ಗುರುವಾರ , ಡಿಸೆಂಬರ್ 12, 2019
27 °C

ತಂಗಳನ್ನಕ್ಕೆ ಯುನೆಸ್ಕೊ ಗೌರವ:ವಾಟ್ಸ್ಆ್ಯಪ್‍ನಲ್ಲಿ ಹರಿದಾಡುತ್ತಿದೆ ಸುಳ್ಳುಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದ ರಾಷ್ಟ್ರಧ್ವಜಕ್ಕೆ ಯುನೆಸ್ಕೊ ಗೌರವ, ಭಾರತದ ರಾಷ್ಟ್ರಗೀತೆ ಜಗತ್ತಿನ ಶ್ರೇಷ್ಠ ರಾಷ್ಟ್ರಗೀತೆ, ಇಡ್ಲಿ ಉತ್ತಮ ಆಹಾರ ಎಂದು ಯುನೆಸ್ಕೊ ಪ್ರಕಟಿಸಿದೆ ಮೊದಲಾದ ಫೇಕ್‍ಸುದ್ದಿಗಳು ವಾಟ್ಸ್ಆ್ಯಪ್‍ನಲ್ಲಿ ಹರಿದಾಡಿದ್ದು ನೆನಪಿರಬಹುದು. ಇದೀಗ ದಕ್ಷಿಣ ಭಾರತೀಯರ ಬೆಳಗ್ಗಿನ ಉಪಾಹಾರವಾದ ತಂಗಳನ್ನ ಜಗತ್ತಿನ ಆರೋಗ್ಯಕರ ಉಪಾಹಾರ ಎಂದು ಯುನೆಸ್ಕೊ ಗೌರವಿಸಿದೆ ಎಂಬ ಸಂದೇಶವೊಂದು ವಾಟ್ಸ್ಆ್ಯಪ್‍ನಲ್ಲಿ ಹರಿದಾಡಿದೆ.

On the 26 th day of Nov.2018, we declare that Pazhankanji, the breakfast food of South Indians is the healthiest breakfast item in the whole world ಎಂಬ ಒಕ್ಕಣೆಯೊಂದಿಗೆ ಯುನೆಸ್ಕೊ ಮತ್ತು ಇಂಟರ್‌ನ್ಯಾಷನಲ್ ಪೀಸ್ ಫೌಂಡೇಷನ್ ಲೋಗೊ ಇರುವ ಪ್ರಮಾಣಪತ್ರವೊಂದು ವೈರಲ್ ಆಗಿದೆ. ಈ ಪ್ರಮಾಣಪತ್ರದಲ್ಲಿ ಯುನೆಸ್ಕೊ ನಿರ್ದೇಶಕರ ಹೆಸರು ಮತ್ತು ಸಹಿ ಇದೆ.

ಈ ಸಂದೇಶ ಸುಳ್ಳು ಸುದ್ದಿಯಾಗಿದ್ದು, ಫೋಟೊಶಾಪ್ ಮಾಡಿದ ಯುನೆಸ್ಕೊ ಪ್ರಮಾಣಪತ್ರ ಇದಾಗಿದೆ. 2018 ನವೆಂಬರ್‌ನಲ್ಲಿ ತಂಗಳನ್ನಕ್ಕೆ ಈ ಗೌರವ ಪ್ರಾಪ್ತಿ ಆಗಿದೆ ಎಂದು ಹೇಳುವ ಈ ಪ್ರಮಾಣಪತ್ರದಲ್ಲಿ ಯುನೆಸ್ಕೊ ಮಹಾ ನಿರ್ದೇಶಕಿ ಐರಿನಾ ಬೊಕೊವಾ ಅವರ ಸಹಿ ಇದೆ. ಆದರೆ ಐರಿನಾ 2009ರಿಂದ 2017ರವರೆಗೆ ಯುನೆಸ್ಕೊ ನಿರ್ದೇಶಕಿಯಾಗಿದ್ದದ್ದು. ಈಗ ಅವರೇನಿದ್ದರೂ ಮಾಜಿ ನಿರ್ದೇಶಕಿ. ಈಗ ಇರುವ ಮಹಾ ನಿರ್ದೇಶಕಿ ಹೆಸರು ಆಂಡ್ರಿ ಅಜೋಲೆ. ಹೀಗಿರುವಾಗ 2018ರ ಪ್ರಮಾಣ ಪತ್ರದಲ್ಲಿ ಐರಿನಾ ಅವರ ಸಹಿ ಹೇಗೆ ಬಂತು? ಈ ಎಲ್ಲ ಸಂಗತಿಗಳನ್ನು ಪರಿಗಣಿಸಿದಾಗ ತಂಗಳನ್ನಕ್ಕೆ ಯುನೆಸ್ಕೊ ಗೌರವ ಎಂಬ ಈ ಸಂದೇಶ ಸುಳ್ಳು ಆಗಿದೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮೂಲಕ ಸುಳ್ಳು ಸುದ್ದಿಗಳನ್ನು ಹರಿಯಬಿಡಬೇಡಿ.

ಪ್ರತಿಕ್ರಿಯಿಸಿ (+)