ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮೋಸದ ಜಾಲಕ್ಕೆ ಬಿದ್ದೀರಿ ಜೋಕೆ!

Last Updated 12 ಸೆಪ್ಟೆಂಬರ್ 2020, 5:28 IST
ಅಕ್ಷರ ಗಾತ್ರ

ನಮ್ಮ ಬದುಕಿನ ಬಹುಪಾಲು ಸಮಯವನ್ನು ಒಂದಲ್ಲಾ ಒಂದು ರೀತಿ ತಂತ್ರಜ್ಞಾನದೊಟ್ಟಿಗೇ ಕಳೆಯುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಅದನ್ನು ಬಹಳ ಎಚ್ಚರಿಕೆಯಿಂದ ಬಳಸುವ ಬಗೆಗಿನ ನಮ್ಮ ತಿಳವಳಿಕೆಯನ್ನು ಹೆಚ್ಚಿಸಿಕೊಳ್ಳಲೇಬೇಕು. ಇಲ್ಲವಾದರೆ ವೈಯಕ್ತಿಕ ಮಾಹಿತಿ, ಹಣ ಎರಡನ್ನೂ ಕಳೆದುಕೊಳ್ಳಬೇಕಾದೀತು.

ಜನರನ್ನು ಮೋಸ ಮಾಡಲು ವಂಚಕರು ಸದಾ ಹೊಸ ದಾರಿ ಹುಡುಕುತ್ತಿರುತ್ತಾರೆ. ಕೋಟಿಗಟ್ಟಲೆ ಹಣ ಗೆದ್ದಿದ್ದೀರಿ ಎಂದು ಎಸ್‌ಎಂಎಸ್ ಕಳುಹಿಸುವುದು, ಉದ್ಯೋಗ ನೀಡುವುದಾಗಿ ಇ–ಮೇಲ್‌ ಕಳುಹಿಸುವುದು, ಬ್ಯಾಂಕಿನವರು ಎಂದು ಹೇಳಿಕೊಂಡು ಕರೆ ಮಾಡುವುದು, ನಕಲಿ ಕ್ಯೂಆರ್‌ ಕೋಡ್‌ ಕಳುಹಿಸುವುದು ಹೀಗೆ ನಾನಾ ಮಾರ್ಗಗಳಿವೆ. ಅದರಲ್ಲೂ ಈ ಕೋವಿಡ್‌ ಕಾಲವನ್ನು ಪರಿಹಾರ, ನೆರವಿನ ಹೆಸರಿನಲ್ಲಿ ಜನರನ್ನು ವಂಚಿಸಲು ಹೊಸ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.

ಕೋವಿಡ್‌ ಹೆಸರಿನಲ್ಲಿ ವಂಚನೆ‌:

ಪ್ರಕರಣ ಒಂದು: ಕಳೆದ ತಿಂಗಳು ನನ್ನ ಮೊಬೈಲ್‌ಗೆ BH-637590 ಎನ್ನುವ ಸಂಖ್ಯೆಯಿಂದ ಒಂದು ಮೆಸೇಜ್‌ ಬಂತು. ತೆಗೆದು ನೋಡಿದರೆ, ನಿಮ್ಮ ನಂಬರ್‌ ಡಬ್ಲ್ಯುಎಚ್‌ಒನ ಕೋವಿಡ್‌–19ಯಲ್ಲಿ 5 ಲಕ್ಷ ಡಾಲರ್‌ ಗೆದ್ದಿದೆ. ಈ ಬಹುಮಾನ ಪಡೆಯಲು ನಿಮ್ಮ ವಿಳಾಸ, ಹೆಸರು, ವಯಸ್ಸು, ಲಿಂಗ, ಉದ್ಯೋಗದ ಮಾಹಿತಿಗಳನ್ನು covid.who20@gmail ಗೆ ಕಳುಹಿಸಿ ಎಂದು ಅದರಲ್ಲಿ ಬರೆದಿತ್ತು.

ಜಗತ್ತೇ ಕೋವಿಡ್‌ನಿಂದ ಬಳಲುತ್ತಿರುವಾಗ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಲ್ಲಾದರೂ ಬಹುಮಾನ ನೀಡುವುದುಂಟೇ!? ಆರೋಗ್ಯ ತುರ್ತು ಪರಿಸ್ಥಿತಿ ನಿಯಂತ್ರಿಸಲು ಹಣದ ಕೊರತೆ ಎದುರಾಗುತ್ತಿದೆ. ಹೀಗಾಗಿ ಆರ್ಥಿಕ ನೆರವಾಗುವಂತೆ ಸರ್ಕಾರಗಳು ಜನರನ್ನು ಕೇಳುತ್ತಿವೆ. ಇಂತಹ ಸಂದರ್ಭದಲ್ಲಿ ಡಬ್ಲ್ಯುಎಚ್‌ಒ ಕೋವಿಡ್‌ ಹೆಸರಿನಲ್ಲಿ ಬಹುಮಾನ ನೀಡುವುದೆಂದರೆ ಇದರಲ್ಲಿ ವಂಚಕರ ಕೈವಾಡ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.

ಬಿಗ್‌ ಬಜಾರ್‌ನಲ್ಲಿ, ಮಾಲ್‌ಗಳಲ್ಲಿ ಖರೀದಿ ಮಾಡಿದಾಗ ಅವರು ನಮ್ಮ ಮೊಬೈಲ್‌ ನಂಬರ್‌ ಬರೆದುಕೊಂಡು ಲಕ್ಕಿ ಡ್ರಾ ನೀಡುವುದು ಎಲ್ಲರಿಗೂ ಗೊತ್ತಿದೆ. ಅದೊಂದು ವ್ಯಾಪಾರದ ತಂತ್ರವಷ್ಟೆ. ಭಾರೀ ಮೊತ್ತದ ಬಹುಮಾನ ಏನೂ ಸಿಗುವುದಿಲ್ಲ. ವೋಚರ್‌, ಡಿಸ್ಕೌಂಟ್‌ ಅಥವಾ ಕಾಫಿ ಕುಡಿಯುವ ಕಪ್‌ನ ಸೆಟ್‌ ಇತ್ಯಾದಿ ನೀಡುತ್ತಾರೆ. ಆದರೆ, ಏಕಾಏಕಿ ಪರಿಚಯವೇ ಇಲ್ಲದೆ, ಯಾರೂ ಒಂದು ರೂಪಾಯಿ ನೀಡುವುದಿಲ್ಲ. ಹೀಗಿರುವಾಗ ಕೋಟಿಗಟ್ಟಲೆ ಸಿಗುತ್ತದೆ ಎಂದಾದರೆ ಒಂದು ಕ್ಷಣ ಯೋಚಿಸಿ ನೋಡುವುದು ಒಳಿತು.

ಕೋವಿಡ್‌ ಹೆಸರಿನಲ್ಲಿ ಭಾರಿ ಪ್ರಮಾಣದಲ್ಲಿ ಸೈಬರ್‌ ದಾಳಿ ನಡೆಸಿ ವೈಯಕ್ತಿಕ ಮತ್ತು ಹಣಕಾಸಿಗೆ ಸಂಬಂಧಿಸಿದ ಮಾಹಿತಿಗಳನ್ನು ಕದಿಯುವ ಸಾಧ್ಯತೆ ಇದೆ ಎಂದು ಕೇಂ‌ದ್ರ ಸರ್ಕಾರ ಏಪ್ರಿಲ್‌ನಲ್ಲಿ ಎಚ್ಚರಿಕೆ ನೀಡಿತ್ತು. ದಾಳಿಕೋರರುncov2019@gov.inಎನ್ ನುವ ಇ–ಮೇಲ್‌ ವಿಳಾಸದಲ್ಲಿ ವಂಚನೆಗೆ ಮುಂದಾಗಲಿದ್ದಾರೆ. ಸ್ಥಳೀಯಆಡಳಿತಗಳ ಹೆಸರಿನಲ್ಲಿ ವಂಚಕ ಇ–ಮೇಲ್‌ಗಳು ಬರಬಹುದು. ಅದರ ಮೂಲಕ ನಕಲಿ ಜಾಲತಾಣಕ್ಕೆ ಕರೆದೊಯ್ದು ಅಲ್ಲಿ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ಪಡೆದು ವಂಚಿ ಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಪ್ರಕರಣ ಎರಡು: ಸಹೋದ್ಯೋಗಿಯೊಬ್ಬರ ಮೊಬೈಲ್‌ಗೆ ಇಂಗ್ಲಿಷ್‌ನಲ್ಲಿ ಒಂದು ಟೆಕ್ಸ್ಟ್‌ ಮೆಸೇಜ್‌ ಬಂತು. 2019ರ ವಾಟ್ಸ್‌ಆ್ಯಪ್‌ ಗ್ಲೋಬಲ್ ಅವಾರ್ಡ್‌ನಲ್ಲಿ ನಿಮ್ಮ ವಾಟ್ಸ್‌ಆ್ಯಪ್‌ ನಂಬರ್‌ ₹ 2 ಕೋಟಿ 75 ಲಕ್ಷ ಗೆದ್ದುಕೊಂಡಿದೆ. ಈ ಬಹುಮಾನ ಪಡೆದುಕೊಳ್ಳಲು ನಿಮ್ಮ ಹೆಸರು, ಮೊಬೈಲ್‌ ನಂಬರ್‌, ವಯಸ್ಸು ಮತ್ತು ಉದ್ಯೋಗದ ಮಾಹಿತಿಯನ್ನುrbidelhi@ rbidelhigovt.comಗೆ ಕಳುಹಿಸಿ ಎಂದು ಅದರಲ್ಲಿ ಇತ್ತು. ಜನರನ್ನು ವಂಚಿಸಲು ಇರುವ ಮಾರ್ಗಗಳಲ್ಲಿ ಇದೂ ಒಂದು.

ಕುತೂಹಲಕ್ಕಾಗಿಯಾದರೂ ನೀವು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ಅದು ನಿಮ್ಮನ್ನು ತನ್ನ ಮೋಸದ ಜಾಲದಲ್ಲಿ ಸಿಲುಕಿಸಿ ನಿಮ್ಮಿಂದ ಹಣ ಕೀಳುವ ಇಲ್ಲವೇ ನಿಮ್ಮ ವೈಯಕ್ತಿಕ ಮಾಹಿತಿ ಪಡೆದು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಸಂದೇಶಗಳನ್ನು ಅಲಕ್ಷಿಸುವುದೇ ಒಳಿತು.

ಇಲ್ಲಿ ಅಚ್ಚರಿ ವಿಷಯ ಎಂದರೆ, ಸಾಮಾನ್ಯವಾಗಿ ಈ ರೀತಿ ಸೃಷ್ಟಿಯಾಗುವ ನಕಲಿ ಇ–ಮೇಲ್‌ ವಿಳಾಸ ವಿಚಿತ್ರವಾಗಿರುತ್ತವೆ. ಸುಲಭಕ್ಕೆ ಓದಲೂ ಆಗದಂತಿರುತ್ತವೆ. ಆದರೆ ಇಲ್ಲಿ ಬಂದಿರುವ ವಿಳಾಸದಲ್ಲಿ ಆರ್‌ಬಿಐ ದೆಹಲಿ ಎಂದಿದೆ. ಅಂದರೆ, ಆರ್‌ಬಿಐ ಎಂದಾಕ್ಷಣ ಜನ ನಂಬುತ್ತಾರೆ ಎಂದುಕೊಂಡಂತಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ವಾಟ್ಸ್‌ಆ್ಯಪ್‌ಗೂ ಆರ್‌ಬಿಐಗೂ ಯಾವುದೇ ಸಂಬಂಧ ಇಲ್ಲ. ಹೀಗಿರುವಾಗ ವಾಟ್ಸ್‌ಆ್ಯಪ್‌ ಅವಾರ್ಡ್‌ ಅನ್ನು ಆರ್‌ಬಿಐ ಕೊಡುತ್ತದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ.

ಅಷ್ಟಕ್ಕೂ ಗ್ಲೋಬಲ್‌ ಅವಾರ್ಡ್‌ ಏರ್ಪಡಿಸುವುದೇ ಆದರೆ ವಾಟ್ಸ್‌ಆ್ಯಪ್‌ ಅದನ್ನು ಬಹಳ ದೊಡ್ಡ ಮಟ್ಟದಲ್ಲಿ ಜಾಹೀರಾತು, ಪ್ರಕಟಣೆಯ ಮೂಲಕ ಘೋಷಣೆ ಮಾಡಬೇಕಿತ್ತು ಅಲ್ಲವೆ? ಆದರೆ, ಅಂತಹ ಯಾವುದೇ ಸುದ್ದಿ, ಜಾಹೀರಾತು ಬಂದಿಲ್ಲ. ಜನರನ್ನು ಮೂರ್ಖರನ್ನಾಗಿಸಿ, ಅವರಿಂದ ದೋಚುವ ಉದ್ದೇಶದಿಂದ ಈ ರೀತಿ ನಕಲಿ ಮೆಸೆಜ್‌ ಹರಿಬಿಡಲಾಗುತ್ತದೆ. ಹೀಗಾಗಿ, ಇಂತಹ ಸಂದರ್ಭಗಳಲ್ಲಿ ಕುತೂಹಲ, ಅತಿ ಬುದ್ಧಿವಂತಿಕೆ ಉಪಯೋಗಿಸದೇ ನಿರ್ಲಕ್ಷ್ಯ ತೋರುವುದೇ ಜಾಣತನ.

ಹೀಗೆ ಬರುವ ಮೆಸೆಜ್‌ನಲ್ಲಿ ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ಅದು ವಂಚಕ ಜಾಲತಾಣಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಆನ್‌ಲೈನ್‌ ಬ್ಯಾಂಕಿಂಗ್‌ನ ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ಕೇಳಲಾಗುತ್ತದೆ. ಆ ಮೂಲಕ ನಿಮ್ಮ ಖಾತೆಯಿಂದ ಹಣ ದೋಚಲು ಆರಂಭಿಸುತ್ತಾರೆ.

ಬ್ಯಾಂಕ್‌ ಹೆಸರಿನಲ್ಲಿ ವಂಚನೆ

ಡೆಬಿಟ್‌ ಕಾರ್ಡ್‌ ವಂಚನೆ: ಬ್ಯಾಂಕ್‌ ಹೆಸರು ಹೇಳಿಕೊಂಡು ಆಗಾಗ್ಗೆ ಕರೆ ಬರುತ್ತಿರುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಈ ರೀತಿ ಕರೆ ಮಾಡುವವರು ಹಿಂದಿಯಲ್ಲಿಯೇ ಹೆಚ್ಚು ಸಂಭಾಷಣೆ ನಡೆಸುತ್ತಾರೆ ಎನ್ನುವುದು. ತಾಂತ್ರಿಕ ದೋಷದಿಂದಾಗಿ ನಿಮ್ಮ ಡೆಬಿಟ್‌ ಕಾರ್ಡ್‌ ಶೀಘ್ರವೇ ಬ್ಲಾಕ್‌ ಆಗಲಿದೆ. ಹಾಗಾಗುವುದನ್ನು ತಡೆಯಲು ನಿಮಗೆ ಸಹಾಯ ಮಾಡುತ್ತೇನೆ. ನಾನು ಹೇಳಿದಂತೆ ಮಾಡಿ ಎಂದು ಕರೆ ಮಾಡಿದಾತ ನಿಮ್ಮನ್ನು ನಂಬಿಸಲು ಯತ್ನಿಸುತ್ತಾನೆ. ನೀವು ಸರಿ ಎಂದು ಆತ ಹೇಳುವುದನ್ನು ಕೇಳಲು ಮುಂದಾದಲ್ಲಿ, ನಿಮ್ಮ ಡೆಬಿಟ್‌ ಕಾರ್ಡ್‌ನಲ್ಲಿ ದೊಡ್ಡದಾಗಿ ಬರೆದಿರುವ 16 ಸಂಖ್ಯೆಗಳು ಇರಬೇಕಲ್ಲವಾ, ಅದನ್ನು ಪರಿಶೀಲಿಸಿ ಅಂತ ಹೇಳುತ್ತಾನೆ. ಆಗ ನೀವು ಕಾರ್ಡ್‌ ಅನ್ನು ಕೈಯಲ್ಲಿ ಹಿಡಿದುಕೊಂಡು ಒಮ್ಮೆ ಎಣಿಸಿ ಹೌದು ಎನ್ನುತ್ತೀರಿ. ಅದನ್ನು ಹೇಳುವಂತೆ ಕೇಳುತ್ತಾನೆ. ಆ ಬಳಿಕ ಅದರ ಕೆಳಗಡೆಯೇ ವ್ಯಾಲಿಡಿಟಿ ಡೇಟ್‌ ಇದೆ ಅದನ್ನು ಹೇಳಿ. ಏಕೆಂದರೆ ನಿಮಗೆ ಕೊಡುವ ಹೊಸ ಕಾರ್ಡಿನಲ್ಲಿ ಅದನ್ನು ನಮೂದಿಸಬೇಕಲ್ಲಾ ಎಂದು ಜಾಣತನದ ಮಾತನಾಡುತ್ತಾನೆ. ಕೊನೆಯದಾಗಿ‌ ಕಾರ್ಡಿನ ಹಿಂಬದಿ ಕಪ್ಪು ಬಣ್ಣದಲ್ಲಿ ಚಿಕ್ಕದಾಗಿ ಮೂರು ನಂಬರ್‌ ಇದೆ ಅದನ್ನು ಹೇಳಿ ಎನ್ನುತ್ತಾನೆ. ಅಷ್ಟಾದರೆ ನಿಮ್ಮ ಖಾತೆಯಲ್ಲಿ ಇರುವ ಹಣ ಮಂಗಮಾಯ!

ಕ್ರೆಡಿಟ್‌ ಕಾರ್ಡ್‌ ವಂಚನೆ: ಎಷ್ಟು ವ್ಯವಸ್ಥಿತವಾಗಿ ವಂಚನೆ ಎಸಗುತ್ತಾರೆ ಎಂದರೆ, ನೀವು ಕೇಳುವ ಪ್ರಶ್ನೆಗಳೆಲ್ಲದಕ್ಕೂ ಉತ್ತರ ಸಿದ್ಧವಿಟ್ಟುಕೊಂಡಿರುತ್ತಾರೆ. ಅವನ್ನು ಕೇಳಿ ಒಂದು ಕ್ಷಣ ನಂಬಿಬಿಡಬೇಕು! ಸ್ನೇಹಿತೆಯೊಬ್ಬರು ಆ್ಯಕ್ಸಿಸ್‌ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಬಳಸುತ್ತಿದ್ದರು. ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ವಿಭಾಗದಿಂದ ಮಾತನಾಡುತ್ತಿದ್ದೇವೆ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಅವರಿಗೆ ಕಾಲ್ ಮಾಡಿದರು. ನಿಮ್ಮ ಕ್ರೆಡಿಟ್‌ ಕಾರ್ಡ್‌ನ ಕಳೆದ ತಿಂಗಳ 100 ರಿವಾರ್ಡ್‌ ಪಾಯಿಂಟ್ಸ್‌ ಅನ್ನು ನೀವು ಬಳಸೇ ಇಲ್ಲವಲ್ಲ! ಅದು ಸುಮ್ಮನೇ ವ್ಯರ್ಥವಾಗುತ್ತದೆ, ನಿಮಗೆ ಬೇಕಿದ್ದರೆ ಈಗಲೂ ಬಳಸಬಹುದು ಎಂದರು ಆಕೆ. ನಾನು ಅದರ ಬಗ್ಗೆ ಅಷ್ಟಾಗಿ ಗಮನ ಕೊಡುವುದಿಲ್ಲ, ಹೇಗೆ ಬಳಸುವುದು ಎಂದು ಸ್ನೇಹಿತೆ ಕೇಳಿದರು. ಯಾವ ಬ್ರ್ಯಾಂಚ್‌ನಲ್ಲಿ ಖಾತೆ ಹೊಂದಿದ್ದೀರಿ, ಖಾತೆ ಸಂಖ್ಯೆ, ಕ್ರೆಡಿಟ್‌ ಕಾರ್ಡ್‌ ಸಂಖ್ಯೆ ಹೇಳಿ ಎಂದು ಕರೆ ಮಾಡಿದ್ದಾಕೆ ಕೇಳಿದಳು. ಅದಕ್ಕೆ, ಬ್ಯಾಂಕ್‌ನಿಂದ ಕರೆ ಮಾಡಿದವರಿಗೆ ಅದು ಗೊತ್ತಿರಬೇಕಲ್ಲವೇ!? ನನ್ನ ಕಾರ್ಡ್‌ನ ರಿವಾರ್ಡ್‌ ಪಾಯಿಂಟ್‌ ಎಂದೇ ನಿಮಗೆ ಗೊತ್ತಾಗಿದೆ ಎಂದ ಮೇಲೆ ಖಾತೆಯ ಸಂಖ್ಯೆಯೂ ತಿಳಿದಿರಲೇಬೇಕು ಅಲ್ಲವೇ ಎಂದು ನನ್ನ ಸ್ನೇಹಿತೆ ಮರುಪ್ರಶ್ನಿಸಿದರು. ಅದಕ್ಕೆ ತುಸು ಖಾರವಾಗಿ ಪ್ರತಿಕ್ರಿಯಿಸಿದ ಕರೆ ಮಾಡಿದಾಕೆ, ನಿಮಗೆ ಸಹಾಯ ಮಾಡಲೆಂದು ಕರೆ ಮಾಡಿದರೆ, ನನ್ನನ್ನೇ ಪ್ರಶ್ನಿಸುತ್ತಿದ್ದೀರಲ್ಲಾ! ರಿವಾರ್ಡ್‌ ಪಾಯಿಂಟ್‌ ಬೇಕಿದ್ದರೆ ಹೇಳಿದಂತೆ ಮಾಡಿ, ಇಲ್ಲವಾದರೆ ನಿಮ್ಮಿಷ್ಟ ಎಂದರು.

ಯಾವತ್ತೂ ಬ್ಯಾಂಕ್‌ ನಮ್ಮ ಖಾತೆಯ ಬಗ್ಗೆ ಮಾಹಿತಿ ಕೇಳುವುದಿಲ್ಲವಲ್ಲಾ! ಕರೆಯಿರಿ ನಿಮ್ಮ ಮ್ಯಾನೇಜರ್‌ ಅವರನ್ನು, ಅವರ ಬಳಿಯೇ ಮಾತನಾಡುತ್ತೇನೆ ಎಂದರು. ಅದಕ್ಕೂ ತಯಾರಿ ನಡೆಸಿಕೊಂಡಿದ್ದ ಆಕೆ, ಕಾಯುವಂತೆ ಹೇಳಿದಳು. ಐದು ನಿಮಿಷದ ಬಳಿಕ ಮ್ಯಾನೇಜರ್‌ ಎಂದು ಹೇಳಿಕೊಂಡು ಇನ್ನೊಬ್ಬಾಕೆ, ಹೇಳಿ ಏನು ಸಮಸ್ಯೆ ಎಂದಳು? ಸಂಭಾಷಣೆಯನ್ನು ವಿವರಿಸಿದ ಬಳಿಕ, ಹೌದು ಮೇಡಂ ನಿಮಗೆ ಬೇಕಿದ್ದರೆ ನೀವು ಕೊಡಲೇ ಬೇಕು ಎಂದು ಆಕೆಯೂ ಹೇಳಿದಳು. ಸ್ವತಃ ಮ್ಯಾನೇಜರ್‌ ಈ ರೀತಿ ಹೇಳುತ್ತಿದ್ದಾರೆ ಎಂದಾದರೆ ನಾವು ತಕ್ಷಣವೇ ಎಲ್ಲಾ ಮಾಹಿತಿ ಕೊಟ್ಟುಬಿಡುತ್ತೇವೆ. ಆದರೆ, ಸ್ನೇಹಿತೆ ಹಾಗೆ ಮಾಡಲಿಲ್ಲ. ನಾನು ನನ್ನ ಬ್ರ್ಯಾಂಚ್‌ಗೆ ಹೋಗಿಯೇ ಬೇಕಿರುವ ಮಾಹಿತಿ ಪಡೆಯುತ್ತೇನೆ, ನಿಮ್ಮ ನೆರವಿನ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದಂತೆಯೇ ಕರೆ ಕಟ್ ಆಯಿತು. (ಇದಿಷ್ಟೂ ಸಂಭಾಷಣೆ ನಡೆದಿದ್ದು ಹಿಂದಿಯಲ್ಲಿ).

ಕಳ್ಳರಿಗೇ ತಿರುಮಂತ್ರ: ಶಿವಾಜಿನಗರ ಎಸ್‌ಬಿಐ ಶಾಖೆಯ ಮ್ಯಾನೇಜರ್‌ ಎಂದು ಹೇಳಿಕೊಂಡು ಕರೆ ಮಾಡಿದಾತ, ಡೆಬಿಟ್‌ ಕಾರ್ಡ್‌ ಬ್ಲಾಕ್‌ ಆಗಲಿದೆ. ತಕ್ಷಣವೇ ಕಾರ್ಡ್‌ನ ಮಾಹಿತಿಗಳೆಲ್ಲವನ್ನೂ ಹಂಚಿಕೊಂಡರೆ ಸರಿಪಡಿಸುವೆ ಎಂದು ಹೇಳಿದ. ಈ ರೀತಿಯ ಮೋಸದ ಬಗ್ಗೆ ಮೊದಲೇ ತಿಳಿದಿದ್ದ ಪರಿಚಯಸ್ಥರೊಬ್ಬರು, ನಿಷ್ಪ್ರಯೋಜಕವಾಗಿದ್ದ, ಮಗಳಿಗೆ ಆಡಲೆಂದು ಇಟ್ಟಿದ್ದ ಐದು ವರ್ಷದ ಹಿಂದಿನ ಡೆಬಿಟ್‌ ಕಾರ್ಡಿನ ಮಾಹಿತಿಗಳೆಲ್ಲವನ್ನೂ ಹೇಳುತ್ತಾ ಹೋದರು. ಕಾರ್ಡ್‌ನ ಮುಕ್ತಾಯದ ಅವಧಿಯನ್ನು ಮಾತ್ರವೇ ಐದು ವರ್ಷ ಮುಂದಕ್ಕೆ ಹೇಳಿದರು. ಕೊನೆಗೆ ಆತ ಸಿವಿವಿ ನಂಬರ್‌ ಕೇಳಿದ. ಅದನ್ನೂ ಕೊಟ್ಟರು. ತಕ್ಷಣಕ್ಕೆ ಆತನಿಗೆ ಅದು ಹಳೆಯ ಕಾರ್ಡ್ ಎಂದು ಅರಿವಿಗೆ ಬರಲಿಲ್ಲ. ನೀವು ಯಾವುದೋ ಸಂಖ್ಯೆಯನ್ನು ತಪ್ಪಾಗಿ ಹೇಳುತ್ತಿದ್ದೀರಿ, ಮತ್ತೊಮ್ಮೆ ಸರಿಯಾಗಿ ನೋಡಿ ಹೇಳಿ ಎಂದ ಪುಣ್ಯಾತ್ಮ. ಎರಡನೇ ಬಾರಿ ಹೇಳುವ ಹೊತ್ತಿಗೆ ಸರಿಯಾಗಿ ನಾನು ಅವರ ಮನೆಗೆ ಹೋದೆ, ಏನು ಎಂದು ಕೇಳಿದರೆ, ಒಂದು ಹಾಳೆಯ ಮೇಲೆ ಬರೆದು ಚುಟುಕಾಗಿ ವಿವರಿಸಿದರು. ತಕ್ಷಣವೇ ನಾನು ಅವರ ಫೋನ್‌ ತೆಗೆದುಕೊಂಡು ಕೇಳಿದೆ. ಯಾವ ಶಾಖೆಯಿಂದ ಕಾಲ್‌ ಮಾಡುತ್ತಿರುವುದು ಅಂತ? ಅದಕ್ಕಾತ, ಶಿವಾಜಿನಗರ ಅಂದ. ಸರಿ, ಅಲ್ಲೇ ಇರಿ, ಇನ್ನು ಅರ್ಧ ಗಂಟೇಲಿ ಅಲ್ಲಿಗೇ ಬರುತ್ತೇವೆ, ಜೊತೆಗೆ ಪೊಲೀಸರು ಬರುತ್ತಾರೆ ಅಂದೆ. ತಕ್ಷಣವೇ ಆತ ಕಾಲ್‌ ಕಟ್‌ ಮಾಡಿದ. ಮತ್ತೆ ನಾವೇ ಕರೆ ಮಾಡಿದರೆ, ನೀವು ಕರೆ ಮಾಡಿದ ಸಂಖ್ಯೆಯು ಅಸ್ತಿತ್ವದಿಂದ ಹೊರಗಿದೆ ಎಂದು ಬಂತು. ಇನ್ನೂ ಸ್ವಲ್ಪ ಹೊತ್ತು ಬಿಟ್ಟು ಮಾಡಿದರೆ, ಲೈನ್‌ ಬ್ಯುಸಿ ಆಗಿದೆ ಎಂದು ಬಂತು.

ಪ್ರತೀ ವರ್ಷವೂ ಇಂತಹ ವಂಚನೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಬ್ಯಾಂಕ್‌ಗಳು, ಆರ್‌ಬಿಐ ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತವೆ. ಯಾವುದೇ ಕಾರಣಕ್ಕೂ ಬ್ಯಾಂಕ್‌ಗಳು ಹಣಕಾಸಿನ ವಿಷಯದಲ್ಲಿ ನಿಮಗೆ ಕರೆ ಮಾಡುವುದಿಲ್ಲ. ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಪಾಸ್‌ವರ್ಡ್‌/ಪಿನ್‌ ಬದಲಿಸಲು, ಆನ್‌ಲೈನ್‌ ಬ್ಯಾಂಕಿಂಗ್‌ ಪಾಸ್‌ವರ್ಡ್‌ ಬದಲಿಸಲು ಕೇಳುವುದಿಲ್ಲ. ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಹಣಕಾಸಿನ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಆಗಾಗ್ಗೆ ಗ್ರಾಹಕರಲ್ಲಿ ಮನವಿ ಮಾಡುತ್ತಲೇ ಇರುತ್ತವೆಯಾದರೂ ವಂಚಕರ ಜಾಲಕ್ಕೆ ಬೀಳುವವರ ಸಂಖ್ಯೆ ಕಡಿಮೆಯೇನೂ ಆಗಿಲ್ಲ.

ಕೆಲವು ಮುನ್ನೆಚ್ಚರಿಕಾ ಕ್ರಮಗಳು

* ಮೊದಲನೆಯದಾಗಿ ಯಾವತ್ತೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿರುವುದು, ಬ್ಯಾಂಕ್‌ಗಳು ಯಾವುದೇ ಕಾರಣಕ್ಕೂ ನಿಮಗೆ ಕರೆ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ ಎನ್ನುವುದನ್ನು

* ಮೆಸೇಜ್‌ನಲ್ಲಿ ಬರುವ ಯಾವುದೇ ಲಿಂಕ್‌ ಮೇಲೆಯೂ ಕ್ಲಿಕ್‌ ಮಾಡಬೇಡಿ. ಕೈತಪ್ಪಿನಿಂದ ಕ್ಲಿಕ್ ಮಾಡಿದರೂ ಯಾವುದೇ ರೀತಿಯ ವೈಯಕ್ತಿಕ ಮಾಹಿತಿ ನೀಡಬೇಡಿ

* ಅನುಮಾನ ಬಂದರೆ ಅಧಿಕೃತ ಜಾಲತಾಣಕ್ಕೆ ಹೋಗಿ ಲಾಗಿನ್‌ ಆಗಿ. ನಿಜವಾಗಿಯೂ ಸಮಸ್ಯೆ ಇದ್ದರೆ ಆಗ ನೀವು ಏನು ಮಾಡಬೇಕು ಎನ್ನುವ ಬಗ್ಗೆ ಅಲ್ಲಿ ಮಾಹಿತಿ ಪಡೆದುಕೊಳ್ಳಬಹುದು

* ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಹಿಂಭಾಗದಲ್ಲಿ ನೀಡಿರುವ ಸಹಾಯವಾಣಿ ಅಥವಾ ಮೊಬೈಲ್‌ ನಂಬರ್‌ ಜತೆಯೂ ಸಂದೇಶ ಬಂದಿರುವ ಮೊಬೈಲ್‌ ಸಂಖ್ಯೆಯನ್ನು ತಾಳೆ ಮಾಡಿ ನೋಡಿ. ಅನುಮಾನ ಬಂದರೆ ಕಾರ್ಡ್‌ ಹಿಂಭಾಗದಲ್ಲಿ ಇರುವ ಸಂಖ್ಯೆಗೆ ಕರೆ ಮಾಡಿ.

* ಯಾವುದೇ ಬ್ಯಾಂಕ್‌/ಹಣಕಾಸು ಸಂಸ್ಥೆಯೂ ಫೋನ್‌ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಕಳುಹಿಸುವಂತೆ ಕೇಳುವುದಿಲ್ಲ.

* ಆ್ಯಂಟಿ ವೈರಸ್‌ ಸಾಫ್ಟ್‌ವೇರ್‌ ಇಟ್ಟುಕೊಂಡು ಅದನ್ನು ಕಾಲಕಾಲಕ್ಕೆ ಅಪ್‌ಡೇಟ್‌ ಮಾಡುತ್ತಿರಿ

* ಸಂದೇಹಾಸ್ಪದ ಮೂಲಗಳಿಂದ ಬಂದ ಇ-ಮೇಲ್‍ಗಳನ್ನು ಓಪನ್ ಮಾಡಬೇಡಿ.

* ಆನ್‌ಲೈನ್‌ ಷಾಪಿಂಗ್‌ ಮಾಡುವಾಗ ಆದಷ್ಟೂ ಅಧಿಕೃತ ಜಾಲತಾಣಗಳ ಮೂಲಕವೇ ವ್ಯವಹರಿಸಿ. ಕಾರ್ಡ್‌ ನಂಬರ್‌, ಎಕ್ಸ್‌ಪೈರಿ ಡೇಟ್‌ ನೀಡಿ ಹಣ ಪಾವತಿಸುವ ಮುನ್ನ Remember this for future ಎನ್ನುವಲ್ಲಿ ಟಿಕ್‌ ಮಾರ್ಕ್‌ ಇದ್ದರೆ ಅದನ್ನು ಅನ್‌ ಟಿಕ್‌ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT