ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟರಿ ಇಲ್ಲದ ಗ್ಯಾಜೆಟ್‌ಗಳು.. ಸಾಧಕ-ಬಾಧಕಗಳೇನು?

Last Updated 3 ಮೇ 2022, 20:30 IST
ಅಕ್ಷರ ಗಾತ್ರ

ಯಾವುದೇ ಎಲೆಕ್ಟ್ರಾನಿಕ್ ಸಾಧನಕ್ಕೂ ಬ್ಯಾಟರಿಯೇ ಜೀವಾಳ. ಬ್ಯಾಟರಿಯೊಂದು ಇಲ್ಲದ ಗ್ಯಾಜೆಟ್‌ ನಿಷ್ಕ್ರಿಯ ವಸ್ತುವಷ್ಟೆ. ಅದು ಸಣ್ಣ ಸ್ಮಾರ್ಟ್‌ ವಾಚ್‌ನಿಂದ ಕಂಪ್ಯೂಟರ್‌ವರೆಗೆ – ಎಲ್ಲಕ್ಕೂ ಬ್ಯಾಟರಿ ಎಂಬ ಜೀವಧಾರಕ ವಸ್ತು ಬೇಕೇ ಬೇಕು.

ಒಂದೆಡೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿಯ ದಕ್ಷತೆ ಹೆಚ್ಚಿಸುವುದು ಹೇಗೆ ಎಂದು ಸಂಶೋಧನೆ ನಡೆಯುತ್ತಿದೆ. ಇದೇ ಸಂಶೋಧನೆಯನ್ನು ಕೆಲವು ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್‌ ಕಂಪನಿಗಳು ನಡೆಸುತ್ತಿದ್ದವು. ಆಗ ಜನರು ಸ್ಮಾರ್ಟ್‌ಫೋನ್‌ ಕೈಯಲ್ಲಿ ಹಿಡಿದು ಬ್ಯಾಗ್‌ನಲ್ಲೊಂದು ಇಟ್ಟಿಗೆಯಂಥ ಪವರ್‌ ಬ್ಯಾಂಕ್ ಇಟ್ಟುಕೊಳ್ಳುತ್ತಿದ್ದರು. ಆದರೆ, ಈಗ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಎಂಬುದು ದೊಡ್ಡ ಸಮಸ್ಯೆಯೇನೂ ಅಲ್ಲ. ಒಂದು ದಿನ ಇಡೀ ಬಳಕೆ ಮಾಡಬಹುದಾದಷ್ಟು ಚಾರ್ಜ್ ನಿಲ್ಲುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಯಲ್ಲೇ ಇವೆ.

ಆದರೆ, ಈಗ ಸ್ಮಾರ್ಟ್‌ಫೋನ್‌ ಕಂಪನಿಗಳು ಹೊಸ ಹಾದಿ ಹಿಡಿಯಲು ಆರಂಭಿಸಿವೆ. ಈ ಬ್ಯಾಟರಿಯ ಬದಲಿಗೆ ಪರ್ಯಾಯ ಶಕ್ತಿಮೂಲವನ್ನು ಹುಡುಕುವ ಹಲವು ಪ್ರಯತ್ನಗಳನ್ನು ಇವು ಶುರು ಮಾಡಿವೆ.

ಇತ್ತೀಚೆಗೆ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ‘ಒಪ್ಪೊ’ ತನ್ನದೊಂದು ಪ್ರಸ್ತಾಪವನ್ನು ಕಾಗದದ ರೂಪದಲ್ಲಿ ಮಂಡಿಸಿದೆ. ಈ ಪ್ರಸ್ತಾವನೆಯ ಪ್ರಕಾರ ಸಣ್ಣ ಸಣ್ಣ ಗ್ಯಾಜೆಜ್‌ಗಳಿಗೆ ಬ್ಯಾಟರಿ ಬದಲಿಗೆ ರೇಡಿಯೋ ಸಿಗ್ನಲ್‌ಗಳ ಮೂಲಕ ವಿದ್ಯುತ್ತನ್ನು ಒದಗಿಸಬಹುದು! ಹೀಗೆಂದು ಇನ್ನೊಂದೆರಡು ವರ್ಷಗಳಲ್ಲಿ ಬ್ಯಾಟರಿಯೇ ಇಲ್ಲದ ಸ್ಮಾರ್ಟ್‌ಫೋನ್‌ಗಳು ಇ-ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ರಾರಾಜಿಸುತ್ತವೆ ಎಂದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ, ಒಪ್ಪೊ ಪ್ರಸ್ತಾಪಿಸುತ್ತಿರುವ ಈ ತಂತ್ರಜ್ಞಾನ ಕೇವಲ ಸಣ್ಣ ಗ್ಯಾಜೆಟ್‌ಗಳಿಗೆ ಮಾತ್ರ. ಸಣ್ಣ ಗ್ಯಾಜೆಟ್‌ಗಳಿಗೆ ಅತ್ಯಂತ ಕಡಿಮೆ ಪವರ್ ಸಾಕಾಗುತ್ತದೆ. ಹೀಗಾಗಿ, ಇವುಗಳಿಗೆ ವೇವ್‌ಗಳಿಂದ ಸಿಗುವ ಪವರ್ ಸಾಲಬಹುದು. ಒಪ್ಪೊ ಹೇಳುವ ಪ್ರಕಾರ ದೊಡ್ಡ ದೊಡ್ಡ ಉದ್ಯಮಗಳು, ಸಾರಿಗೆ ಹಾಗೂ ಸ್ಮಾರ್ಟ್‌ ಹೋಮ್‌ ಅಪ್ಲಿಕೇಶನ್‌ಗಳಲ್ಲೂ ಇದನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.

ನಮ್ಮ ಸುತ್ತ ಹಲವು ರೀತಿಯ ರೇಡಿಯೋ ವೇವ್‌ಗಳು ತೇಲುತ್ತಿರುತ್ತವೆ. ಎಫ್‌ಎಂ ಟವರ್‌ಗಳ ಸಿಗ್ನಲ್‌ಗಳು (ಮೊದಲು ಮೀಡಿಯಂ ವೇವ್‌ ರೇಡಿಯೋ ಸಿಗ್ನಲ್‌ಗಳು), ಟಿವಿ ಟವರ್‌ಗಳು (ಈಗ ಇವುಗಳ ಸಂಖ್ಯೆ ಕಡಿಮೆ ಇವೆ), ಮೊಬೈಲ್‌ ನೆಟ್‌ವರ್ಕ್‌ಗಳು, ವೈಫೈ ಸಿಗ್ನಲ್‌ಗಳು ಸೇರಿದ ಹಾಗೆ ಹಲವು ರೀತಿಯ ರೇಡಿಯೋ ಫ್ರೀಕ್ವೆನ್ಸಿಗಳಿರುತ್ತವೆ. ನಗರದಲ್ಲಿ ಕನಿಷ್ಠ 8-10 ರೇಡಿಯೋ ಫ್ರೀಕ್ವೆನ್ಸಿ ಸಿಗುತ್ತವೆ. ಗ್ರಾಮೀಣ ಭಾಗದಲ್ಲಿ ಕನಿಷ್ಠ ಒಂದೆರಡಾದರೂ ಸಿಗುತ್ತವೆ.

ಬ್ಯಾಟರಿ ಇಲ್ಲದ ಗ್ಯಾಜೆಟ್‌ಗಳ ಅನುಕೂಲ ಮುಖ್ಯವಾಗಿ ಎರಡು ರೀತಿಯವು. ಯಾವುದೇ ಗ್ಯಾಜೆಟ್‌ನಲ್ಲಿ ಬ್ಯಾಟರಿ ವೆಚ್ಚವೇ ಮುಖ್ಯ ಭಾಗವಾಗಿರುತ್ತದೆ. ಇನ್ನೊಂದು, ಬ್ಯಾಟರಿಯಿಂದ ಗ್ಯಾಜೆಟ್‌ ಬಾಳಿಕೆ ಸೀಮಿತವಾಗುತ್ತದೆ. ಇವೆರಡೂ ಒಂದು ಗ್ಯಾಜೆಟ್‌ನಲ್ಲಿ ನಮಗೆ ಕಾಣಿಸುವ ಮುಖ್ಯ ಸಮಸ್ಯೆ. ಗ್ಯಾಜೆಟ್‌ಗೆ ಬೇಕಾಗುವ ಪವರ್ ಅನ್ನು ಬೇರೆ ಮೂಲದಿಂದ ತರುವಂತಾದರೆ ಈ ಎರಡೂ ಸಮಸ್ಯೆ ನಿವಾರಣೆಯಾಗುತ್ತದೆ. ಅದರಲ್ಲೂ ಗ್ಯಾಜೆಟ್ ಬಾಳಿಕೆ ವಿಚಾರದಲ್ಲಂತೂ, ರೇಡಿಯೋ ಫ್ರೀಕ್ವೆನ್ಸಿಯನ್ನು ಬಳಸಿದರೆ ಬ್ಯಾಟರಿ ಇಲ್ಲದೇ ಒಂದು ಗ್ಯಾಜೆಟ್‌ ತುಂಬ ಕಾಲದವರೆಗೆ ಬಾಳಿಕೆ ಬರಬಹುದು.

ಆದರೆ, ಕಂಪನಿ ಹೇಳಿಕೊಳ್ಳುವ ಹಾಗೆ ಝೀರೋ ಪವರ್ ಬಳಕೆ ಸಂವಹನ ತಂತ್ರಜ್ಞಾನವು ರೇಡಿಯೋ ಫ್ರೀಕ್ವೆನ್ಸಿಯಿಂದ ಗಮನಾರ್ಹ ಪ್ರಮಾಣದ ವಿದ್ಯುತ್ತನ್ನ ಉತ್ಫಾದನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಸದ್ಯಕ್ಕೆ ಇವು ಕೇವಲ ಸಣ್ಣ ಸಣ್ಣ ಗ್ಯಾಜೆಟ್‌ಗಳ ಬಳಕೆಗೆ ಮಾತ್ರ ಸೀಮಿತವಾಗುತ್ತದೆ. ಸದ್ಯದ ಮಟ್ಟಿಗಂತೂ ಈ ರೇಡಿಯೋ ಫ್ರೀಕ್ವೆನ್ಸಿಯನ್ನೇ ಬಳಸಿಕೊಂಡು ಒಂದು ಸ್ಮಾರ್ಟ್‌ಫೋನ್‌ ರನ್ ಮಾಡುವುದು ಸಾಧ್ಯವೇ ಇಲ್ಲ.

ಸದ್ಯಕ್ಕೆ ಈ ಝೀರೋ ಪವರ್ ಕಮ್ಯೂನಿಕೇಶನ್‌ ಪರಿಕಲ್ಪನೆಯನ್ನು ಐಒಟಿ ಸಾಧನಗಳಿಗೆ ಬಳಸಬಹುದು. ಅಂದರೆ, ಸ್ಮಾರ್ಟ್‌ವಾಚ್‌ಗಳು, ಮೆಡಿಕಲ್ ಸೆನ್ಸರ್‌ಗಳಿಗೆ ಬಳಕೆ ಮಾಡಬಹುದು. ಅಲ್ಲದೆ, ಟ್ರ್ಯಾಕರ್‌ಗಳಿಗೆ ಇದರ ಬಳಕೆ ಅತ್ಯಂತ ಮುಖ್ಯವಾಗುತ್ತದೆ. ಟ್ರ್ಯಾಕರ್‌ಗಳಿಗೆ ಬ್ಯಾಟರಿಯೇ ಒಂದು ದೊಡ್ಡ ಅಡ್ಡಿಯಾಗಿತ್ತು. ಬ್ಯಾಟರಿ ಖಾಲಿಯಾದ ನಂತರ ಟ್ರ್ಯಾಕರ್‌ಗಳು ಕೆಲಸ ಮಾಡುವುದಿಲ್ಲ. ಇದು ಟ್ರ್ಯಾಕರ್‌ನ ಮೂಲ ಉದ್ದೇಶವನ್ನೂ ಗೌಣವಾಗಿಸಿಬಿಡುತ್ತಿವೆ. ಒಂದು ವೇಳೆ, ಈ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಗೆ ಬಂದಲ್ಲಿ ಎಲ್ಲ ಪ್ರಮುಖ ಗ್ಯಾಜೆಟ್‌ಗಳ ಟ್ರ್ಯಾಕರ್‌ಗಳಿಗೂ ಈ ತಂತ್ರಜ್ಞಾನವನ್ನು ಅಳವಡಿಸಬಹುದೇನೋ!

ಹೀಗೆಂದು, ಈ ಪ್ರಸ್ತಾವನೆಯೇನೂ ಹೊಸತಲ್ಲ. ಈಗಾಗಲೇ ಸ್ಯಾಮ್‌ಸಂಗ್‌, ರೇಡಿಯೋ ಫ್ರೀಕ್ವೆನ್ಸಿ ಬಳಸಿ ಕೆಲಸ ಮಾಡುವ ಟಿವಿ ರಿಮೋಟ್‌ಗಳನ್ನು ವರ್ಷಾಂತ್ಯದ ಒಳಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಸ್ಯಾಮ್‌ಸಂಗ್‌ ಅದಾಗಲೇ ಮನೆ ಒಳಗಿನ ಬೆಳಕು ಮತ್ತು ಹೊರಗಿನ ಬೆಳಕನ್ನು ಬಳಸಿ ಚಾರ್ಜ್‌ ಆಗುವ ರಿಮೋಟ್ ಅನ್ನೂ ಬಿಡುಗಡೆ ಮಾಡಿತ್ತು. ಇದರ ಜೊತೆಗೆ ಈಗ ರೇಡಿಯೋ ಫ್ರೀಕ್ವೆನ್ಸಿಯನ್ನು ಪವರ್‌ಗೆ ಬಳಸಿಕೊಳ್ಳುವ ರಿಮೋಟ್ ಅನ್ನೂ ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿದೆ. ಇದು ಸೆಲ್ಫ್‌ ಚಾರ್ಜಿಂಗ್‌ ಸಾಧನಗಳ ಕಡೆಗೆ ತಂತ್ರಜ್ಞಾನ ಸಾಗುತ್ತಿರುವುದರ ಮೊದಲ ಹೆಜ್ಜೆಯೂ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT