ಭಾನುವಾರ, ಮಾರ್ಚ್ 29, 2020
19 °C
ಗೂಗಲ್‌ಪ್ಲಸ್‌ನಲ್ಲಿ ಈವರೆಗೆ ಏನೆಲ್ಲಾ ಆಗಿದೆ ಗೊತ್ತಾ?

ಬಳಕೆದಾರರ ದತ್ತಾಂಶ ಸೋರಿಕೆ: ಗೂಗಲ್‌ಪ್ಲಸ್ ಸೇವೆ ಸ್ಥಗಿತ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಸ್ಯಾನ್‌ಫ್ರಾನ್ಸಿಸ್ಕೊ: ಜನಪ್ರಿಯ ಸಾಮಾಜಿಕ ಜಾಲತಾಣ ‘ಗೂಗಲ್‌ಪ್ಲಸ್’ (Google+) ಸೇವೆಗಳನ್ನು ಗ್ರಾಹಕರಿಗೆ ಸ್ಥಗಿತಗೊಳಿಸಲು ಗೂಗಲ್‌ ನಿರ್ಧರಿಸಿದೆ. ಆಗಸ್ಟ್ 2019ರ ನಂತರ ಗೂಗಲ್‌ಪ್ಲಸ್ ಸೇವೆಗಳು ಲಭ್ಯವಿರುವುದಿಲ್ಲ. ಅಷ್ಟರೊಳಗೆ ಬಳಕೆದಾರರು ತಮ್ಮ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಗೂಗಲ್‌ನ ಪ್ರಕಟಣೆ ತಿಳಿಸಿದೆ.

‘ಗೂಗಲ್‌ಪ್ಲಸ್‌ ತಂತ್ರಾಂಶದಲ್ಲಿದ್ದ ದೋಷದ ಕಾರಣ ಸುಮಾರು 5 ಲಕ್ಷ ಬಳಕೆದಾರರ ವೈಯಕ್ತಿಕ ಮಾಹಿತಿ ಹೊರಗಿನ ಡೆವಲಪರ್‌ಗಳಿಗೆ ಸೋರಿಕೆಯಾಗಿರಬಹುದು. ಸೋಷಿಯಲ್‌ ನೆಟ್‌ವರ್ಕ್‌ ಅಭಿವೃದ್ಧಿ ಮತ್ತು ನಿರ್ವಹಣೆ ವಿಷಯದಲ್ಲಿ ನಾವು ಸೋತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬಳಕೆದಾರರನ್ನು ತಲುಪುವಲ್ಲಿಯೂ ನಾವು ವಿಫಲವಾಗಿದ್ದೇವೆ. ಈ ನಿಟ್ಟಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ‘ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

‘ಮಾರ್ಚ್‌ ತಿಂಗಳಲ್ಲಿ ದೋಷವನ್ನು ಪತ್ತೆಹಚ್ಚಿ ಸರಿಪಡಿಸಲಾಯಿತು. ಯಾರಾದರೂ ಡೆವಲಪರ್‌ಗೆ ಈ ಕುರಿತು ಮಾಹಿತಿ ತಿಳಿದಿದೆ ಅಥವಾ ಬಳಕೆದಾರರ ದತ್ತಾಂಶದ ದುರುಪಯೋಗವಾಗಿದೆ ಎನ್ನುವ ವಿಚಾರವ ಈವರೆಗೆ ಗಮನಕ್ಕೆ ಬಂದಿಲ್ಲ’ ಎಂದು ಸೋಮವಾರ ಗೂಗಲ್ ತನ್ನ ಬ್ಲಾಗ್‌ನಲ್ಲಿ ಪ್ರಕಟಿಸಿತ್ತು.

ಈ ಮಾಹಿತಿ ಬಹಿರಂಗಗೊಂಡ ನಂತರ ಗೂಗಲ್‌ನ ಮಾತೃ ಕಂಪನಿ ‘ಆಲ್ಫಾಬೆಟ್‌ ಇಂಕ್’ನ ಷೇರುಗಳ ಮೌಲ್ಯ ಶೇ1.5ರಷ್ಟು ಕುಸಿಯಿತು. ಅಮೆರಿಕದ ಬೃಹತ್ ತಂತ್ರಜ್ಞಾನ ಕಂಪನಿಗಳನ್ನು ಖಾಸಗಿ ಮಾಹಿತಿ ಸೋರಿಕೆ ವಿಚಾರ ಒಂದು ಶಾಪವಾಗಿ ಕಾಡುತ್ತಿದೆ. ಗೂಗಲ್ ಇದಕ್ಕೆ ಹೊಸ ಸೇರ್ಪಡೆಯಷ್ಟೇ.

ಕಾನೂನು ಕ್ರಮದ ಭಯದಿಂದಾಗಿ ‘ಎಪಿಐ’ನಲ್ಲಿ (ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್‌ಫೇಸ್‌) ಪತ್ತೆಯಾಗಿದ್ದ ದತ್ತಾಂಶ ಸೋರಿಕೆ ವಿಚಾರವನ್ನು ಗೌಪ್ಯವಾಗಿ ಇರಿಸಲು ಗೂಗಲ್ ಪ್ರಯತ್ನಿಸಿತ್ತು ಎಂದು ‘ವಾಲ್‌ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದೆ.

ದತ್ತಾಂಶ ಸೋರಿಕೆಯ ಕಾರಣ, ಎಂಥ ಮಾಹಿತಿ ಸೋರಿಕೆಯಾಗಿರಬಹುದು ಎಂಬುದನ್ನು ಪತ್ತೆಹಚ್ಚಲಾಗಿದೆ. ದತ್ತಾಂಶ ಸೋರಿಕೆಗೆ ಕಾರಣವಾಗಿದ್ದ ದೋಷವನ್ನೂ ಸರಿಪಡಿಸಲಾಗಿದೆ. ದತ್ತಾಂಶ ಸೋರಿಕೆಯಾದ ಬಳಕೆದಾರರನ್ನು ನಿರ್ದಿಷ್ಟವಾಗಿ ಗುರುತಿಸಿ ಮಾಹಿತಿ ನೀಡುವುದು, ದತ್ತಾಂಶವನ್ನು ದುರುಪಯೋಗಪಡಿಸಿಕೊಂಡಿರುವ ಡೆವಲಪರ್‌ಗಳನ್ನು ಗುರುತಿಸಿ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಯನ್ನು ಗೂಗಲ್‌ನ ಆಡಳಿತ ಮಂಡಳಿ ಆಲೋಚಿಸಿತ್ತು.

‘ದತ್ತಾಂಶ ಸೋರಿಕೆಯ ಸಾಧ್ಯತೆಯನ್ನು ಯಾವುದೇ ಡೆವಲಪರ್ ಗುರುತಿಸಿದ್ದಾರೆ ಎಂದಾಗಲಿ, ದತ್ತಾಂಶವನ್ನು ನಕಲು ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದಾಗಲಿ ಹೇಳಲು ಯಾವುದೇ ಸಾಕ್ಷಿ ಲಭ್ಯವಿಲ್ಲ’ ಎಂದು ಗೂಗಲ್ ಹೇಳಿದೆ.

ಐರೋಪ್ಯ ಒಕ್ಕೂಟದಲ್ಲಿ ಜಾರಿಯಾಗಿರುವ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್ (ಜಿಡಿಪಿಆರ್) ಕಾಯ್ದೆಯ ಅನ್ವಯ ‘ಯಾವುದೇ ಬಳದೆದಾರರ ದತ್ತಾಂಶ ಸೋರಿಕೆಯಾದರೆ, ಅಂಥ ದತ್ತಾಂಶದಿಂದ ಬಳಕೆದಾರರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಒದಗುವಂತೆ ಇದ್ದರೆ ಸಂಬಂಧಿಸಿದ ಕಂಪನಿಯು 72 ಗಂಟೆಯ ಒಳಗೆ ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತರಬೇಕು’ ಎನ್ನುವ ನಿಯಮವಿದೆ.

‘ಕಾನೂನುಕ್ರಮದ ಭಯದಿಂದ ಉದ್ದೇಶಪೂರ್ವಕವಾಗಿ ದತ್ತಾಂಶ ಸೋರಿಕೆ ವಿಚಾರ ಬಚ್ಚಿಟ್ಟಿದ್ದು ತಪ್ಪು. ಇದು ಸಂಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಂತರಿಕ ಚರ್ಚೆಗಳು ಇನ್ನಷ್ಟು ಆಳವಾಗಿ ನಡೆಯದಿರುವ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ’ ಎಂದು ಅಮೆರಿಕದ ಡಾತ್‌ಮೌತ್ ಕಾಲೇಜಿನ ಪ್ರಾಧ್ಯಾಪಕ ಜೆಫ್ರಿ ಪಾರ್ಕರ್ ವಿಶ್ಲೇಷಿಸಿದ್ದಾರೆ.

ಈವರೆಗೆ ಏನೆಲ್ಲಾ ಆಗಿದೆ

ನವೆಂಬರ್ 2015ರಲ್ಲಿ ಗೂಗಲ್‌ಪ್ಲಸ್‌ನ ವಿನ್ಯಾಸವನ್ನು ನವೀಕರಿಸಲಾಯಿತು. ಗೂಗಲ್‌ಪ್ಲಸ್‌ ಸಾಫ್ಟ್‌ವೇರ್‌ನಲ್ಲಿ ದೋಷವಿದ್ದ ಕಾರಣ, ಖಾತೆ ರಚಿಸಿಕೊಳ್ಳುವಾಗ ಬಳಕೆದಾರರು ನೀಡಿದ್ದ ‘ಪ್ರೊಫೈಲ್’ (ವೈಯಕ್ತಿಕ ವಿವರ) ಮಾಹಿತಿ 438 ಅಪ್ಲಿಕೇಶನ್‌ಗಳ ಮೂಲಕ ಹೊರಗಿನ ಡೆವಲಪರ್‌ಗಳಿಗೆ ಸಿಗುವ ಸಾಧ್ಯತೆ ಇತ್ತು. ಗೂಗಲ್‌ನ ಎಂಜಿನಿಯರ್‌ಗಳು ಈ ದೋಷವನ್ನು ಪತ್ತೆಹಚ್ಚಿ ಸರಿಪಡಿಸಿದ್ದಾರೆ ಎಂದು ಗೂಗಲ್ ಹೇಳಿದೆ.

ಸೋರಿಕೆಯಾಗಬಹುದಿದ್ದ ದತ್ತಾಂಶವು ಅಂಕಿಅಂಶಗಳು ಮತ್ತು ಐಚ್ಛಿಕ ಗೂಗಲ್‌ಪ್ಲಸ್ ಪ್ರೊಫೈಲ್‌ನ ಮಾಹಿತಿ ಆಗಿರಬಹುದು. ಇದರಲ್ಲಿ ಹೆಸರು, ಇಮೇಲ್ ವಿಳಾಸ, ವೃತ್ತಿ, ಲಿಂಗ ಮತ್ತು ವಯಸ್ಸು ಸೇರಿದೆ ಎನ್ನುವುದು ಗೂಗಲ್‌ ಆಂತರಿಕ ವಲಯದ ಮಾತು.

ಗೂಗಲ್‌ನ ಕಾನೂನು ಮತ್ತು ನೀತಿ ನಿರೂಪಣೆ ವಿಭಾಗವು ದತ್ತಾಂಶ ಸೋರಿಕೆ ವಿಷಯವನ್ನು ಬಹಿರಂಗಪಡಿಸದಂತೆ ತಾಕೀತು ಮಾಡಿ ಸಂಸ್ಥೆಯ ಹಿರಿಯ ಎಂಜಿನಿಯರ್‌ಗಳಿಗೆ ಜ್ಞಾಪನಾಪತ್ರ (ಮೆಮೊ) ನೀಡಿತ್ತು. ‘ಈ ವಿಚಾರವನ್ನು ಬಹಿರಂಗಪಡಿಸಿದರೆ ಸಂಸ್ಥೆಯು ಶಿಸ್ತು ಕಾನೂನು ಕ್ರಮ ಎದುರಿಸಬೇಕಾಗಬಹುದು. ಕೇಂಬ್ರಿಜ್ ಅನಲಿಟಿಕ ವಿಚಾರದಲ್ಲಿ ಫೇಸ್‌ಬುಕ್ ಎದುರಿಸಿದ ಸಂಕಷ್ಟವನ್ನೇ ಗೂಗಲ್ ಎದುರಿಸಬೇಕಾಗಬಹುದು’ ಎಂದು ಜ್ಞಾಪನಾಪತ್ರ ಉಲ್ಲೇಖಿಸಿತ್ತು. ಇದೀಗ ‘ವಾಲ್‌ಸ್ಟ್ರೀಟ್‌ ಜರ್ನಲ್’ ಈ ದಾಖಲೆ ಮತ್ತು ಸಂಸ್ಥೆಯಲ್ಲಿ ಕೆಲಸ ಮಾಡುವವರ ಹೇಳಿಕೆಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸುವುದೊಂದಿಗೆ ವಿಷಯ ಬಹಿರಂಗವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು