ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಐ’ ಅಭಿವೃದ್ಧಿಗೆ ಕಂಪನಿಗಳ ಆಸಕ್ತಿ

ಇಂಟೆಲ್‌ನ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ತಂಡದ ಉಪಾಧ್ಯಕ್ಷ ಸಂದೀಪ್‌ ಸಾಹು
Last Updated 20 ನವೆಂಬರ್ 2020, 20:51 IST
ಅಕ್ಷರ ಗಾತ್ರ

ಬೆಂಗಳೂರು: ಕೃತಕ ಬುದ್ಧಿಮತ್ತೆಯು (ಎಐ) ಪ್ರತಿ ಕ್ಷೇತ್ರವನ್ನೂ ಆವರಿಸುತ್ತಿದೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಸಾಧನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ಬಹಳಷ್ಟು ಕಂಪ‍ನಿಗಳು ಎಐ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ನೀಡಲಾರಂಭಿಸಿವೆ ಎಂದು ಇಂಟೆಲ್‌ನ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ತಂಡದ ಉಪಾಧ್ಯಕ್ಷ ಸಂದೀಪ್‌ ಸಾಹು ತಿಳಿಸಿದರು.

2025ರ ವೇಳೆಗೆ ₹ 74 ಲಕ್ಷ ಕೋಟಿ ಮೌಲ್ಯದ ಡಿಜಿಟಲ್‌ ಆರ್ಥಿಕತೆ ಸೃಷ್ಟಿಸುವ ಹಾದಿಯಲ್ಲಿ ‘ಎಐ’ ಮತ್ತು ಸಿಲಿಕಾನ್‌ ಪಾತ್ರದ ಕುರಿತು ಅವರು ಮಾಹಿತಿ ನೀಡಿದರು.

ಕೃಷಿ, ಇಂಧನ, ಶಿಕ್ಷಣ, ಆಡಳಿತ, ಹಣಕಾಸು, ಆರೋಗ್ಯ, ಕೈಗಾರಿಕೆ, ಸಾರಿಗೆ, ದೂರಸಂಪರ್ಕ ಹೀಗೆ ಪ್ರತಿ ಕ್ಷೇತ್ರದಲ್ಲಿಯೂ ‘ಎಐ’ ಬಳಕೆ ಹೆಚ್ಚಾಗುತ್ತಿದೆ. 5ಜಿ ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ‘ಎಐ’ ಬೆಳವಣಿಗೆಗೆ ವೇಗ ದೊರೆತಿದೆ. ಮುಂದಿನ 30 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯ ಆ್ಯಪ್‌ಗಳು ಮತ್ತು 5ಜಿ ಬಳಕೆಯು ನಮ್ಮ ಜೀವನದ ಮೇಲೆ ಅತಿ ಹೆಚ್ಚಿನ ಪ್ರಭಾವ ಬೀರಲಿವೆ ಎಂದರು.

ಮುಖ್ಯವಾಗಿ ಮೂರು ಹಂತಗಳಲ್ಲಿ ‘ಎಐ’ ಬೆಳವಣಿಗೆಯನ್ನು ವಿವರಿಸಬಹುದು. ಸ್ಮಾರ್ಟ್‌ಫೋನ್‌, ಸಾರಿಗೆ, ಸ್ಮಾರ್ಟ್‌ ಅಗ್ರಿಕಲ್ಚರ್‌ಗಾಗಿ ಹೊಸ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದೆ. ‘ಎಐ’ಗೆ ಅಗತ್ಯವಾದ ಸಾಫ್ಟ್‌ವೇರ್‌ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿದೆ. ಮೂರನೆಯದು ‘ಎಐ’ ಸಾಧನಗಳಿಗೆ ಅಗತ್ಯವಾದ ಸಿಲಿಕಾನ್‌ ರೂಪಿಸುವುದಾಗಿದೆ ಎಂದರು.

‘ಸರ್ಕಾರ, ಶಿಕ್ಷಣ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಇಂಟೆಲ್‌ ಇಂಡಿಯಾ ಎಐ ಕುರಿತಾಗಿ ಹಲವು ಪಠ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಟ್ರಾಫಿಕ್‌ ವ್ಯವಸ್ಥೆ, ಕಾರ್‌ ಚಾಲಕರ ಸುರಕ್ಷತೆ, ಆರೋಗ್ಯ ಸೇವೆ ವೃದ್ಧಿಸುವಲ್ಲಿ ‘ಎಐ’ ಪಾತ್ರದ ಕುರಿತಾಗಿಯೂ ಹಲವು ಅಧ್ಯಯನಗಳನ್ನು ನಡೆಸಿದೆ’ ಎಂದರು.

****

ಮೊಬೈಲ್‌ ತಯಾರಿಕೆಯಲ್ಲಿ ಚಾಂಪಿಯನ್‌ ಆಗುವ ಅವಕಾಶ

‘ಚಿಪ್‌, ಮೊಬೈಲ್‌ ತಯಾರಿಕೆಯಲ್ಲಿ ಚಾಂಪಿಯನ್‌ ಆಗುವ ಅವಕಾಶ ಭಾರತಕ್ಕೆ ಒದಗಿಬಂದಿದೆ. ಈ ನಿಟ್ಟಿನಲ್ಲಿ ನಾವು ಹೆಚ್ಚಿನ ಗಮನ ಹರಿಸಬೇಕಾಗಿದೆ’ ಎಂದು ಲಾವಾ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನ ಅಧ್ಯಕ್ಷ ಹರಿ ಓಮ್‌ ರಾಯ್‌ ಅಭಿಪ್ರಾಯಪ‍ಟ್ಟರು.

‘ಭಾರತವು ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ಆ್ಯಂಡ್‌ಡಿ) ಹಾಗೂ ಮೊಬೈಲ್‌ ವಿನ್ಯಾಸ ಕ್ಷೇತ್ರದ ಕಡೆ ಗಮನ ಹರಿಸಬೇಕಿದೆ. ಮೊಬೈಲ್‌ ಫೋನ್‌ ಮತ್ತು ಅದರ ಬಿಡಿಭಾಗಗಳ ಮಾರುಕಟ್ಟೆ ಮೌಲ್ಯವು 2030ರ ಒಳಗಾಗಿ ₹ 37 ಲಕ್ಷ ಕೋಟಿಗೆ ತಲುಪುವ ಅಂದಾಜು ಮಾಡಲಾಗಿದೆ. ಇದರಲ್ಲಿ ಭಾರತದ ಕಂಪನಿಗಳು ಶೇ 50ರಷ್ಟು ಪಾಲು ಪಡೆದರೆ ಅದರ ಮೌಲ್ಯವು ₹ 18.50 ಲಕ್ಷ ಕೋಟಿಗಳಷ್ಟಾಗಲಿದೆ. ಈ ನಿಟ್ಟಿನಲ್ಲಿ ದೊಡ್ಡ ಕಂಪನಿಗಳು ಪ್ರಯತ್ನ ನಡೆಸಬೇಕಿದೆ. ಆದರೆ, ಸರ್ಕಾರದ ಬೆಂಬಲ ಇಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT