ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ಸಾಲಮನ್ನಾ ಮಾಡುವಲ್ಲಿ ರೈತ ವಿರೋಧಿ ಧೋರಣೆ’

ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಂಸದ ಜ್ಯೋತಿರಾಧಿತ್ಯ ಸಿಂದಿಯಾ ಆರೋಪ
Last Updated 4 ಮೇ 2018, 6:11 IST
ಅಕ್ಷರ ಗಾತ್ರ

ಖಾನಾಪುರ: ಸತತ ಬರಗಾಲದಿಂದ ಕಂಗೆಟ್ಟಿರುವ ದೇಶದ ರೈತರ ಕೃಷಿಸಾಲ ಮನ್ನಾ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಮಧ್ಯಪ್ರದೇಶ ಸಂಸದ ಜ್ಯೋತಿರಾಧಿತ್ಯ ಸಿಂದಿಯಾ ಹೇಳಿದರು.

ತಾಲ್ಲೂಕಿನ ಲೋಂಡಾ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

‘ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ದೇಶದ ರೈತರ 72 ಸಾವಿರ ಕೋಟಿ ಕೃಷಿ ಸಾಲ ಮನ್ನಾಗೊಳಿಸಿತ್ತು. ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವೂ ಸಹಕಾರಿ ಸಂಸ್ಥೆಗಳಿಂದ ರೈತರು ಪಡೆದ ₹8200 ಕೋಟಿ ಕೃಷಿಸಾಲ ಮನ್ನಾಗೊಳಿಸಿ ರೈತರ ಪರ ಕಾಳಜಿ ಪ್ರದರ್ಶಿಸಿದ್ದರು. ಆದರೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ಮೋದಿ, ರೈತರು ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಪಡೆದ ಸಾಲ ಮನ್ನಾಗೊಳಿಸದೇ ರೈತವಿರೋಧಿ ನಿಲುವು ಪ್ರದರ್ಶಿಸಿದ್ದಾರೆ. ಇದರ ಪರಿಣಾಮ ದೇಶದಲ್ಲಿ ವರ್ಷಕ್ಕೆ 12 ಸಾವಿರ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ, ಹಿಂದುಳಿದವರು, ದೀನದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಗರ್ಭಿಣಿಯರು, ಬಾಣಂತಿಯರು ಅಷ್ಟೇ ಅಲ್ಲದೇ ತೃತೀಯ ಲಿಂಗದವರಿಗೂ ವಿಭಿನ್ನ ಮತ್ತು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರು ಮತ್ತು ಹಾಲಿ ಕೇಂದ್ರ ಸಚಿವರು ದೇಶದ ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಮಾತೃಸಂಸ್ಥೆಯಾದ ಆರ್.ಎಸ್.ಎಸ್ ಕೂಡ ಮೀಸಲಾತಿ ತೆಗೆದುಹಾಕುವಂತೆ ಹೇಳುತ್ತಿದೆ. ಇಂತಹ ಕೋಮುವಾದಿ ಮತ್ತು ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನ ಗೌರವಿಸದ ಬಿಜೆಪಿ ಮತ್ತು ಆ ಪಕ್ಷದ ನಾಯಕರ ಮುಖವಾಡವನ್ನು ಮತದಾರರು ತೆಗೆದುಹಾಕುವ ಸಂಕಲ್ಪ ತೊಡಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT