ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್‌ಗೆ ವೈರಸ್ ಬಾಧೆ

Last Updated 18 ಮೇ 2020, 19:30 IST
ಅಕ್ಷರ ಗಾತ್ರ

ಕೊರೊನಾ ವೈರಸ್‌‌ನಿಂದಾಗಿ ಕಂಗೆಟ್ಟಿರುವ ಭಾರತೀಯರನ್ನು ವೈರಸ್ ತಂತ್ರಾಂಶಗಳೂ ಬಾಧಿಸುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ‘ಇವೆಂಟ್‌ಬಾಟ್’ ಹೆಸರಿನ ಟ್ರೋಜನ್ ವೈರಸ್. ಈ ಕುರಿತು ಎಚ್ಚರಿಕೆ ವಹಿಸುವಂತೆ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್‌ಟಿ) ಎಚ್ಚರಿಕೆ ನೀಡಿದೆ.

ವಿಶೇಷವಾಗಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಎಚ್ಚರಿಕೆ ವಹಿಸಬೇಕಾಗಿದೆ. ಇಲ್ಲವಾದರೆ ಅವರ ವೈಯಕ್ತಿಕ ಹಣಕಾಸು ಮಾಹಿತಿಯು ಸೋರಿಕೆಯಾಗಿ, ಬ್ಯಾಂಕ್ ಖಾತೆ ಬರಿದಾಗುವ ಅಪಾಯವಿದೆ.

ಇವೆಂಟ್ ಬಾಟ್ ಎಂಬ ಬ್ಯಾಂಕಿಂಗ್ ಟ್ರೋಜನ್ (ಮಾಲ್‌ವೇರ್) ನಿರ್ದಿಷ್ಟವಾಗಿ ಹಣಕಾಸು ಆ್ಯಪ್‌ಗಳನ್ನೇ ಗುರಿಯಾಗಿಸಿಕೊಂಡಿದೆ. ಇದು ಆಂಡ್ರಾಯ್ಡ್‌ನಲ್ಲಿ ನಾವು ಹಣಕಾಸು ಆ್ಯಪ್‌ಗಳಿಗೆ ನೀಡಿರುವ ಪ್ರವೇಶಾವಕಾಶದ ಮಾಹಿತಿಯನ್ನು ಕದಿಯಬಲ್ಲುದು; ಎಸ್‌ಎಂಎಸ್ ಸಂದೇಶಗಳನ್ನೂ ಓದಬಲ್ಲದು.

ಇದುವರೆಗೆ ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಈ ಕುತಂತ್ರಾಂಶವು ಪತ್ತೆಯಾಗಿಲ್ಲ. ಆದರೂ, ನಿಜವಾದ ಬ್ಯಾಂಕಿಂಗ್ ಆ್ಯಪ್‌ನ ಸೋಗಿನಲ್ಲೇ ಅದು ಕಾಣಿಸಿಕೊಂಡು ಜನರನ್ನು ವಂಚಿಸುವ ಸಾಧ್ಯತೆ ಇದೆ ಎಂದು ಸಿಇಆರ್‌ಟಿ ಎಚ್ಚರಿಕೆ ನೀಡಿದೆ. ಹಾಗಾಗಿ, ವಿಶ್ವಾಸಾರ್ಹವಲ್ಲದ ತಾಣಗಳಿಂದಾಗಲಿ, ಶೇರ್ ಮಾಡಿರುವ ಎಪಿಕೆ ಫೈಲ್ ಮೂಲಕವಾಗಿಯೇ ಆಗಲಿ, ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬಾರದು. ಎಸ್‌ಎಂಎಸ್, ಇಮೇಲ್ ಮೂಲಕ ಬರುವ ಲಿಂಕ್ ಕ್ಲಿಕ್ ಮಾಡಬಾರದು ಎಂದು ಸಲಹೆ ನೀಡಿದೆ.

ಅದೇ ರೀತಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಮುನ್ನ ಬಳಕೆದಾರರು ಆ್ಯಪ್‌ನ ರಿವ್ಯೂಗಳು, ವಿವರಗಳು, ಎಷ್ಟು ಡೌನ್‌ಲೋಡ್ ಆಗಿದೆ ಎಂಬುದೇ ಮುಂತಾದ ಮಾಹಿತಿಯನ್ನು ನೋಡಿಕೊಳ್ಳಬೇಕು. ಜೊತೆಗೆ, ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಗೆ ಲಭ್ಯವಾಗುವ ಆಂಡ್ರಾಯ್ಡ್ ಅಪ್‌ಡೇಟ್ಸ್ ಹಾಗೂ ಪ್ಯಾಚಸ್ ಅನ್ನು ತಪ್ಪದೇ ಅಳವಡಿಸಿಕೊಂಡು ಮಾಲ್‌ವೇರ್‌ಗಳಿಂದ ಸುರಕ್ಷಿತವಾಗಿರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT