ಹಬ್ಬ ಹರಿದಿನಗಳು ಬಂದಾಗಲೆಲ್ಲಾ ವಾಟ್ಸ್ಆ್ಯಪ್ ಅಥವಾ ಎಸ್ಸೆಮ್ಮೆಸ್ ಮೂಲಕ ನಿಮಗೆ ಸಾಕಷ್ಟು ಸ್ನೇಹಿತರು ಲಿಂಕ್ಗಳನ್ನು ಕಳುಹಿಸುತ್ತಾರೆ. "ನಿಮ್ಮ ಸ್ನೇಹಿತರು ನಿಮಗಾಗಿ ಯಾವ ರೀತಿ ಶುಭಾಶಯ ಕಳುಹಿಸಿದ್ದಾರೆ ನೋಡಿ" ಅಂತ ಕ್ಲಿಕ್ ಮಾಡಿಸುವ ಒಕ್ಕಣೆಯೂ ಇರುತ್ತದೆ ಅವುಗಳಲ್ಲಿ. ಆದರೆ, ಇದು ಮಾಹಿತಿ ತಂತ್ರಜ್ಞಾನದ ದುರುಪಯೋಗ ಎಂಬುದು ಎಷ್ಟು ಜನರಿಗೆ ಗೊತ್ತು?
ಹೌದು. ಮನೆಯಿಂದಲೇ ಕೆಲಸ ಮಾಡುವ, ಹೊರಗೆ ಹೋಗಲಾಗದೆ ಸ್ನೇಹಿತರನ್ನು ಭೇಟಿ ಮಾಡಲಾರದ ಈ ದಿನಗಳಲ್ಲಿ ಸಂವಹನಕ್ಕಾಗಿ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಕುಳಿತಲ್ಲೇ ಮೊಬೈಲ್ ಫೋನ್ ಮೂಲಕ ಹೆಚ್ಚಿನ ಹಣಕಾಸು ವಹಿವಾಟುಗಳೂ ನಡೆಯುತ್ತಿರುವಂತೆಯೇ, ಸೈಬರ್ ಕಳ್ಳರ ಕೈಚಳಕಗಳೂ ಹೆಚ್ಚುತ್ತಿವೆ.
ಸ್ನೇಹಿತರ ಹೆಸರಿನಲ್ಲಿ ಶುಭಾಶಯ ಪತ್ರಗಳು ಆನ್ಲೈನ್ನಲ್ಲಿ ವಿಡಿಯೊ ಅಥವಾ ಆನಿಮೇಶನ್ ಗ್ರಾಫಿಕ್ಸ್ ಮೂಲಕ ಬಂದಿರುವುದನ್ನು ನೀವೂ ನೋಡಿರಬಹುದು. ಆದರೆ, ಇವುಗಳ ಡೊಮೇನ್ ಹೆಸರುಗಳನ್ನು (ಯುಆರ್ಎಲ್ ಎಂಬ ವೆಬ್ ವಿಳಾಸಗಳನ್ನು) ಸೂಕ್ಷ್ಮವಾಗಿ ಗಮನಿಸಿ. ಇವ್ಯಾವುವೂ ಸಾಚಾ ಮತ್ತು ವಿಶ್ವಾಸಾರ್ಹ ಜಾಲತಾಣಗಳಾಗಿರುವ ಸಾಧ್ಯತೆಗಳಿಲ್ಲ.
ಕೆಲವೊಂದು ಜಾಲತಾಣಗಳಲ್ಲಿ ಪಾಪ್-ಅಪ್ ವಿಂಡೋಗಳು ಕೆಂಪು ಎಚ್ಚರಿಕೆಯ ಸೂಚನೆಯೊಂದಿಗೆ ಧುತ್ತನೇ ಮೇಲೆದ್ದು, "ನಿಮ್ಮ ಫೋನ್ಗೆ ವೈರಸ್ ತಗುಲಿದೆ, ತಕ್ಷಣ ಈ ಆ್ಯಂಟಿ ವೈರಸ್ ಅಳವಡಿಸಿಕೊಳ್ಳಲು ಕ್ಲಿಕ್ ಮಾಡಿ" ಅಂತಲೂ ನಿಮಗೆ ಸಹಾಯ ಮಾಡುವ ನೆಪದಲ್ಲಿ ಕ್ಲಿಕ್ ಮಾಡಲು ಪ್ರೇರೇಪಿಸುತ್ತವೆ. ಕ್ಲಿಕ್ ಮಾಡಿದ ತಕ್ಷಣ, ಮೊಬೈಲ್ ಅಥವಾ ಬ್ರೌಸರ್ನಲ್ಲಿ ಸೇವ್ ಆಗಿರುವ, ನಿಮ್ಮ ಫೋನ್ ಸಂಖ್ಯೆ, ಇಮೇಲ್ ವಿಳಾಸ, ಹೆಸರು, ಊರು, ಬ್ಯಾಂಕಿಂಗ್ ಮಾಹಿತಿ, ಪಾಸ್ವರ್ಡ್ಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ಮುಂತಾದ ಖಾಸಗಿ ಮಾಹಿತಿಗಳೆಲ್ಲವನ್ನೂ ಕದಿಯಬಲ್ಲ ಸ್ಪೈವೇರ್ಗಳು ಈ ತಾಣಗಳಲ್ಲಿ ಅಡಕವಾಗಿರಬಲ್ಲವು.
ಕೆಂಪು ಫ್ಲ್ಯಾಶ್ ಆಗುವ ಎಚ್ಚರಿಕೆ ಸೂಚನೆ ನೋಡಿ ಭಯಬಿದ್ದವರು ಕ್ಲಿಕ್ ಮಾಡಿ ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ, ಇವುಗಳು ಮಾಲ್ವೇರ್ ಅಥವಾ ಕುತಂತ್ರಾಂಶಗಳಾಗಿರಬಹುದು. ಈ ರೀತಿಯಾಗಿ ಮಾಹಿತಿ ಕದಿಯುವ ಪ್ರಕ್ರಿಯೆಗೆ ತಂತ್ರಜ್ಞಾನ ಭಾಷೆಯಲ್ಲಿ ಫೀಶಿಂಗ್ (Phishing) ಎಂದು ಕರೆಯಲಾಗುತ್ತದೆ. ಇಂತಹಾ ಕುತಂತ್ರಾಂಶಗಳಿಂದ ನಿಮ್ಮ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಜಾಲತಾಣಗಳು, ಅವುಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡುತ್ತವೆ ಮತ್ತು ಇದರಿಂದಾಗಿಯೇ ನಿಮಗೆ ಸ್ಪ್ಯಾಮ್ ಮೇಲ್, ಸಂದೇಶ, ಫೋನ್ ಕರೆಗಳು ಬರುವುದು ಕೂಡ ಹೆಚ್ಚಾಗುತ್ತದೆ.
ಹೀಗಾಗಿ ಶುಭಾಶಯಗಳಿಗಾಗಿ ಯಾವುದೇ ಕಾರಣಕ್ಕೂ ವಿಶ್ವಾಸಾರ್ಹವಲ್ಲದ, ಇದುವರೆಗೆ ಕಂಡು ಕೇಳರಿಯದ ಥರ್ಡ್ ಪಾರ್ಟಿ ವೆಬ್ ಸೈಟ್ಗಳನ್ನು ಅವಲಂಬಿಸಬೇಡಿ, ಕ್ಲಿಕ್ ಮಾಡಲು ಹೋಗಬೇಡಿ. ಕೈಯಲ್ಲೇ ಟೈಪ್ ಮಾಡಿದ ಅಥವಾ ಸಿದ್ಧ ಫೋಟೋಗಳ ಮೂಲಕವೇ ಶುಭಾಶಯ ಕಳುಹಿಸಿದರೆ ಹೆಚ್ಚು ಆತ್ಮೀಯತೆಯಿರುತ್ತದೆ ಮತ್ತು ಆನ್ಲೈನ್ನಲ್ಲಿ ಸುರಕ್ಷಿತವೂ ಆಗಿರಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.