ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತ್ರುಗಳನ್ನು ಮಾನವರಹಿತವಾಗಿ ಸದೆಬಡಿಯಬಲ್ಲ ಕ್ಯಾಟ್ಸ್: ಎಚ್‌ಎಎಲ್ ಮೈಲಿಗಲ್ಲು

ವಾಯು ದಾಳಿಯನ್ನು ಮರು ವ್ಯಾಖ್ಯಾನಿಸಲಿವೆ ಎಚ್ಎಎಲ್‌ನ ಕ್ಯಾಟ್ಸ್ 
Last Updated 18 ಫೆಬ್ರುವರಿ 2022, 13:15 IST
ಅಕ್ಷರ ಗಾತ್ರ

ಅತ್ಯಾಧುನಿಕ ತಾಂತ್ರಿಕ ಅದ್ಭುತವಾಗಿರುವ ಕಂಬ್ಯಾಟ್ ಏರ್ ಟೀಮಿಂಗ್ ಸಿಸ್ಟಮ್ (ಸಿಎಟಿಎಸ್)ಅನ್ನು ಪ್ರಾರಂಭಿಸುವ 2024-25ರ ಗಡುವನ್ನು ಪೂರೈಸಿದರೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮತ್ತೊಂದು ಮೈಲಿಗಲ್ಲು ದಾಟಿದಂತಾಗುತ್ತದೆ.

ಈ ದಾಳಿ ವ್ಯವಸ್ಥೆಗಳು ಪೈಲಟ್‌ಗಳಿಗೆ ವರದಾನವಾಗಿವೆ. ಏಕೆಂದರೆ, ಈ ವ್ಯವಸ್ಥೆಗಳ ಮೂಲಕ ದೇಶದೊಳಗೆ ತಮ್ಮ ವಿಮಾನದಲ್ಲೇ ಸುರಕ್ಷಿತವಾಗಿದ್ದುಕೊಂಡು ಅವರು ಶತ್ರು ವಲಯಗಳನ್ನು ಗುರಿಯಾಗಿಸಿ ಡಜನ್‌ಗಟ್ಟಲೆ ಕ್ಷಿಪಣಿಗಳು ಅಥವಾ ಡ್ರೋನ್‌ಗಳನ್ನು ಹಾರಿಸುವುದು ಸಾಧ್ಯವಾಗುತ್ತದೆ. ಕ್ಯಾಟ್ಸ್ ಸರಣಿಯು ಕಾರ್ಯರೂಪಕ್ಕೆ ಬಂದರೆ ಪೈಲೆಟ್‌ಗಳ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ.

ಬೆಂಗಳೂರು ಮೂಲದ ಎಚ್‌ಎಎಲ್‌ನ ಈ ಮಹತ್ವಾಕಾಂಕ್ಷಿ ಯೋಜನೆಯು ಬೆಂಗಳೂರು ಮೂಲದ ನವೋದ್ಯಮವಾಗಿರುವ ನ್ಯೂಸ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್‌ ಜತೆಗೆ ಸಹಯೋಗವನ್ನು ಹೊಂದಿದ್ದು, 400 ಕೋಟಿ ರೂಪಾಯಿಗಳ ಆರಂಭಿಕ ಹೂಡಿಕೆಯನ್ನು ಒಳಗೊಂಡಿದೆ. ಕ್ಯಾಟ್ಸ್ ಮೂರು ರೂಪಾಂತರಗಳನ್ನು ಹೊಂದಿದೆ: ಕ್ಯಾಟ್ಸ್ ಹಂಟರ್, ಕ್ಯಾಟ್ಸ್ ವಾರಿಯರ್, ಮತ್ತು ಆಲ್ಫಾ-ಎಸ್, ಜೊತೆಗೆ ಹೈ ಆಲ್ಟಿಟ್ಯೂಡ್ ಸ್ಯೂಡೋ ಸ್ಯಾಟಲೈಟ್ (ಎಚ್‌ಎಪಿಎಸ್). ಇವೆಲ್ಲವೂ ಮಾನವರಹಿತ ವಿಮಾನಗಳಾಗಿದ್ದು, ಯುಎವಿ ( ಮಾನವರಹಿತ ವೈಮಾನಿಕ ವಾಹನ) ಗಳು ಎಂದೇ ಪ್ರಸಿದ್ಧವಾಗಿವೆ. ಆದರೆ ಶೂಟಿಂಗ್ ಪ್ಯಾಡ್ 'ಮಾತೃ-ವಾಹನ'ವಾಗಿದ್ದು, ಈ ಯುದ್ಧ ವಿಮಾನವನ್ನು ಪೈಲಟ್ ನಿಯಂತ್ರಿಸುತ್ತಾರೆ. ದಾಳಿಯ ವೇಳೆ ವಿಮಾನವು ಗುರಿ ವಲಯದಿಂದ ಸುರಕ್ಷಿತ ದೂರದಲ್ಲಿರುತ್ತದೆ. ಪೈಲಟ್ ಮತ್ತು ಯುದ್ಧ ವಿಮಾನ ಎರಡನ್ನೂ ಶತ್ರುಗಳ ವ್ಯಾಪ್ತಿಯಿಂದ ಬೇರ್ಪಡಿಸಲಾಗುತ್ತದೆ. ಪರಿಣಾಮವಾಗಿ, ಕ್ಯಾಟ್ಸ್ ಎಂಬುದು ಮಾನವಸಹಿತ ಮತ್ತು ಮಾನವರಹಿತ ವೈಮಾನಿಕ ಯುದ್ಧ ವ್ಯವಸ್ಥೆಗಳ ಮಿಶ್ರಣವಾಗಿದೆ.

ಈ ಎಲ್ಲ ರೂಪಾಂತರಗಳ ಕಾರ್ಯವು ವಿಭಿನ್ನವಾಗಿದೆ. ಗಾಳಿಯಲ್ಲಿ ಉಡಾವಣೆ ಮಾಡುವ ಕ್ರೂಸ್ ಕ್ಷಿಪಣಿಯಾಗಿ ಕ್ಯಾಟ್ಸ್ ಹಂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಶತ್ರು ಪಾಳಯವನ್ನು ಭೇದಿಸಿ, ಒಳನುಗ್ಗಬಲ್ಲದು. ತೇಜಸ್, ಜಾಗ್ವಾರ್ ಅಥವಾ ಸುಖೋಯ್-30 ಎಂಕೆಐಯಂತಹ ಯಾವುದೇ ಯುದ್ಧ ವಿಮಾನವು ಮಾತೃ ವಾಹನ ಅಥವಾ ಉಡಾವಣಾ ವಾಹನವಾಗಿರುತ್ತದೆ. ಎಚ್‌ಎಎಲ್ ಬಹುಶಃ ತನ್ನ ಹಳೆಯ ತಲೆಮಾರಿನ ವಿಮಾನಗಳನ್ನು ಮಾರ್ಪಡಿಸಿ, ಮಾತೃ ವಾಹನವಾಗಿ ಅವುಗಳನ್ನು ಬಳಸುತ್ತದೆ.

ಕ್ಯಾಟ್ಸ್ ವಾರಿಯರ್ ಇನ್ನಷ್ಟು ಬಹುಮುಖವಾಗಿದೆ. ಇದು ಮಾನವ ರಹಿತ ಯುದ್ಧ ವಿಮಾನ (ಯುಸಿಎವಿ) ಆಗಿರುವುದರಿಂದ, ನೆಲದಿಂದ ತಾನಾಗಿಯೇ ಟೇಕ್ ಆಫ್ ಆಗಬಲ್ಲದು. ಶತ್ರು ನೆಲೆಗಳನ್ನು ಗುರಿಯಾಗಿಸಿ, ಭಾರೀ ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲದು. ಅವುಗಳು ಸ್ಟೆಲ್ತ್ ವೈಶಿಷ್ಟ್ಯಗಳನ್ನು ಹೊಂದಿದ್ದು, ತಮ್ಮನ್ನು ಟ್ರ್ಯಾಕ್ ಮಾಡುವ ರಾಡಾರ್‌ಗಳಿಗೆ ಸವಾಲೊಡ್ಡಬಲ್ಲವು. ಇದು 700-800 ಕಿ.ಮೀ. ದೂರದ ವರೆಗೆ ಪ್ರಯಾಣಿಸಿ, ಗುರಿಯನ್ನು ಮುಟ್ಟಬಹುದು. ಗರಿಷ್ಠ ಟೇಕ್‌ಆಫ್ ತೂಕ 1300 ಕೆಜಿ ಹಾಗೂ ಪೇಲೋಡ್ ಸಾಮರ್ಥ್ಯ 250 ಕೆಜಿ ಇರುತ್ತದೆ ಎಂದು ಹೇಳಲಾಗಿದೆ. ಇದು ದಾಳಿಕೋರ ಡ್ರೋನ್‌ಗಳನ್ನು ಹಾರಿಸಿ, ತನ್ನ ಬೇಸ್‌ಗೆ ಮರಳಬಲ್ಲದು. ಪೈಲಟ್ ನಿರ್ವಹಿಸುವ ಯುದ್ಧ ವಿಮಾನವು UCAV ಯನ್ನು ನಿಯಂತ್ರಿಸುತ್ತದೆ ಎಂದು ಎಚ್‌ಎಎಲ್ ಹೇಳಿದೆ. ವಾರಿಯರ್ (Warrior)ಎಷ್ಟು ಬಹುಮುಖವಾಗಿದೆ ಎಂದರೆ ಅದು ಆಲ್ಫಾ-ಎಸ್ (Alpha-S) ಅನ್ನು ಸಾಗಿಸಿ, ಬಿಡುಗಡೆ ಮಾಡುತ್ತದೆ. ತಲಾ 5ರಿಂದ 8 ಕೆಜಿ ಸ್ಫೋಟಕಗಳನ್ನು ಹೊತ್ತ 24 ಡ್ರೋನ್‌ಗಳ ಸಮೂಹವನ್ನು ಹೊಂದಿದೆ ಮತ್ತು ಬಿಡುಗಡೆಯಾದಲ್ಲಿ ಏಕಕಾಲದಲ್ಲಿ ಹಲವು ಶತ್ರು ನೆಲೆಗಳನ್ನು ಗುರಿಯಾಗಿಸುವುದು. ಅಥವಾ, ಆಲ್ಫಾ-ಎಸ್ (Alpha-S) ಅನ್ನು ಯುದ್ಧ ವಿಮಾನದಿಂದ ನೇರವಾಗಿ ಬಿಡುಗಡೆ ಮಾಡಬಹುದು. ಇದು ವಾಹಕ ಸ್ಟ್ಯಾಂಡ್ ಹೊಂದಿದ್ದು, ಅದನ್ನು ಮಾತೃ ವಾಹನದಲ್ಲಿ ಅಳವಡಿಸಲಾಗುವುದು. ಪ್ರತಿಯೊಂದೂ ನಾಲ್ಕು ಡ್ರೋನ್‌ಗಳನ್ನು ಹೊತ್ತೊಯ್ಯಬಲ್ಲದು. ಈ ಮೂಲಕ 100 ಕಿ.ಮೀ. ವ್ಯಾಪ್ತಿಯನ್ನು ವ್ಯಾಪಿಸಬಹುದು. ಡ್ರೋನ್‌ಗಳು ಗಾಳಿಯಿಂದ ನೆಲಕ್ಕೆ ಮತ್ತು ಗಾಳಿಯಿಂದ ಗಾಳಿಗೆ ದಾಳಿ ನಡೆಸಬಲ್ಲವು.

ಈ ಎಲ್ಲ ರೀತಿಯ ಕಾರ್ಯಾಚರಣೆಗಳಿಗೆ ನಿಯಂತ್ರಣ ಸ್ವಿಚ್ ಪೈಲಟ್‌ ಬಳಿ ಇರುತ್ತದೆ, ಅವರು ಡ್ರೋನ್‌ಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುತ್ತಾರೆ. ವಿದ್ಯುನ್ಮಾನವಾಗಿ ಜಾಲಬಂಧವನ್ನು ಹೊಂದಿರುವುದರಿಂದ ಡ್ರೋನ್‌ಗಳು ಪ್ರತ್ಯೇಕ ಗುರಿಗಳನ್ನು ಆಯ್ಕೆ ಮಾಡಬಹುದು. 1990ರಲ್ಲಿ ನಿರ್ಮಾಣವಾದ HALನ ಟರ್ಬೋಜೆಟ್ PTAE-7 ಅನ್ನು CATS ವಾರಿಯರ್ ಮತ್ತು CATS ಹಂಟರ್ ಮಾನವರಹಿತ ಯುದ್ಧ ಡ್ರೋನ್‌ಗಳಿಗೆ ಪವರ್‌ಪ್ಲಾಂಟ್‌ ಆಗಿ ಕಾರ್ಯ ನಿರ್ವಹಿಸುವಂತೆ ಮಾರ್ಪಡಿಸಲಾಗಿದೆ, ಇದು ಕ್ರೂಸ್ ಕ್ಷಿಪಣಿಗಳೆಂದು ನಿರೀಕ್ಷಿಸಲಾಗಿದೆ. ಇದು ಗಾಳಿಯಿಂದ ನೆಲಕ್ಕೆ ಚಿಮ್ಮುವ ಕ್ರೂಸ್ ಕ್ಷಿಪಣಿಯಾಗಿದ್ದು, 600 ಕೆಜಿ ತೂಕ ಹಾಗೂ ಸುಮಾರು 200 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ. ಇದು ಭೂಮಿ ಮತ್ತು ಸಮುದ್ರದ ಮೇಲಿನ ಎರಡೂ ರೀತಿಯ ಗುರಿಗಳ ಮೇಲೆ ದಾಳಿ ಮಾಡಬಹುದು. ಹಳೆಯ ಆವೃತ್ತಿಯು ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADE) ಅಭಿವೃದ್ಧಿಪಡಿಸಿದ ಹೈ-ಸ್ಪೀಡ್ ಟಾರ್ಗೆಟ್ ಡ್ರೋನ್ ವ್ಯವಸ್ಥೆಯಿಂದ ರಿಮೋಟ್‌-ಚಾಲಿತ ಲಕ್ಷ್ಯ-1 ಕ್ಷಿಪಣಿಗಾಗಿ ಬಳಕೆಯಲ್ಲಿತ್ತು.

ಸರ್ಕಾರದ 700 ಕೋಟಿ ರೂಪಾಯಿಗಳ ನಿಧಿಯನ್ನು ಬಳಸಿಕೊಂಡು ಸ್ಯೂಡೋ-ಸ್ಯಾಟಿಲೈಟ್ -HAPS ಅನ್ನು ನಿರ್ಮಿಸುವ ಮಹತ್ವಾಕಾಂಕ್ಷೆ HAL ಗೆ ಇದೆ. ಇದು ರಕ್ಷಣಾ ವಲಯಕ್ಕೆ ಮಾರಾಟ ಮಾಡುವ ಗುರಿಯನ್ನು ಹೊಂದಿರುವ ಡ್ರೋನ್ ಯುದ್ಧೋಪಕರಣಗಳ ಯೋಜನೆಯ ಭಾಗವಾಗಿದೆ. ಈ ಮೂಲ ಮಾದರಿಯನ್ನು ಅಭಿವೃದ್ಧಿಪಡಿಸಲು ಕನಿಷ್ಠ ಒಂದೆರಡು ವರ್ಷಗಳು ಬೇಕಾಗಬಹುದು.


ಸೌರ ಶಕ್ತಿಯನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುವುದು 500 ಕೆಜಿಗಿಂತ ಕಡಿಮೆಯಿಲ್ಲದ HAPS ನ ಧನಾತ್ಮಕ ಅಂಶವಾಗಿದೆ. ಇದನ್ನು 70,000 ಅಡಿ ಎತ್ತರದಲ್ಲಿ ಹಾರುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಬ್ಯಾಟರಿ ಬಾಳಿಕೆ ಕನಿಷ್ಠ ಮೂರು ತಿಂಗಳವರೆಗೆ ಇರುತ್ತದೆ. ಇದು ಮೂಲತಃ ದೂರಸಂಪರ್ಕ ಮತ್ತು ರಿಮೋಟ್ ಸೆನ್ಸಿಂಗ್ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತದೆ. ಅವು ರಕ್ಷಣೆ ಮತ್ತು ನಾಗರಿಕ ಉದ್ದೇಶಗಳಿಗಾಗಿಯೂ ಸೇವೆ ಸಲ್ಲಿಸಲಿವೆ. ಪ್ರತಿಕೂಲ ಭೂಪ್ರದೇಶಗಳಲ್ಲಿ, ಗುಡ್ಡಗಾಡು ಮತ್ತು ಅರಣ್ಯ ಶ್ರೇಣಿಗಳಲ್ಲಿ ಚದುರಿದ ರಕ್ಷಣಾ ಘಟಕಗಳನ್ನು ಇದು ಸಂಪರ್ಕಿಸುತ್ತದೆ. ಡ್ರೋನ್ ಸ್ಪೇಸ್‌ನಲ್ಲಿ, ವಿಶೇಷವಾಗಿ ಸ್ಯೂಡೋ ಸ್ಯಾಟಿಲೈಟ್‌ಗಳ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯು, ಇಂಟರ್ನೆಟ್‌ಗೆ ಪ್ರವೇಶಿಸುವಿಕೆ ಸೇರಿದಂತೆ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತದೆ.

ಯೋಜನೆಯ ಕುರಿತಾದ ಮಾಹಿತಿ ಇರುವ ಜನರ ಪ್ರಕಾರ, ಕ್ಯಾಟ್ಸ್ ಒಂದು ವರ್ಷದಲ್ಲಿ ಸಿದ್ಧವಾಗಲಿದೆ. ಈ ಯೋಜನೆಯು 2017ರಲ್ಲಿ ಪ್ರಾರಂಭವಾಯಿತು. ಇದರ ಮೊದಲ ಪರೀಕ್ಷೆಯನ್ನು ಭಾರತೀಯ ವಾಯುಪಡೆ (ಐಎಎಫ್)ಗಾಗಿ ಪೋಖ್ರಾನ್‌ನಲ್ಲಿ ನಡೆಸಲಾಗಿತ್ತು. ಅಂತಿಮವಾಗಿ, ಈ ಹೊಸ-ಪೀಳಿಗೆಯ ಡ್ರೋನ್‌ಗಳು ಭಾರತೀಯ ವಾಯುಪಡೆಯನ್ನು ಸಶಕ್ತಗೊಳಿಸಲಿವೆ. ವಾಯುಪಡೆಯು ಪ್ರಸ್ತುತ ಕೇವಲ 30 ಸ್ಕ್ವಾಡ್ರನ್ ಯುದ್ಧ ವಿಮಾನಗಳನ್ನು ಹೊಂದಿದೆ. ಆದರೆ ಅದರ ನಿಜವಾದ ಸಾಮರ್ಥ್ಯ 42 ಆಗಿರಬೇಕಿತ್ತು. ಎಚ್‌ಎಲ್‌ನ ಕ್ಯಾಟ್ಸ್ ಡ್ರೋನ್‌ಗಳು ವಿಮಾನ ವ್ಯವಸ್ಥೆಯ ಪಾತ್ರವನ್ನು ಬಹುತೇಕ ವಹಿಸುತ್ತದೆ, ಈ ಮೂಲಕ ಪೈಲಟ್‌ಗಳು ಮತ್ತು ಪರೀಕ್ಷಾ ಎಂಜಿನಿಯರ್‌ಗಳ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತವೆ. ಯುದ್ಧ ವಿಮಾನಗಳಿಗೆ ಹೋಲಿಸಿದರೆ ಅವು ಹೆಚ್ಚು ಮಿತವ್ಯಯಕಾರಿಯಾಗಿವೆ. ಕ್ಯಾಟ್ಸ್‌ನ ಸಂಪೂರ್ಣ ವಿವರಗಳನ್ನು ಎಚ್‌ಎಎಲ್ ಇನ್ನೂ ಬಹಿರಂಗಪಡಿಸಿಲ್ಲ.

ಎಚ್‌ಎಎಲ್‌ನ ಸಂಯೋಜಿತ ಕಾರ್ಯಕ್ರಮವು ಭಾರತಕ್ಕೆ ವಿಶಿಷ್ಟವಾಗಿದೆ. ಈ ಮೂಲಕ ಅದು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಬಹುದು. 2025ರ ವೇಳೆಗೆ, ಎಚ್‌ಎಎಲ್ ಅಭಿವೃದ್ಧಿಪಡಿಸುವ ಕ್ಯಾಟ್ಸ್ ವೈಮಾನಿಕ ಯುದ್ಧ ಕ್ಷೇತ್ರವನ್ನು ಮರುವ್ಯಾಖ್ಯಾನಿಸುತ್ತದೆಯೇ ಎಂಬುದು ಕುತೂಹಲ ಕೆರಳಿಸಿದೆ. ಈ ಯೋಜನೆ ಯಶಸ್ವಿಯಾದರೆ, ಹೊಸ ವೈಮಾನಿಕ ನವೋದ್ಯಮಗಳನ್ನು ಸರ್ಕಾರಿ ಸಂಸ್ಥೆಗಳೊಂದಿಗೆ ಸೇರಿಕೊಂಡು ನಾವೀನ್ಯಕ್ಕೆ ಸಹಕರಿಸಲು ಪ್ರೋತ್ಸಾಹಿಸುತ್ತದೆ.

‘ಆರ್‌ಯುಎವಿ’ಗಳು

ಶತ್ರುಗಳನ್ನು ಎದುರಿಸಲು ರಕ್ಷಣಾ ಉದ್ದೇಶದ ವಿಮಾನಗಳನ್ನು ಸಜ್ಜುಗೊಳಿಸುವುದಕ್ಕೆ ಮಾತ್ರ ಎಚ್‌ಎಎಲ್ ಸೀಮಿತವಾಗಿಲ್ಲ. ರೋಟರಿ ಮಾನವರಹಿತ ವೈಮಾನಿಕ ವಾಹನಗಳನ್ನು (RUAV) ಇದು ಅಭಿವೃದ್ಧಿಪಡಿಸುತ್ತಿದೆ. ಅವು ಯಾವುದೇ ಸ್ಥಳಕ್ಕೆ ಪಡಿತರ, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸುತ್ತವೆ. ದುರ್ಗಮ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಈ ಡ್ರೋನ್‌ಗಳು ಹೆಚ್ಚು ಉಪಯುಕ್ತವಾಗಿವೆ. ಪ್ರತಿಕೂಲ ಹವಾಮಾನದಲ್ಲಿ, ಹೆಲಿಕಾಪ್ಟರ್‌ಗಳು ಹಾರಲು ಕಠಿಣ ಅನ್ನಿಸಿದಲ್ಲಿ, ಡ್ರೋನ್‌ಗಳನ್ನು ಬಳಸಬಹುದು.

- ಗಿರೀಶ್ ಲಿಂಗಣ್ಣ, ಕೈಗಾರಿಕೋದ್ಯಮಿ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT