ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆಕಳ್ಳರಿದ್ದಾರೆ, ಎಚ್ಚರ!

Last Updated 1 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

‘ನಿಮ್ಮ ಬ್ಯಾಂಕ್ ಖಾತೆ ಸ್ಥಗಿತವಾಗಿದೆ. ಅದನ್ನು ಮತ್ತೆ ಸಕ್ರೀಯಗೊಳಿಸಲು ನಿಮ್ಮ ಮೊಬೈಲ್‌ ಫೋನ್‍ಗೆ ಕಳುಹಿಸಿರುವ ಓಟಿಪಿ ಸಂಖ್ಯೆ ನನಗೆ ಕೊಡಿ’, ‘ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಮಾತನಾಡುತ್ತಿರುವುದು; ಹೆಚ್ಚಾಗಿ ಸಂದಾಯ ಮಾಡಿರುವ ಆದಾಯ ತೆರಿಗೆಯನ್ನು ಮರುಪಾವತಿಸಬೇಕು. ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿದರೆ, ಇವತ್ತೇ ಹಣ ವರ್ಗಾಯಿಸುತ್ತೇವೆ’ – ಈ ರೀತಿ ಗ್ರಾಹಕರನ್ನು ವಂಚಿಸುವ ಕರೆಗಳನ್ನು ನಂಬಿ, ಲಕ್ಷಾಂತರ ರೂಪಾಯಿ ಕಳೆದುಕೊಂಡವರಿದ್ದಾರೆ.

ಒಂದು ಸಮೀಕ್ಷೆಯ ಪ್ರಕಾರ, 2021ರಲ್ಲಿ ₹ 40,000 ಕೋಟಿಗೂ ಹೆಚ್ಚು ಇಂತಹ ದೂರವಾಣಿ ಕರೆಗಳು ವಿಶ್ವದಾದ್ಯಂತ ಗ್ರಾಹಕರನ್ನು ಕಾಡಿವೆ. ಕೊರೊನಾ ಸಂತ್ರಸ್ಥರಿಗೆ ನಿಧಿ ಸಂಗ್ರಹಿಸುತ್ತಿದ್ದೇವೆ ಎಂದು ಕರೆ ಮಾಡಿದವರನ್ನು ನಂಬಿ ಅನೇಕರು ಹಣ ಕಳೆದುಕೊಂಡಿದ್ದಾರೆ. ನಕಲಿ ಕಾಲ್‌ ಸೆಂಟರ್‌ಗಳಿಂದ ಬರುವ ಕರೆಗಳಿಂದ ನೂರಾರು ಕೋಟಿ ರೂಪಾಯಿಗಳಷ್ಟು ಹಣ ಕಳೆದುಕೊಂಡಿದ್ದಾರೆ. ಹೀಗಾಗಿ ಜನಸಾಮಾನ್ಯರು ಇಂತಹ ಕರೆಗಳ ಕುರಿತು ಜಾಗೃತೆಯಿಂದ ಇರಬೇಕಾಗಿರುವುದು ಅಗತ್ಯ.

ಯಾವುದೇ ಬ್ಯಾಂಕು, ವಿಮಾ ಸಂಸ್ಥೆ ಅಥವಾ ಸರ್ಕಾರಿ ಇಲಾಖೆಯ ಅಧಿಕಾರಿ ಗ್ರಾಹಕರಿಗೆ ದೂರವಾಣಿ ಕರೆ ಮಾಡಿ ಅವರ ಬ್ಯಾಂಕ್ ಖಾತೆ ಮಾಹಿತಿ, ಆಧಾರ್/ಪ್ಯಾನ್ ಕಾರ್ಡ್‌ ಮಾಹಿತಿ, ಓಟಿಪಿ ಇತ್ಯಾದಿಗಳನ್ನು ಕೇಳಿ ಪಡೆಯುವ ಕೆಲಸ ಮಾಡುವುದಿಲ್ಲ. ಇಂತಹ ಕರೆಗಳು ಬಂದರೆ ತಕ್ಷಣ ಸೈಬರ್ ಪೊಲೀಸರಿಗೆ ದೂರು ನೀಡಬೇಕು.

ಕರೆಕಿರಿ ಮತ್ತು ಕರೆಕಳ್ಳತನ ಪ್ರಕರಣಗಳಲ್ಲಿ ನಕಲಿ ಕಾಲ್‌ ಸೆಂಟರ್‌ಗಳಂತೆ, ಇಂಟರ್‌ನೆಟ್ ಆಧಾರಿತ ಫೋನ್ ಸೌಲಭ್ಯ (ವಿಓಐಪಿ) ಬಳಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಓಐಪಿ ಸೌಲಭ್ಯವನ್ನು ಬಳಸಿಕೊಂಡು ನಮ್ಮ ಪರಿಚಿತರ ದೂರವಾಣಿ ಸಂಖ್ಯೆಯಿಂದ ಕರೆ ಮಾಡಿದಂತೆ, ನಮಗೆ ದೂರವಾಣಿ ಕರೆ ಮಾಡಿ ವಂಚಿಸುವ ಅಪರಾಧಿಗಳಿದ್ದಾರೆ. ಮಹಿಳೆಯರಿಗೆ ಪೋನ್ ಮಾಡಿ ಅಸಭ್ಯವಾಗಿ ವರ್ತಿಸುವುದು ಅಥವಾ ಬ್ಲಾಕ್ ಮೇಲ್‌ ಮಾಡುವಂತಹ ಅಪರಾಧಗಳಲ್ಲಿ ಕೂಡ ವಿಓಐಪಿ ಬಳಕೆಯಾಗುತ್ತಿದೆ. ತಂತ್ರಜ್ಞಾನಗಳ ದುರ್ಬಳಕೆ ಮಾಡಿಕೊಂಡು ಮಾಡುವ ಕರೆಗಳನ್ನು ತನಿಖೆ ಮಾಡಿ, ಅಪರಾಧಿಗಳನ್ನು ಪತ್ತೆ ಮಾಡುವುದು ಸಾಧ್ಯವಿದೆ. ಹೀಗಾಗಿ ಇಂತಹ ಕರೆಗಳು ಬಂದಾಗ, ತಕ್ಷಣ ಸೈಬರ್ ಪೋಲಿಸರಿಗೆ ದೂರು ನೀಡಬೇಕು.

ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ದೊರೆಯುವಂತೆ ಮೊಬೈಲ್‌ ಫೋನ್ ಸಂಖ್ಯೆಯನ್ನು, ವಿಳಾಸ ಮತ್ತು ಕುಟುಂಬ ಸದಸ್ಯರ ವಿವರಗಳನ್ನು ಹಾಗೂ ಚಿತ್ರಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಸಂಖ್ಯೆಗಳನ್ನು ಅಪರಿಚಿತರ ಜೊತೆ ಹಂಚಿಕೊಳ್ಳಬೇಡಿ. ನಿಮ್ಮ ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್‌, ಆಧಾರ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ ಮಾಹಿತಿಯನ್ನು ಎಂದಿಗೂ ಅಪರಿಚಿತರಿಗೆ ನೀಡಬೇಡಿ.

ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಸೇವೆಗಳನ್ನು ಬಳಸುವವರು ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದರ ಮೂಲಕ, ಇಂತಹ ವಂಚನೆಗಳಿಂದ ರಕ್ಷಿಸಿಕೊಳ್ಳಬಹುದು. ನಿಮ್ಮ ಮೊಬೈಲ್‌ ಫೋನ್ ಮತ್ತು ಇಂಟರ್‌ನೆಟ್ ಬಳಸಲು ಅಪರಿಚಿತರಿಗೆ ಅವಕಾಶ ನೀಡಬೇಡಿ. ಉಚಿತವಾಗಿ ದೊರೆಯುತ್ತದೆ ಎಂದು ಅನಧಿಕೃತವಾದ ತಂತ್ರಾಂಶಗಳನ್ನು ಮತ್ತು ಪೈರೆಸಿ ಜಾಲತಾಣಗಳಿಂದ ಪುಸ್ತಕಗಳು, ಚಲನಚಿತ್ರಗಳು, ಹಾಡುಗಳನ್ನು ನಿಮ್ಮ ಮೊಬೈಲ್‌ಗೆ ಡೌನ್‍ಲೋಡ್ ಮಾಡಿಕೊಳ್ಳಬೇಡಿ; ಆಗ ವೈರಸ್ ಮೊದಲಾದ ಕುತಂತ್ರಾಂಶಗಳು ನಿಮ್ಮ ಮೊಬೈಲ್‌ಗೆ ಸೇರುವ ಸಾಧ್ಯತೆ ಇರುತ್ತದೆ. ಇಂತಹ ಕುತಂತ್ರಾಂಶಗಳಿಂದ, ನಮ್ಮ ಫೋನ್‍ನಲ್ಲಿರುವ ದೂರವಾಣಿ ಸಂಖ್ಯೆಗಳು, ಚಿತ್ರಗಳು, ದಾಖಲೆಗಳು, ಸಂದೇಶಗಳನ್ನು ಅಪರಾಧಿಗಳು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ, ನಾವು ಬೇರೆಯವರೊಡನೆ ಕರೆ ಮಾಡಿ ಮಾತನಾಡುವಾಗ, ಕರೆಗಳನ್ನು ಕದ್ದಾಲಿಸಬಹುದು, ರೆಕಾರ್ಡ್ ಮಾಡಿಕೊಳ್ಳಬಹುದು. ನಮಗೆ ಗೊತ್ತಿಲ್ಲದಂತೆ ಮೊಬೈಲ್‌ ಫೋನ್ ಕ್ಯಾಮೆರಾ ಬಳಸಿ ಚಿತ್ರಗಳನ್ನು ಅಥವಾ ವಿಡಿಯೊಗಳನ್ನು ತೆಗೆದು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಎಚ್ಚರಿಕೆ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT