ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಟ್ವಿಟರ್‌ ಖಾತೆ ಹಿಂಬಾಲಿಸುವುದು ಕೈಬಿಟ್ಟ ಶ್ವೇತ ಭವನ:ಕಾರಣ ಬಹಿರಂಗ

Last Updated 30 ಏಪ್ರಿಲ್ 2020, 11:32 IST
ಅಕ್ಷರ ಗಾತ್ರ
ADVERTISEMENT
""
""
""

ವಾಷಿಂಗ್ಟನ್‌: ಇದೇ ವರ್ಷ ಫೆಬ್ರುವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್‌, ಪ್ರಧಾನ ಮಂತ್ರಿ ಕಾರ್ಯಾಲಯ ಸೇರಿದಂತೆ ಅಧಿಕೃತ ಟ್ವಿಟರ್‌ ಖಾತೆಗಳನ್ನು ಅಮೆರಿಕದ ಶ್ವೇತ ಭವನ ಟ್ವಿಟರ್‌ ಖಾತೆ ಹಿಂಬಾಲಿಸಿತ್ತು (ಫಾಲೊ). ಆದರೆ, ಇತ್ತೀಚೆಗಷ್ಟೇ ಶ್ವೇತ ಭವನ, ಪ್ರಧಾನಿ ಮೋದಿ ಸೇರಿದಂತೆ ಆರು ಟ್ವಿಟರ್‌ ಖಾತೆಗಳನ್ನು ಹಿಂಬಾಲಿಸುವುದನ್ನುಸ್ಥಗಿತಗೊಳಿಸಿದೆ. ಈ ಬೆಳವಣಿಗೆಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು.ಅದರ ಬೆನ್ನಲ್ಲೇ ಬುಧವಾರ ಶ್ವೇತ ಭವನ ವಿವರಣೆ ನೀಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆಬ್ರುವರಿ ಕೊನೆಯ ವಾರದಲ್ಲಿ ಭಾರತಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಶ್ವೇತ ಭವನದ ಅಧಿಕೃತ ಟ್ವಿಟರ್‌ ಖಾತೆ (@WhiteHouse), ಭಾರತದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಕಾರ್ಯಾಲಯ, ಅಮೆರಿಕದಲ್ಲಿ ಭಾರತದ ರಾಯಭಾರಿ ಕಚೇರಿ ಹಾಗೂ ಭಾರತಕ್ಕೆ ಅಮೆರಿಕದ ರಾಯಭಾರಿ ಕೆನ್‌ ಜಸ್ಟರ್‌ ಅವರ ಖಾತೆಯನ್ನು ಫಾಲೊ ಮಾಡಿತ್ತು. ಇದೇ ವಾರದ ಆರಂಭದಲ್ಲಿ ಆರು ಖಾತೆಗಳನ್ನು ಅನ್‌ಫಾಲೊ ಮಾಡಲಾಗಿದೆ.

ಅಮೆರಿಕ ಅಧ್ಯಕ್ಷ ಭೇಟಿ ನೀಡುವ ರಾಷ್ಟ್ರಗಳ ಅಧಿಕೃತ ಟ್ವಿಟರ್‌ ಖಾತೆಗಳನ್ನು ಸೀಮಿತ ಅವಧಿಗೆ ಮಾತ್ರವೇ ಶ್ವೇತ ಭವನ ಖಾತೆ ಫಾಲೊ ಮಾಡುತ್ತದೆ ಎಂದು ಶ್ವೇತ ಭವನ ತಿಳಿಸಿದೆ. ಆತಿಥ್ಯ ನೀಡುವ ರಾಷ್ಟ್ರಗಳೊಂದಿಗೆ ಸಂದೇಶಗಳನ್ನು ಟ್ವೀಟ್‌ ಮಾಡುವ ಮೂಲಕ ಉಭಯ ರಾಷ್ಟ್ರಗಳ ನಾಯಕರ ಭೇಟಿಗೆ ಬೆಂಬಲ ಸೂಚಿಸಲಾಗುತ್ತದೆ. ಶ್ವೇತ ಭವನ ಪ್ರಸ್ತುತ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ 13 ಟ್ವಿಟರ್‌ ಖಾತೆಗಳು ಮಾತ್ರ ಫಾಲೊ ಮಾಡುತ್ತಿದ್ದು, ಎಲ್ಲವೂ ಅಮೆರಿಕ ಆಡಳಿತಕ್ಕೆ ಸಂಬಂಧಿಸಿದ ಖಾತೆಗಳೇ ಆಗಿವೆ.

'ಶ್ವೇತ ಭವನದ ಟ್ವಿಟರ್‌ ಖಾತೆ ಅಮೆರಿಕ ಸರ್ಕಾರದ ಅಧಿಕಾರಿಗಳು ಸೇರಿದಂತೆ ಪ್ರಮುಖರ ಖಾತೆಗಳನ್ನು ಮಾತ್ರ ಫಾಲೊ ಮಾಡುತ್ತದೆ. ಅಧ್ಯಕ್ಷರು ಭೇಟಿ ನೀಡುವ ರಾಷ್ಟ್ರಗಳ ಅಧಿಕಾರಿಗಳು, ಮುಖಂಡರ ಖಾತೆಗಳನ್ನು ಅಲ್ಪಾವಧಿಗೆ ಫಾಲೊ ಮಾಡುತ್ತದೆ. ಆತಿಥ್ಯ ರಾಷ್ಟ್ರಗಳ ಸಂದೇಶಗಳನ್ನು ಮರುಹಂಚಿಕೊಳ್ಳುತ್ತದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಖಾತೆಗಳು ಅನ್‌ಫಾಲೊ ಆಗುತ್ತಿದ್ದಂತೆ ಭಾರತದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, 'ನಮ್ಮ ರಾಷ್ಟ್ರಪತಿ ಮತ್ತು ಪ್ರಧಾನಿ ಟ್ವಿಟರ್‌ ಖಾತೆಗಳನ್ನು ಶ್ವೇತ ಭವನ ಅನ್‌ಫಾಲೊ ಮಾಡಿರುವುದು ತೀವ್ರ ನಿರಾಸೆ ಮೂಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಗಮನಹರಿಸುವಂತೆ ಆಗ್ರಹಿಸುತ್ತೇನೆ' ಎಂದು ಬುಧವಾರ ಟ್ವೀಟಿಸಿದ್ದರು.

ಶ್ವೇತ ಭವನ ಖಾತೆಯನ್ನು 2.2 ಕೋಟಿ ಟ್ವಿಟರ್‌ ಖಾತೆಗಳು ಹಿಂಬಾಲಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT