ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿ ಬದಲಾವಣೆ ಅಗತ್ಯ: ಪ್ರೊ. ಸಂದೀಪ್ ಶುಕ್ಲಾ ಅಭಿಪ್ರಾಯ

ಭಾರತದಲ್ಲಿ ಸೈಬರ್ ತಜ್ಞರ ಕೊರತೆ: ಪ್ರೊ. ಸಂದೀಪ್ ಶುಕ್ಲಾ ಅಭಿಪ್ರಾಯ
Last Updated 20 ನವೆಂಬರ್ 2020, 20:48 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿ ಕ್ಷೇತ್ರದಲ್ಲೂ ತಂತ್ರಜ್ಞಾನ ಬಳಕೆ ಆಗುತ್ತಿದ್ದು, ಸೈಬರ್ ಸುರಕ್ಷತೆಗೆ ಮಹತ್ವ ಬಂದಿದೆ. ಸೈಬರ್ ಸುರಕ್ಷತೆ ಬಗ್ಗೆ ಬೋಧಿಸುವ ಸಂಸ್ಥೆಗಳಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ಪಠ್ಯಕ್ಕಿಂತ ಪ್ರಾಯೋಗಿಕ ಕೌಶಲಕ್ಕೆ ಒತ್ತು ಸಿಗಬೇಕಿದೆ’ ಎಂದು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಕಂಪ್ಯೂಟರ್ ಸೈನ್ಸ್ ಹಾಗೂ ಆಟೊಮೇಷನ್ ವಿಭಾಗದ ಸಹ ಪ್ರಾಧ್ಯಾಪಕ ವಿನೋದ್ ಗಣಪತಿ ಅಭಿಪ್ರಾಯಪಟ್ಟರು.

‘ಬೆಂಗಳೂರು ತಂತ್ರಜ್ಞಾನ ಶೃಂಗ – 2020 (ಬಿಟಿಎಸ್)’ರಲ್ಲಿ ಶುಕ್ರವಾರ ಜರುಗಿದ ‘ಶೈಕ್ಷಣಿಕ, ಉದ್ಯಮ ಹಾಗೂ ಸರ್ಕಾರದಲ್ಲಿ ಸೈಬರ್ ಸುರಕ್ಷತೆ ಪಾತ್ರ’ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸೈಬರ್ ಸುರಕ್ಷತೆ ಬಗ್ಗೆ ಹೆಚ್ಚು ಸಂಶೋಧನೆ ನಡೆಯಬೇಕಿದೆ. ಶೈಕ್ಷಣಿಕ, ಉದ್ಯಮ ಹಾಗೂ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಲು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಬಗ್ಗೆ ಹೊಸ ಆವಿಸ್ಕಾರಗಳು ಆಗಬೇಕಿದೆ. ಸೈಬರ್ ಸುರಕ್ಷತೆ ಬಗ್ಗೆ ವ್ಯವಸ್ಥಿತ ಕೋರ್ಸ್‌ಗಳು ಆರಂಭವಾಗಬೇಕು. ಸೈಬರ್ ಪರಿಣಿತರು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗಬೇಕು’ ಎಂದು ಹೇಳಿದರು.

ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪ್ರಾಧ್ಯಾಪಕ ಪ್ರೊ. ಸಂದೀಪ್ ಶುಕ್ಲಾ, ‘ಅಮೆರಿಕ, ಸಿಂಗಪುರಕ್ಕೆ ಹೋಲಿಸಿದರೆ ಭಾರತದಲ್ಲಿ ಸೈಬರ್ ತಜ್ಞರ ಕೊರತೆ ಇದೆ. ಹೊಸ ಕೋರ್ಸ್‌ಗಳು ಪ್ರಾರಂಭವಾದರೂ ಪರೀಕ್ಷೆ ಹಾಗೂ ಅಂಕಪಟ್ಟಿಗಷ್ಟೇ ವಿದ್ಯಾರ್ಥಿಗಳು ಸೀಮಿತವಾಗುತ್ತಿದ್ದಾರೆ. ಇಂಥ ಮನೋಭಾವ ಬದಲಾಗಬೇಕು’ ಎಂದರು.

ಸೈಬರ್ ಸುರಕ್ಷತೆಗೆ ‘ಸೈಸೆಕ್’: ತಂತ್ರಜ್ಞಾನ ಶೃಂಗದಲ್ಲಿ ವೈವಿಧ್ಯಮಯ ಮಳಿಗೆಗಳಿದ್ದು, ರಾಜ್ಯ ಸರ್ಕಾರದ ಸೈಬರ್ ಭದ್ರತೆ ಕುರಿತ ಕಾರ್ಯಕ್ರಮಗಳ ಕುರಿತು ‘ಸೈಸೆಕ್’ ಮಳಿಗೆಯಲ್ಲಿ ವಿಸ್ತೃತ ಮಾಹಿತಿ ಲಭ್ಯವಿದೆ.

ಸೈಬರ್ ಸುರಕ್ಷತೆ ಕುರಿತು ಲಭ್ಯವಿರುವ ಉತೃಷ್ಟ ಶಿಕ್ಷಣ ಮತ್ತು ವ್ಯಾಸಂಗ ಕಾರ್ಯಕ್ರಮಗಳ ಬಗ್ಗೆ ಮಳಿಗೆಯಲ್ಲಿ ವಿವರ ಸಿಗುತ್ತಿದೆ. ಸೈಬರ್ ಸುರಕ್ಷತೆ ವಲಯದಲ್ಲಿ ನವೋದ್ಯಮವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ‘ಹ್ಯಾಕ್’ ಕಾರ್ಯಕ್ರಮ ಜಾರಿಗೊಳಿಸಿದೆ. ಇದರ ಅಡಿಯಲ್ಲಿ ನವೋದ್ಯಮಗಳಿಗೆ ಪೂರಕ ವಾತಾವರಣ ನಿರ್ಮಾಣ, ಜಾಗತಿಕ ಮಟ್ಟದ ತರಬೇತಿ-ಮಾರ್ಗದರ್ಶನ, ಮೂಲಸೌಕರ್ಯ, ನಾವಿನ್ಯತಾ ಇನ್‌ಕ್ಯುಬೇಷನ್ ವೇದಿಕೆ ಒದಗಿಸುವುದು... ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುತ್ತಿದೆ. ಈ ವಿವರವು ಮಳಿಗೆಯಲ್ಲಿ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT