ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರುಗತಿಯಲ್ಲಿ ಸಾಗಿರುವ ಅಡ್ವಾನ್ಸ್ಡ್‌ ಡೈ ಕಾಸ್ಟ್‌ ಕಾರ್ಖಾನೆ

ದಿವಟೆ ಹಾಗೂ ಹೆಗಡೆ ಪಾಲುದಾರಿಕೆಯಲ್ಲಿ ಯಶೋಗಾಥೆ
Last Updated 19 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ನೌಕರಿಗೆ ರಾಜೀನಾಮೆ ಕೊಟ್ಟು ಕೂಡಿಟ್ಟಿದ್ದ ₹ 25 ಸಾವಿರದಲ್ಲಿ 1985ರಲ್ಲಿ ನಾಗರಾಜ ದಿವಟೆ ಹಾಗೂ ಶಿವರಾಮ ಹೆಗಡೆ ಪಾಲುದಾರಿಕೆಯಲ್ಲಿ ಆರಂಭಿಸಿದ ಸ್ವಂತ ಕಂಪನಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ವಾರ್ಷಿಕ ₹ 50 ಕೋಟಿ ವಹಿವಾಟು ನಡೆಸುತ್ತಿದ್ದು, 180ಕ್ಕೂ ಹೆಚ್ಚು ಕುಟುಂಬಗಳಿಗೆ ಆಶ್ರಯವಾಗಿದೆ.

ಡಿಪ್ಲೊಮಾ ಮೆಕ್ಯಾನಿಕಲ್‌ ಮಾಡಿರುವ ದಿವಟೆ ಹಾಗೂ ಡಿಪ್ಲೊಮಾ ಮ್ಯಾನೇಜ್‌ಮೆಂಟ್‌ ಮಾಡಿರುವ ಹೆಗಡೆ ಅವರು, 1980ರಲ್ಲಿ ಕಿರ್ಲೋಸ್ಕರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತರಾಗಿದ್ದ ಇವರು, 1985ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ಉಳಿತಾಯದ ಹಣದ ಜೊತೆಗೆ ಕೆಎಸ್‌ಎಫ್‌ಸಿಯಿಂದ ₹ 2.5 ಲಕ್ಷ ಸಾಲ ಪಡೆದುಕೊಂಡು ಬಾಡಿಗೆ ಮಳಿಗೆಯೊಂದರಲ್ಲಿ ಶ್ರೀದೇವಿ ಎಂಜಿನಿಯರಿಂಗ್‌ ವರ್ಕ್ಸ್‌ ಎಂಬ ಕಾರ್ಖಾನೆ ಆರಂಭಿಸಿದರು. ಆ ನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

ಪ್ರತಿ ಐದು ವರ್ಷಕ್ಕೊಮ್ಮೆ ಹೊಸ, ಹೊಸ ಉತ್ಪನ್ನಗಳನ್ನು ಸೇರಿಸುತ್ತಾ ಹೋಗಿದ್ದಾರೆ. 1990ರಲ್ಲಿ ಕ್ವಾಲಿಟಿ ಪ್ರೆಸ್ಸಿಂಗ್ಸ್‌, 1995ರಲ್ಲಿ ಅಡ್ವಾನ್ಸ್‌ ಡೈ ಕಾಸ್ಟಿಂಗ್‌ ಆರಂಭಿಸಿದ್ದರು. 2005ರಲ್ಲಿ ಬೆಂಗಳೂರಿನ ಪೀಣ್ಯದಲ್ಲಿಯೂ ಕೈಗಾರಿಕೆ ಆರಂಭಿಸಿದ್ದಾರೆ. ವಾಷಿಂಗ್‌ ಮೆಷಿನ್‌ನಲ್ಲಿ ಉಪಯೋಗಿಸುವ ಡೈ ಕಾಸ್ಟಿಂಗ್‌ ಅನ್ನು ಬೆಂಗಳೂರು ಬಿಟ್ಟರೆ ಹುಬ್ಬಳ್ಳಿಯಲ್ಲಿ ಮಾತ್ರ ಇಂತಹ ಕಂಪನಿ ಇದೆ.

2013 ರಿಂದ 15ರ ವರೆಗೆ ಡೈ ಕಾಸ್ಟ್ ಅನ್ನು ಒಂದು ಮೆಷಿನ್‌ನಲ್ಲಿ ಉತ್ಪಾದಿಸಿ 10 ಕೋಟಿ ವಹಿವಾಟು ನಡೆಸುತ್ತಿದ್ದರು. ಈಗ ಗೋಕುಲದಲ್ಲಿರುವ ಕಾರ್ಖಾನೆಯ ಜತೆಗೆ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 35 ಸಾವಿರ ಚದುರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಿಸಿ, 10 ಮೆಷಿನ್‌ಗಳನ್ನು ಅಳವಡಿಸಿ ₹ 50 ಕೋಟಿ ವಹಿವಾಟು ನಡೆಸಲಾಗುತ್ತಿದೆ. ಎಂಜಿನಿಯರಿಂಗ್‌ ಹಾಗೂ ಆಟೊಮೊಬೈಲ್‌ ವಸ್ತುಗಳ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ.

ಐಎಫ್‌ಬಿ ಕಂಪನಿಗೆ ಇವರು ಪ್ರಮುಖ ಡೈ ಕಾಸ್ಟ್‌ ಪೂರೈಕೆದಾರರಾಗಿದ್ದಾರೆ. ಕಿರ್ಲೋಸ್ಕರ್‌, ಕ್ರಾಂಪ್ಟನ್ ಗ್ರೀವ್ಸ್, ಔಮಾ, ರೇಕೆಮ್‌, ಎಬಿಎಸ್‌ ಇಂಡಿಯಾ ಸೇರಿದಂತೆ ಹಲವು ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕಂಪನಿ ಸಿಬ್ಬಂದಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಉದ್ಯೋಗಿಗಳ ಜನ್ಮ ದಿನ ಆಚರಿಸಲಾಗುತ್ತದೆ. ಜತೆಗೆ ವರ್ಷಕ್ಕೊಮ್ಮೆ ಪ್ರವಾಸ ಆಯೋಜಿಸಲಾಗುತ್ತದೆ.

ಇತ್ತೀಚೆಗೆ ಚೀನಾ ದೇಶಕ್ಕೆ ಭೇಟಿ ನೀಡಿದ್ದ ದಿವಟೆ ಅವರು, ಅತ್ಯುತ್ತಮ ಡೈ ಕಾಸ್ಟ್‌ ಕಂಪನಿಗಳನ್ನು ವೀಕ್ಷಿಸಿ ಬಂದಿದ್ದಾರೆ. ಅಂತಹದೇ ವರ್ಲ್ಡ್‌ ಕ್ಲಾಸ್ ಕಂಪನಿಯೊಂದನ್ನು ಗಾಮನಗಟ್ಟಿಯಲ್ಲಿ ಆರಂಭಿಸಿದ ಖುಷಿ ಅವರಿಗಿದೆ.

ಯಶಸ್ವಿ ಪಾಲುದಾರಿಕೆ

ದಿವಟೆ ಹಾಗೂ ಹೆಗಡೆ ಅವರು 33 ವರ್ಷಗಳಿಂದ ಪಾಲುದಾರಿಕೆಯಲ್ಲಿ ಕಂಪನಿ ನಡೆಸಿಕೊಂಡು ಬಂದಿದ್ದಾರೆ. ವಹಿವಾಟು ಇಷ್ಟು ಎತ್ತರಕ್ಕೆ ಬೆಳೆದಿದ್ದರೂ ಅವರ ನಡುವೆ ಹೊಂದಾಣಿಕೆಗೆ ಯಾವುದೇ ಕೊರತೆಯಾಗಿಲ್ಲ. ಇಬ್ಬರೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಒಬ್ಬರು ಕಂಪನಿಯ ನಿತ್ಯದ ವಹಿವಾಟು ನಿರ್ವಹಣೆ ಮಾಡಿದರೆ, ಇನ್ನೊಬ್ಬರು ಹೊರಗಡೆಯ ವ್ಯವಹಾರವನ್ನು ನೋಡಿಕೊಂಡು ಹೋಗುತ್ತಾರೆ. ‘ಆಡಳಿತ, ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಹೋಗುತ್ತಿರುವುದೇ ಪಾಲುದಾರಿಕೆಯ ಯಶಸ್ಸಿನ ಗುಟ್ಟು’ ಎನ್ನುತ್ತಾರೆ ದಿವಟೆ ಹಾಗೂ ಹೆಗಡೆ.

‘ಕಠಿಣ ಪರಿಶ್ರಮ, ಗುಣಮಟ್ಟ, ಸಮಯ ಪರಿಪಾಲನೆ, ಉತ್ಪಾದನಾ ವೆಚ್ಚ ಹೆಚ್ಚಾಗದಂತೆ ನೋಡಿಕೊಳ್ಳುವುದರಲ್ಲಿ ಉದ್ಯಮದ ಯಶಸ್ಸು ಅಡಗಿದೆ’ ಎನ್ನುತ್ತಾರೆ ಅವರು.

‘ಕೈಗಾರಿಕೆಯಲ್ಲಿ ಯಾಂತ್ರೀಕರಣ ಕ್ರಾಂತಿ ಮಾಡಿದ್ದೇವೆ. ಹಾಗಾಗಿ, ಗುಣಮಟ್ಟದಲ್ಲಿ ಸ್ಥಿರತೆ ಕಂಡುಕೊಳ್ಳಲು ಸಾಧ್ಯವಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. ಹೊಸ, ಹೊಸ ಸಂಶೋಧನೆಗಳನ್ನು ಅಳವಡಿಸಿಕೊಂಡು ಸಾಗುತ್ತಿದ್ದೇವೆ. ವಾರ್ಷಿಕ ಶೇ 25 ರಿಂದ 30 ರಂದು ಬೆಳವಣಿಗೆ ಆಗುತ್ತಿದೆ’ ಎಂದು ಅವರು ಹೇಳಿದರು.

‘ಮೂಲಸೌಲಭ್ಯ ಕೊರತೆ, ಗುಣಮಟ್ಟದ ವಿದ್ಯುತ್‌ ಸೌಲಭ್ಯ ಒದಗಿಸಬೇಕು. ಹೊಸ ಉದ್ಯಮ ಆರಂಭಿಸುವವರಿಗೆ ಕಡಿಮೆ ದರದಲ್ಲಿ ಭೂಮಿ ದೊರೆಯುವಂತಾಗಬೇಕು. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಲೆ ಕಡಿಮೆ ಇದೆ. ಇಲ್ಲಿಯೂ ಕಡಿಮೆ ಮಾಡಬೇಕು. ದೊಡ್ಡ, ದೊಡ್ಡ ಕೈಗಾರಿಕೆಗಳು ಬಂದರೆ, ಸಣ್ಣ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿ, ಉದ್ಯೋಗಗಳು ಸೃಷ್ಟಿಯಾಗುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT