ಮಂಗಳವಾರ, ನವೆಂಬರ್ 24, 2020
26 °C
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ನಡೆದಿದೆ ಸಕಲ ಸಿದ್ಧತೆ

ವಿಶ್ವದಲ್ಲೇ ಮೊದಲ ಬಾರಿಗೆ ‘ವರ್ಚುವಲ್’ ಶೃಂಗಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಿಜಿಗುಡುವ ಜನಸಂದಣಿ, ನೂಕುನುಗ್ಗಲು, ನಾಲ್ಕೈದು ಕಡೆ ನಡೆಯುವ ತಂತ್ರಜ್ಞಾನ ಗೋಷ್ಠಿಗಳಲ್ಲಿ ಆಯ್ಕೆಯ ಸಮಸ್ಯೆ, ಅಲ್ಲಿಂದಿಲ್ಲಿಗೆ ಓಡಾಡುವ ತಾಪತ್ರಯಗಳೇ ಇಲ್ಲದಂತೆ ಈ ಬಾರಿಯ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯಲ್ಲಿ ಪಾಲ್ಗೊಳ್ಳಬಹುದು.

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ವಿಶ್ವದಲ್ಲೇ ಮೊದಲ ಬಾರಿಗೆ ವರ್ಚುವಲ್ ರೂಪದಲ್ಲಿ ನಡೆಯುತ್ತಿರುವ ’ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’(ಬಿಟಿಎಸ್) ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

‘ಪ್ರಜಾವಾಣಿ’ ಕಚೇರಿಗೆ ಶುಕ್ರವಾರ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಹಾಗೂ ಐಟಿ–ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಟಿಎಸ್‌ ಯಶಸ್ಸುಗೊಳಿಸಲು ಇಲಾಖೆ ನಡೆಸಿರುವ ಸಿದ್ಧತೆಯನ್ನು ಸಾದ್ಯಂತ ವಿವರಿಸಿದರು.

ಐಟಿ ಮತ್ತು ಐಟಿ ಸಂಬಂಧಿತ ಕ್ಷೇತ್ರಗಳಲ್ಲಿ ಬೆಂಗಳೂರು ತನ್ನ ಮುಂಚೂಣಿ ನಾಯಕತ್ವವನ್ನು ಕೋವಿಡ್ ಕಾಲದಲ್ಲೂ ಉಳಿಸಿಕೊಂಡಿದೆ. ಅದನ್ನು ಇನ್ನಷ್ಟು ವೈಭವ ಹಾಗೂ ಸಮೃದ್ಧಿಯತ್ತ ಕೊಂಡೊಯ್ಯುವುದು ಈ ವರ್ಷದ ಬಿಟಿಎಸ್‌ನ ಆಶಯ ಎಂದರು.

ಮಾರ್ಚ್‌ನಿಂದ ಅಕ್ಟೋಬರ್‌ವರೆಗಿನ ಕೋವಿಡ್ ಕಾಲಘಟ್ಟದಲ್ಲಿ ಐ.ಟಿ ಕ್ಷೇತ್ರ ತನ್ನ ಹೆಗ್ಗಳಿಕೆ ಉಳಿಸಿಕೊಂಡಿದೆ. ಈ ಅವಧಿಯಲ್ಲಿ ಐ.ಟಿ ರಫ್ತಿನಲ್ಲಿ ₹1.16 ಲಕ್ಷ ಕೋಟಿ ಮೌಲ್ಯದಷ್ಟು ವಹಿವಾಟು ನಡೆದಿದೆ. ನವೋದ್ಯಮಕ್ಕೆ ಕರ್ನಾಟಕ ಆದ್ಯತೆ ನೀಡಿರುವುದರಿಂದಾಗಿ ಪ್ರತಿವರ್ಷ 50ರಿಂದ 100ರಷ್ಟು ಹೊಸ ನವೋದ್ಯಮಗಳು ಆರಂಭವಾಗುತ್ತಲೇ ಇವೆ ಎಂದು ವಿವರಿಸಿದರು.

ವರ್ಚುವಲ್‌ ರೂಪದಲ್ಲಿ ತಂತ್ರಜ್ಞಾನ ಸಮಾವೇಶ ನಡೆಯುತ್ತಿರುವುದರಿಂದಾಗಿ ಅನೇಕ ಅನುಕೂಲಗಳು ಲಭಿಸಲಿವೆ. ಹಿಂದಿನಂತೆಯೇ ಭೌತಿಕ ರೂಪದಲ್ಲಿ ನಡೆದಿದ್ದರೆ ವಿಶ್ವದ ನಾನಾ ದಿಕ್ಕುಗಳಲ್ಲಿರುವ ತಂತ್ರಜ್ಞಾನ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು, ವಿಶ್ವಶ್ರೇಷ್ಠ ತಂತ್ರಜ್ಞರು, ವಿಜ್ಞಾನಿಗಳು ಹಾಗೂ ಉದ್ಯಮಿಗಳು ಭಾಗಿಯಾಗಲು ಸಾಧ್ಯವಾಗುತ್ತಿರಲಿಲ್ಲ. ವರ್ಚುವಲ್ ರೂಪದಲ್ಲಿ ನಡೆಯುತ್ತಿರುವುದರಿಂದ ಅವರು ಎಲ್ಲಿರುತ್ತಾರೋ ಅಲ್ಲಿಂದಲೇ ಪಾಲ್ಗೊಳ್ಳುವ ಅವಕಾಶ ಒದಗುವುದರಿಂದ ಜಗತ್ತಿನ ತಂತ್ರಜ್ಞಾನ ದಿಗ್ಗಜರ ಜ್ಞಾನ ಹಾಗೂ ತಿಳಿವಳಿಕೆ ಬಿಟಿಎಸ್‌ನಲ್ಲಿ ಸಿಗಲಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

250ಕ್ಕೂ ಹೆಚ್ಚು ತಂತ್ರಜ್ಞಾನ ಮಳಿಗೆಗಳು ವರ್ಚುವಲ್ ರೂಪದಲ್ಲೇ ಭಾಗವಹಿಸಲಿವೆ. ಭೌತಿಕವಾಗಿ ಪಾಲ್ಗೊಳ್ಳುವುದು ದೂರದ ದೇಶಗಳ ತಂತ್ರಜ್ಞಾನ ಸಂಸ್ಥೆಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಅನೇಕ ಶೃಂಗಗಳಲ್ಲಿ ದೇಶೀಯ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದವು. ಈ ಬಾರಿ ವರ್ಚುವಲ್ ಆಗಿ ನಡೆಯುತ್ತಿರುವುದರಿಂದ, ಆಯಾ ದೇಶಗಳಲ್ಲಿದ್ದುಕೊಂಡೇ ಭಾಗವಹಿಸುವ ಅಮೂಲ್ಯ ಅವಕಾಶ ಒದಗಲಿದೆ. ಕೃಷಿ, ಆರೋಗ್ಯ, ಆತಿಥ್ಯ, ಪ್ರವಾಸೋದ್ಯಮ ಇನ್ನಿತರ ಕ್ಷೇತ್ರಗಳಿಗೆ ಈ ಶೃಂಗಸಭೆಯಿಂದ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ ಎಂದರು.

ಉದ್ಘಾಟನೆಗೆ ಮೋದಿ: ಇದೇ 19ರಿಂದ 21ರವರೆಗೆ ನಡೆಯಲಿರುವ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ರೂಪದಲ್ಲಿ ಉದ್ಘಾಟಿಸಲಿದ್ದಾರೆ. ಆಸ್ಟ್ರೇಲಿಯ, ನೆದರ್‌ಲೆಂಡ್‌ ಹಾಗೂ ಜರ್ಮನಿಯ ಪ್ರಧಾನ ಮಂತ್ರಿಗಳು ಭಾಗಿಯಾಗಲಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಕೈಗಾರಿಕೆಗಳಿಗೆ ಪೂರಕವಾಗುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ, ಕೌಶಲಾಭಿವೃದ್ಧಿ, ಕಲಿಕಾ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ. ವ್ಯಾಸಂಗದ ಹಂತದಲ್ಲೇ ಇಂಟರ್ನ್‌ಶಿಪ್‌ಗೆ ಒತ್ತು ನೀಡಲಾಗುತ್ತಿದೆ. ಈ ಬಾರಿಯ ಶೃಂಗಸಭೆಯ ಯಶಸ್ಸಿಗೆ ’ಗ್ಲೋಬಲ್ ಇನ್ನೋವೇಶನ್ ಅಲಯನ್ಸ್‌‘ ಎಂಬ ಸಂಸ್ಥೆಯ ನೆರವು ಪಡೆಯಲಾಗಿದ್ದು, ಅದಕ್ಕಾಗಿ ಸಲಹೆಗಾರರ ಸಮಿತಿಯನ್ನೂ ರಚಿಸಲಾಗಿದೆ ಎಂದು ವಿವರಿಸಿದರು.

‘ಕುಲಪತಿ ನೇಮಕಾತಿ ಭ್ರಷ್ಟಾಚಾರ ಮುಕ್ತ’

‘ಭ್ರಷ್ಟಾಚಾರಕ್ಕೆ ಕಿಂಚಿತ್ತು ಆಸ್ಪದ ಕೊಡದ ರೀತಿಯಲ್ಲಿ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿ ನಡೆಯುತ್ತಿದೆ. ಅಂತಹ ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಿರುವ ಬಗ್ಗೆ ಒಂದೇ ಒಂದು ದಾಖಲೆ ಕೊಟ್ಟರೆ, ದಾಖಲೆ ಕೊಟ್ಟವರು ಹೇಳಿದಂತೆ ಕೇಳುವೆ’ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

’ಕುಲಪತಿ ಹುದ್ದೆ ಪಡೆದುಕೊಳ್ಳಲು ಬಂಡವಾಳ ಹಾಕಿದವರು ಲಾಭ ಪಡೆಯಲು ಮುಂದಾಗುತ್ತಾರೆ. ಈ ಹುದ್ದೆಗೆ ದೊಡ್ಡ ಮಟ್ಟದ ಹಣ ಕೊಡಬೇಕಾಗುತ್ತದೆ ಎಂಬೆಲ್ಲ ಆಪಾದನೆಗಳಿವೆ. ಹಿಂದೆ ನಡೆದ ಇಂತಹ ಘಟನೆಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದಕ್ಕೆ ಅವಕಾಶ ಕೊಟ್ಟಿಲ್ಲ. ಆತ್ಮಹತ್ಯೆ ಮಾಡಿಕೊಂಡ ಎನ್.ಎಸ್‌. ಅಶೋಕ್‌ ಕುಮಾರ್ ಪ್ರಕರಣದಲ್ಲಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರದ್ದು ಹಿಟ್‌ ಆ್ಯಂಡ್ ರನ್‌ ಶೈಲಿಯಷ್ಟೇ‘ ಎಂದರು.

ಅಂಕಿ ಅಂಶ

27 ದೇಶಗಳು ಭಾಗಿ

270 ಸಂಪನ್ಮೂಲ ವ್ಯಕ್ತಿಗಳು

250 ಪ್ರದರ್ಶನ ಮಳಿಗೆಗಳು

4000 ‍ಪ್ರತಿನಿಧಿಗಳು ಭಾಗಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು