ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋನ್‌ ಬಳಕೆ ನಿಯಮ ಸಡಿಲಿಕೆ

Last Updated 24 ಜುಲೈ 2018, 19:30 IST
ಅಕ್ಷರ ಗಾತ್ರ

ಜನಸಾಮಾನ್ಯರೂ ಡ್ರೋನ್‌ ಬಳಸುವಂತೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಾಗರಿಕ ಬಳಕೆಯ ಡ್ರೋನ್‌ ಹಾರಾಟ ಇದೇ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಇದಕ್ಕೆ ಬೇಕಾದ ಮಾರ್ಗಸೂಚಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ ಇಷ್ಟರಲ್ಲೇ ಪ್ರಕಟಿಸಲಿದೆ.

ಡ್ರೋನ್‌ಗಳನ್ನು ನೋಂದಾಯಿಸಿಕೊಳ್ಳಲು ಹಾಗೂ ಹಾರಾಟಕ್ಕೆ ಅನುಮತಿ ಪಡೆಯಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಹಲವಾರು ದೇಶಗಳಲ್ಲಿ ವಾಣಿಜ್ಯ ಮತ್ತು ಸಾಮಾನ್ಯ ಬಳಕೆಯ ಡ್ರೋನ್‌ಗಳ ಕುರಿತು ಇನ್ನೂ ಯಾವುದೇ ಕಾನೂನುಗಳೇ ರೂಪುಗೊಂಡಿಲ್ಲ. ಇಂತಹುದರಲ್ಲಿ ಭಾರತದಲ್ಲಿ ಈ ಸಂಬಂಧ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿರುವುದು ಈ ಉದ್ಯಮದಲ್ಲಿ ತೊಡಗಿರುವ ಕಂಪನಿಗಳಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಬೆಲ್ಜಿಯಂ, ಈಜಿಫ್ಟ್‌, ಕ್ಯೂಬಾ, ಇರಾನ್‌, ಮೊರಾಕ್ಕೊ, ಜಾಂಬಿಯಾ ಮುಂತಾದ ದೇಶಗಳಲ್ಲಿ ಡ್ರೋನ್‌ ಹಾರಿಸಲು ಪರವಾನಗಿ ಇಲ್ಲ. ಭಾರತದಲ್ಲೂ ಭದ್ರತೆ ಕಾರಣದಿಂದ ಕೆಲವು ಪ್ರದೇಶಗಳಲ್ಲಿ ಅನುಮತಿ ಇಲ್ಲ. 2014ರ ಅಕ್ಟೋಬರ್‌ನಲ್ಲಿ ಡ್ರೋನ್‌ ಮತ್ತು ಮಾನವರಹಿತ ಹಾರಾಟ ಸಾಧನಗಳ ಹಾರಾಟಕ್ಕೆ ನಿಷೇಧ ವಿಧಿಸಲಾಗಿದೆ.

ಸದ್ಯ ರೂಪಿಸಲಿರುವ ಕರಡಿನಲ್ಲಿ ಡ್ರೋನ್‌ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿರಲಿದೆ. 250 ಗ್ರಾಂ ಗಿಂತ ಕಡಿಮೆ ತೂಕದ ಡ್ರೋನ್‌ಗಳು ಅನುಮತಿ ಪಡೆಯಬೇಕಿಲ್ಲ.

ಒಳ್ಳೆಯ ಉದ್ದೇಶಗಳಿಗೆ ಮಾತ್ರವೇ ಡ್ರೋನ್‌ ಅನ್ನು ಬಳಸಲಾಗುತ್ತಿದೆ ಎಂಬುದು ಖಚಿತವಾಗಿರಬೇಕು. ಅಂತರರಾಷ್ಟ್ರೀಯ ಗಡಿಯಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ‘ಡ್ರೋನ್‌ರಹಿತ ವಲಯ’ ಇರಬೇಕು ಎಂಬ ನಿಯಮವಿದೆ. ಡ್ರೋನ್‌ ನಿಯಮ ಜಾರಿಯ ಹೊಣೆ ನಿರ್ವಹಿಸಲಿರುವ ಸಮಿತಿಯು ಡ್ರೋನ್ ಬಳಕೆಯ ಪರಿಣಾಮ, ನಿಯಮ ಜಾರಿ, ಪುನರ್‌ ಪರಿಶೀಲನೆ, ಕಾರ್ಯತಂತ್ರ ಮತ್ತಿತರ ವಿಷಯಗಳನ್ನು ನೋಡಿಕೊಳ್ಳಲಿದೆ.

ವಿದೇಶಗಳಲ್ಲಿ ಡ್ರೋನ್‌ ನಿಯಮಗಳು

ಅಮೆರಿಕ: ಇಲ್ಲಿನ ಫೆಡರಲ್‌ ಏವಿಯೇಷನ್‌ ಆಡಳಿತವು ಡ್ರೋನ್ ಬಳಕೆಗೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಇಂತಿಷ್ಟು ತೂಕದ ಡ್ರೋನ್‌ಗಳನ್ನು ನೋಂದಣಿ ಮಾಡಿಕೊಂಡಿರಬೇಕು ಎಂಬ ನಿಯಮವಿದೆ. ಹಾರುವ ಎತ್ತರ, ವೇಗಕ್ಕೂ ಇದು ಅನ್ವಯವಾಗಲಿದೆ. 16 ವರ್ಷದೊಳಗಿನವರು ಇವುಗಳ ಹಾರಾಟ ಮಾಡುವಂತಿಲ್ಲ. ಒಂದು ವೇಳೆ ಹಾರಾಟ ಮಾಡಬೇಕಿದ್ದರೆ ಅವರಿಗಿಂತ ಹೆಚ್ಚಿನ ವಯಸ್ಸಿನವರು ಉಸ್ತುವಾರಿ ನೋಡಿಕೊಳ್ಳಬೇಕು.

ಐರೋಪ್ಯ ಒಕ್ಕೂಟ: 150 ಕೆ.ಜಿಗಿಂತ ಒಳಗಿನ ‘ಯುಎವಿ’ಗಳನ್ನು ಬಳಸಲು ಐರೋಪ್ಯ ಒಕ್ಕೂಟದಲ್ಲಿ ಅನುಮತಿ ಬೇಕಿಲ್ಲ. ಇಲ್ಲಿ ಕಡಿಮೆ ತೊಂದರೆಯ, ಮಧ್ಯಮ ತೊಂದರೆಯ ಮತ್ತು ಹೆಚ್ಚಿನ ತೊಂದರೆಯ ಡ್ರೋನ್‌ ಎಂದು ವರ್ಗೀಕರಿಸಲಾಗಿದೆ. ಯುರೋಪಿಯನ್ ಏವಿಯೇಷನ್‌ ಸೇಫ್ಟಿ ಏಜೆನ್ಸಿ ಡ್ರೋನ್‌ ಹಾರಾಟ ಸಂಬಂಧ ಕೆಲವು ನಿಯಮಗಳನ್ನು ರೂಪಿಸಿದೆ.

ಬ್ರಿಟನ್‌: ಇಲ್ಲಿ ಸಿವಿಲ್‌ ಏವಿಯೇಷನ್ ಅಥಾರಿಟಿ (ಸಿಸಿಎ) ಡ್ರೋನ್‌ ಹಾರಾಟಕ್ಕೆ ನಿಯಮಗಳನ್ನು ರೂಪಿಸುತ್ತದೆ. ವಾಣಿಜ್ಯ ಉದ್ದೇಶದ ಡ್ರೋನ್‌ ಹಾರಾಟಕ್ಕೆ ಸಿಸಿಎನಿಂದ ಅನುಮತಿ ಅಗತ್ಯ. ಇವುಗಳಿಗೆ ವಿಮೆ ಕಡ್ಡಾಯ. 122 ಮೀಟರ್ (400 ಅಡಿ) ಮೇಲಕ್ಕೆ ಹಾರಾಟ ಮಾಡುವಂತಿಲ್ಲ. ಇವುಗಳಿಂದ ಯಾರಿಗೂ ಅಪಾಯ ಆಗುವಂತಿಲ್ಲ.

ಆಸ್ಟ್ರೇಲಿಯಾ: ಇಲ್ಲಿ ಹಗಲಿನಲ್ಲಿ ಮಾತ್ರವೇ ಡ್ರೋನ್‌ ಹಾರಾಟ ಮಾಡಬೇಕು. ಬೆಳಕಿನ ಕೊರತೆ ಇರುವಲ್ಲಿ ಮಾಡುವಂತಿಲ್ಲ. ಕಣ್ಣಿನಿಂದ ಕಾಣುವವರೆಗೆ ಮಾತ್ರವೇ ಹಾರಾಟ ಮಾಡಬೇಕು. 120 ಮೀಟರ್‌ಗಿಂತ ಎತ್ತರಕ್ಕೆ ಹಾರಿಸಲು ಅನುಮತಿ ಇಲ್ಲ. ಸಾರ್ವಜನಿಕರ ಸುರಕ್ಷತೆಯನ್ನು ಎಲ್ಲೂ ಕಡೆಗಣಿಸುವಂತಿಲ್ಲ. ಕೆಲವು ತೂಕದ ಡ್ರೋನ್‌ಗಳು ವಿಮಾನ ನಿಲ್ದಾಣಗಳಿಂದ 5.5 ಕಿ.ಮೀ. ದೂರದಲ್ಲಿರಬೇಕು.

ಚೀನಾ: 120 ಮೀಟರ್‌ಗಿಂತ ಹಾರಾಟ ಮಾಡಬೇಕಿದ್ದರೆ ಮತ್ತು 7 ಕೆ.ಜಿ ಗಿಂತ ಹೆಚ್ಚಿದ್ದರೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಪರವಾನಗಿ ಕಡ್ಡಾಯ. ವಿಮಾನ ನಿಲ್ದಾಣ, ಸೇನಾ ನೆಲೆ ಮುಂತಾದೆಡೆ ಅವಕಾಶ ಇಲ್ಲ.

ಜಪಾನ್‌: ಚದರ ಕಿ.ಮೀಗೆ 4,000 ಜನರಿರುವ ಪ್ರದೇಶದಲ್ಲಿ ಡ್ರೋನ್‌ ಹಾರಾಟ ಮಾಡುವಂತಿಲ್ಲ. ವಿಮಾನ ನಿಲ್ದಾಣದಿಂದ 9 ಕಿ.ಮೀ ವ್ಯಾಪ್ತಿಯ ಒಳಗೆ ಮತ್ತು 150 ಮೀಟರ್ ಮೇಲೆ ಅವಕಾಶವಿಲ್ಲ. ಡ್ರೋನ್‌ನಲ್ಲಿ ಸ್ಫೋಟಕಗಳನ್ನು ಇಡುವಂತಿಲ್ಲ.

ಮಾನವರಹಿತ ಹಾರಾಟ ಸಾಧನಗಳು

ಮಾನವರಹಿತ ಹಾರಾಟ ಸಾಧನಗಳನ್ನು (ಯುಎವಿ) ಆಗಸದಲ್ಲಿ ಹಾರಾಟ ನಡೆಸಲು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಇವೆಲ್ಲ ನಾಗರಿಕರ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದಲೇ ಇವೆ. ‘ಯುಎವಿ’ಗಳನ್ನು ಹಾರಾಟ ಮಾಡುವ ಜಮೀನು ಇಲ್ಲವೇ ಜಾಗದ ಮಾಲೀಕನ ಅನುಮತಿ ಪಡೆದಿರಬೇಕು. ಈ ಸಾಧನದ ಎಲ್ಲಾ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳಿಗೆ ನೀಡಬೇಕು. ಯಾವುದೇ ಅವಘಡ ಸಂಭವಿಸಿದರೆ ಅದಕ್ಕೆ ವಿಧಿಸುವ ವಿಮೆಗೆ ಬದ್ಧವಾಗಿರಬೇಕು. ಒಮ್ಮೆ ‘ಯುಎವಿ’ಗಳಿಗೆ ಅನುಮತಿ ‍ಪಡೆದರೆ ಎರಡು ವರ್ಷಗಳವರೆಗೆ ಊರ್ಜಿತದಲ್ಲಿರುತ್ತದೆ. ಮನೆಗಳಲ್ಲಿ ಯಾವುದಾದರೂ ಸಂಭ್ರಮಾಚರಣೆ ಸಂದರ್ಭದಲ್ಲಿ ಮನರಂಜನೆ ಉದ್ದೇಶಕ್ಕೆ ‘ಯುಎವಿ’ ಹಾರಾಟ ಮಾಡಲು ಇಚ್ಛಿಸಿದ್ದರೆ ಮೇಲಿನ ಎಲ್ಲಾ ನಿರ್ಬಂಧಗಳು ಅನ್ವಯವಾಗುತ್ತವೆ. 200 ಮೀಟರ್ ಮೇಲಕ್ಕೆ ಹಾರಾಟ ಮಾಡಬೇಕೆಂದಿದ್ದರೆ ಡಿಜಿಸಿಎಯಿಂದ, 200 ಅಡಿ ಒಳಗೆ ಹಾರಾಟಕ್ಕೆ ಸ್ಥಳೀಯ ಆಡಳಿತದಿಂದ ಅನುಮತಿ ಕಡ್ಡಾಯ. ಶಿಕ್ಷಣ ಸಂಸ್ಥೆಗಳೂ ಶೈಕ್ಷಣಿಕ ಉದ್ದೇಶಕ್ಕೆ ಯುಎವಿ ಹಾರಾಟ ಮಾಡುವುದಿದ್ದರೂ ಪರವಾನಗಿ ಕಡ್ಡಾಯ.

**

2017ರ ನವೆಂಬರ್‌ನಲ್ಲಿ ಡ್ರೋನ್‌ ಹಾರಾಟ ಸಂಬಂಧ ಕರಡು ನಿಯಮ ಪ್ರಕಟಿಸಿದ್ದ ಕೇಂದ್ರ ಸರ್ಕಾರ

2014ರಿಂದ ನಾಗರಿಕ ಡ್ರೋನ್ ಬಳಸುವುದರ ಮೇಲೆ ಡಿಜಿಸಿಎ ನಿರ್ಬಂಧ ವಿಧಿಸಿದೆ

13 ಸದಸ್ಯರನ್ನು ಒಳಗೊಂಡಿರುವ ಕಾರ್ಯಪಡೆಯು ಡ್ರೋನ್‌ ನಿಯಮ ಜಾರಿಯ ಹೊಣೆ ನಿರ್ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT