ಶನಿವಾರ, ಮಾರ್ಚ್ 6, 2021
21 °C
ಸಕಲ ಪರೀಕ್ಷೆಗಳಿಗೂ ‘ಹ್ಯಾಷ್‍ಲರ್ನ್’ ಆಪ್ !

ಕೈನಲ್ಲೇ ಕ್ಲಾಸ್‍ರೂಂ

ಹೇಮಂತ್ ಕುಮಾರ್ ಎಸ್. Updated:

ಅಕ್ಷರ ಗಾತ್ರ : | |

ಹಿಂದೆ ಪರೀಕ್ಷೆಗಳಿಗೆ ಸಿದ್ಧರಾಗಲು ಶಿಕ್ಷಕರ ಮನೆಗೆ ಪಾಠಕ್ಕೆ ಹೋಗುವ ಪರಿಪಾಠವಿತ್ತು. ಟ್ಯುಟೋರಿಯಲ್‌ಗಳಲ್ಲಿ ತರಬೇತಿ ಪಡೆಯುವುದು ಸಂಪ್ರದಾಯದಂತಾಗಿತ್ತು. ಆದರೆ, ಇಂಟರ್‌ನೆಟ್ ಪರಿಚಯವಾದ ಮೇಲೆ, ಆ್ಯಪ್‌, ಯೂಟ್ಯೂಬ್‌ಗಳೇ ಗುರುಗಳು. ಗೂಗಲ್‌ ಸರ್ಚ್‌ ಎಂಜಿನ್ನೇ ಮಹಾಗುರು ಎನ್ನುವಂತಾಗಿದೆ. ಬ್ಯಾಂಕಿಂಗ್‌, ಎಸ್‌ಎಸ್‌ಸಿ, ನೀಟ್‌, ಯುಪಿಎಸ್‌ಸಿ, ರೈಲ್ವೆ ಸೇರಿದಂತೆ ಯಾವುದೇ ಕ್ಷೇತ್ರದ ಪರೀಕ್ಷೆಗಳಿಗೆ ತಯಾರಾಗುವವರು ಮೊದಲು ಅಂತರ್ಜಾಲ ಎಡತಾಕುತ್ತಾರೆ. ಅಲ್ಲಿ ಸಿಕ್ಕಿದ ಕೊಂಡಿಯಿಂದ ಮಾಹಿತಿ ಸಂಗ್ರಹಿಸುತ್ತಾ ಪರೀಕ್ಷೆಗೆ ಸಿದ್ಧರಾಗುತ್ತಾರೆ. ಇಂಥ ತರಬೇತಿಗಾಗಿಯೇ ವಿಷಯಕ್ಕೊಂದರಂತೆ ಅನೇಕ ಆ್ಯಪ್‌ಗಳು, ಯೂಟ್ಯೂಬ್‌ಗಳು ಈಗ ಲಭ್ಯವಿವೆ. ಆದರೆ, ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದೇ ಸವಾಲಾಗಿದೆ. ಇಂಥ ಸಂದರ್ಭದಲ್ಲಿ ಸರಳವಾಗಿ ವಿಷಯ ತಿಳಿಸುವ ‘ಹ್ಯಾಷ್‌ಲರ್ನಿಂಗ್‌’ ಎಂಬ ಆ್ಯಪ್ ಜನಪ್ರಿಯವಾಗುತ್ತಿದೆ.

ಒಂದು ಬಾರಿ ಚಾಟ್ಸ್, ಡೆಸರ್ಟ್ಸ್ ತಿನ್ನಲು ಮಾಡುವಷ್ಟು ಖರ್ಚಿನಲ್ಲಿ ಈ ಆ್ಯಪ್‌ ಉಪಯೋಗಿಸಿ, ಇಡೀ ವರ್ಷ ಯಾವುದೇ ಪರೀಕ್ಷೆಗೆ ತಯಾರಿ ನಡೆಸಬಹುದು. ಪ್ರಯಾಣದಲ್ಲಿರಲಿ, ಮನೆಯಲ್ಲಿರಲಿ, ನೀವು ಎಲ್ಲಿಯೇ ಇದ್ದರೂ ಕೈಯೊಳಗಿನ ಸ್ಮಾರ್ಟ್‍ಫೋನ್‍ನಲ್ಲಿಯೇ ಇದರ ಮೂಲಕ ಮಾರ್ಗದರ್ಶನ ಸಿಗುತ್ತದೆ. ಮಾತ್ರವಲ್ಲ, ಪರಿಕ್ಷೆ ತಯಾರಿ ವೇಳೆ ಉಂಟಾಗುವ ಗೊಂದಲಕ್ಕೆ, ನಿಮಿಷಗಳಲ್ಲಿ ಪರಿಹಾರ ಲಭ್ಯ. ಒಟ್ಟಾರೆ ಆಪ್ತ ಸ್ನೇಹಿತನಂತೆ ಈ ‘ಹ್ಯಾಷ್‍ಲರ್ನ್’ ಅಪ್ಲಿಕೇಷನ್ ಕೆಲಸ ಮಾಡುತ್ತದೆ. ಸ್ಮಾರ್ಟ್‍ಫೋನ್ ಮತ್ತು ಇಂಟರ್‌ನೆಟ್‌ ಸೌಲಭ್ಯ ಇದ್ದರೇ ಸಾಕು, ಆನ್‍ಲೈನ್ ಪಾಠ ಕೇಳಬಹುದು. ನಿಗದಿತ ಸಮಯದಲ್ಲಿ ಪರಿಣತ ಪ್ರಾಚಾರ್ಯರು ನೀಡುವ ವಿಷಯದ ವಿವರಣೆಯನ್ನು ಲೈವ್ ನೋಡಬಹುದು. ಸಂದೇಶಗಳ ಮೂಲಕ ಪ್ರತಿಕ್ರಿಯೆ, ಚರ್ಚೆಯೂ ಸಾಧ್ಯವಿದೆ. 

ಹೈಸ್ಕೂಲ್ ಟು ಐಬಿಪಿಎಸ್

ಆ್ಯಪ್‌ ಮತ್ತು ವೆಬ್‍ಸೈಟ್‍ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ನೀವು ಯಾವ ಪರೀಕ್ಷೆ ತೆಗೆದುಕೊಳ್ಳುತ್ತೀರೋ, ಅವುಗಳಿಗೆ ಇದರ ಮೂಲಕ ಸಿದ್ಧತೆ ನಡೆಸಬಹುದು. 8 ರಿಂದ 10ನೇ ತರಗತಿವರೆಗಿನ ಐಸಿಎಸ್‍ಸಿ ಮತ್ತು ಸಿಬಿಎಸ್‍ಸಿ ಪಠ್ಯಗಳ ಪ್ರಶ್ನೋತ್ತರ, ಎಂಜಿನಿಯರಿಂಗ್, ವೈದ್ಯಕೀಯ ಪ್ರವೇಶ ಪರೀಕ್ಷೆಗಳಾದ ನೀಟ್ ಹಾಗೂ ಜೆಇಇ, ಬ್ಯಾಂಕಿಂಗ್ ಮತ್ತು ಇನ್ಶುರೆನ್ಸ್ ವಲಯಗಳ ಪ್ರೊಬೇಷನರಿ ಆಫೀಸರ್, ಕ್ಲರ್ಕ್ ಹುದ್ದೆಗಳಿಗಾಗಿ ನಡೆಯುವ ಐಬಿಪಿಎಸ್ ಅರ್ಹತಾ ಪರೀಕ್ಷೆ, ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್‍ಎಸ್‍ಸಿ) ಪರೀಕ್ಷೆಗಳು, ಯುಪಿಎಸ್‍ಸಿ ಪರೀಕ್ಷೆ ಹಾಗೂ ಕಾನೂನು ಕೋರ್ಸ್‍ಗಳ ಪ್ರವೇಶ ಪರೀಕ್ಷೆಗಳಿಗೆ ತಜ್ಞರಿಂದ ಉಚಿತವಾಗಿ ವಿಷಯಜ್ಞಾನ ಪಡೆಯಬಹುದು.

ಡೌನ್‌ಲೋಡ್ ಮಾಡಿ ಲಾಗಿನ್ ಆಗಿ

ಗೂಗಲ್ ಪ್ಲೇಸ್ಟೋರ್‌ನಿಂದ ‘ಹ್ಯಾಷ್‍ಲರ್ನ್(HashLearn)’ ಆ್ಯಪ್‌ ಡೌನ್‍ಲೋಡ್ ಮಾಡಿ, ಇ-ಮೇಲ್, ಹೆಸರು ಹಾಗೂ ಮೊಬೈಲ್ ಸಂಖ್ಯೆ ನೀಡುವ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ನೀವು ನೋಂದಣಿ ವೇಳೆ ಉಲ್ಲೇಖಿಸುವ ಮೊಬೈಲ್ ಸಂಖ್ಯೆಗೆ ಹ್ಯಾಷ್‍ಲರ್ನ್‌ನಿಂದ ಪಾಸ್‍ವರ್ಡ್ ಬರುತ್ತದೆ. ಅದನ್ನು ಬಳಸಿ ಲಾಗಿನ್ ಆಗಿ; ಮಾರ್ಗದರ್ಶನ ಬೇಕಿರುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಬಹುದು.

ವಿಡಿಯೊ ಮೂಲಕ ನೀಡುವ ವಿವರಣೆಗಿಂತಲೂ ಹೆಚ್ಚಿನ ವಿಶ್ಲೇಷಣೆ ಬೇಕು, ಅನುಮಾನಗಳಿಗೆ ಪರಿಹಾರ ಬೇಕು ಎಂದರೆ- ಪಠ್ಯ ಅಥವಾ ವಿಷಯಗಳ ಅನುಸಾರ ₹ 35 ನೀಡಿ ಸಲಹೆ ಪಡೆಯಬಹುದು. ಇದರೊಂದಿಗೆ ನಿಗದಿತ ವಿಷಯಗಳ ಬಗ್ಗೆ ಮುದ್ರಣಗೊಂಡಿರುವ ಪಠ್ಯದ ಸಾಫ್ಟ್‌ಕಾಪಿಯನ್ನು ₹ 15 ನೀಡಿ ಪಡೆದುಕೊಳ್ಳಬಹುದು. ಕ್ಲಾಸ್ ಪ್ರಾಕ್ಟೀಸ್, ಮಾದರಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪರೀಕ್ಷೆಗಳನ್ನು ಪಡೆದುಕೊಳ್ಳಲು ‘ಪಾಸ್‍ಪೋರ್ಟ್’ ಪ್ಯಾಕೇಜ್ ಪಡೆಯಬೇಕು. ಪ್ರಸ್ತುತ ವಾರ್ಷಿಕ ₹ 499 ನೀಡಿ ಪಾಸ್‍ಪೋರ್ಟ್ ಪ್ಯಾಕೇಜ್ ಪಡೆದರೆ, ಯಾವುದೇ ಪರೀಕ್ಷೆಗಳಿಗೆ ಮಾರ್ಗದರ್ಶನದ ಜೊತೆ ಪ್ರಾಕ್ಟೀಸ್ ಟೆಸ್ಟ್‌ಗಳನ್ನು ಎದುರಿಸಬಹುದು.

ಇದು ಪರ್ಯಾಯವಲ್ಲ, ಪೂರಕ

‘ಪ್ರವೇಶ ಪರೀಕ್ಷೆಗಳು ಮತ್ತು ವೃತ್ತಿಪರ ಕೋರ್ಸ್‌ ಪರೀಕ್ಷೆಗಳ ತಯಾರಿಗೆ ಈ ಆ್ಯಪ್‌ನಲ್ಲಿ ‘ಲೈವ್ ಕ್ಲಾಸ್‍’ಗಳ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ. ಸದ್ಯ ಉಚಿತವಾಗಿಯೇ ಪಾಠಗಳ ವಿಡಿಯೊ ವೀಕ್ಷಣೆಗೆ ಅವಕಾಶವಿದೆ. ನಮ್ಮ ಈ ಪ್ರಯತ್ನ ಈಗಿನ ಶಿಕ್ಷಣಕ್ಕೆ ಪೂರಕ ವ್ಯವಸ್ಥೆಯನ್ನು ಕಲ್ಪಿಸುವುದೇ ಹೊರತು ಪರ್ಯಾಯ ವ್ಯವಸ್ಥೆ ರೂಪಿಸುವುದು ಅಲ್ಲ ಎನ್ನುತ್ತಾರೆ ಹ್ಯಾಷ್ ಎಜುಕೇಷನ್ ಪ್ರೈವೇಟ್ ಲಿಮಿಟೆಡ್‌ ಕಂಪೆನಿಯ ಆಪರೇಷನ್ ಮ್ಯಾನೇಜರ್ ಅಜಯ್ ಬಾಬು.

ಶಿಕ್ಷಣ ಕ್ಷೇತ್ರದಲ್ಲಿರುವ ಅನೇಕ ತಜ್ಞರನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಅವರ ಅನುಭವಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ತಂತ್ರಜ್ಞಾನದ ಸಹಕಾರ ಪಡೆದಿದ್ದೇವೆ. ನಿಗದಿತ ವಿಷಯಗಳಲ್ಲಿ ಕನಿಷ್ಠ 5 ರಿಂದ 10 ವರ್ಷ ಅನುಭವವಿರುವ ತಜ್ಞರು ವಿಷಯ ವಿವರಣೆ ನೀಡುತ್ತಾರೆ. 20 ವರ್ಷಕ್ಕೂ ಹೆಚ್ಚಿನ ಅನುಭವಿಗಳೂ ಇದ್ದಾರೆ’ ಎಂಬುದು ಅವರು ವಿವರಣೆ.

ಅಂದ ಹಾಗೆ ಈವರೆಗೆ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಹಾಗೂ ವಿವಿಧ ಹುದ್ದೆಗಳ ಆಕಾಂಕ್ಷಿಗಳು ಈ ಆ್ಯಪ್‌ಗೆ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ 40 ಲಕ್ಷ ನಿಮಿಷಗಳ ವಿಡಿಯೊ ಇದರಲ್ಲಿ ಲಭ್ಯವಿದೆ. ಗೂಗಲ್ ಸೇರಿದಂತೆ ಅನೇಕ ಸಂಸ್ಥೆಗಳು ಹ್ಯಾಷ್‍ಲರ್ನ್ ಸ್ಟಾರ್ಟ್‌ಅಪ್‍ಗೆ 2016ರಿಂದ ಬೆಂಬಲ ನೀಡಿವೆ. ಸಂಸ್ಥೆಯು ಬೆಂಗಳೂರಿನಿಂದ ತನ್ನ ಎಲ್ಲ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್: www.hashlearn.com ವೀಕ್ಷಿಸಬಹುದು.

*****

‘ನಗರಗಳನ್ನು ಹೊರತು ಪಡಿಸಿದರೆ ಬೇರೆ ಭಾಗಗಳಲ್ಲಿ ಬ್ಯಾಂಕಿಂಗ್‌ನಂತಹ ಪರೀಕ್ಷೆಗಳ ಸಿದ್ಧತೆಗೆ ಹೆಚ್ಚು ಸೌಲಭ್ಯಗಳಿಲ್ಲ. ಪರೀಕ್ಷಾ ಮಾದರಿಗಳ ಬಗ್ಗೆ ಅರಿತವರು, ಮಾರ್ಗದರ್ಶನ ನೀಡುವ ಹಾಗೂ ಪಡೆಯುವ ಅವಕಾಶವೂ ಕಡಿಮೆ. ಇಂಥ ಆ್ಯಪ್ ಮೂಲಕ ಯಾವುದೇ ಪ್ರದೇಶದಲ್ಲಿರುವ ವಿದ್ಯಾರ್ಥಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಪರೀಕ್ಷೆ ತಯಾರಿ ಮಾಡಿಕೊಳ್ಳಲು ಸಹಕಾರಿಯಾಗಿದೆ’ ಎಂದು ಅಭಿಪ್ರಾಯಪಡುತ್ತಾರೆ ಹ್ಯಾಷ್‍ಲರ್ನ್ ಟ್ಯೂಟರ್, ಗಣಿತ ಉಪನ್ಯಾಸಕ ಮಹಂತೇಶ್.

‘ಇದರಲ್ಲಿ ಬಹುತೇಕ ಉಚಿತವಾಗಿಯೇ ಪಾಠಗಳ ವಿಡಿಯೊ ನೋಡಲು ಸಾಧ್ಯವಿದೆ. ಹೀಗಾಗಿ, ಹಣ ತೆತ್ತು ಟ್ಯುಟೋರಿಯಲ್‌ಗಳಲ್ಲಿ ತರಬೇತಿ ಪಡೆಯಲು ಸಾಧ್ಯವಾಗದ ಬಹಳಷ್ಟು ಮಂದಿಗೆ ಈ ತಂತ್ರಜ್ಞಾನ ಒಂದು ರೀತಿ ವರವಾಗಿ ದೊರತಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಎಂಜಿನಿಯರಿಂಗ್ ಪದವಿ ಮುಗಿಸಿರುವ ವಿದ್ಯಾರ್ಥಿಗಳೇ ಹೆಚ್ಚು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ಬಿ.ಎ., ಬಿ.ಕಾಂ ಪದವಿ ಪಡೆದವರೂ ಈ ಬಗ್ಗೆ ಗಮನಹರಿಸಿ ಆನ್‍ಲೈನ್ ಕ್ಲಾಸ್‍ಗಳ ಉಪಯೋಗ ಪಡೆದುಕೊಳ್ಳಬಹುದು. ಅದಕ್ಕಾಗಿ ಪದವಿ ವಿದ್ಯಾರ್ಥಿಗಳು ಈಗಿಂದಲೇ ತಯಾರಿ ನಡೆಸಬಹುದು’ ಎಂದು ಅವರು ಸಲಹೆ ನೀಡುತ್ತಾರೆ.

*****

ಅನುಕೂಲವಿದೆ, ಇನ್ನೂ ಹೆಚ್ಚಿನ ನಿರೀಕ್ಷೆ ಇದೆ..

ಇತ್ತೀಚೆಗೆ ಆನ್‍ಲೈನ್ ಕಲಿಕೆಗೆ ಆ್ಯಪ್‌ ಮತ್ತು ಯುಟ್ಯೂಬ್ ಚಾನೆಲ್ ವಿಡಿಯೊಗಳು ಸಾಕಷ್ಟಿವೆ. ಎಲ್ಲವೂ ಉಪಯುಕ್ತ. ಆದರೆ, ಇವುಗಳಿಂದಲೇ ಕಲಿಕೆ ಸಾಧ್ಯ ಅಂತ ಏನಲ್ಲ. ಆದರೆ, ಐಬಿಬಿಎಸ್ ರೀತಿಯ ಪರೀಕ್ಷೆಗಳಿಗಾಗಿ ಹ್ಯಾಷ್‍ಲರ್ನ್ ಆರಂಭಿಸಿರುವ ಆನ್‍ಲೈನ್ ಕ್ಲಾಸ್ ತುಸು ಗಮನ ಸೆಳೆಯುತ್ತಿದೆ’ ಎನ್ನುತ್ತಾರೆ ಆ್ಯಪ್ ಬಳಸುತ್ತಿರುವ ಐಬಿಪಿಎಸ್‌ ಆಕಾಂಕ್ಷಿ ಬೆಂಗಳೂರಿನ ಉಮೇಶ್.

’ಕೆಲವು ದಿನಗಳಿಂದ ಈ ಆ್ಯಪ್‌ನಿಂದ ಉಪನ್ಯಾಸಗಳನ್ನು ಕೇಳುತ್ತಿದ್ದೇನೆ. ಬೇಸಿಕ್ಸ್, ಶಾರ್ಟ್‍ಕಟ್, ಸಮಯ ನಿರ್ವಹಣೆ ಹಾಗೂ ಕಾನ್ಸೆಪ್ಟ್‌ಗಳನ್ನು ವಿವರಿಸುತ್ತಾ, ಸಮಸ್ಯೆಗಳನ್ನು ಬಿಡಿಸುವ ವಿಧಾನವನ್ನು ವಿವರಿಸುತ್ತಿದ್ದಾರೆ. ಅನುಭವಿಗಳು, ಪರಿಣತರು ಪಾಠ ಮಾಡುತ್ತಿರುವುದರಿಂದ ಮುಂದೆ ಇನ್ನೂ ಹೆಚ್ಚು ವಿವರಣೆಗಳನ್ನು ನಿರೀಕ್ಷಿಸುತ್ತಿದ್ದೇನೆ. ಬೇರೆ ಊರುಗಳಲ್ಲಿರುವ ನನ್ನ ಸ್ನೇಹಿತರಿಗೂ ಈ ಆ್ಯಪ್‌ ಬಗ್ಗೆ ಹೇಳಿ, ವಿಡಿಯೊಗಳನ್ನು ನೋಡುವಂತೆ ತಿಳಿಸಿದ್ದೇನೆ’ ಎಂದು ಅವರು ತಮ್ಮ ನಿರೀಕ್ಷೆಯನ್ನು ವಿವರಿಸುತ್ತಾರೆ.

* ’ಅನುಭವಿ ತಜ್ಞರು ವಿಷಯ ವಿವರಣೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ 2019ರ ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಸಹಕಾರಿಯಾಗುವಂತಹ ಆನ್‍ಲೈನ್ ಕ್ಲಾಸ್ ಶೀಘ್ರದಲ್ಲಿಯೇ ಪ್ರಾರಂಭಿಸುತ್ತಿದ್ದೇವೆ’
– ಅಜಯ್ ಬಾಬು, ಆಪರೇಷನ್ ಮ್ಯಾನೇಜರ್, ಹ್ಯಾಷ್ ಎಜುಕೇಷನ್ ಪ್ರೈವೇಟ್ ಲಿಮಿಟೆಡ್‌ ಕಂಪೆನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು