ಸುರಕ್ಷತಾ ಎಚ್ಚರಿಕೆ: ಕಡೆಗಣನೆ ಸಲ್ಲ

ನೀವು ಬಳಸುತ್ತಿರುವ ವೆಬ್ಸೈಟ್ ‘ಸುರಕ್ಷಿತವಾಗಿಲ್ಲ’ ಎಂದು ಗೂಗಲ್ ಕ್ರೋಮ್ ಇದ್ದಕ್ಕಿದ್ದಂತೆ ಸೂಚನೆ ಕೊಡಲು ಆರಂಭಿಸಿದಾಗ, ಬಳಕೆದಾರನು ಗೊಂದಲಕ್ಕೆ ಒಳಗಾಗುತ್ತಾನೆ. ತಾನು ಬಳಸುತ್ತಿರುವ ಕಂಪ್ಯೂಟರ್ ತೊಂದರೆಯಲ್ಲಿದೆ ಎಂಬುದು ಇದರ ಅರ್ಥವೇ ಎಂದೂ ಅನುಮಾನ ಪಡುತ್ತಾನೆ.
ಗೂಗಲ್ ಕ್ರೋಮ್ ಅನ್ನು ನಿಯಮಿತವಾಗಿ ಅಪ್ಡೇಟ್ ಮಾಡಿಕೊಳ್ಳದಿದ್ದಾಗ ಇಂತಹ ಸಂದೇಶಗಳು ಹೆಚ್ಚಾಗಿ ಬರುತ್ತಿರುತ್ತವೆ. ರಾತ್ರೋರಾತ್ರಿ ಕಂಪ್ಯೂಟರ್ಗೆ ಯಾವುದೋ ಹಾನಿ ಉಂಟಾಗಿರಬಹುದು ಎಂದು ಆ ಸಂದರ್ಭದಲ್ಲಿ ನಮಗೆ ಅನಿಸಿಬಿಡುತ್ತದೆ. ಗೂಗಲ್ ಕಂಪನಿಯು ತನ್ನ ಕ್ರೋಮ್ ಬ್ರೌಸರ್ ಅನ್ನು ಹೆಚ್ಚು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ 2016ರ ಮಾರ್ಚ್ನಿಂದ ಸುರಕ್ಷತಾ ಸಂಪರ್ಕವನ್ನು ಉತ್ತಮ ಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ, ಇತ್ತೀಚೆಗೆ ‘ಸುರಕ್ಷಿತವಾಗಿಲ್ಲ’ (ನಾಟ್ ಸೆಕ್ಯೂರ್) ಎಂಬಂತಹ ಸಂದೇಶಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ಕಾರಣವೇನು?
ಹಲವು ವೆಬ್ಸೈಟ್ಗಳು ಬ್ರೌಸರ್ಗಳೊಂದಿಗೆ ಮಾಹಿತಿ ವಿನಿಮಯಕ್ಕಾಗಿ ಇಂದಿಗೂ ಹಳೆಯ ಹೈಪರ್ಟೆಕ್ಟ್ಸ್ ಟ್ರಾನ್ಸಫರ್ ಪ್ರೋಟೊಕಾಲ್ (ಎಚ್ಟಿಟಿಪಿ) ಬಳಸುತ್ತಿವೆ. ಇದರ ಬಗ್ಗೆ ತಾಂತ್ರಿಕ ಜ್ಞಾನವಿರುವ ಯಾರೇ ಆದರೂ, ಹೀಗೆ ವಿನಿಮಯವಾಗುವ ಮಾಹಿತಿಯನ್ನು ಸುಲಭವಾಗಿ ನೋಡಬಹುದು.
ನಿಮ್ಮ ಎಟಿಎಂ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಯಂತಹ ಸೂಕ್ಷ್ಮ ಮಾಹಿತಿಯನ್ನು ಕೇಳುವ ವೆಬ್ಸೈಟ್ಗಳೂ ಈ ಎಚ್ಟಿಟಿಪಿಯನ್ನೇ ಬಳಸುತ್ತವೆ. ವೆಬ್ಸೈಟ್ ಮತ್ತು ಬ್ರೌಸರ್ ಜೊತೆಗೆ ಈ ಮಾಧ್ಯಮದ ಮೂಲಕವೇ ಸಂವಹನ ನಡೆಯುತ್ತದೆ. ದತ್ತಾಂಶ ಸೋರಿಕೆಯಂತಹ ಪ್ರಕರಣಗಳು ಹೆಚ್ಚಾದಾಗ, ಗೂಗಲ್ ಕಂಪನಿಯು 2017ರಲ್ಲಿ ಕ್ರೋಮ್ ಬ್ರೌಸರ್ ಅನ್ನು ಅಪ್ಡೇಟ್ ಮಾಡಿತು. ಈಗ ಯಾವುದೇ ವೆಬ್ಸೈಟ್ ಮತ್ತು ಬ್ರೌಸರ್ ನಡುವೆ ಹಳೆಯ ಎಚ್ಟಿಟಿಪಿ ಮೂಲಕವೇ ಈಗಲೂ ಆನ್ಲೈನ್ ಸಂವಹನ ನಡೆಯುತ್ತಿದ್ದರೆ, ಇಂತಹ ಸಂದೇಶಗಳು ಕಾಣಿಸಿಕೊಳ್ಳುತ್ತವೆ. ದತ್ತಾಂಶ ರಕ್ಷಣೆ ಉದ್ದೇಶದಿಂದ ಗೂಗಲ್ ಇಂತಹ ಸಂದೇಶಗಳನ್ನು ಈಗ ಕಳುಹಿಸುತ್ತಿದೆ. ಹೊಸ ಪ್ರೋಟೊಕಾಲ್ ಬಳಸುವಂತೆ ಅದು ಸೂಚನೆ ನೀಡುತ್ತದೆ.
ಹೊಸ ಎಚ್ಟಿಟಿಪಿಗಳನ್ನು ಬಳಸುತ್ತಿರುವ ಸೈಟ್ಗಳು ವಿಶ್ವಾಸಾರ್ಹ ಪ್ರಾಧಿಕಾರಗಳಿಂದ ಸುರಕ್ಷತಾ ಪ್ರಮಾಣಪತ್ರಗಳನ್ನು ಪಡೆದುಕೊಂಡಿರುತ್ತವೆ. ಆದರೆ, ಈ ಪ್ರಮಾಣ ಪತ್ರಗಳು ವಿಭಿನ್ನ ಮಾನ್ಯತಾ ಅವಧಿಗಳನ್ನು ಹೊಂದಿರುತ್ತವೆ. ಇವುಗಳ ಬೆಲೆಯಲ್ಲಿಯೂ ಏರಿಳಿತವಿರುತ್ತದೆ. ಎಚ್ಟಿಟಿಪಿಗಳ ಅವಧಿ ಮುಗಿದಾಗ ಇಂತಹ ಸಂದೇಶಗಳು ಕಾಣಿಸಿಕೊಳ್ಳುತ್ತವೆ. ಗೂಗಲ್ ಕ್ರೋಮ್ ಬ್ರೌಸರ್ ಅನ್ನು ನಿಯಮಿತವಾಗಿ ಅಪ್ಡೇಟ್ ಮಾಡಿಕೊಳ್ಳುವುದು ಸೂಕ್ತ.
ವಿಂಡೋಸ್ 10ನಲ್ಲಿ ನಿರ್ದಿಷ್ಟ ಇ–ಮೇಲ್ಗಳು ಒಂದೇ ಕಡೆ ಸೇವ್ ಆಗುವ ರೀತಿಯಲ್ಲಿ ಯಾವ ರೀತಿ ಫೋಲ್ಡರ್ ಮಾಡಬಹುದು ? ದೀರ್ಘಾವಧಿಯಲ್ಲಿ ಅಗತ್ಯವಿಲ್ಲದಿದ್ದಾಗ ಇಂತಹ ಫೋಲ್ಡರ್ಗಳನ್ನು ಡಿಲೀಟ್ ಮಾಡುವುದು ಹೇಗೆ ?
‘ವಿಂಡೋಸ್ 10’ ಪ್ರೋಗ್ರಾಂ ಬಳಸುವ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಮೇಲ್ಗಳು ಒಂದೇ ಫೋಲ್ಡರ್ನಲ್ಲಿ ಸೇವ್ ಆಗುವಂತೆ ಮಾಡಬಹುದು. ಮೇಲ್ ಸೆಟ್ಟಿಂಗ್ಸ್ನಲ್ಲಿ ಈಗಾಗಲೇ ಇರುವ ಇನ್ಬಾಕ್ಸ್, ಡ್ರಾಫ್ಟ್ಸ್, ಸೆಂಟ್ ಐಟಮ್ಸ್ನಂತಹ ಫೋಲ್ಡರ್ಗಳಿರುವಂತೆ ಹೊಸ ಫೋಲ್ಡರ್ಗಳನ್ನು ಮಾಡಬಹುದು. ಆದರೆ, ‘ಡಿಫಾಲ್ಟ್’ನಲ್ಲಿರುವ ಈ ಫೋಲ್ಡರ್ಗಳನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ. ಹೊಸದಾಗಿ ನೀವು ಸೃಷ್ಟಿಸುವ ಫೋಲ್ಡರ್ ಅನ್ನು ಮಾತ್ರ ಅಳಿಸಬಹುದು.
ಮೇಲ್ ಪ್ರೋಗ್ರಾಂ ಅನ್ನು ಮೊದಲು ತೆರೆಯಬೇಕು. ಈ ಆ್ಯಪ್ನೊಳಗೇ ನೀವು ಒಂದಕ್ಕಿಂತ ಹೆಚ್ಚು ಇಂತಹ ‘ನಿರ್ದಿಷ್ಟ ಮೇಲ್ಗಳ ಫೋಲ್ಡರ್’ ಮಾಡಬೇಕೆಂದಿದ್ದರೆ, ಯಾವ ಖಾತೆಯಿಂದ ಬರುವ ಮೇಲ್ಗಳನ್ನು ನೀವು ಸೇವ್ ಮಾಡಬೇಕು ಎಂದು ಬಯಸುತ್ತೀರೋ, ಆ ಮೇಲ್ ಐಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ, ನಿಮ್ಮ ವಿಂಡೋಸ್ನ ಎಡಗಡೆ ‘ಆಲ್ ಫೋಲ್ಡರ್ಸ್ ಲಿಸ್ಟ್’ ಮೇಲೆ ಕ್ಲಿಕ್ ಮಾಡಬೇಕು ಅಥವಾ ಈ ಪಟ್ಟಿಯ ಬಳಿ ಇರುವ ‘+’ ಗುರುತನ್ನು ಒತ್ತಬೇಕು. ಆಗ ತೆರೆದುಕೊಳ್ಳುವ ಹೊಸ ಫೋಲ್ಡರ್ ಮೇಲೆ ಮೌಸ್ ಇಟ್ಟು ‘ರೈಟ್ ಕ್ಲಿಕ್’ ಮಾಡಿದರೆ, ಅದರೊಳಗೆ ‘ನ್ಯೂ ಸಬ್ ಫೋಲ್ಡರ್’ ಆಯ್ಕೆ ಕಾಣಿಸಿಕೊಳ್ಳುತ್ತದೆ. ನಿಮಗೆ ಅನುಕೂಲವಾಗುವ ರೀತಿಯಲ್ಲಿ ಇದಕ್ಕೊಂದು ಹೆಸರನ್ನು ನೀವು ಟೈಪ್ ಮಾಡಿ ‘ಎಂಟರ್’ ಬಟನ್ ಒತ್ತಿದರೆ ನಿಮಗೆ ಬೇಕಾದ ಫೋಲ್ಡರ್ ಸೃಷ್ಟಿಯಾಗುತ್ತದೆ. ನಿರ್ದಿಷ್ಟವಾದ ಮೇಲ್ಗಳನ್ನು ನೀವು ಇದಕ್ಕೆ ಸೇವ್ ಮಾಡಬಹುದು.
ದೀರ್ಘಾವಧಿಯಲ್ಲಿ ಇಂತಹ ‘ನಿರ್ದಿಷ್ಟ ಫೋಲ್ಡರ್’ನ ಅಗತ್ಯ ನಿಮಗಿಲ್ಲ ಎಂದಾದರೆ, ಆ ಮೇಲ್ನ ಖಾತೆಗೆ ತೆರಳಿ, ‘ಮೋರ್ ಆಪ್ಷನ್’ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರ ಮೇಲೆ ರೈಟ್ ಕ್ಲಿಕ್ ಮಾಡಿದರೆ, ಪಟ್ಟಿಯ ಕೆಳಗಡೆ ‘ಡಿಲೀಟ್’ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಫೋಲ್ಡರ್ ‘ಡಿಲೀಟ್’ ಆಗುತ್ತದೆ.
ನ್ಯೂಯಾರ್ಕ್ ಟೈಮ್ಸ್
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.