‘ಬಿಲ್ಡಿಂಗ್ ಬ್ಲಾಕ್ಸ್‌’ ಆ್ಯಪ್‌

7

‘ಬಿಲ್ಡಿಂಗ್ ಬ್ಲಾಕ್ಸ್‌’ ಆ್ಯಪ್‌

Published:
Updated:

ಗಣಿತ, ಲೆಕ್ಕ ಎಂದ ಕೂಡಲೇ ಹೆಚ್ಚಿನ ಮಕ್ಕಳಿಗೆ ಒಂದು ರೀತಿಯ ಭಯ ಇರುತ್ತದೆ. ಲೆಕ್ಕದ ಅವಧಿ ಅಂದರೆ ಹಾಗೇ... ಉದಾಸೀನತೆ ಆವರಿಸಿ ನಿದ್ದೆಗೆ ಜಾರುವುದುಂಟು. ಹಾಗೆಂದು, ಕ್ಲಿಷ್ಟಕರವಾದ ಲೆಕ್ಕದ ವಿಷಯ ಕಲಿಯಲು ಪಠ್ಯಪುಸ್ತಕ ಸರಿಯಾದ ಪರಿಹಾರವಲ್ಲ. ಆದರೆ, ಬೇರೆ ಮಾರ್ಗ ಇಲ್ಲ.

ಗಣಿತವನ್ನು ಸುಲಭವಾಗಿ ಕಲಿಸುವುದು ಹೇಗೆ?: ಬೆಂಗಳೂರಿನ ಅಕ್ಷರ ಫೌಂಡೇಷನ್ ಈ ಪ್ರಶ್ನೆಗೆ ಸುಲಭದ ಉತ್ತರ ಕಂಡು ಹಿಡಿದಿದೆ. ಮಕ್ಕಳು ಆಡಾಡುತ್ತಾ ಗಣಿತ ಕಲಿಯುವಂತಹ ‘BUILDING BLOCKS’ ಎಂಬ ಮೊಬೈಲ್ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸಿದೆ. ಅದನ್ನು ಈಗಾಗಲೇ ಗೂಗಲ್ ಪ್ಲೇಸ್ಟೋರ್‌ಗೆ ಅಪ್‌ಲೋಡ್ ಮಾಡಿದ್ದು, ಮಕ್ಕಳು ಬಳಸುತ್ತಿದ್ದಾರೆ.

ನಗರದ ಅಕ್ಷರ ಫೌಂಡೇಷನ್‌ ಹತ್ತು ವರ್ಷಗಳಿಂದ ಮಕ್ಕಳಿಗೆ ಚಟುವಟಿಕೆ ಮೂಲಕ ಲೆಕ್ಕ ಕಲಿಸಲು ಪ್ರಯತ್ನಿಸುತ್ತಿದೆ. ಈಗ ಮೊಬೈಲ್ ಅಪ್ಲಿಕೇಷನ್ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದೆ. ಒಟ್ಟಾರೆ, ಮಕ್ಕಳಲ್ಲಿರುವ ಗಣಿತದ ಭಯ ಹೋಗಬೇಕು. ಅದನ್ನು ಇಷ್ಟಪಟ್ಟು ಕಲಿಯು
ವಂತಾಗಬೇಕು ಎಂಬುದು ಆ್ಯಪ್ ಉದ್ದೇಶ. ತರಬೇತಿ ಇಲ್ಲದೇ ಮಕ್ಕಳು ಹೇಗೆ ಮೊಬೈಲ್‌ನಲ್ಲಿ ವಿಡಿಯೊ ಗೇಮ್‌ ಆಡುತ್ತಾರೋ, ಹಾಗೆಯೇ ಈ ಆ್ಯಪ್‌ ಅನ್ನು ಸುಲಭವಾಗಿ ಬಳಸಬಹುದು. ಇದು ಖಾಸಗಿ ಶಾಲಾ ಮಕ್ಕಳಿಗೂ ಮಾರ್ಗದರ್ಶಿಯಾಗಿದೆ.

‘ಈ ವರ್ಷದ ಆಗಸ್ಟ್‌ನಿಂದಲೇ ಗಣಿತ ಕಲಿಕಾ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈಗಾಗಲೇ 5 ಸಾವಿರಕ್ಕೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿದೆ. ಒಂದು ಫೋನ್‌ನಲ್ಲಿ ಡೌನ್‌ ಲೋಡ್‌ ಆದ ಆ್ಯಪ್ ಅನ್ನು ಆರು ಸಲ ಬಳಸಬಹುದಾಗಿದೆ. ದಿನದಲ್ಲಿ ಸುಮಾರು 14 ನಿಮಿಷಗಳನ್ನು ಇದಕ್ಕಾಗಿ ಮಕ್ಕಳು ವಿನಿಯೋಗಿಸುತ್ತಿದ್ದಾರೆ’ ಎಂದು ಅಕ್ಷರ ಫೌಂಡೇಷನ್ ರೂವಾರಿ ಅಶೋಕ್‌ ಕಾಮತ್‌ ವಿವರಿಸುತ್ತಾರೆ.


ಅಶೋಕ್‌ ಕಾಮತ್‌

ಮಕ್ಕಳಲ್ಲಿ ಗಣಿತದ ಪರಿಕಲ್ಪನೆಯನ್ನು ಆಟಗಳ ಮೂಲಕ ವರ್ಧಿಸುವ ಸಲುವಾಗಿ, ಈ ಆ್ಯಪ್‍ನ್ನು ಒಂದು ಸಂವಾದಾತ್ಮಕ/ಆಟಗಳ ಸ್ವರೂಪದಲ್ಲಿ ಗ್ರಹಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರ ಮಕ್ಕಳನ್ನೂ ಗುರಿಯಾಗಿಸಿ, ಈ ಆಟವನ್ನು ಫೋನ್ ಆನ್ ಲೈನ್ ಮತ್ತು ಆಫ್ ಲೈನ್ ಕ್ರಮಗಳೆರಡರಲ್ಲಿ ಇರುವಾಗಲೂ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಆಟವನ್ನು ಸಾಮಾನ್ಯರ ಕೈಗೆಟಕುವ ಕಡಿಮೆ ದರದ ಫೋನ್‌ಗಳಿಗೂ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಉಚಿತ ಅಪ್ಲಿಕೇಷನ್‌ನಲ್ಲಿ ಕನ್ನಡ, ಹಿಂದಿ, ಒರಿಯಾ ಮತ್ತು ಆಂಗ್ಲಭಾಷೆಗಳಲ್ಲಿ ಆಡಿಯೊ ಸೂಚನೆಗಳು ಲಭ್ಯವಿವೆ. ಹೀಗಾಗಿ ಇದು ದೇಶದ ಸುಮಾರು ಶೇ 50 ರಷ್ಟು ಮಕ್ಕಳನ್ನು ತಲುಪಲಿದೆ. 6 ತಿಂಗಳಲ್ಲಿ ಸಂಸ್ಥೆಯು 1700ಕ್ಕೂ ಹೆಚ್ಚು ಮಕ್ಕಳನ್ನು ತಲುಪುವ ಉದ್ದೇಶದೊಂದಿಗೆ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಬಳಸಿ ನೋಡಲಾಯಿತು. ಅಂದ ಹಾಗೆ, ಹಿರಿಯ ಮೇಲ್ವಿಚಾರಣೆ ಇಲ್ಲದೇ ಮಕ್ಕಳು ಈ ಆಟಗಳನ್ನು ಆಡಬಹುದಾಗಿದೆ.

‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು – 2005’ಕ್ಕೆ ತಕ್ಕಂತೆ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್‍ನ್ನು ಗಣಿತ ಪರಿಣತರು ಅಭಿವೃದ್ಧಿಪಡಿಸಿದ್ದಾರೆ.ಶೈಕ್ಷಣಿಕ ಆಟಗಳಲ್ಲಿ ಪರಿಣತರಾದವರೇ ವಿನ್ಯಾಸ ಮಾಡಿದ್ದಾರೆ. ಪ್ರಸ್ತುತ, ಒಟ್ಟು 150ಕ್ಕೂ ಹೆಚ್ಚು ಆಟಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳನ್ನು ಶೀಘ್ರದಲ್ಲಿಯೇ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. 1 ರಿಂದ 5ನೇ ತರಗತಿಗಳಿಗಾಗಿ ಉದ್ದೇಶಿಸಲಾಗಿರುವ ಉಳಿದ ಆಟಗಳನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದ ಸಮಯದಲ್ಲಿ ಅಭಿವೃದ್ಧಿ ಪೂರ್ಣಗೊಳಿಸಿ ಬಿಡುಗಡೆ ಮಾಡಲಾಗುತ್ತದೆ ಕಾಮತ್ ತಿಳಿಸಿದ್ದಾರೆ.

ಈ ಆ್ಯಪ್ 150ಕ್ಕೂ ಹೆಚ್ಚು ಸಂವಾದಾತ್ಮಕ ಚಟುವಟಿಕೆಗಳನ್ನು ‘ಅಭ್ಯಾಸ ಕ್ರಮ’ ದಲ್ಲಿ ಹೊಂದಿದೆ. ‘ಸವಾಲು ಕ್ರಮ’ದ ಆಟಗಳನ್ನು ಬಿಡುಗಡೆಯಾಗಲಿರುವ ಮುಂದಿನ ಆವೃತ್ತಿಯಲ್ಲಿ ಒದಗಿಸಲು ಅಕ್ಷರ ಫೌಂಡೇಷನ್‌ ಯೋಜನೆ ಹಾಕಿಕೊಂಡಿದೆ. 2018ರ ಕೊನೆಯ ವೇಳೆಗೆ ಭಾರತದಲ್ಲಿ ಸ್ಮಾರ್ಟ್ ಫೋನ್‌ಗಳ ಪ್ರಸರಣದ ಪ್ರಮಾಣವು ಶೇಕಡಾ 28ಕ್ಕಿಂತ ಹೆಚ್ಚಾಗಲಿದೆ. ಮಕ್ಕಳನ್ನು ತಲುಪಲು ಇದೊಂದು ಅತ್ಯುತ್ತಮವಾದ ವೈಯಕ್ತಿಕ ಮಾಧ್ಯಮವಾಗಿದೆ. ಇನ್ನೇಕೆ ತಡ. ಫೋನ್ ತಗೊಳ್ಳಿ. ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ BUILDING BLOCKS ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಿ, ಗಣಿತ ಕಲಿಕೆ  ಆರಂಭಿಸಿ.

ತರಗತಿ ಗ್ರಂಥಾಲಯ

ಅಕ್ಷರ ಫೌಂಡೇಷನ್‌, ಕೇವಲ ಗಣಿತದ ಮೇಲಷ್ಟೇ ಕೇಂದ್ರೀಕರಿಸಿಲ್ಲ. ಸರ್ಕಾರಿ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸರಕಾರಿ ಶಾಲೆಗಳಲ್ಲಿ ಗ್ರಂಥಾಲಯಗಳು ಇವೆಯಾದರೂ ಅವು ವಯೋಮಾನಕ್ಕೆ ಪೂರಕವಾಗಿಲ್ಲ. ಅವು ಪ್ರತ್ಯೇಕವಾಗಿರುವ ಕಾರಣ ಅಲ್ಲಿಗೆ ಹೋಗಿ ಓದುವ ಮಕ್ಕಳ ಸಂಖ್ಯೆ ಕಡಿಮೆ ಇದೆ.  ತರಗತಿ ಕೋಣೆಯಲ್ಲಿಯೇ ಗ್ರಂಥಾಲಯ ಇದ್ದರೆ ಮಕ್ಕಳ ಓದಿಗೆ ಪ್ರೇರಣೆ ನೀಡುವುದು ಸುಲಭ. ಈ ಉದ್ದೇಶದಿಂದ 2014ರಲ್ಲಿ ತರಗತಿ ಗ್ರಂಥಾಲಯಗಳನ್ನು ಆರಂಭಿಸಿತು.  

ಪ್ರತೀ ತರಗತಿ ಕೊಠಡಿಯಲ್ಲಿ ಗ್ರಂಥಾಲಯದ ಚೀಲವೊಂದನ್ನು ಒದಗಿಸಲಾಗಿದೆ. ಈ ಚೀಲವು ಸಣ್ಣ ಸಣ್ಣ ಕಪಾಟುಗಳನ್ನು ಹೊಂದಿದೆ. ಇದು ತೂಗು ಹಾಕಬಹುದಾದ ಅಥವಾ ಮಡಚಿ ಇಡಬಹುದಾದ ರೀತಿಯಲ್ಲಿ ಇರುತ್ತದೆ. ಈ ಕಪಾಟು ಸುಮಾರು 120 ಪುಸ್ತಕಗಳನ್ನು ಇಡಬಹುದಾದ ಸ್ಥಳಾವಕಾಶವನ್ನು ಹೊಂದಿದೆ. ವಯೋಮಾನಕ್ಕೆ ಸೂಕ್ತವಾದ, ಬಹು ಭಾರತೀಯ ಭಾಷೆಗಳ ಪುಸ್ತಕಗಳು, ಇಂಗ್ಲಿಷ್ ಮತ್ತು ಆವರ್ತನ ಪಟ್ಟಿ(ಹಿಸ್ಟೋಗ್ರಾಮ್‌ ಚಾರ್ಟ್‌) ಗಳಿರುತ್ತವೆ. 

ಶಿಕ್ಷಕರು ಕಿಟ್ ಮತ್ತು ಆವರ್ತನ ಪಟ್ಟಿಗಳ ಬಳಕೆಯ ಹಾಗೂ ಪರಿಣಾಮಕಾರಿ ಪ್ರಕ್ರಿಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ವಿಷಯಗಳಲ್ಲಿ ತರಬೇತಿ ಪಡೆದಿರುತ್ತಾರೆ. ಆವರ್ತನ ಪಟ್ಟಿಯಲ್ಲಿ ಮಕ್ಕಳ ಓದಿನ ಹವ್ಯಾಸವು ಎಷ್ಟರ ಮಟ್ಟಿಗಿದೆ ಮತ್ತು ಯಾವ ಹಂತದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಪ್ರತಿ ದಿನದ ಆಧಾರದಲ್ಲಿ ಪ್ರತಿ ಮಗುವು ಪಡೆದುಕೊಂಡ ಪುಸ್ತಕಗಳ ಸಂಖ್ಯೆಯನ್ನು ಆವರ್ತನ ಪಟ್ಟಿಯಲ್ಲಿ ದಾಖಲಿಸಲಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !