ಮಂಗಳವಾರ, ಡಿಸೆಂಬರ್ 6, 2022
24 °C

ಡಿಸೆಂಬರ್ 2023ರ ವೇಳೆಗೆ ದೇಶದ ಎಲ್ಲ ಭಾಗಗಳಿಗೆ 5ಜಿ ಸೇವೆ: ಮುಕೇಶ್ ಅಂಬಾನಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಡಿಸೆಂಬರ್ 2023ರ ವೇಳೆಗೆ ದೇಶದ ಎಲ್ಲ ಭಾಗಗಳಿಗೂ ಅಲ್ಟ್ರಾ ಹೈಸ್ಪೀಡ್ ಇಂಟರ್‌ನೆಟ್‌ನ 5ಜಿ ಸೇವೆ ಒದಗಿಸುವುದಾಗಿ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೊ ಮುಖ್ಯಸ್ಥ , ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದಾರೆ.

2016ರಲ್ಲಿ ಟೆಲಿಕಾಂ ವಲಯಕ್ಕೆ ಪ್ರವೇಶಿಸಿದ ಜಿಯೊ, ಉಚಿತ ಧ್ವನಿ ಕರೆ ಮತ್ತು ಕಡಿಮೆ ಬೆಲೆಯಲ್ಲಿ ಡೇಟಾ ಒದಗಿಸುವ ಮೂಲಕ ಹೊಸ ಸ್ಪರ್ಧೆ ಆರಂಭಿಸಿತ್ತು. ಇದೀಗ, ಕೈಗೆಟುಕುವ ಬೆಲೆಯಲ್ಲಿ 5ಜಿ ಸೇವೆ ನೀಡುವುದಾಗಿ ಅಂಬಾನಿ ಹೇಳಿದ್ದಾರೆ.

‘ದೇಶದ ಎಲ್ಲ ನಗರಗಳು, ಪಟ್ಟಣಗಳು, ತಾಲ್ಲೂಕು ಕೇಂದ್ರಗಳು, ತಹಸೀಲ್‌ಗಳಿಗೆ 5ಜಿ ಸೇವೆ ಒದಗಿಸುವ ತಮ್ಮ ಬದ್ಧತೆಯನ್ನು ಪುನರುಚ್ಛರಿಸುತ್ತೇನೆ’ಎಂದು ಭಾರತ ಮೊಬೈಲ್ ಕಾಂಗ್ರೆಸ್(ಐಎಂಸಿ) ಸಮ್ಮೇಳನದಲ್ಲಿ ಮುಕೇಶ್ ಹೇಳಿದ್ದಾರೆ.

ದೀಪಾವಳಿ ವೇಳೆಗೆ, ದೇಶದ 4 ಮೆಟ್ರೊ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಗಳಲ್ಲಿ 5ಜಿ ಸೇವೆ ಆರಂಭಿಸುವುದಾಗಿ ಕಳೆದ ಆಗಸ್ಟ್‌ನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೇಡ್‌ನ ಷೇರುದಾರರ ಸಭೆಯಲ್ಲಿ ಭರವಸೆ ನೀಡಿದ್ದರು.

ಜಿಯೋನ 5ಜಿ ಸೇವೆಗೆ ಸಂಬಂಧಿಸಿದ ಬಹುತೇಕ ಉಪಕರಣಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದ್ದರಿಂದ ಅವುಗಳು 'ಆತ್ಮನಿರ್ಭರ್ ಭಾರತ್' ಸ್ಟ್ಯಾಂಪ್ ಅನ್ನು ಹೊಂದಿವೆ ಎಂದು ಅವರು ಹೇಳಿದರು,

5ಜಿ ಸೇವೆಯು ಭಾರತೀಯರಿಗೆ ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿಯ ಸೇವೆಯನ್ನು ಒದಗಿಸುತ್ತದೆ ಎಂದರು.

ಅಸ್ತಿತ್ವದಲ್ಲಿರುವ ಆಸ್ಪತ್ರೆಗಳನ್ನು ಹೆಚ್ಚುವರಿ ಹೂಡಿಕೆಯಿಲ್ಲದೆ ಸ್ಮಾರ್ಟ್ ಆಸ್ಪತ್ರೆಗಳಾಗಿ ಪರಿವರ್ತಿಸುವ ಮೂಲಕ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸಬಹುದು.

ದೇಶದ ಯಾವುದೇ ಭಾಗಕ್ಕೆ ಅತ್ಯುತ್ತಮ ವೈದ್ಯರ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಮಾಡುತ್ತದೆ ಮತ್ತು ರೋಗನಿರ್ಣಯದ ವೇಗ ಹಾಗೂ ನಿಖರತೆಯನ್ನು ಸುಧಾರಿಸುತ್ತದೆ ಎಂದು ಹೇಳಿದರು.

ಕೃಷಿ, ಸೇವೆಗಳು, ವ್ಯಾಪಾರ, ಉದ್ಯಮ, ಅನೌಪಚಾರಿಕ ವಲಯ, ಸಾರಿಗೆ ಮತ್ತು ಇಂಧನ ಮೂಲಸೌಕರ್ಯಗಳ ಡಿಜಿಟಲೀಕರಣ ಮತ್ತು ಡೇಟಾ ನಿರ್ವಹಣೆಯನ್ನು ವೇಗಗೊಳಿಸುವ ಮೂಲಕ 5ಜಿ, ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಅಂತರವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ.. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು