ನವದೆಹಲಿ: ‘ದೇಶದ 25 ನಗರಗಳು ಮತ್ತು ಪಟ್ಟಣಗಳಲ್ಲಿ ವರ್ಷಾಂತ್ಯದ ವೇಳೆಗೆ 5ಜಿ ಸೇವೆಗಳು ಲಭ್ಯವಾಗಲಿವೆ’ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ತಿಳಿಸಿದ್ದಾರೆ.
‘ಆಗಸ್ಟ್–ಸೆಪ್ಟೆಂಬರ್ ಅವಧಿಯಲ್ಲಿ 5ಜಿ ತಂತ್ರಜ್ಞಾನ ಅಳವಡಿಕೆ ಆರಂಭ ಆಗಲಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತವು ಅಭಿವೃದ್ಧಿಪಡಿಸಿರುವ 4ಜಿ ಮತ್ತು 5ಜಿ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಆದ್ಯತೆ ನೀಡಲು ಹಲವು ದೇಶಗಳು ಉತ್ಸುಕವಾಗಿವೆ. ಡಿಜಿಟಲ್ ನೆಟ್ವರ್ಕ್ಗಳಲ್ಲಿ ಜಗತ್ತಿನ ವಿಶ್ವಾಸಾರ್ಹ ಮೂಲವಾಗಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳುವತ್ತ ಭಾರತವು ಸಾಗುತ್ತಿದೆ’ ಎಂದು ಹೇಳಿದ್ದಾರೆ.
‘ಸದ್ಯ ಭಾರತದಲ್ಲಿ ಇರುವ ಡೇಟಾ ದರವು ಜಾಗತಿಕ ಮಟ್ಟದಲ್ಲಿ ಇರುವ ಸರಾಸರಿ ದರಕ್ಕಿಂತಲೂ ಕಡಿಮೆ ಇದೆ. ಹೀಗಾಗಿ 5ಜಿ ಸೇವೆಗಳು ಆರಂಭ ಆದ ಬಳಿಕ ದರವನ್ನು ಹೊಂದಿಸಲಾಗುವುದು’ ಎಂದು ಅವರು ಹೇಳಿದ್ದಾರೆ. ‘ಭಾರತದಲ್ಲಿ ಈಗಲೂ 1ಜಿಬಿ ಡೇಟಾ ದರ 2 ಡಾಲರ್ ಇದೆ. ಜಾತಿಕವಾಗಿ 1 ಜಿಬಿ ಡೇಟಾ ದರವು 25 ಡಾಲರ್ ಇದೆ. ಹೀಗಾಗಿ 10 ಪಟ್ಟು ಏರಿಕೆ ಮಾಡಿದರೂ ಜಾಗತಿಕ ದರಕ್ಕಿಂತಲೂ ಕಡಿಮೆಯೇ ಇರಲಿದೆ’ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿಜನರು ಪ್ರತಿ ತಿಂಗಳು ಸರಾಸರಿ 18 ಜಿಬಿ ಡೇಟಾ ಬಳಕೆ ಮಾಡುತ್ತಿದ್ದಾರೆ. ಜಾಗತಿಕವಾಗಿ ಬಳಕೆ ಆಗುತ್ತಿರುವ ಸರಾಸರಿ 11ಜಿಬಿಗಿಂತಲೂ ಇದು ಹೆಚ್ಚಿಗೆ ಇದೆ.
‘ಭಾರತದಲ್ಲಿ ಡೇಟಾ ಬಳಕೆಯು ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಹೆಚ್ಚಿಗೆ ಇದೆ. ಹೀಗಾಗಿ ಡೇಟಾ ದರ, ಕರೆ ಕಡಿತ, ಕರೆಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಯ ಅಗತ್ಯ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ, ಹೈದರಾಬಾದ್, ಮುಂಬೈ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಟವರ್ ಅಳವಡಿಕೆ ಮಾಡಲು ಜನರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಹೀಗಾಗಿ ಟವರ್ ಅಳವಡಿಕೆ ಕಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.