ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಲೋಕದಲ್ಲೂ ಆ್ಯಪ್‌ಗಳು

Last Updated 31 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ವೃತ್ತಿಜೀವನದಲ್ಲಿ ಬಿಡುವನ್ನು ಕಂಡುಕೊಳ್ಳಲು ಹೆಣಗಾಡುವ ವೈದ್ಯರಿಗೆ ತಮ್ಮ ಕ್ಷೇತ್ರದ ಬೆಳವಣಿಗೆಗಳನ್ನು, ರೋಗಗಳ ನಿರ್ವಹಣೆಯ ಆಧುನಿಕ ಮಾರ್ಗಸೂಚಿಗಳನ್ನು ನಿಖರವಾಗಿ, ಸ್ಪಷ್ಟವಾಗಿ, ಚುಟುಕಾಗಿ ಹೇಳುವಂತಹ ಸ್ರೋತಗಳು ದೊರೆತರೆ, ಅದಕ್ಕಿಂತ ಒಳಿತು ಬೇರೊಂದಿಲ್ಲ.

ನಮ್ಮ ಜೀವನಕಾಲದ ಇದುವರೆಗಿನ ಅತ್ಯಂತ ಉಪಯುಕ್ತ ಮತ್ತು ರೋಚಕ ಆವಿಷ್ಕಾರ ಎಂದರೆ ಸ್ಮಾರ್ಟ್-ಫೋನು. 'ಜಗತ್ತು ನಮ್ಮ ಅಂಗೈನಲ್ಲಿದೆ' ಎಂಬ ಭಾವನೆ ಮೂಡಿಸುವ ಸ್ಮಾರ್ಟ್-ಫೋನುಗಳು ತಮ್ಮ ವಿಧವಿಧವಾದ ‘ಆ್ಯಪ್‌’ (app) ಎಂಬ ಕಿರುತಂತ್ರಾಂಶಗಳ ಮೂಲಕ ನಮ್ಮ ಜೀವನಕ್ರಮವನ್ನೇ ಬದಲಿಸಿವೆ. ಗ್ರಾಹಕರ ಬಳಕೆಯ ಲೆಕ್ಕಾಚಾರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಆ್ಯಪ್‌ಗಳು ಮನೋರಂಜನೆಯ ಆ್ಯಪ್‌ಗಳ ನಂತರದ ಸ್ಥಾನದಲ್ಲಿವೆ. ಆರೋಗ್ಯಾಸಕ್ತರು ವ್ಯಾಯಾಮಕ್ಕೆ ಸಂಬಂಧಿಸಿದ, ಸೇವಿಸುವ ಕ್ಯಾಲರಿಗಳಿಗೆ ಲೆಕ್ಕ ಇಡುವಂತಹ ಆ್ಯಪ್‌ಗಳನ್ನು ಬಳಸುತ್ತಾರೆ. ರೋಗಿಗಳು ತಾವು ಸೇವಿಸಬೇಕಾದ ಔಷಧಗಳ ಅನುಸರಣೆಗೆ, ವೈದ್ಯರನ್ನು ಕಾಣಬೇಕಾದ ಅಗತ್ಯಗಳಿಗೆ ಆ್ಯಪ್‌ಗಳ ಮೊರೆ ಹೋಗುತ್ತಿದ್ದಾರೆ. ವೈದ್ಯರ ಜೊತೆಗೆ ವಿಡಿಯೊ ಸಮಾಲೋಚನೆ ಮಾಡಿಸುವ ಆ್ಯಪ್‌ಗಳುಜನಪ್ರಿಯವಾಗುತ್ತಿವೆ. ಖಾಸಗಿ ವಲಯದ ಬೃಹತ್ ಆಸ್ಪತ್ರೆಗಳು ತಮ್ಮ ರೋಗಿಗಳಿಗಾಗಿ ತಮ್ಮದೇ ಆದ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿವೆ. ಇವುಗಳ ಮೂಲಕ ರೋಗಿಗಳು ಖಾಸಗಿಯಾಗಿ ವೈದ್ಯರ ಸಲಹೆ ಪಡೆಯುವುದು, ತಮ್ಮ ಪರೀಕ್ಷೆಗಳ ಫಲಿತಾಂಶವನ್ನು ಹಂಚಿಕೊಳ್ಳುವುದು ಮುಂತಾದ ಸೌಲಭ್ಯಗಳಿವೆ. ಮಕ್ಕಳ ಆರೋಗ್ಯ, ಲಸಿಕೆಗಳು, ವೃದ್ಧರ ಆರೈಕೆ, ಸಾಕುಪ್ರಾಣಿಗಳ ಪೋಷಣೆ – ಹೀಗೆ ಪ್ರತಿಯೊಂದು ಆರೋಗ್ಯದ ಅಗತ್ಯಗಳನ್ನೂ ಈ ಕಿರುತಂತ್ರಾಂಶಗಳು ಪೋಷಿಸುತ್ತಿವೆ.

ಎಲ್ಲರಿಗೂ ಅವಶ್ಯಕ ಎನಿಸಿರುವ ಆ್ಯಪ್‌ಗಳ ಜೊತೆಗೆ ಇನ್ನೂ ಕೆಲವು ವಿಶೇಷ ಆ್ಯಪ್‌ಗಳು ವೈದ್ಯರಿಗೂ ಬೇಕಾಗುತ್ತವೆ. ಇವುಗಳಲ್ಲಿ ಬಹುತೇಕವು ಹಣ ನೀಡಿ ಪಡೆಯುವಂತಹವು. ಇವನ್ನು ಕಾಲಕಾಲಕ್ಕೆ ನವೀಕರಿಸಬೇಕು. ವೈದ್ಯಕೀಯದಂತಹ ಕಠಿಣ ವೃತ್ತಿಯಲ್ಲಿ ಈ ರೀತಿಯ ಆ್ಯಪ್‌ಗಳು ಬಹಳ ಸಹಕಾರಿ. ವೈದ್ಯರು ಬಳಸುವ ಕೆಲವು ವಿಶಿಷ್ಟ ಆ್ಯಪ್‌ಗಳ ಪರಿಚಯ ಇಲ್ಲಿದೆ:

ಕುಟುಂಬವೈದ್ಯರಾಗಲೀ ಅಥವಾ ತಜ್ಞವೈದ್ಯರಾಗಲೀ, ತಂತಮ್ಮ ವಿಷಯಜ್ಞಾನವನ್ನು ಕಾಲಕಾಲಕ್ಕೆ ಹರಿತಗೊಳಿಸುತ್ತಲೇ ಇರಬೇಕು. ಜಗತ್ತಿನಲ್ಲಿ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳ ವಿವರಗಳನ್ನು ಒಂದೇ ಸಮನೆ ಗಮನಿಸುವುದು ಯಾರೊಬ್ಬರಿಗೂ ಆಗದ ಕೆಲಸ. ಅದರಲ್ಲೂ ತಮ್ಮ ವೃತ್ತಿಜೀವನದಲ್ಲಿ ಬಿಡುವನ್ನು ಕಂಡುಕೊಳ್ಳಲು ಹೆಣಗಾಡುವ ವೈದ್ಯರಿಗೆ ತಮ್ಮ ಕ್ಷೇತ್ರದ ಬೆಳವಣಿಗೆಗಳನ್ನು, ರೋಗಗಳ ನಿರ್ವಹಣೆಯ ಆಧುನಿಕ ಮಾರ್ಗಸೂಚಿಗಳನ್ನು ನಿಖರವಾಗಿ, ಸ್ಪಷ್ಟವಾಗಿ, ಚುಟುಕಾಗಿ ಹೇಳುವಂತಹ ಸ್ರೋತಗಳು ದೊರೆತರೆ, ಅದಕ್ಕಿಂತ ಒಳಿತು ಬೇರೊಂದಿಲ್ಲ. ಇಂತಹ ಮಾಹಿತಿಗಳನ್ನು ಒದಗಿಸುವ ಮೆಡ್‌ಸ್ಕೇಪ್, ಅಪ್-ಟು-ಡೇಟ್, ಸ್ಕೈಸ್ಕೇಪ್, ಒಂನಿಯೊ, ಡೈನಮೆಡ್ ಮುಂತಾದ ಆ್ಯಪ್‌ಗಳ ಬಳಕೆ ವೈದ್ಯಕೀಯ ರಂಗದಲ್ಲಿ ದಿನದಿನಕ್ಕೂ ಜನಪ್ರಿಯವಾಗುತ್ತಿವೆ.

ವೈದ್ಯರು ಮತ್ತು ರೋಗಿಗಳ ನಡುವಿನ ಅತ್ಯಂತ ಮುಖ್ಯ ಸಂವಹನ ಔಷಧಗಳು. ವೈದ್ಯರ ಕೆಟ್ಟ ಬರವಣಿಗೆ ಟೀಕೆಗೆ ಒಳಗಾಗುವುದು ‘ಅವರು ಬರೆದುಕೊಡುವ ಔಷಧಗಳನ್ನು ಓದಲಾಗದು’ ಎಂಬ ಕಾರಣಕ್ಕಾಗಿಯೇ. ಈ ಗುರುತರ ಸಮಸ್ಯೆಯ ಪರಿಹಾರಕ್ಕಾಗಿ ವೈದ್ಯಕೀಯ ಮಂಡಲಿಗಳು ವೈದ್ಯರು ಬರೆಯುವ ಔಷಧಗಳ ಹೆಸರನ್ನು CAPITAL LETTERS ಬಳಸಿ ಬರೆಯಬೇಕೆಂದು ಕಡ್ಡಾಯ ಮಾಡಿದೆ. ಔಷಧಗಳ ಹೆಸರು, ಪರಿಮಾಣ, ತೆಗೆದುಕೊಳ್ಳುವ ಸಮಯ, ಅಡ್ಡಪರಿಣಾಮಗಳು, ಇತರ ಔಷಧಗಳ ಜೊತೆ ಅವು ಮಾಡಬಹುದಾದ ಒಟ್ಟಾರೆ ಪ್ರತಿಕೂಲ ಪ್ರತಿಕ್ರಿಯೆಗಳು – ಇವೆಲ್ಲವನ್ನೂ ವೈದ್ಯರು ಸಮಂಜಸವಾಗಿ ವಿವೇಚಿಸಿ, ವಿಶ್ಲೇಷಿಸಿ, ನಿರ್ಧರಿಸಿ, ರೋಗಿಗಳಿಗೆ ವಿವರಿಸಬೇಕು. ವೈದ್ಯಕೀಯ ಸಮಾಲೋಚನೆಯಲ್ಲಿ ಇದು ಅತ್ಯಂತ ಪ್ರಮುಖ ಘಟ್ಟ. ತಪ್ಪುಗಳಾಗುವ ಸಾಧ್ಯತೆ, ತಪ್ಪುಗಳಿಂದಾಗುವ ದುಷ್ಪರಿಣಾಮಗಳೂ ಈ ಹಂತದಲ್ಲೇ ಅಧಿಕ. ಹೀಗಾಗಿ, ಔಷಧಗಳನ್ನು ಸೂಚಿಸುವ ಪ್ರಕ್ರಿಯೆಯನ್ನು ಸರಾಗ ಮಾಡುವ ಆ್ಯಪ್‌ಗಳಿಗೆ ಬಹಳ ಬೇಡಿಕೆಯಿದೆ. ಎಪೊಕ್ರೇಟಸ್, ಲೆಕ್ಸಿಕಂಪ್, ಐಪ್ರೆಸ್ಕ್ರೈಬ್ ಮುಂತಾದ ಆ್ಯಪ್‌ಗಳು ಔಷಧವಿವರಗಳ ಸಂವಹನವನ್ನು ಅತ್ಯಂತ ವಸ್ತುನಿಷ್ಠಗೊಳಿಸಿವೆ.

ವೈದ್ಯಕೀಯ ಪಠ್ಯಪುಸ್ತಕಗಳು ಕುಟುಂಬವೈದ್ಯರಿಗೂ, ತಜ್ಞವೈದ್ಯರಿಗೂ ಬೇಕಾದ ಸಂಗಾತಿ. ಕೆಲವು ಅಪರೂಪದ ಕಾಯಿಲೆಗಳನ್ನು ಪತ್ತೆಹಚ್ಚಲು ಆಗಾಗ ಪಠ್ಯಗಳನ್ನು ನೋಡುತ್ತಲೇ ಇರಬೇಕಾಗುತ್ತದೆ. ಎಷ್ಟೋ ಕಾಯಿಲೆಗಳನ್ನು ನುರಿತ ವೈದ್ಯರೂ ಮೊದಲ ಬಾರಿಗೆ ನೋಡುತ್ತಾರೆ. ಪಠ್ಯಗಳಲ್ಲಿ ಅದನ್ನು ಓದಿದ ಅನುಭವ ಇದ್ದರೂ, ಅಪರೂಪದ ಕಾಯಿಲೆಗಳನ್ನು ಯಥಾವತ್ತಾಗಿ ಪತ್ತೆ ಮಾಡುವುದು ಕಷ್ಟದ ವಿಷಯ. ಈ ನಿಟ್ಟಿನಲ್ಲಿ ಆ್ಯಪ್‌ಗಳು ವೈದ್ಯರ ನೆರವಿಗೆ ಬಂದಿವೆ. ರೋಗಿಯ ಬಾಹ್ಯ-ರೋಗಚಿಹ್ನೆಯ ಚಿತ್ರವನ್ನು ಸ್ಮಾರ್ಟ್-ಫೋನ್ ಬಳಸಿ ತೆಗೆದು, ಅದನ್ನು ವಿಶುಯಲ್-ಡಿಎಕ್ಸ್ ನಂತಹ ಆ್ಯಪ್’ಗಳಲ್ಲಿ ಏರಿಸಿದರೆ, ಅದು ತನ್ನಲ್ಲಿರುವ ಲಕ್ಷಾಂತರ ಚಿತ್ರಗಳ ಜೊತೆಯಲ್ಲಿ ಈ ಚಿತ್ರವನ್ನು ಹೋಲಿಸಿ, ಅದಕ್ಕೆ ಹೊಂದುವ ಕಾಯಿಲೆಗಳನ್ನು ಸೂಚಿಸುತ್ತದೆ. ಅಲ್ಲದೇ, ಕಾಯಿಲೆ ಸದ್ಯಕ್ಕೆ ಯಾವ ಹಂತದಲ್ಲಿದೆ, ಇದು ಮುಂದೆ ಬೆಳೆದರೆ ಯಾವ ರೀತಿ ಇರುತ್ತದೆ ಎಂಬ ವಿವರಗಳನ್ನೂ ನೀಡುತ್ತದೆ. ಬಹುತೇಕ ಬಾಹ್ಯ-ರೋಗಲಕ್ಷಣಗಳ ಆಧಾರದಲ್ಲಿ ಚಿಕಿತ್ಸೆ ನೀಡುವ ಚರ್ಮರೋಗದಂತಹ ವಿಷಯದಲ್ಲಿ ಈ ರೀತಿಯ ಆ್ಯಪ್‌ಗಳು ವೈದ್ಯರ ಕಲಿಕೆಗೆ, ಚಿಕಿತ್ಸೆಯ ನಿರ್ಧಾರಕ್ಕೆ, ರೋಗಗಳ ನಿರ್ವಹಣೆಗೆ ಬಹಳ ಪ್ರಯೋಜನಕಾರಿ.

ಇದು ಕಾನೂನು ಕಟ್ಟಳೆಯ ಯುಗ. ವೈದ್ಯರ ಮತ್ತು ರೋಗಿಗಳ ಸಂಬಂಧದ ನಡುವೆ ಈಗ ಕಾನೂನು ಬಂದಿದೆ. ಕಾನೂನಿಗೆ ಒಪ್ಪಿತವಾಗುವಂತೆ ರೋಗಿಯ ಮತ್ತು ರೋಗದ ಎಲ್ಲಾ ವಿವರಗಳನ್ನೂ ಸ್ಪಷ್ಟವಾಗಿ ದಾಖಲಿಸುವುದು ಪ್ರತಿಯೊಬ್ಬ ವೈದ್ಯರ ಕರ್ತವ್ಯ. ಮೊದಲು ಬರವಣಿಗೆಯ ಮೂಲಕ ಆಗುತ್ತಿದ್ದ ಈ ಪ್ರಕ್ರಿಯೆ. ಅನಂತರ ವೈದ್ಯರು ಹೇಳುವುದನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ನಂತರ ಕಂಪ್ಯೂಟರ್‌ನಲ್ಲಿ ದಾಖಲಿಸುವ ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್ ರೂಪಕ್ಕೆ ಬಂದಿತ್ತು. ಈಗ ವಿದ್ಯುನ್ಮಾನ ವೈದ್ಯಕೀಯ ದಾಖಲೆಗಳನ್ನು ಸರಾಗವಾಗಿ ನಿರ್ವಹಿಸುವ ನೂರಾರು ಆ್ಯಪ್‌ಗಳು ಲಭ್ಯವಿವೆ. ಬಹುತೇಕ ಆಸ್ಪತ್ರೆಗಳು ಇಂತಹ ಯಾವುದೋ ಒಂದು ಆ್ಯಪ್‌ ಅನ್ನು ತಮ್ಮ ಎಲ್ಲಾ ವೈದ್ಯಕೀಯ ದಾಖಲೆಗಳ ನಿರ್ವಹಣೆಗೆ ಬಳಸುತ್ತವೆ.

ಇದು ವೈದ್ಯರು ಬಳಸುವ ಆ್ಯಪ್‌ಗಳು ಆರಂಭದ ಕಾಲ! ಭವಿಷ್ಯದಲ್ಲಿ ರೋಗಗಳ, ರೋಗಿಗಳ ನಿರ್ವಹಣೆಯನ್ನು ಇನ್ನೂ ಉತ್ತಮವಾಗಿ ಮಾಡಲು ತಂತ್ರಜ್ಞಾನ ಮತ್ತಷ್ಟು ಸಹಕಾರ ನೀಡುತ್ತದೆಂಬುದು ಖಚಿತ.

ವೈದ್ಯಕೀಯ ಪಠ್ಯಪುಸ್ತಕಗಳು ಕುಟುಂಬವೈದ್ಯರಿಗೂ, ತಜ್ಞವೈದ್ಯರಿಗೂ ಬೇಕಾದ ಸಂಗಾತಿ. ಕೆಲವು ಅಪರೂಪದ ಕಾಯಿಲೆಗಳನ್ನು ಪತ್ತೆಹಚ್ಚಲು ಆಗಾಗ ಪಠ್ಯಗಳನ್ನು ನೋಡುತ್ತಲೇ ಇರಬೇಕಾಗುತ್ತದೆ. ಎಷ್ಟೋ ಕಾಯಿಲೆಗಳನ್ನು ನುರಿತ ವೈದ್ಯರೂ ಮೊದಲ ಬಾರಿಗೆ ನೋಡುತ್ತಾರೆ. ಪಠ್ಯಗಳಲ್ಲಿ ಅದನ್ನು ಓದಿದ ಅನುಭವ ಇದ್ದರೂ, ಅಪರೂಪದ ಕಾಯಿಲೆಗಳನ್ನು ಯಥಾವತ್ತಾಗಿ ಪತ್ತೆ ಮಾಡುವುದು ಕಷ್ಟದ ವಿಷಯ. ಈ ನಿಟ್ಟಿನಲ್ಲಿ ಆ್ಯಪ್‌ಗಳು ವೈದ್ಯರ ನೆರವಿಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT