ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತ ಸಮಾಲೋಚನೆಯ ‘ಅವತಾರ್‌’

Last Updated 9 ಮಾರ್ಚ್ 2022, 2:16 IST
ಅಕ್ಷರ ಗಾತ್ರ

‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಎಂಬ ದಾಸವಾಣಿ ದಿನನಿತ್ಯವೂ ನೆನಪಾಗುವಂತಹ ಪರಿಸ್ಥಿತಿ ಇಂದು ನಮ್ಮೆದುರಿಗಿದೆ.

ಕಂಡುಕೇಳರಿಯದವರೆಲ್ಲ ಸಾಮಾಜಿಕ ಜಾಲತಾಣಗಳ ಮೂಲಕ, ಕೇವಲ ಇಂಟರ್ನೆಟ್ ಕೊಂಡಿಗಳಿಂದ ಸ್ನೇಹಿತರಾದರು. ಎದುರು ಬದುರು ಕೂರದೆಯೆ, ಹೊರಗೆಲ್ಲೂ ಒಟ್ಟಿಗೆ ಸುತ್ತಾಡದೆಯೂ ಕೇವಲ ಮೆಸೇಜ್‌ಗಳ ಮೂಲಕ ಚಾಟ್‌ ಮಾಡುತ್ತಾ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ, ಕೊನೆಗೆ ಮದುವೆಯಲ್ಲಿ ಪರ್ಯಾವಸನವಾಗಿರುವ ಉದಾಹರಣೆಗಳೂ ಬೇಕಾದಷ್ಟು ಕಾಣಸಿಗುತ್ತವೆ. ಎಂದಿಗೂ ನಾವು ನೋಡಿರದ ರೆಸ್ಟೊರೆಂಟ್‌ ಒಂದರಿಂದ ನಮಗೆ ಬೇಕಾದ ತಿನಿಸನ್ನು ನಾವು ಇಂಟರ್ನೆಟ್‌ನ ಸಹಾಯದಿಂದ, ಮೊಬೈಲ್‌ ಆ್ಯಪ್‌ ಬಳಸಿ, ಆರ್ಡರ್‌ ಮಾಡುತ್ತೇವೆ; ನಮಗೆ ಪರಿಚಯವೇ ಇರದ ಒಬ್ಬರು ಅದನ್ನು ಅಲ್ಲಿಂದ ಮನೆಬಾಗಿಲಿಗೆ ತಲುಪಿಸುತ್ತಾರೆ. ದಿನಸಿ, ಜವಳಿ, ಹಾಲು, ತರಕಾರಿ – ಹೀಗೆ ಏನು ಬೇಕಾದರೂ ಜಗತ್ತಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ದಿನಗಳಲ್ಲೇ ಸಲೀಸಾಗಿ ತಲುಪುತ್ತವೆ, ಇಂಟರ್ನೆಟ್‌ನ ಸಹಾಯದಿಂದ. ಈ ಅಂತರ್ಜಾಲದ ಒಳಹೊಕ್ಕು ಕೂತರೆ ಸಮಯ ಸರಿದದ್ದೂ ತಿಳಿಯುವುದಿಲ್ಲ; ಅಂಗೈಯಲ್ಲೇ ಇಡಿಯ ಜಗತ್ತು ಸಿಕ್ಕ ಅನುಭವ ನಮ್ಮದು.

ಈಗ ಕೆಲವು ವರ್ಷಗಳಿಂದ, ತಂತ್ರಜ್ಞಾನವು ಮುಂದುವರೆದು, ನಮಗೆ ‘ವರ್ಚುವಲ್‌ ರಿಯಾಲಿಟಿ’ ಎಂಬ ಮಾಯಾಲೋಕವನ್ನು ತೆರೆದಿಟ್ಟಿದೆ. ವಿಡಿಯೋಗೇಮ್‌ಗಳಲ್ಲಿ ಮೊದಲು ಪ್ರಾರಂಭವಾದ ಇದು, ನಾವು ಆಟದ ಒಳಗೆ ಕಂಡುಬರುತ್ತಿರುವ ಯಾವುದೋ ನಿರ್ದಿಷ್ಟ ಸ್ಥಳದಲ್ಲಿ ನಿಜವಾಗಿಯೂ ಇದ್ದೇವೆ ಎಂದು ನಮಗೆ ಎನಿಸುವಂತೆ ಮಾಡುತ್ತದೆ. ಅದಕ್ಕೆ ತಕ್ಕಂತಹ ದೃಶ್ಯಾವಳಿಗಳು, ಹಿನ್ನೆಲೆಸಂಗೀತ, ನಮ್ಮೊಂದಿಗೆ ಸಂವಹನ ನಡೆಸುವ ಪಾತ್ರಗಳು – ಹೀಗೆ ನಾವು ಅಲ್ಲಿಯೇ ಇದ್ದೇವೆ, ಆ ಆಟದ ಭಾಗವಾಗಿ, ಎನಿಸುವಂತೆ ಮಾಡಲಾಗುತ್ತದೆ. ಅದರಲ್ಲೂ ವರ್ಚುವಲ್‌ ರಿಯಾಲಿಟಿಯನ್ನು ‘ನಿಜಸ್ಥಿತಿ’ ಎಂದು ನಂಬಿಸಲು ಬೇಕಿರುವ ವಿಶೇಷ ಕನ್ನಡಕಗಳು ಹಾಗೂ ಇಯರ್‌ಫೋನುಗಳು ನಮ್ಮನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತವೆ. ಜೊತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸುಧಾರಣೆಯೊಂದಿಗೆ ದಿನದಿನಕ್ಕೂ ಸುಧಾರಣೆ ಕಾಣುತ್ತಿರುವ ಪಾತ್ರಗಳು, ನಮ್ಮೊಂದಿಗೆ ನಿಜವಾದ ಮನುಷ್ಯರಂತೆಯೇ ವ್ಯವಹರಿಸುತ್ತಾ, ನಮ್ಮನ್ನು ಮೈಮರೆವಂತೆ ಮಾಡುತ್ತವೆ. ಹೀಗಿರುವಾಗ ಮೆಟಾವರ್ಸ್‌ನಂತಹ ಕಲ್ಪನೆಯು ವಾಸ್ತವವಾಗುವುದು ಸಹಜವಲ್ಲವೇ?

‘ಮೆಟಾವರ್ಸ್‌’ ಎಂಬುದು ಅಂತರ್ಜಾಲದ ಒಳಗಿನ ಜಗತ್ತಿಗೂ, ಹೊರಗಿನ ಭೌತಿಕ ಜಗತ್ತಿಗೂ ಬೆಸೆಯಲಾದ ಅತ್ಯಂತ ಸುಧಾರಿತ ಕೊಂಡಿ. ಇಲ್ಲಿ ಅನೇಕ ಮೂರು ಆಯಾಮಗಳ (3ಡಿ) ವಸ್ತುಗಳನ್ನೂ ಸ್ಥಳಗಳನ್ನೂ ಮನುಷ್ಯರನ್ನೂ ಪ್ರಾಣಿಗಳನ್ನೂ ನಾವು ಎದುರುಗೊಳ್ಳಬಹುದು. ಆನ್‌ಲೈನ್‌ ಪ್ರಪಂಚದಲ್ಲೇ ನಾವು ಪಾರ್ಕಿಗೆ, ಥಿಯೇಟರ್‌ಗೆ, ಹೊಟೇಲಿಗೆ ಹೋಗಬಹುದು, ಗೆಳೆಯರನ್ನು ಭೇಟಿ ಮಾಡಬಹುದು, ಹರಟೆ ಕೊಚ್ಚಿ, ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟುಕೊಳ್ಳಬಹುದು. ಇಲ್ಲಿ ಕ್ರಿಪ್ಟೋಕರೆನ್ಸಿಯಂತಹ ಬ್ಲಾಕ್ಚೈನ್‌ ಆಧಾರಿತ ಆರ್ಥಿಕ ಜಗತ್ತು ಕೂಡ ಬೆಸೆದುಕೊಂಡಿದ್ದು, ಇಲ್ಲಿನ ಸಾಧ್ಯತೆಗಳಿಗೆ ಕೊನೆಮೊದಲಿಲ್ಲ ಎಂಬಂತಾಗಿದೆ. ಈ ವರ್ಚುವಲ್‌ ಮಾಯಾಲೋಕದಲ್ಲೇ ಈಗಾಗಲೇ ಸಂಗೀತಕಚೇರಿ, ಫೊರ್ಟ್‌ನೈಟ್‌ನಂತಹ ಆಟಗಳು, ಅಷ್ಟೇ ಏಕೆ, ಮೆಟಾವರ್ಸ್‌ನಲ್ಲೇ ಮದುವೆ ಕೂಡ ಆಗಿಹೋಗಿದೆ. ಇಂತಹದ್ದನ್ನು ಕಂಡು ಇದೇನು ವಿಚಿತ್ರ ಎಂದು ಮೂಗುಮುರಿಯುವವರಿಗೆ, ವರ್ಚುವಲ್‌ ರಿಯಾಲಿಟಿಯ ಮತ್ತೊಂದು ಮುಖವನ್ನು ಮನೋವಿಜ್ಞಾನಿಗಳು ತೆರೆದಿಟ್ಟಿದ್ದಾರೆ. ವಿದ್ಯಾಭ್ಯಾಸಕ್ಕೋ ವೃತ್ತಿಬದುಕಿಗಾಗಿಯೋ ಪ್ರೀತಿಪಾತ್ರರನ್ನು ಕಳೆದುಕೊಂಡ ಕಾರಣಕ್ಕೋ, ದಿನೇದಿನೇ ಕಿರಿದಾಗುತ್ತಿರುವ ಕುಟುಂಬದಿಂದಾಗಿಯೋ ಒಬ್ಬೊಬ್ಬರೇ ಜೀವಿಸುವ ಅವಶ್ಯಕತೆಯಿರುವ ಸಂದರ್ಭಗಳು ಹೆಚ್ಚುತ್ತಿವೆ. ಎಲ್ಲರ ಒಟ್ಟಿಗಿದ್ದರೂ ತಾವು ಒಬ್ಬಂಟಿ ಎನಿಸುವಂತಹ ಸಂದರ್ಭಗಳು ಕೂಡ ಎದುರಿಗೆ ಬರುತ್ತವೆ. ಇಂತಹ ಮನಃಸ್ಥಿತಿಯು ಪರಾಕಾಷ್ಠೆಗೆ ತಲುಪಿ ತೀವ್ರತರನಾದ ಖಿನ್ನತೆ, ಆತ್ಮಹತ್ಯೆಗೆ ಕಾರಣವಾಗುವ ಅಪಾಯ ಕೂಡ ಇರುತ್ತದೆ. ಇಂತಹದ್ದನ್ನು ಸರಿಪಡಿಸಲು ವರ್ಚುವಲ್‌ ರಿಯಾಲಿಟಿಯೆಂಬ ಕಾಲ್ಪನಿಕ ನಿಜಸ್ಥಿತಿಯು ಸಹಾಯಕ ಎನ್ನುತ್ತಾರೆ ಮನೋವಿಜ್ಞಾನಿಗಳು. ಅದರ ಮೂಲಕ ಮಾನವರಂತಹ ‘ಅವತಾರ್‌’ಗಳ ಜೊತೆಗೆ ಸಂವಹನ ನಡೆಸುತ್ತಾ, ಮನಸ್ಸಿನ ಒತ್ತಡ ನಿವಾರಿಸಿಕೊಳ್ಳಬಹುದು; ಇದರ ಮೂಲಕ, ನಂತರದ ಸ್ಥಿತಿಯಲ್ಲಿ, ಹೊರಜಗತ್ತಿಗೆ ತೆರೆದುಕೊಳ್ಳುವುದು ಸಹಜ ಹಾಗೂ ಸರಳ ಎನಿಸುತ್ತದೆ ಎಂದು ಸಂಶೋಧನೆಗಳು ಸಾಬೀತು ಪಡಿಸಿವೆ.

ಡಾ. ಶೇನ್‌ ರೋಜರ್ಸ್‌ ಎಂಬ ಮನೋವಿಜ್ಞಾನಿಯು ತಮ್ಮ ಪ್ರಯೋಗಗಳ ಮೂಲಕ ಕಂಡುಕೊಂಡದ್ದೆಂದರೆ, ಎದುರುಬದುರು ಕುಳಿತು ಆಪ್ತಸಮಾಲೋಚಕರ ಬಳಿ ತಮ್ಮ ಮನಃಸ್ಥಿತಿಯ ಬಗ್ಗೆ ಹೇಳಿಕೊಳ್ಳುವವರಿಗಿಂತಲೂ ಕಂಪ್ಯೂಟರ್‌ ಪರದೆ ಮೇಲೆ ಬರುವ ಆಪ್ತಸಮಾಲೋಚಕ ‘ಅವತಾರ್‌’ನೊಂದಿಗೆ ಜನರು ಹೆಚ್ಚು ಮುಕ್ತವಾಗಿ ಮಾತಾಡುತ್ತಾರೆ. ಅದರಲ್ಲೂ, ತಮ್ಮ ಜೀವನದಲ್ಲಿ ಆದ ಕಹಿ ಘಟನೆಗಳನ್ನು, ಯಾರಲ್ಲೂ ಹೇಳಿಕೊಳ್ಳಲಾಗದ ಮುಜುಗರದ ಸನ್ನಿವೇಶಗಳನ್ನು ಜನರು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವ ಬದಲು, ಕಾಲ್ಪನಿಕ ನಿಜಸ್ಥಿತಿಯ ಪಾತ್ರಗಳೊಂದಿಗೆ ಹಂಚಿಕೊಳ್ಳುವುದನ್ನೇ ಹೆಚ್ಚು ಸಹ್ಯ ಎಂದುಕೊಳ್ಳುತ್ತಾರೆ. ಹೀಗಾಗಿ, ಆ ವರ್ಚುವಲ್‌ ರಿಯಾಲಿಟಿಯ ಪಾತ್ರಗಳನ್ನು ಕೃತಕಬುದ್ಧಿಮತ್ತೆಯ ಸಹಾಯದಿಂದ ಮತ್ತಷ್ಟು ‘ಮಾನವರೂಪಿ’ಯಾಗಿಸುವ ಪ್ರಯತ್ನ ದಿನೇದಿನೇ ನಡೆಯುತ್ತಿದೆ ಮತ್ತು ತಂತ್ರಜ್ಞಾನಿಗಳು ಅದರಲ್ಲಿ ಸಫಲರಾಗುತ್ತಿದ್ದಾರೆ ಕೂಡ. ಅಂತರ್ಜಾಲವೇ ಆಗಲಿ, ವರ್ಚುವಲ್‌ ರಿಯಾಲಿಟಿಯೇ ಆಗಲಿ, ಸರಿಯಾಗಿ ಬಳಸಿಕೊಂಡರೆ ಅದರಿಂದ ದೊರೆಯಬಹುದಾದ ಅನುಕೂಲಗಳಿಗೆ ಪಾರವೇ ಇಲ್ಲ ಎಂಬುದು ಇದರ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT