ಶನಿವಾರ, ಅಕ್ಟೋಬರ್ 24, 2020
18 °C
ಖಾಸಗಿತನದ ಸುರಕ್ಷತೆಯ ಪ್ರಶ್ನೆ

ಬಾಲಿವುಡ್‌ ಡ್ರಗ್ಸ್‌ ಪ್ರಕರಣ: ಸಂದೇಶಗಳ ಸೋರಿಕೆಗೆ ವಾಟ್ಸ್‌ಆ್ಯಪ್‌ ಉತ್ತರವೇನು?

ರೋಹಿತ್‌ ಕೆವಿಎನ್‌ Updated:

ಅಕ್ಷರ ಗಾತ್ರ : | |

ವಾಟ್ಸ್‌ಆ್ಯಪ್‌

ಬೆಂಗಳೂರು: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ಹಲವು ಮಜಲುಗಳಲ್ಲಿ ಸಾಗಿದೆ. ಈ ನಡುವೆ ಸಿನಿಮಾ ಜಗತ್ತು ಮತ್ತು ಡ್ರಗ್ಸ್‌ ಜಾಲದ ನಂಟು ದಿನದಿಂದ ದಿನಕ್ಕೆ ತೆರೆದುಕೊಳ್ಳುತ್ತಿದೆ. ಸುಶಾಂತ್‌ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಡ್ರಗ್‌ ಪೆಡ್ಲರ್‌ಗಳ ನಡುವೆ ನಡೆದಿರುವ ವಾಟ್ಸ್ಆ್ಯಪ್‌ ಸಂದೇಶ ವಿನಿಮಯಗಳು ಸೋರಿಕೆಯಾಗಿರುವುದೂ ಚರ್ಚೆಗೆ ಗ್ರಾಸವಾಗಿದೆ.

ನಟಿ ರಿಯಾ ಮತ್ತು ಆಕೆಯ ಸೋದರ ಶೌವಿಕ್‌ ಹಾಗೂ ಡ್ರಗ್ ಪೆಡ್ಲರ್‌ಗಳ ನಡುವೆ ನಡೆದಿರುವ ಮಾತುಕತೆಗಳಲ್ಲಿ ಬಹಳಷ್ಟನ್ನು ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಹೊರಗೆಳೆದಿದೆ. ಇದರೊಂದಿಗೆ ದೀಪಿಕಾ ಪಡುಕೋಣೆ, ರಕುಲ್‌ ಪ್ರೀತ್‌ ಹಾಗೂ ದೀಪಿಕಾ ಮ್ಯಾನೇಜರ್‌ ಕರಿಷ್ಮಾ ಪ್ರಕಾಶ್‌ ಅವರು ಅಪರಾಧಿಗಳೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯಿಂದ ಬಹಿರಂಗವಾಗಿದೆ. ಎನ್‌ಸಿಬಿಯ ವಿಶೇಷ ತನಿಖಾ ತಂಡ ಮೂವರನ್ನೂ ವಿಚಾರಣೆಗಾಗಿ ಕರೆದಿದೆ.

ಆದರೆ, ವಾಟ್ಸ್‌ಆ್ಯಪ್‌ ಚಾಟ್‌ ಸೋರಿಕೆಯಾಗಿರುವುದು ಖಾಸಗಿ ಮಾಹಿತಿ ಸುರಕ್ಷತೆಯ ಕುರಿತು ಪ್ರಶ್ನೆಗಳನ್ನು ಮೂಡಿಸಿದೆ. ಆದರೆ, ವಾಟ್ಸ್‌ಆ್ಯಪ್‌ ಮೂಲಕ ರವಾನೆಯಾಗುವ ಸಂದೇಶಗಳು, ಮೀಡಿಯಾ ಹಾಗೂ ಕರೆಗಳು ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಟ್‌ ಆಗಿರುತ್ತವೆ. ಹಾಗಾಗಿ ಸಂದೇಶಗಳು ಸೋರಿಕೆಯಾಗಿಲ್ಲ ಎಂದು ವಾಟ್ಸ್ಆ್ಯಪ್‌ ಹೇಳಿದೆ.

'ವಾಟ್ಸ್‌ಆ್ಯಪ್‌ ನಿಮ್ಮ ಸಂದೇಶಗಳಿಗೆ ಎಂಡ್‌–ಟು–ಎಂಡ್‌ ಎನ್‌ಕ್ರಿಪ್ಷನ್‌ ಮೂಲಕ ಸುರಕ್ಷತೆ ನೀಡುತ್ತದೆ. ನೀವು ಮತ್ತು ಯಾರಿಗೆ ಸಂದೇಶ ಕಳುಹಿಸಿರುವಿರೊ ಅವರು ಮಾತ್ರ ಆ ಸಂದೇಶಗಳನ್ನು ಓದಲು ಸಾಧ್ಯವಾಗುತ್ತದೆ. ಆ ನಡುವೆ ಬೇರೆ ಯಾರೂ ಸಹ ಸಂದೇಶಗಳನ್ನು ಕಾಣುವುದು ಸಾಧ್ಯವಾಗುವುದಿಲ್ಲ, ಅದು ಸ್ವತಃ ವಾಟ್ಸ್‌ಆ್ಯಪ್‌ಗೂ ಆಗುವುದಿಲ್ಲ. ಜನರು ಮೊಬೈಲ್‌ ಸಂಖ್ಯೆಯನ್ನು ಮಾತ್ರ ನಮೂದಿಸಿ ವಾಟ್ಸ್‌ಆ್ಯಪ್‌ ಬಳಕೆಗೆ ಚಾಲನೆ ಪಡೆಯುತ್ತಾರೆ. ವಾಟ್ಸ್‌ಆ್ಯಪ್‌ ಕೇವಲ ಫೋನ್‌ ನಂಬರ್‌ ಮಾತ್ರ ಬಳಸುತ್ತಿದೆ, ನಿಮ್ಮ ಸಂದೇಶಗಳನ್ನು ಯಾವುದೇ ರೀತಿ ಕಾಣಲು ಸಾಧ್ಯವಿರುವುದಿಲ್ಲ. ಸಾಧನಗಳಲ್ಲಿ ಸಂದೇಶ ಅಥವಾ ಇತರೆ ಮಾಹಿತಿ ಸಂಗ್ರಹವಾಗುತ್ತವೆ. ಬಳಕೆದಾರರು ಸಾಧನಗಳ ಆಪರೇಟಿಂಗ್‌ ಸಿಸ್ಟಮ್‌ ನೀಡುವ ಸುರಕ್ಷತಾ ಕ್ರಮಗಳನ್ನು ಬಳಕೆ ಮಾಡಿಕೊಳ್ಳಬೇಕು. ಪಾಸ್‌ವರ್ಡ್‌ ಅಥವಾ ಬಯೋಮೆಟ್ರಿಕ್‌ ಐಡಿಗಳಿಂದ ಸಾಧನವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಆ ಮೂಲಕ ಬೇರೆ ಯಾವುದೇ ವ್ಯಕ್ತಿ ಸಾಧನದಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಬಳಸದಂತೆ ತಡೆಯಬಹುದು' ಎಂದು ವಾಟ್ಸ್‌ಆ್ಯಪ್‌ ವಕ್ತಾರರು ಡೆಕ್ಕನ್‌ ಹೆರಾಲ್ಡ್‌ಗೆ ತಿಳಿಸಿದ್ದಾರೆ.

2019ರಲ್ಲಿ ಜೆಫ್‌ ಬೆಜೊಜ್‌ ಅವರ ಫೋನ್‌ ಹ್ಯಾಕ್‌ ಆದ ನಂತರದಲ್ಲಿ ವಾಟ್ಸ್‌ಆ್ಯಪ್‌ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಯ ಕ್ರಮಗಳನ್ನು ಹೆಚ್ಚಿಸಿದೆ.

ಪ್ರಸ್ತುತ ಡ್ರಗ್ಸ್‌ ಪ್ರಕರಣದಲ್ಲಿ ತನಿಖೆಗೆ ಒಳಪಟ್ಟವರು ಅಥವಾ ಆರೋಪಿಗಳು ತಾವಾಗಿಯೇ ತನಿಖಾ ತಂಡಕ್ಕೆ ಫೋನ್‌ ಒಪ್ಪಿಸಿರಬಹುದು. ತನಿಖಾ ಸಂಸ್ಥೆಗಳು ಕೋರ್ಟ್‌ ವಾರೆಂಟ್‌ ಪಡೆದು ಸಾಕ್ಷ್ಯಾಧಾರಗಳಿಗಾಗಿ ಫೋನ್‌ಗಳ ಸುರಕ್ಷತಾ ಕ್ರಮಗಳನ್ನು ಭೇದಿಸಿ ಸಂದೇಶಗಳ ಮಾಹಿತಿ ಸಂಗ್ರಹಿಸಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಹಳೆಯ ಸಂದೇಶಗಳು ಗೂಗಲ್‌ ಡ್ರೈವ್‌ (ಆ್ಯಂಡ್ರಾಯ್ಡ್‌ ಸಾಧನಗಳಲ್ಲಿ) ಅಥವಾ ಐಕ್ಲೌಡ್‌ನಲ್ಲಿ (ಐಫೋನ್‌ಗಳಲ್ಲಿ) ಸಂಗ್ರಹವಾಗಿರುತ್ತವೆ.

ಆದರೆ, ವಾಟ್ಸ್‌ಆ್ಯಪ್‌ ಮೆಸೆಂಜರ್‌ನ ಸಂದೇಶಗಳು ಎನ್‌ಸಿಬಿಯಿಂದ ಮಾಧ್ಯಮಗಳಿಗೆ ಸೋರಿಕೆಯಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು