ಮುಖಪುಟದ ‘ಬೀಗಬೇಡ’ ಪರ್ವ

7
ಟ್ರೆಂಡ್‌

ಮುಖಪುಟದ ‘ಬೀಗಬೇಡ’ ಪರ್ವ

Published:
Updated:

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದಾದ ಮೇಲೆ ಒಂದರಂತೆ ಹಲವು ವಿಭಿನ್ನ ‘ಚಾಲೆಂಜ್‌’ಗಳು ಶುರುವಾಗಿವೆ. ಇತ್ತೀಚೆಗೆ ತಾನೇ ‘ಫಿಟ್ನೆಸ್ ಚಾಲೆಂಜ್’ ಪರ್ವ ರಾಷ್ಟ್ರಮಟ್ಟದಲ್ಲಿಯೇ ಒಂದು ಹೊಸ ಚರ್ಚೆ ಹುಟ್ಟು ಹಾಕಿತ್ತು. ಈ ಸವಾಲು ಸ್ವೀಕರಿಸಿದವರು ಅವರವರ ಕಾರ್ಯದಕ್ಷತೆಯ ಹೆಚ್ಚಿಸಲು ತಾವು ಕೈಗೊಳ್ಳುವ ಫಿಟ್ನೆಸ್ ವಿಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟರು. ಆ ಸವಾಲನ್ನು ಮತ್ತೊಬ್ಬರಿಗೆ ವರ್ಗಾಯಿಸುವ ಮೂಲಕ ಸರಣಿ ಮುಂದುವರಿಯುತ್ತಿತ್ತು. ಈ ಸವಾಲುಗಳನ್ನು ಸ್ವೀಕರಿಸುವವರೂ ಕೂಡ ಅದನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು.

ಅದಾದ ಬಳಿಕ ಕೆಲವೇ ದಿನಗಳಲ್ಲಿ ಪುಸ್ತಕ ಓದುವ ಅಭಿರುಚಿ ಹೆಚ್ಚಿಸುವ ಮತ್ತು ಓದುವಿಕೆಯ ತುಡಿತಕ್ಕೆ ಮತ್ತಷ್ಟು ಚುರುಕು ಮುಟ್ಟಿಸುವಂತೆ ‘ಏಳು ದಿನ ಏಳು ಪುಸ್ತಕ’ ಎಂಬ ವಿನೂತನ ಚಳವಳಿಯೇ ನಡೆಯಿತು. ಸತತ ಏಳು ದಿನಗಳವರೆಗೆ ಪ್ರತಿದಿನ ಒಂದೊಂದು ಪುಸ್ತಕದ ಶೀರ್ಷಿಕೆಯನ್ನು ಮತ್ತು ಆ ಪುಸ್ತಕದ ಓದಿನ ಅನುಭವವನ್ನು ಚಿತ್ರ ಸಮೇತ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಬೇಕು. ಕೊನೆಯ ದಿನ ಆ ಸವಾಲನ್ನು ಮತ್ತೊಬ್ಬರಿಗೆ ವರ್ಗಾಯಿಸುವ ಮೂಲಕ ಆ ಸರಣಿಯನ್ನು ಹಾಗೇ ಮುಂದುವರಿಸಲಾಗುತ್ತಿತ್ತು. ಬಹಳಷ್ಟು ಸಾಹಿತ್ಯಾಸಕ್ತರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಹೊಸತನಕ್ಕೆ ನಾಂದಿ ಹಾಡಿದರು.

ಈಗ ಫೇಸ್‌ಬುಕ್‌ನಲ್ಲಿ 'ಬೀಗಬೇಡ’ ಪರ್ವ ಶುರುವಾಗಿದೆ. ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಿಗೆ ಈ ಪದದ ಪರಿಚಯ ಇಲ್ಲದಿರುವುದಿಲ್ಲ. ಆದರೆ, ಯಾರೋ ಪ್ರಾರಂಭಿಸಿದ ಈ ‘ಬೀಗಬೇಡ’ ಪರ್ವ ಸಾಮಾಜಿಕ ಜಾಲತಾಣ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಅದಿನ್ನೂ ಮುಂದುವರಿಯುತ್ತಿದೆ. ಅದೆಷ್ಟೋ ಜನ ಕಲ್ಪನೆ ಹಾಗೂ ವಾಸ್ತವಗಳ ನಡುವೆ ವ್ಯತ್ಯಾಸವನ್ನೇ ತಿಳಿಯದಂತೆ ವರ್ತಿಸುತ್ತಿರುತ್ತಾರೆ. ಹಣ ಬಲ, ಅಧಿಕಾರ ಬಲ, ತೋಳ್ಬಲಗಳ ಮದದಿಂದ ಬೀಗುತ್ತಿರುತ್ತಾರೆ. ಅಂತಹ ವಿಚಾರಗಳ ಮೇಲೆ ಬೆಳಕು ಚೆಲ್ಲುವಂತಹ ನಾಲ್ಕೈದು ಸಾಲಿನ ಬರಹಗಳು ಅರ್ಥಪೂರ್ಣವಾಗಿದ್ದು, ವಿಡಂಬನಾತ್ಮವಾಗಿ ಹಾಗೂ ಹಾಸ್ಯಮಯವಾಗಿವೆ. ಇಂಥ ಸ್ವಾರಸ್ಯಪೂರ್ಣವಾದ ಸಾಲುಗಳಲ್ಲಿ ‘ಬೀಗಬೇಡ’ ಪದ ಆ ಸಾಲುಗಳಿಗೆ ಮೆರಗು ನೀಡುತ್ತದೆ.

ಒಂದು ವಿಚಾರಕ್ಕೆ ಪ್ರತಿಯಾಗಿ ಮತ್ತೊಂದು ವಿಚಾರ ಅದೇ ಬೀಗಬೇಡ ಪದದ ಸ್ವಾರಸ್ಯವನ್ನೇ ಇಟ್ಟುಕೊಂಡು ರಚನೆಯಾಗುತ್ತದೆ. ಪ್ರಸ್ತುತ ವಿದ್ಯಮಾನಗಳೇ ಈ ಸಾಲುಗಳಿಗೆ ವಿಷಯವಸ್ತುವಾಗುವುದು ಇದರ ವಿಶೇಷತೆ. ಇದೊಂದು ಅನೌಪಚಾರಿಕ ಪ್ರಕ್ರಿಯೆ. ಓದುಗರಿಗೆ ಖುಷಿ ತಂದು ಕೊಡುತ್ತಿದೆ.

ಉದಾಹರಣೆಗೆ, ‘ಬೇಡ ಹೀಗೆ ಬೀಗಬೇಡ, ನಿನ್ನನ್ನೂ ಶಿಕಾರಿ ಮಾಡಲು ನಿನ್ನ ಹಿಂದೆಯೇ ಇದ್ದಾನೆ ಮತ್ತೊಬ್ಬ ಬೇಡ’ ನಾನೇ ಶ್ರೇಷ್ಠ ಎಂದು ಬೀಗುವವರಿಗೆ ಈ ಸಾಲು ಅನ್ವಯವಾಗುತ್ತದೆ.

‘ನನ್ನ ಬಳಿ ಸಾಕಷ್ಟು ಹಣವಿದೆ ಎಂದು ಮೆರೆದಾಡಬೇಡ, ನೋಟ್ ಬ್ಯಾನ್ ಆದಾಗ ಬಾಯಿಬಾಯಿ ಬಡ್ಕೊಂಡವರನ್ನು ನೋಡಿದ್ದೇನೆ’ - ಈ ಸಾಲು ಧನದಾಹಿಗಳಿಗೆ ಬಡವರತ್ತ ಕಣ್ತೆರೆದು ನೋಡು ಎಂದು ಹೇಳುವಂತಿದೆ.

ಇಂಥ ಹಲವು ‘ಬೀಗಬೇಡ’ ಬರಹಗಳು ಫೇಸ್‌ಬುಕ್‌ನಲ್ಲಿ ಸದ್ದು ಮಾಡುತ್ತಿವೆ. ಒಟ್ಟಾರೆ ಫೇಸ್‌ಬುಕ್ ಎಂಬ ಮಾಯಾಜಾಲ ‘ದಾರಿತಪ್ಪಿಸುವ’ ಮಾಯಾಜಾಲವಲ್ಲ, ಕ್ರಿಯಾಶೀಲ ವ್ಯಕ್ತಿಗಳಿಗೆ ಉತ್ತಮ ಅಭಿವ್ಯಕ್ತಿಯ ವೇದಿಕೆ ಎಂಬುದನ್ನು ಇಂಥ ಚಟುವಟಿಕೆಗಳಿಂದ ಸಾಬೀತುಪಡಿಸುತ್ತಿದೆ. 

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !