ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Twitter Layoffs | ಟ್ವಿಟ್ಟರ್‌ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾದ ಮಸ್ಕ್‌

Last Updated 4 ನವೆಂಬರ್ 2022, 5:56 IST
ಅಕ್ಷರ ಗಾತ್ರ

ನವದೆಹಲಿ: ಟ್ವಿಟ್ಟರ್‌ ಖರೀದಿ ಬಳಿಕ ಕಂಪನಿಯಲ್ಲಿ ಹಲವು ಬದಲಾವಣೆ ಮಾಡುತ್ತಿರುವ ಹೊಸ ಮಾಲೀಕ ಎಲಾನ್‌ ಮಸ್ಕ್‌ ಅವರು ಇದೀಗ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದ್ದಾರೆ.

ಟ್ವಿಟ್ಟರ್‌ ಅನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಸಿಇಒ ಪರಾಗ್‌ ಅಗರ್‌ವಾಲ್‌ ಅವರನ್ನು ಮಸ್ಕ್‌ ವಜಾ ಮಾಡಿದ್ದರು. ಇದರ ಬೆನ್ನಲ್ಲೇ ಆಡಳಿತ ಮಂಡಳಿಯನ್ನು ವಿಸರ್ಜನೆ ಮಾಡಿದ್ದರು. ಇದೀಗ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದ್ದಾರೆ. ಇದರಿಂದಾಗಿ ಸಾವಿರಾರು ಉದ್ಯೋಗಿಗಳ ಭವಿಷ್ಯ ಡೋಲಾಯಮಾನವಾಗಿದೆ.

ವಜಾ ಸಂಬಂಧ ಉದ್ಯೋಗಿಗಳಿಗೆ ಮೇಲ್‌ ಮೂಲಕ ತಿಳಿಸಲಾಗಿದ್ದು, ಅವರನ್ನು ಕೆಲಸದಲ್ಲಿ ಉಳಿಸಿಕೊಳ್ಳುವುದೋ ಬೇಡವೋ ಎಂಬುದನ್ನು ಶೀಘ್ರವೇ ತಿಳಿಸಲಾಗುವುದು ಎಂದು ಮೇಲ್‌ನಲ್ಲಿ ಹೇಳಲಾಗಿದೆ.

‘ನೀವು ಕಚೇರಿಯಲ್ಲಿ ಇದ್ದರೆ ಅಥವಾ ಕಚೇರಿಗೆ ಬರುವ ದಾರಿಯಲ್ಲಿ ಇದ್ದರೆ ದಯಮಾಡಿ ಮನೆಗೆ ಮರಳಿ’ ಎಂದು ಉದ್ಯೋಗಿಗಳಿಗೆ ಹಾಕಿರುವ ಮೇಲ್‌ನಲ್ಲಿ ಹೇಳಲಾಗಿದೆ.

ಶುಕ್ರವಾರದಿಂದ ವಜಾ ಪ್ರಕ್ರಿಯೆಗಳು ಆರಂಭವಾಗಲಿದೆ ಎಂದು ಟ್ವಿಟ್ಟರ್‌ ತಿಳಿಸಿದೆ. ಇದರಿಂದ ಸುಮಾರು 4000 ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.

ಜತೆಗೆ ಎಲ್ಲಾ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ ಎಂದೂ ಮೇಲ್‌ನಲ್ಲಿ ತಿಳಿಸಲಾಗಿದ್ದು, ಕಚೇರಿಗಳಿಗೆ ಉದ್ಯೋಗಿಗಳ ಪ್ರವೇಶ ನಿರಾಕರಿಸಲಾಗಿದೆ.

‘ಉದ್ಯೋಗಿಗಳ ಸುರಕ್ಷತೆ ಹಾಗೂ ಕಚೇರಿ ಸೊತ್ತುಗಳ ಮತ್ತು ಬಳಕೆದಾರರ ಮಾಹಿತಿ ಸಂರಕ್ಷಣೆಗಾಗಿ ಎಲ್ಲಾ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ. ಎಲ್ಲಾ ಆಕ್ಸೆಸ್‌ ಬ್ಯಾಡ್ಜ್‌ಗಳನ್ನು ತಡೆ ಹಿಡಿಯಲಾಗಿದೆ’ ಎಂದು ಉದ್ಯೋಗಿಗಳಿಗೆ ಕಳುಹಿಸಿರುವ ಮೇಲ್‌ನಲ್ಲಿ ಹೇಳಲಾಗಿದೆ.

ಅಲ್ಲದೇ, ಕೆಲಸದಲ್ಲಿ ಉಳಿಸಿಕೊಳ್ಳುವ ಉದ್ಯೋಗಿಗಳಿಗೆ ಕಂಪನಿ ಮೇಲ್‌ ಐಡಿ ಮೂಲಕ ಮಾಹಿತಿ ನೀಡಲಾಗುವುದು. ಕೆಲಸ ಕಳೆದುಕೊಳ್ಳುವವರಿಗೆ ಮುಂದಿನ ಪ್ರಕ್ರಿಯೆಗಳನ್ನು ಅವರ ವೈಯಕ್ತಿಕ ಮೇಲ್‌ ಐಡಿ ಮೂಲಕ ತಿಳಿಸಲಾಗುವುದು ಎಂದೂ ಮೇಲ್‌ನಲ್ಲಿ ವಿವರಿಸಲಾಗಿದೆ.

ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆ ಹಾಗೂ ವೆಚ್ಚ ಕಡಿತದ ಅಂಗವಾಗಿ ಎಲಾನ್‌ ಮಸ್ಕ್‌ ಟ್ವಿಟ್ಟರ್‌ನಲ್ಲಿ ಹಲವು ಬದಲಾವಣೆಗಳನ್ನು ತರಲು ಉದ್ದೇಶಿಸಿದ್ದು, ಅದರ ಭಾಗವಾಗಿಯೇ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದ್ದಾರೆ.

ಇನ್ನು ಈ ಮೇಲ್‌ ತಲುಪುತ್ತಿದ್ದಂತೆಯೇ ಹಲವು ಉದ್ಯೋಗಿಗಳು ಸ್ವಯಂ ರಾಜೀನಾಮೆ ನೀಡಿದ್ದು, ಕಂಪನಿಯ ಆಂತರಿಕ ಸಂವಹನ ವೇದಿಕೆಗಳಲ್ಲಿ ಹಲವು ಉದ್ಯೋಗಿಗಳು ವಿದಾಯ ಸಂದೇಶವನ್ನೂ ಹಾಕಿದ್ದಾರೆ ಎಂದು ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT