ಗುರುವಾರ , ಅಕ್ಟೋಬರ್ 29, 2020
27 °C

ಆಳ-ಅಗಲ: ಸಾಮಾಜಿಕ ‘ಅಪರಾಧ’ ಜಾಲತಾಣ

ಜಯಸಿಂಹ ಆರ್‌./ಅಮೃತ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಸೈಬರ್ ಅಪರಾಧಗಳನ್ನು ಎಸಗುವವರು ಸಾಮಾಜಿಕ ಜಾಲತಾಣಗಳನ್ನು ಸಹ ವಂಚನೆಯ ವೇದಿಕೆಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ವ್ಯಾಪ್ತಿ ತೀರಾ ದೊಡ್ಡದಾದ ಕಾರಣ, ಅಲ್ಲಿ ಎಸಗಲಾಗುವ ಕೃತ್ಯಗಳ ಸ್ವರೂಪವೂ ವಿಸ್ತಾರವಾದುದು. ಸಾಮಾಜಿಕ ಜಾಲತಾಣಗಳಲ್ಲಿ ಆರ್ಥಿಕ ವಂಚನೆ ಕೃತ್ಯಗಳು ಮಾತ್ರವಲ್ಲ; ಸುಳ್ಳುಸುದ್ದಿ ಹರಡುವುದು, ಜನರ ಮೇಲೆ ಕಣ್ಗಾವಲು ನಡೆಸುವುದು, ಬೆದರಿಕೆ ಒಡ್ಡುವುದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯೇ ದಾಖಲಿಸಲಾಗುತ್ತದೆ. ಈಗ ದಾಖಲಾಗುತ್ತಿರುವ ಸೈಬರ್ ಅಪರಾಧಗಳಲ್ಲಿ ಇಂತಹ ಪ್ರಕರಣಗಳ ಪಾಲು ಹೆಚ್ಚು ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿಗಳು ಹೇಳುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಅಪರಾಧ ಕೃತ್ಯಗಳಲ್ಲಿ, ಗಂಭೀರ ಸ್ವರೂಪದ ಕೃತ್ಯಗಳು ಮಾತ್ರವೇ ಪೊಲೀಸ್ ಠಾಣೆ ಮೆಟ್ಟಿಲೇರುತ್ತವೆ. ಬಹುಪಾಲು ಕೃತ್ಯಗಳು ದಾಖಲಾಗುವುದೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಇಂತಹ ಕೃತ್ಯಗಳು ಅಪರಾಧದ ವ್ಯಾಪ್ತಿಗೆ ಬರುತ್ತವೆ ಎಂಬುದರ ಬಗ್ಗೆ ಅರಿವು ಇಲ್ಲದಿರುವುದೇ, ಸಂತ್ರಸ್ತರು ದೂರು ದಾಖಲಿಸದೇ ಇರಲು ಪ್ರಮುಖ ಕಾರಣ ಎನ್ನುತ್ತಾರೆ ಸೈಬರ್ ಅಪರಾಧ ವಿಭಾಗದ ಪೊಲೀಸರು. ಸಾಮಾಜಿಕ ಜಾಲತಾಣಗಳಲ್ಲಿ ಎಸಗಲಾಗುವ ಕೃತ್ಯಗಳ ವಿಧಗಳನ್ನು ದೆಹಲಿ ಸೈಬರ್ ಅಪರಾಧ ಪೊಲೀಸರು ಪಟ್ಟಿಮಾಡಿದ್ದಾರೆ.

ಆರ್ಥಿಕ ವಂಚನೆ: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳಲ್ಲಿ ಲಿಂಕ್‌ಗಳನ್ನು ಪೋಸ್ಟ್‌ ಮಾಡುವ ಮೂಲಕ ಆರ್ಥಿಕ ವಂಚನೆ ಎಸಗಲಾಗುತ್ತದೆ. ‘ನಿಮಗೆ ಲಾಟರಿ ಬಂದಿದೆ. ಆ ಹಣವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ’ ಎಂಬ ಸಂದೇಶ ಇರುವ ಪೋಸ್ಟ್‌ಗಳನ್ನು ಮಾಡಲಾಗುತ್ತದೆ. ಈ ಲಿಂಕ್‌ಗಳನ್ನು ಅನುಸರಿಸಿದರೆ ಬ್ಯಾಂಕ್ ಖಾತೆ ವಿವರ ನೀಡುವಂತೆ ಕೋರಲಾಗುತ್ತದೆ. ಈ ವಿವರ ನೀಡಿದವರಿಂದ ಪಾಸ್‌ವರ್ಡ್‌, ಒಟಿಪಿ ಮತ್ತಿತರ ವಿವರಗಳನ್ನು ಪಡೆದುಕೊಂಡು ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗುತ್ತದೆ. ‘ಈಗ ಕಡಿಮೆ ಹೂಡಿಕೆ ಮಾಡಿ, ಹೆಚ್ಚು ಹಣ ಸಂಪಾದಿಸಿ’ ಎಂಬ ಜಾಹೀರಾತು ಮೂಲಕವೂ ಬ್ಯಾಂಕ್ ವಿವರ ಪಡೆದುಕೊಂಡು ವಂಚನೆ ಮಾಡಲಾಗುತ್ತದೆ.

‘ನಮ್ಮವರಿಗೆ ಆರೋಗ್ಯ ಸರಿ ಇಲ್ಲ. ಚಿಕಿತ್ಸೆ ಕೊಡಿಸಲು ಹಣ ಬೇಕಿದೆ. ನೆರವು ನೀಡಿ’ ಎಂದು ಹಣ ವರ್ಗಾವಣೆ ಮಾಡಿಸಿಕೊಳ್ಳುವವರೂ ಇದ್ದಾರೆ. ಇಂತಹವರಿಗೆ ನೆರವು ನೀಡುವ ಮೊದಲು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಸೈಬರ್ ಪೊಲೀಸರು ಹೇಳುತ್ತಾರೆ.

ಕೋವಿಡ್‌ ಕಾರ್ಯಾಚರಣೆಗೆ ನೆರವಾಗುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರಂಭಿಸಲಾದ ‘ಪಿಎಂಕೇರ್ಸ್‌’ ನಿಧಿಯ ಯುಪಿಐ ವಿಳಾಸವನ್ನೇ ಹೋಲುವ, ಯುಪಿಐ ವಿಳಾಸ ನೀಡಿ ದೇಣಿಗೆ ಪಡೆದ ಘಟನೆಯೂ ಏಪ್ರಿಲ್‌ನಲ್ಲಿ ವರದಿಯಾಗಿತ್ತು. ಪುಲ್ವಾಮಾ ಸಂತ್ರಸ್ತರ ಹೆಸರಿನಲ್ಲೂ ವಿದೇಶಿ ಖಾತೆಯೊಂದಕ್ಕೆ ದೇಣಿಗೆ ಪಡೆಯಲಾಗಿತ್ತು. ಈ ಸ್ವರೂಪದ ಲಿಂಕ್‌ಗಳನ್ನು ಕ್ಲಿಕ್‌ ಮಾಡದೇ ಇರುವುದು ಒಳಿತು ಎಂದು ಸೈಬರ್ ಪೊಲೀಸರು ಹೇಳುತ್ತಾರೆ.

ಬೆದರಿಕೆ ಮತ್ತು ಮಾನಹಾನಿ: ಭಾರತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳಲ್ಲಿ ಬೆದರಿಕೆ ಮತ್ತು ಮಾನಹಾನಿ ಕೃತ್ಯಗಳ ಪ್ರಮಾಣ ಹೆಚ್ಚು ಎನ್ನುತ್ತದೆ ಎನ್‌ಸಿಆರ್‌ಬಿ ದಾಖಲೆಗಳು. ವ್ಯಕ್ತಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಿರುಚಲಾದ ಫೋಟೊಗಳನ್ನು ಪೋಸ್ಟ್‌ ಮಾಡುವ ಮೂಲಕ ಮಾನಹಾನಿ ಮಾಡಲಾಗುತ್ತದೆ. ಇಂತಹ ಕೃತ್ಯಗಳು ಶಿಕ್ಷಾರ್ಹ ಅಪರಾಧಗಳಾಗಿವೆ. ಆದರೆ ಈ ಬಗ್ಗೆ ಅರಿವು ಇಲ್ಲದೇ ಇರುವ ಕಾರಣ ಬಹುತೇಕ ಸಂತ್ರಸ್ತರು ದೂರು ನೀಡುವುದಿಲ್ಲ. ಕೃತ್ಯ ಗಂಭೀರ ಸ್ವರೂಪ ಪಡೆದಾಗ ಮಾತ್ರ ದೂರು ನೀಡುವ ಪರಿಪಾಟ ಭಾರತದಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಒಡ್ಡುವಂತಹ ಕೃತ್ಯಗಳೂ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ. ಬಹುತೇಕ ಸಂದರ್ಭದಲ್ಲಿ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಬೆದರಿಕೆ ಒಡ್ಡಲಾಗಿರುತ್ತದೆ. ಹಲ್ಲೆ ನಡೆಸುವ, ಹತ್ಯೆ ಮಾಡುವ ಮತ್ತು ಅತ್ಯಾಚಾರ ಎಸಗುವ ಬೆದರಿಕೆಗಳೂ ವರದಿಯಾಗಿವೆ. ಇವೆಲ್ಲವೂ ಗಂಭೀರ ಅಪರಾಧ ಕೃತ್ಯಗಳಾಗಿದ್ದು, ಶಿಕ್ಷಾರ್ಹವಾಗಿವೆ. ಆದರೆ, ಇಂತಹ ಕೃತ್ಯಗಳಲ್ಲೂ ದೂರು ದಾಖಲಾಗುವ ಪ್ರಮಾಣ ಅತ್ಯಂತ ಕಡಿಮೆ. ಹೀಗಾಗಿ ದೇಶದಲ್ಲಿ ಇಂತಹ ಸೈಬರ್ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಅಭಿಪ್ರಾಯ ಸೃಷ್ಟಿಸುವಿಕೆ: ಸಾಮಾಜಿಕ ಜಾಲತಾಣಗಳಲ್ಲಿ ಇರುವವರ ವೈಯಕ್ತಿಕ ಜೀವನ, ರಾಜಕೀಯ ಸಿದ್ಧಾಂತಗಳ ಬಗ್ಗೆ ವಿವರ ಕಲೆಹಾಕಲಾಗುತ್ತದೆ. ಜನರು ಏನು ಬಯಸುತ್ತಾರೆ ಎಂಬುದರ ಆಧಾರದ ಮೇಲೆ ರಾಜಕೀಯ ಪಕ್ಷಗಳು ತಮ್ಮ ನಿಲುವುಗಳನ್ನು ಮಾರ್ಪಡಿಸಿಕೊಳ್ಳುತ್ತವೆ. ಈ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯುತ್ತವೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯರನ್ನೂ ಈ ಸ್ವರೂಪದ ವಂಚನೆಗೆ ಗುರಿ ಮಾಡಲಾಗಿತ್ತು ಎಂಬುದು ತನಿಖೆಗಳಿಂದ ಸಾಬೀತಾಗಿದೆ. 

ಜನರ ವೈಯಕ್ತಿಕ ವಿವರಗಳನ್ನು ಕಲೆಹಾಕಲು ಅಥವಾ ಅವರ ಸಾಮಾಜಿಕ ಜಾಲತಾಣದ ಖಾತೆಗೆ ಕನ್ನ ಹಾಕಲು ಆನ್‌ಲೈನ್‌ ಗೇಮ್‌ಗಳನ್ನು, ಭವಿಷ್ಯ ಹೇಳುವ ಅಪ್ಲಿಕೇಷನ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಇಂತಹ ಗೇಮ್‌ ಮತ್ತು ಅಪ್ಲಿಕೇಷನ್‌ಗಳ ಲಿಂಕ್ ಇರುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತದೆ. ಆ ಲಿಂಕ್‌ಗಳನ್ನು ಬಳಸಿದವರ ಮತ್ತು ಅವರ ಸ್ನೇಹಿತರ ಸಂಪೂರ್ಣ ವಿವರ ವಂಚಕರಿಗೆ ಲಭ್ಯವಾಗುತ್ತದೆ. ಈ ರೀತಿ ವಿವರ ಕಳವು ಮಾಡುವುದನ್ನು ಐಡೆಂಟಿಟಿ ಥೆಫ್ಟ್‌ ಎಂದು ಪರಿಗಣಿಸಲಾಗುತ್ತದೆ.

ಸಾಮಾಜಿಕ ಅಭಿಪ್ರಾಯ ರೂಪಿಸುವ ಸಲುವಾಗಿ ನಕಲಿ ಖಾತೆಗಳನ್ನು ಸೃಷ್ಟಿಸುವುದು, ಆ ಖಾತೆಗಳ ಮೂಲಕ ಸುಳ್ಳುಸುದ್ದಿ ಹರಡುವಂತಹ ಪ್ರಕರಣಗಳು ಭಾರತದಲ್ಲಿ ಹೆಚ್ಚು ವರದಿಯಾಗಿವೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರ ವಿರುದ್ಧ ಅಭಿಪ್ರಾಯ ರೂಪಿಸಲು ಟ್ವಿಟರ್‌ನಲ್ಲಿ 80 ಸಾವಿರಕ್ಕೂ ಹೆಚ್ಚು ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇವೆಲ್ಲವೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಗಂಭೀರ ಅಪರಾಧ ಕೃತ್ಯಗಳಾಗಿವೆ. 

ಸುಳ್ಳುಸುದ್ದಿಗಳು: ಸುಳ್ಳುಸುದ್ದಿಗಳನ್ನು ಪೋಸ್ಟ್‌ ಮಾಡುವುದು ಮತ್ತು ಹಂಚಿಕೊಳ್ಳುವುದನ್ನೂ ಗಂಭೀರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಫೇಸ್‌ಬುಕ್‌, ಟ್ವಿಟರ್‌, ಬ್ಲಾಗ್‌ಗಳು ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳುಸುದ್ದಿಗಳನ್ನು ಹರಿಬಿಡಲಾಗುತ್ತದೆ. ಈ ಮೂಲಕ ಜನರ ಭಾವನೆಗಳನ್ನು ಕೆರಳಿಸಲು ಯತ್ನಿಸಲಾಗುತ್ತದೆ. ಸುಳ್ಳುಸುದ್ದಿಗಳ ಕಾರಣ ದೇಶದ ಹಲವೆಡೆ ಗುಂಪುಹಲ್ಲೆ, ಹತ್ಯೆಗಳು ನಡೆದಿವೆ. ಸುಳ್ಳುಸುದ್ದಿ ಹರಡುವುದು ಶಿಕ್ಷಾರ್ಹ ಅಪರಾಧವಾಗಿದೆ. 

ಕಾರ್ಡ್ ವಂಚನೆಗೆ ಆರ್‌ಬಿಐ ಮೂಗುದಾರ

ನಗದುರಹಿತ ವ್ಯವಹಾರಗಳಿಗೆ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಕೆ ಪ್ರಮಾಣ ಹೆಚ್ಚಿದಂತೆಲ್ಲಾ ಡಿಜಿಟಲ್ ವಹಿವಾಟಿನಲ್ಲಿ ಇರುವ ಲೋಪಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಖದೀಮರೂ ಹುಟ್ಟಿಕೊಂಡಿದ್ದಾರೆ. ಕ್ರೆಡಿಟ್/ಡೆಬಿಟ್ ಕಾರ್ಡ್‌ದಾರರು ಆನ್‌ಲೈನ್‌ನಲ್ಲಿ ವಂಚನೆಗೆ ಒಳಗಾಗುತ್ತಿರುವ ಘಟನೆಗಳು ಅಧಿಕವಾಗುತ್ತಿವೆ. 

ಇಂತಹ ವಂಚನೆ ಜಾಲಕ್ಕೆ ತಡೆ ಒಡ್ಡಲು ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಅತ್ಯಂತ ಸುರಕ್ಷಿವಾಗಿ ಇರಿಸುವ ಹಾಗೂ ಕಾರ್ಡ್‌ದಾರರಿಗೆ ಆನ್‌ಲೈನ್ ವಂಚನೆಯಿಂದ ರಕ್ಷಣೆ ನೀಡುವ ನಿಯಮಾವಳಿಗಳನ್ನು ಪ್ರಕಟಿಸಿದೆ. ಅಕ್ಟೋಬರ್ 1ರಿಂದ ನಿಯಮಗಳು ಜಾರಿಗೆ ಬಂದಿವೆ. ಕಾರ್ಡ್ ಮೂಲಕ ಮಾಡುವ ಹಣಕಾಸಿನ ವ್ಯವಹಾರಗಳನ್ನು ಗ್ರಾಹಕರ ಅನುಕೂಲಗಳಿಗೆ ತಕ್ಕಂತೆ ಮಾರ್ಪಡಿಸುವ ಆಯ್ಕೆಯನ್ನು ಗ್ರಾಹಕರಿಗೇ ನೀಡಲಾಗಿದೆ. 

ಆನ್‌ಲೈನ್ ವಹಿವಾಟಿಗೆ ಒಮ್ಮೆಯೂ ಬಳಕೆಯಾಗದ ಎಲ್ಲಾ ಕಾರ್ಡ್‌ಗಳ ಆನ್‌ಲೈನ್ ಪಾವತಿ ನಿಷ್ಕ್ರಿಯಗೊಳಿಸುವಂತೆ ಆರ್‌ಬಿಐ ಸೂಚಿಸಿದೆ. ಕಾರ್ಡ್‌ಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಹೊಸ ನಿಯಮಾವಳಿ ಏನು ಹೇಳುತ್ತವೆ?

* ಬ್ಯಾಂಕ್‌ಗಳು ನೀಡಿರುವ ಎಲ್ಲ ರೀತಿಯ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳು ದೇಶದೊಳಗಿನ ಎಟಿಎಂಗಳು ಹಾಗೂ ಅಂಗಡಿಗಳ ಪಾಯಿಂಟ್ ಆಫ್ ಸೇಲ್ ಉಪಕರಣಗಳಲ್ಲಿ (ಪಿಒಎಸ್) ಮಾತ್ರ ಕೆಲಸ ಮಾಡಲಿವೆ

* ವಿದೇಶದಲ್ಲಿ ಕಾರ್ಡ್ ಬಳಕೆ ಮಾಡುವ ಉದ್ದೇಶವಿರುವ ಗ್ರಾಹಕರು ತಮ್ಮ ಬ್ಯಾಂಕ್‌ಗೆ ಈ ಬಗ್ಗೆ ಮಾಹಿತಿ ನೀಡಿ, ಸೌಲಭ್ಯ ಪಡೆದುಕೊಳ್ಳಬಹುದು. ಬ್ಯಾಂಕ್‌ಗಳು ನೀಡುವ ಎಲ್ಲ ಕಾರ್ಡ್‌ಗಳನ್ನು ವಿದೇಶದಲ್ಲಿಯೂ ಬಳಸಲು ಈ ವರೆಗೆ ಅವಕಾಶ ಇತ್ತು 

* ಎಲ್ಲ ಕ್ರೆಡಿಟ್/ಡೆಬಿಟ್ ಕಾರ್ಡ್‌ದಾರರು ಕಾರ್ಡಿನ ವಹಿವಾಟು ಮಿತಿ ಎಷ್ಟಿರಬೇಕು (ಟ್ರಾನ್ಸಾಕ್ಷನ್ ಲಿಮಿಟ್) ಎಂದು ತಾವೇ ನಿರ್ಧರಿಸಬಹುದು

* ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್ ಮೊದಲಾದ ವೇದಿಕೆಗಳ ಮೂಲಕ ಗ್ರಾಹಕರಿಗೆ ತಮ್ಮ ಕಾರ್ಡ್‌ ಅನ್ನು ಸ್ವಿಚ್‌ಆಫ್/ಸ್ವಿಚ್‌ಆನ್ ಮಾಡುವ ಸೌಲಭ್ಯ ನೀಡಲಾಗಿದೆ

* ಅಂಗಡಿಗಳಲ್ಲಿ ಗ್ರಾಹಕರು ತಮ್ಮ ಕಾರ್ಡ್‌ಗಳನ್ನು ಪಿಒಎಸ್‌ ಉಪಕರಣದಲ್ಲಿ ಸ್ವೈಪ್ ಮಾಡುವ ಬದಲಾಗಿ ನಿಯರ್‌ ಫೀಲ್ಡ್ ತಂತ್ರಜ್ಞಾನದ (ಎನ್‌ಎಫ್‌ಟಿ) ಮೂಲಕ ಹಣ ವರ್ಗಾವಣೆ ಮಾಡಬಹುದು. ಇದು ಸಂಪರ್ಕರಹಿತ ತಂತ್ರಜ್ಞಾನ. ಎನ್‌ಎಫ್‌ಸಿ ಆಯ್ಕೆಯನ್ನು ಸಕ್ರಿಯಗೊಳಿಸುವ ಅಥವಾ ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಸಹ ನೀಡಲಾಗಿದೆ

ಮ್ಯಾಟ್ರೊಮೊನಿ: ಸಂಗಾತಿ ಆಯ್ಕೆಯಲ್ಲಿ ಇರಲಿ ಎಚ್ಚರ

ಸಹನಾಗೆ ವಯಸ್ಸು ಮೀರುತ್ತಾ ಬಂದರೂ ಸೂಕ್ತ ವರ ಸಿಕ್ಕಿರಲಿಲ್ಲ. ಪೋಷಕರ ಪರದಾಟ ನೋಡಲಾರದೆ, ಮ್ಯಾಟ್ರಿಮೊನಿಯಲ್ಲಿ ತನ್ನ ಪ್ರೊಫೈಲ್ ರಚಿಸಿ ವರನಿಗಾಗಿ ಆಕೆ ಹುಡುಕಾಟ ನಡೆಸಿದಳು. ಹತ್ತಾರು ಪ್ರಪೋಸಲ್ ಬಂದವು. ಆ ಪೈಕಿ ಸಂತೋಷ್‌ ಎಂಬಾತ ಇಷ್ಟವಾದ. ಆತನ ಪ್ರೊಫೈಲ್ ಸಹನಾಗೆ ಹಿಡಿಸಿತು. ಇಬ್ಬರೂ ಮೊಬೈಲ್ ನಂಬರ್ ಬದಲಾಯಿಸಿಕೊಂಡು ಕರೆ ಮಾಡಲು ಶುರು ಮಾಡಿದರು. ಸಹನಾಳ ಇಹಪರ ಎಲ್ಲವನ್ನೂ ಆತ ತಿಳಿದುಕೊಂಡ. ಒಂದು ದಿನ ಇದ್ದಕ್ಕಿದ್ದಂತೆ ಕರೆ ಮಾಡಿದ ಸಂತೋಷ್ ತುರ್ತಾಗಿ ಹಣ ಬೇಕು, ಸಂಕಷ್ಟದಲ್ಲಿದ್ದೇನೆ ಎಂದು ದುಂಬಾಲು ಬಿದ್ದು. ಹೇಗೋ ಮದುವೆಯಾಗುವ ಹುಡುಗ ಅಲ್ಲವೇ ಎಂದುಕೊಂಡ ಸಹನಾ, ಕೇಳಿದಷ್ಟು ಹಣ ನೀಡಿದಳು. ಮರುದಿನದಿಂದ ಅವನ ಸುಳಿವೇ ಇಲ್ಲ. ಸಹನಾ ಅಕ್ಷರಶಃ ಮೋಸ ಹೋಗಿದ್ದಳು.

ಮದುವೆಯ ಅನುಬಂಧ ನೂರಾರು ಕಾಲ ಇರಬೇಕಾದುರು. ಆಧುನಿಕ ಯುಗದ ಧಾವಂತದಲ್ಲಿ ಸೂಕ್ತ ಕನ್ಯೆ/ವರ ಹುಡುಕಲು ಪರದಾಡಿ,  ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳ ಮೊರೆ ಹೋಗುತ್ತಾರೆ. ಆದರೆ ನಕಲಿ ಪ್ರೊಫೈಲ್ ಸೃಷ್ಟಿಸಿ ಅಮಾಯಕ ಯುವತಿಯರನ್ನು ಮೋಸದ ಬಲೆಗೆ ಕಡೆಹುವ ದಂಧೆ ಇದೆ ಎಂಬುದರ ಅರಿವು ನಿಮಗಿರಲಿ. ಒಂದು ವೇಳೆ ಹಣ ವರ್ಗಾವಣೆ ಮಾಡುವಂತೆ ವ್ಯಕ್ತಿ ಬೇಡಿಕೆಯಿಟ್ಟಲ್ಲಿ, ಎರಡೆರಡು ಬಾರಿ ಆತನ ಬಗ್ಗೆ ಖಚಿತಪಡಿಸಿಕೊಳ್ಳಿ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳುವ ಖದೀಮರೂ ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳಲ್ಲಿ ಸಿಗುತ್ತಾರೆ. ಹುಡುಗನನ್ನು ವಂಚಿಸಿ ಹಣ ಕೀಳುವ ಹುಡುಗಿಯರೂ ಇದ್ದಾರೆ, ಎಚ್ಚರ. 

ನೀವು ಏನು ಮಾಡಬೇಕು? 

*ನೋಂದಾಯಿತ ಮ್ಯಾಟ್ರಿಮೊನಿ ಸೈಟ್‌ನಲ್ಲಿ ಮಾತ್ರ ನಿಮ್ಮ ಪ್ರೊಫೈಲ್ ರಚಿಸಿ

*ವಿದ್ಯಾರ್ಹತೆ, ಉದ್ಯೋಗದ ಮಾಹಿತಿಯನ್ನು ಸಂಬಂಧಪಟ್ಟ ಶಿಕ್ಷಣ ಸಂಸ್ಥೆ ಮತ್ತು ಉದ್ಯೋಗದಾತ ಕಂಪನಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ

*ನಿಮಗೆ ವರ/ವಧುವಿನ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಳ್ಳಲು ಆಗದಿದ್ದಲ್ಲಿ, ಕುಟುಂಬದವರ ಸಹಾಯ ಪಡೆದುಕೊಳ್ಳಿ

*ಹುಡುಗನ ಮನೆಗೆ ನೇರವಾಗಿ ಭೇಟಿ ನೀಡಿ ಅವನ ಪೋಷಕರು ಹಾಗೂ ಸಂಬಂಧಿಕರ ಜತೆ ಮಾತನಾಡಿ. ನಿಮ್ಮ ಮನೆಗೂ ಅವರನ್ನು ಆಹ್ವಾನಿಸಿ

*ವ್ಯಕ್ತಿಯ ಬಗ್ಗೆ ಸಾಕಷ್ಟು ಹಿನ್ನೆಲೆ ಪರಿಶೀಲನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ

*ನಿಮ್ಮ ಬ್ಯಾಂಕ್ ಖಾತೆ ಅಥವಾ ಪಾಸ್‌ವರ್ಡ್ ಅನ್ನು ಖಂಡಿತ ಹಂಚಿಕೊಳ್ಳಬೇಡಿ. ನಂಬಿಕಸ್ತ ವ್ಯಕ್ತಿಯಾಗಿದ್ದಲ್ಲಿ, ಈ ಮಾಹಿತಿಗಳನ್ನು ಸಾಮಾನ್ಯವಾಗಿ ಕೇಳುವುದಿಲ್ಲ. ಪಾಸ್‌ವರ್ಡ್‌ ಅನ್ನು ನಿಯಮಿತವಾಗಿ ಬದಲಿಸುತ್ತಿರಿ

*ಮದುವೆಯಾಗಲು ಉದ್ದೇಶಿಸಿರುವ ವ್ಯಕ್ತಿ ಕೆಲಸ ಮಾಡುವ ಕಚೇರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದರೆ ಇನ್ನೂ ಒಳ್ಳೆಯದು. ಅವರ ಸಾಮಾಜಿಕ ಜಾಲತಾಣದ ಖಾತೆಯನ್ನು ಪರಿಶೀಲಿಸಿ.

*ಮನೆ, ಕಚೇರಿ ಹಾಗೂ ಸಂಬಂಧಿಕರ ಭೇಟಿಗೆ ಸಮ್ಮತಿಸದಿದ್ದರೆ, ಎಚ್ಚರಿಕೆಯಿಂದ ಇರುವುದು ಒಳಿತು

ಮಾಹಿತಿ: http://cyberpolicebangalore.nic.in

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.