ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ

Last Updated 9 ನವೆಂಬರ್ 2022, 8:20 IST
ಅಕ್ಷರ ಗಾತ್ರ

ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್ - ಎಐ) ಮತ್ತು ಯಂತ್ರ ಕಲಿಕೆ (ಮೆಷಿನ್ ಲರ್ನಿಂಗ್) ಸ್ಮಾರ್ಟ್ ತಂತ್ರಜ್ಞಾನದ ಭಾಗಗಳಾಗಿದ್ದು, ಅವುಗಳು ಪ್ರೋಗ್ರಾಂ ಮಾಡಬಹುದಾದ ಬುದ್ಧಿಮತ್ತೆಯನ್ನು ಕೆಲಸ ಕಾರ್ಯಗಳಲ್ಲಿ ಅಳವಡಿಸಿ, ಅವುಗಳು ಇನ್ನಷ್ಟು ಉತ್ತಮವಾಗಿ, ದಕ್ಷತೆಯಿಂದ ನಡೆಯುವಂತೆ ಮಾಡುತ್ತವೆ. ಆ ಮೂಲಕ ಮಾನವರಿಂದ ನಡೆಯುತ್ತಿದ್ದ ಹಲವು ಕಾರ್ಯಗಳನ್ನು ಯಾಂತ್ರಿಕವಾಗಿ, ಇನ್ನಷ್ಟು ವೇಗವಾಗಿ ಮತ್ತು ದಕ್ಷವಾಗಿ ನಡೆಯುವಂತೆ ಮಾಡುತ್ತದೆ.

ಇಂಟಲಿಜೆಂಟ್ ಏರೋಸ್ಪೇಸ್: ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ

ಇಂಟಲಿಜೆಂಟ್ ಏರೋಸ್ಪೇಸ್ ಎನ್ನುವುದು ರಕ್ಷಣೆ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಅಪಾರವಾಗಿ ಬೆಳವಣಿಗೆ ಹೊಂದುತ್ತಿರುವ ವಿಚಾರವಾಗಿದೆ. ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಗಳು ಹೊಸದಾದ ಮತ್ತು ಸ್ಮಾರ್ಟ್ ತಂತ್ರಜ್ಞಾನ ಅಳವಡಿಸಿಕೊಂಡು, ಹೆಚ್ಚಿನ ಮಾಹಿತಿ ಗಳಿಸಿ, ಅವುಗಳನ್ನು ವಿವಿಧ ರೀತಿಗಳಲ್ಲಿ ದೈನಂದಿನ ಕಾರ್ಯಗಳಲ್ಲಿ ಬಳಸಿಕೊಳ್ಳುತ್ತವೆ. ಆ ಮೂಲಕ ಕಾರ್ಯಾಚರಣೆಯಾದ್ಯಂತ ರಕ್ಷಣೆ ಮತ್ತು ಗೋಚರತೆಗಳನ್ನು ಹೆಚ್ಚಿಸಲು ಸಹಕರಿಸುತ್ತವೆ. ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರಗಳಲ್ಲಿ ಅತ್ಯಂತ ಪ್ರಮುಖವಾಗಿ ಎಐ ಬಳಕೆಯಾಗುವ ವಿಭಾಗಗಳು ಇಂತಿವೆ.

ನಿರ್ವಹಣೆ
ಹೆಚ್ಚು ಆಳವಾದ ಮಾಹಿತಿಯ ಟ್ರ್ಯಾಕಿಂಗ್‌ಗೆ ಅನುಮತಿ ನೀಡಿದಾಗ, ಕೃತಕ ಬುದ್ಧಿಮತ್ತೆ ಉಪಕರಣಗಳ ನಿರ್ವಹಣಾ ಕಾರ್ಯದ ವೇಳಾಪಟ್ಟಿ ಸಿದ್ಧಗೊಳಿಸಿ, ಅದನ್ನು ನಿಯಮಿತವಾಗಿ ಅನುಸರಿಸಿ, ರಿಪೇರಿ ಮಾಡಿಸಿ, ಅಗತ್ಯವಿರುವ ಬಿಡಿಭಾಗಗಳ ಖರೀದಿಗೆ ಆದೇಶವನ್ನೂ ನೀಡುತ್ತವೆ. ಕೃತಕ ಬುದ್ಧಿಮತ್ತೆ ಕೇವಲ ಹಿಂದಿನ ಮಾಹಿತಿಗಳ ಅನುಸಾರವಾಗಿ ಬಿಡಿಭಾಗಗಳ ಉಪಯೋಗ, ಸ್ಥಗಿತಗೊಳ್ಳುವಿಕೆ, ಹಾಗೂ ಸಹಜವಾದ ಸವೆಯುವಿಕೆಗಳನ್ನು ಮಾತ್ರ ಆಧರಿಸದೆ, ಯಾವ ಸಂದರ್ಭದಲ್ಲಿ ಯಾವ ಬಿಡಿಭಾಗ ಬದಲಾಯಿಸಬೇಕು ಎಂಬುದನ್ನೂ ಸ್ಪಷ್ಟವಾಗಿ ಅಂದಾಜಿಸಿ, ಅವುಗಳ ಖರೀದಿಗೆ ಯಾವಾಗ ಆದೇಶ ನೀಡಬೇಕು ಎನ್ನುವುದನ್ನೂ ನಿರ್ಧರಿಸುತ್ತವೆ. ಇದರ ಪರಿಣಾಮವಾಗಿ ಯಂತ್ರಗಳು ಸ್ಥಗಿತಗೊಳ್ಳುವುದು ತಪ್ಪಿ, ಆ ಮೂಲಕ ನಿರ್ವಹಣೆ, ದುರಸ್ತಿ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯುತ್ತವೆ.

ತರಬೇತಿ
ಕೃತಕ ಬುದ್ಧಿಮತ್ತೆಯನ್ನು ಇಂಜಿನಿಯರ್‌ ಮತ್ತು ಪೈಲಟ್‌ ತರಬೇತಿಯಲ್ಲೂ ಬಳಸಿಕೊಳ್ಳಲಾಗುತ್ತದೆ. ಅವುಗಳು ಕೆಲಸದ ಸಂದರ್ಭದಲ್ಲಿ ಎದುರಾಗುವ ಪರಿಸರ ಮತ್ತು ಸನ್ನಿವೇಶಗಳನ್ನು ಮರು ಸೃಷ್ಟಿಸಿ, ಡಿಜಿಟಲ್ ರೂಪದಲ್ಲಿ ಅದು ನೈಜ‌ ಅನುಭವ ಎನ್ನುವಷ್ಟು ಸಹಜವಾಗಿ ಎದುರಾಗುವಂತೆ ಮಾಡುತ್ತವೆ. ಇವುಗಳು ವಿಆರ್, ಎಆರ್ ಹಾಗೂ ಇತರ ತಂತ್ರಜ್ಞಾನ ಬಳಸಿಕೊಂಡು ತರಬೇತಿ ಒದಗಿಸಲು ಮತ್ತು ಮಾಹಿತಿ ಪಡೆದುಕೊಳ್ಳಲು ಸಹಕರಿಸುತ್ತವೆ. ಆ ಮೂಲಕ ನೈಜ ಸನ್ನಿವೇಶಗಳಲ್ಲಿ ತಪ್ಪುಗಳು ನಡೆಯದಂತೆ ನೋಡಿಕೊಳ್ಳುತ್ತವೆ.

ಇಂಧನ ದಕ್ಷತೆ
ಏರೋಸ್ಪೇಸ್ ಕಂಪನಿಗಳು ಕೃತಕ ಬುದ್ಧಿಮತ್ತೆ ಬಳಸಿಕೊಂಡು ತಮ್ಮ ಇಂಧನ ದಕ್ಷತೆಯನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸುತ್ತವೆ. ಅವುಗಳು ಎಐ ದಾಖಲಿಸಿರುವ ಮಾಹಿತಿಯನ್ನು ಉಪಯೋಗಿಸಿಕೊಂಡು, ಏರ್‌ಕ್ರಾಫ್ಟ್, ಪೈಲಟ್‌, ಹವಾಮಾನ, ಸ್ಥಳಗಳ ಆಧಾರದಲ್ಲಿ ಹಾರಾಟದ ಅತ್ಯಂತ ಒತ್ತಡದ ಹಂತಗಳಲ್ಲಿ ಇಂಧನ ದಕ್ಷತೆ ಹೆಚ್ಚಿಸಲು ಕಾರ್ಯಾಚರಿಸುತ್ತವೆ.

ಫ್ಯಾಕ್ಟರಿ ಆಟೋಮೇಷನ್ ಹಾಗೂ ಕಾರ್ಯಾಚರಣೆಯ ದಕ್ಷತೆ
ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನಾ ಉದ್ಯಮದಲ್ಲಿ ಅಸಮರ್ಥ ಉತ್ಪಾದನೆ ಮತ್ತು ಪೂರೈಕೆ ಸರಪಳಿ ಹಲವು ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇದರಿಂದಾಗಿ ಕಾರ್ಯದಲ್ಲಿ ವಿಳಂಬ, ಹೆಚ್ಚಿನ ಖರ್ಚು, ಹಾಗೂ ಉತ್ಪಾದಕತೆಯಲ್ಲಿ ಕೊರತೆ ಉಂಟಾಗುತ್ತದೆ. ಈ ಮೂಲಕ ಗ್ರಾಹಕ ಸೇವೆಗೂ ತೊಡಕುಂಟಾಗುತ್ತದೆ. ಯಾಂತ್ರೀಕೃತ ವ್ಯವಸ್ಥೆ ಜಾರಿಯಾಗದಿದ್ದರೆ, ಬಿಡಿಭಾಗಗಳಿಗೆ ಇಷ್ಟೊಂದು ಹೆಚ್ಚಿನ ಬೇಡಿಕೆ ಇರುವ ಉದ್ಯಮದಲ್ಲಿ ಅಗತ್ಯ ಉತ್ಪನ್ನಗಳನ್ನು ಸೂಕ್ತ ಸಮಯದಲ್ಲಿ ಪಡೆಯುವುದು ಒಂದು ಸಮಸ್ಯೆಯೇ ಆಗಿಬಿಡುತ್ತದೆ. ಆದರೆ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯನ್ನು ಜಾರಿಗೆ ತರುವುದರಿಂದ ಖರೀದಿ ಆದೇಶ ಮತ್ತು ಕಾರ್ಯಾಚರಣೆಯಲ್ಲಿ ಒಂದಷ್ಟು ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ.

ಉತ್ತಮ ಗ್ರಾಹಕ ಅನುಭವ
ರಕ್ಷಣಾ ಮತ್ತು ಏರೋಸ್ಪೇಸ್ ಉದ್ಯಮದಲ್ಲಿ ಗ್ರಾಹಕ ಸೇವೆಯನ್ನು ಒಂದಷ್ಟು ಕಡೆಗಣಿಸಲಾಗಿದೆ. ಆದರೆ ಕಂಪನಿಗಳಿಗೆ ಅವುಗಳ ಗ್ರಾಹಕರ ಸಂತೃಪ್ತಿ ಅತ್ಯಂತ ಮುಖ್ಯವಾಗಿರುತ್ತದೆ. ಆದ್ದರಿಂದ ಗ್ರಾಹಕರೊಡನೆ ಮಾತನಾಡಲು, ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ಸೂಕ್ತ ವ್ಯಕ್ತಿಗಳನ್ನು ಸಂಪರ್ಕಿಸಿ ಸರಿಯಾದ ಪರಿಹಾರ ಉಪಯೋಗಗಳನ್ನು ಪಡೆಯಲು, ಮಾನವರ ಹಸ್ತಕ್ಷೇಪವೇ ಇಲ್ಲದೆ ಕೃತಕ ಬುದ್ಧಿಮತ್ತೆ ಉತ್ತಮ ಪರಿಹಾರೋಪಾಯವಾಗಿದೆ. ಚಾಟ್ ಬಾಟ್ಸ್, ಸ್ವಯಂಚಾಲಿತ ಇಮೇಲ್, ಸ್ವಯಂಚಾಲಿತ ಟಿಕೆಟ್, ಹಾಗೂ ಫೋನ್ ಟ್ರೀಗಳ ಮೂಲಕ ಗ್ರಾಹಕರಿಗೆ 24 ಗಂಟೆಗಳ ಸತತ ಸೇವೆ ಒದಗಿಸಬಹುದು.

ಆದರೆ ಯಾಂತ್ರೀಕರಣ ಹಾಗೂ ಕೃತಕ ಬುದ್ಧಿಮತ್ತೆ ಮಾತ್ರವೇ ಯಾವಾಗಲೂ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಿಲ್ಲ. ಯಾಕೆಂದರೆ, ಅದಕ್ಕೆ ಪೂರ್ವಭಾವಿಯಾಗಿ ಕಂಪನಿಗಳು ಮಾಹಿತಿ ಸಂಗ್ರಹಿಸಲು, ಅವುಗಳನ್ನು ಪರಿಶೀಲಿಸಿ ಎಐ ಸಿಸ್ಟಮ್‌ಗಳಿಗೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಆ ಮೂಲಕ ಈ ಸಿಸ್ಟಮ್‌ಗಳು ತಮ್ಮಲ್ಲಿ ಸಂಗ್ರಹವಾದ ಮಾಹಿತಿಗಳ ಆಧಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲುಸಾಧ್ಯವಾಗುತ್ತದೆ.

ಲೇಖಕರು–ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT