ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.19ರಿಂದ ತಂತ್ರಜ್ಞಾನ ಶೃಂಗ: 12 ಒಪ್ಪಂದಗಳಿಗೆ ಅಂಕಿತ

ಸಚಿವ ಅಶ್ವತ್ಥನಾರಾಯಣ
Last Updated 9 ನವೆಂಬರ್ 2020, 17:53 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 19ರಿಂದ ಮೂರು ದಿನ ನಡೆಯಲಿರುವ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯಲ್ಲಿ (ಬಿಟಿಎಸ್) 25ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿದ್ದು, 12 ಒಪ್ಪಂದಗಳಿಗೆ ಜಾಗತಿಕ ಆವಿಷ್ಕಾರ ಮೈತ್ರಿಕೂಟದ (ಜಿಐಎ) ಪಾಲುದಾರ ದೇಶಗಳ ಜತೆ ಸಹಿ ಹಾಕಲಾಗುವುದು’ ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ಶೃಂಗಸಭೆ ಕುರಿತಂತೆ ವಿವಿಧ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಜೊತೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಆಸ್ಟ್ರೇಲಿಯಾ, ಫ್ರಾನ್ಸ್‌, ಜರ್ಮನಿ, ಇಸ್ರೇಲ್‌, ನೆದರ್ಲೆಂಡ್ಸ್, ಸ್ವಿಡ್ಜರ್‌ಲೆಂಡ್‌, ಇಂಗ್ಲೆಂಡ್‌ ತಂತ್ರ
ಜ್ಞಾನ ಶೃಂಗಸಭೆಯ ಪಾಲುದಾರ ದೇಶಗಳಾಗಿದ್ದು, ಕೃಷಿ, ಸಂಶೋಧನೆ, ಅಭಿವೃದ್ಧಿ, ನವೋದ್ಯಮ’ಗಳಿಗೆ ಸಂಬಂಧಿ
ಸಿದ ಏಳು ಒಪ್ಪಂದಗಳು ಸಹಿಗೆ ಸಿದ್ಧವಾಗಿವೆ’ ಎಂದರು.

‘ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳ ಜಾರಿಗೆ ವೇಗ ನೀಡಲಾಗುವುದು. ಹೊಸ ಒಪ್ಪಂದಗಳನ್ನು ಕಾಲಮಿತಿಯೊಳಗೆ, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು’ ಎಂದ ಅವರು,‌ ‘ಜಿಐಎಗೆ ಸಂಬಂಧಿಸಿದ ಚರ್ಚೆಯ ಜತೆಗೆ 15 ಅಧಿವೇಶನಗಳು ನಡೆಯಲಿವೆ. 60ಕ್ಕೂ ಹೆಚ್ಚು ಜನ ಅಭಿಪ್ರಾಯ ಮಂಡಿಸಲಿದ್ದಾರೆ. ವಿವಿಧ ದೇಶಗಳ ಸಚಿವರ ಮಟ್ಟದ ಹತ್ತು ನಿಯೋಗಗಳು ಭಾಗವಹಿಸಲಿವೆ. 500ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಟ್ಟದ ನಿಯೋಗಗಳು ಭೇಟಿ ನೀಡುತ್ತಿವೆ’ ಎಂದರು.

ವರ್ಚುವಲ್‌ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಭಾರತದಲ್ಲಿನ ಆಸ್ಟ್ರೇಲಿಯಾ‌ ಹೈಕಮಿಷನರ್ ಹಾನ್‌ಬೆರಿ ಓ ಫರೇಲ್, ‘ಭಾರತ– ಆಸ್ಟ್ರೇಲಿಯಾ ಸೈಬರ್‌ ಸೆಕ್ಯೂರಿಟಿಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿವೆ. ಕರ್ನಾಟಕದ ಜತೆ ತಂತ್ರಜ್ಞಾನ, ಬಾಹ್ಯಾಕಾಶ, ಸೈಬರ್‌ ಭದ್ರತೆ, ಖನಿಜ ಮುಂತಾದ ಕ್ಷೇತ್ರಗಳಲ್ಲಿ ವಿಸ್ತೃತವಾಗಿ ಕೆಲಸ ಮಾಡಲು ಸಿದ್ಧವಿದೆ’ ಎಂದರು.

ಬೆಂಗಳೂರಿನಲ್ಲಿರುವ ಸ್ವಿಡ್ಜರ್‌ಲೆಂಡ್‌ ಕಾನ್ಸುಲೇಟ್‌ ಜನರಲ್‌ ಸೆಬಾಸ್ಟಿಯನ್‌ ಹಗ್‌ ಮಾತನಾಡಿ, ‘ಕರ್ನಾಟಕದಲ್ಲಿ ಹೂಡಿಕೆಗೆ ನಮ್ಮ ದೇಶದ ಉದ್ದಿಮೆದಾರರು ಉತ್ಸುಕರಾಗಿದ್ದಾರೆ’ ಎಂದರು.

ನೆದರ್ಲೆಂಡ್ಸ್‌ನ ದಕ್ಷಿಣ ಭಾರತದ ಕಾನ್ಸುಲೇಟ್‌ ಜನರಲ್‌ ಗೆರ್ಟ್‌ ಹೆಜ್‌ಕೂಪ್‌, ‘ಭಾರತದ 50ಕ್ಕೂ ಹೆಚ್ಚು ತಂತ್ರಜ್ಞಾನ ಸ್ಟಾರ್ಟ್‌ ಅಪ್‌ಗಳು ಆವಿಷ್ಕರಿಸಿದ ತಂತ್ರಜ್ಞಾನವನ್ನು ಯುರೋಪ್‌ಗೆ ಕೊಂಡೊಯ್ಯಲು ಸಭೆ ನೆರವಾಗಲಿದೆ. ಸುರಕ್ಷತೆ,
ಕೃಷಿ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕದ ಜತೆ ಎರಡು ಒಪ್ಪಂದಗಳಿಗೆ ನೆದರ್ಲೆಂಡ್ಸ್ ಸಹಿ ಹಾಕಲಿದೆ’ ಎಂದರು.

ಶುಕ್ರಯಾನದಲ್ಲಿ ಪಾಲುದಾರಿಕೆ: ಸ್ವೀಡನ್‌ನ ಹೈಕಮೀಷನರ್‌ ಡಾ. ಫ್ಯಾನಿ ವಾನ್‌ ಹೆಲ್ಯಾಂಡ್‌, ‘ಚಂದ್ರಯಾನ-1ರಲ್ಲಿ ತಂತ್ರಜ್ಞಾನ ನೀಡಿಕೆ ವಿಚಾರದಲ್ಲಿ ಭಾರತದ ಜತೆಸ್ವೀಡನ್‌ ಕೈಜೋಡಿಸಿತ್ತು. ‘ಶುಕ್ರಯಾನ’ ಯೋಜನೆಯಲ್ಲೂ ನಮ್ಮ ದೇಶ ನೆರವಾಗಲಿದೆ’ ಎಂದರು.

ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲ್‌ ಜನರಲ್‌ ಜೋನಾಥನ್‌ ಝಕಾಡ, ಬೆಂಗಳೂರಿನಲ್ಲಿರುವ ಫ್ರಾನ್ಸ್‌ನ ಕಾನ್ಸುಲ್‌ ಜನರಲ್‌ ಡಾ.ಮಾರಜೋರಿ ವಾನ್‌ಬೈಲಿಯೇಮ್‌, ಬೆಂಗಳೂರಿನಲ್ಲಿರುವ ಬ್ರಿಟನ್‌ ಕಾನ್ಸುಲೇಟ್‌ನ ಉಪ ಕಮೀಷನರ್‌ ಜೆರ್ಮಿ ಪಿಲ್ಮೋರೆ ಬೆಡ್‌ಫೋರ್ಡ್‌, ಬೆಂಗಳೂರಿನ ಡೆನ್ಮಾರ್ಕ್‌ ಕಾನ್ಸುಲ್‌ ಜನರಲ್‌ ಜೆಟೆ ಬೆಜರಮ್‌, ಬೆಂಗಳೂರಿನ ಜರ್ಮನಿ ಕಾನ್ಸುಲ್‌ ಜನರಲ್‌ ಅಶಿಮ್‌ ಬರ್ಕಾಟ್‌ ಕೂಟಾ,ಜಪಾನ್‌ನ ಕಟ್ಸುಮಾಸ ಮಾರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT