಳನ್ನು ಪೂರೈಸಲಾಗದೇ ಹತಾಶೆಗೊಳ್ಳುತ್ತಿದ್ದ ಹಲವರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದರು ಎನ್ನಲಾಗಿದೆ.

ಗೇಮ್‌ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ: ಟ್ರೆಂಡ್‌ ಆದ #pubgban

ಭಾರತ ಸರ್ಕಾರವು ಪಬ್‌ಜಿ ಗೇಮ್‌ ನಿಷೇಧಿಸಲು ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಯಾವಾಗ ಹೊರಬಿತ್ತೋ ಆಗಿನಿಂದ ಸಾಮಾಜಿಕ ತಾಣದಲ್ಲಿ ಹರ್ಷ ವ್ಯಕ್ತವಾಗಿದೆ. #pubgban ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡ್‌ ಆಗಿದೆ. ಇದೇ ವೇಳೆ ಪಬ್‌ಜಿ ಗೇಮ್‌ ಬಳಕೆದಾರರನ್ನು ಕೀಟಲೆ ಮಾಡಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು