ಮಂಗಳವಾರ, ಅಕ್ಟೋಬರ್ 26, 2021
24 °C

ಕಲೆಗೂ ಬಂದಿದೆ ಕ್ರಿಪ್ಟೋ ಕಲರ್!

ಕೃಷ್ಠ ಭಟ್‌ Updated:

ಅಕ್ಷರ ಗಾತ್ರ : | |

Prajavani

ಆತ ಯುವಕಲಾವಿದ. ವಿವಿಧ ಕಂಪನಿಗಳಿಗೆ ಲೋಗೊ ಡಿಸೈನ್ ಮಾಡಿ ಮಾರಾಟ ಮಾಡುತ್ತಿದ್ದ. ಕಲೆಯಲ್ಲೇ ಜೀವನ ಕಟ್ಟಿಕೊಂಡಿದ್ದ. ಒಂದು ದಿನ ಒಂದು ಚಿತ್ರ ರಚಿಸಿ ಅದನ್ನು ಎನ್‌ಎಫ್‌ಟಿ ಮಾಡಿ ಹರಾಜಿಗೆ ಇಟ್ಟ. ರಾತ್ರಿ ಬೆಳಗಾಗುವುದರೊಳಗೆ ಆತನ ಆರ್ಟ್‌ನಿಂದ ಕೋಟ್ಯಧೀಶನಾದ!

ಇಂಥ ಕಥೆಗಳು ಕಲಾವಲಯದಲ್ಲಿ ಇತ್ತೀಚೆಗೆ ಅತ್ಯಂತ ಸಾಮಾನ್ಯವಾಗಿದೆ. ಇಂಥ ಬಹುತೇಕ ಎಲ್ಲ ಸನ್ನಿವೇಶಗಳಲ್ಲೂ ಯುವಕಲಾವಿದರೇ ಎನ್‌ಎಫ್‌ಟಿ ಹರಾಜಿನಲ್ಲಿ ಮಿಂಚುತ್ತಿದ್ದಾರೆ. ಈ ಕಥೆಗಳಿಗೆಲ್ಲ ಆರಂಭದಲ್ಲಿ ಸುದ್ದಿಯಾಗಿದ್ದು, ಬೀಪಲ್‌ ಎಂಬ ಕಲಾವಿದ. ಈತ ತನ್ನ ಒಂದು ಕಲಾಕೃತಿಯನ್ನು ಎನ್‌ಎಫ್‌ಟಿ ಮೂಲಕ ಸುಮಾರು ಏಳು ಕೋಟಿ ಡಾಲರ್‌ಗೆ ಮಾರಾಟ ಮಾಡಿ ಹೆಸರು ಮಾಡಿದ. ಈಗ ಅಮೆರಿಕದ ಒಂದು ದೊಡ್ಡ ಹರಾಜು ಸಂಸ್ಥೆ ಓಪನ್‌ಸೀ ಒಂದರಲ್ಲೇ ಮುನ್ನೂರು ಕೋಟಿ ಡಾಲರ್ ಎನ್‌ಎಫ್‌ಟಿ ಮಾರಾಟವಾಗುತ್ತದೆ!

ಏನಿದು ಎನ್‌ಎಫ್‌ಟಿ?

ಎನ್‌ಎಫ್‌ಟಿ ಎಂದರೆ ನಾನ್‌ ಫಂಜಿಬಲ್ ಟೋಕನ್. ಅಂದರೆ, ಒಂದರಂತೆ ಇನ್ನೊಂದಿಲ್ಲ. ಇದು ಬ್ಲಾಕ್‌ಚೈನ್‌ ಟೆಕ್ನಾಲಜಿಯನ್ನು ಬಳಸುತ್ತದೆ. ಬಿಟ್‌ಕಾಯ್ನ್‌ ವಿಚಾರದಲ್ಲಿ ಹೇಳುವುದಾದರೆ, ಒಂದು ಬಿಟ್‌ಕಾಯ್ನ್ ಬದಲಿಗೆ ನಿಮಗೆ ಅಂಥದ್ದೇ ಇನ್ನೊಂದು ಬಿಟ್‌ಕಾಯ್ನ್ ಸಿಗುತ್ತದೆ. ಆದರೆ, ಇಲ್ಲಿ ಹಾಗಲ್ಲ. ಈ ಎನ್‌ಎಫ್‌ಟಿಯ ಹಾಗೆ ಇನ್ನೊಂದು ಆರ್ಟ್‌ ಇರುವುದಿಲ್ಲ. ಹಾಗಾಗಿ ಇದು ನಾನ್‌ ಫಂಜಿಬಲ್‌. ಬಹುತೇಕ ಎಲ್ಲ ಎನ್‌ಎಫ್‌ಟಿಯೂ ಸದ್ಯಕ್ಕೆ ಎಥೆರಿಯಮ್ ಬ್ಲಾಕ್‌ಚೈನ್‌ ಅನ್ನೇ ಬಳಸುತ್ತಿವೆ. ಇದು ಬ್ಲಾಕ್‌ಚೈನ್‌ನ ಟೆಕ್ನಾಲಜಿಯ ಅತ್ಯಂತ ಉತ್ತಮ ಉಪಯೋಗಗಳಲ್ಲೊಂದು.

ಎನ್‌ಎಫ್‌ಟಿಯಲ್ಲಿ ಯಾವುದನ್ನು ಬೇಕಾದರೂ ಇಡಬಹುದು. ಆರ್ಟ್, ಸಂಗೀತ, ಡ್ರಾಯಿಂಗ್‌... ಹೀಗೆ ಯಾವುದಾದರೂ ಸರಿ. ಇದು ವಿಶಿಷ್ಟವಾದದ್ದಾದರೆ ಆಯಿತು. ಸ್ವಂತದ್ದಾದರೆ ಸರಿ. ಆದರೆ, ಸದ್ಯಕ್ಕೆ ಕಲೆಗೆ ಹೆಚ್ಚು ಬೇಡಿಕೆ ಹುಟ್ಟಿದೆ. ಅದರ ಬಗ್ಗೆ ಮಾರುಕಟ್ಟೆಯಲ್ಲಿ ಕುತೂಹಲವು ಹೆಚ್ಚಿದೆ. ಕೆಲವು ದಿನಗಳ ಹಿಂದೆ ಟ್ವಿಟರ್ ಸಂಸ್ಥಾಪಕ ಜಾಕ್ ಡೋರ್ಸಿ ತನ್ನ ಮೊದಲ ಟ್ವೀಟ್ ಅನ್ನು ಎನ್‌ಎಫ್‌ಟಿಯಲ್ಲಿ ಹರಾಜಿಗೆ ಹಾಕಿ, ಸುಮಾರು ಮೂವತ್ತು ಲಕ್ಷ ಡಾಲರ್‌ಗೆ ಮಾರಿದ್ದರು. ಇದರಿಂದ ಎನ್‌ಎಫ್‌ಟಿಗೆ ಭಾರಿ ಬೇಡಿಕೆ ಸೃಷ್ಟಿಯಾಯಿತು.

ಈ ಎನ್‌ಎಫ್‌ಟಿಯಿಂದ ಮೂಲ ಕಲಾಕಾರರಿಗೆ ಇರುವ ಅನುಕೂಲವೆಂದರೆ, ಇದನ್ನು ಯಾರು ಬೇಕಾದರೂ ಖರೀದಿ ಮಾಡಬಹುದು ಮತ್ತು ಮಾರಬಹುದು. ಹಾಗೆ, ಪ್ರತಿ ಬಾರಿ ಕೈ ಬದಲಾದಾಗಲೂ ಕಲಾಕಾರರಿಗೆ ಒಂದು ಭಾಗ ಹಣ ಪಾವತಿಯಾಗುತ್ತದೆ.

ಎನ್‌ಎಫ್‌ಟಿ ಅನ್ನು ಎಷ್ಟು ಬೇಕಾದರೂ ನಕಲಿಸಬಹುದು ಎಂಬುದರಲ್ಲಿಯೇ ಅಲ್ಲಿರುವ ಸಂಭಾವ್ಯ ಮೋಸದ ವಾಸನೆಯೂ ಶುರುವಾಗುತ್ತದೆ. ಕಲಾಕಾರರಿಂದ ಒಂದು ಕಲಾಕೃತಿ ಖರೀದಿ ಮಾಡಿಕೊಂಡು, ಅದನ್ನು ನಕಲು ಮಾಡಿಯೂ ಮಾರಬಹುದು. ಏಕೆಂದರೆ, ಎನ್‌ಎಫ್‌ಟಿಯನ್ನು ಎಷ್ಟು ಬೇಕಾದರೂ ಪ್ರತಿ ಮಾಡಬಹುದು. ಹೀಗಾಗಿ, ಇದರಲ್ಲಿ ಭಾರಿ ಅವ್ಯವಹಾರಗಳೂ ಶುರುವಾಗಿವೆ.

ವಿಶ್ವದ ದೊಡ್ಡ ದೊಡ್ಡ ಹರಾಜು ಸಂಸ್ಥೆಗಳು ಈಗಾಗಲೇ ಎನ್‌ಎಫ್‌ಟಿ ಹರಾಜು ಕೂಡ ಶುರು ಮಾಡಿವೆ. ಜನಪ್ರಿಯ ಆರ್ಟಿಸ್ಟ್‌ಗಳೇ ತಮ್ಮದೇ ಎನ್‌ಎಫ್‌ಟಿ ಆರಂಭಿಸಿದ್ದಾರೆ.

ಇದೊಂದು ಆರ್ಟ್‌ಫಾರ್ಮೋ ಅಥವಾ ಪ್ಲಾಟ್‌ಫಾರ್ಮೋ ಎಂಬ ಗೊಂದಲ ಎಲ್ಲರಲ್ಲೂ ಇದೆ. ಇದು ಎರಡೂ ಹೌದು. ಒಬ್ಬ ಕಲಾಕಾರ ತನ್ನ ಒಂದು ಕಲೆಯನ್ನು ಡಿಜಿಟಲ್ ಆರ್ಟ್‌ ಮಾಡಬೇಕು ಎಂದಾದರೆ, ಅದಕ್ಕೂ ಈಗ ಹಲವು ಸಂಸ್ಥೆಗಳು ಸಿದ್ಧವಿವೆ. ಅವು ಕಲಾಕೃತಿಯನ್ನು ಎನ್‌ಎಫ್‌ಟಿ ಆಗಿ ಪರಿವರ್ತಿಸಿಕೊಡುತ್ತವೆ. ಅದನ್ನು ನೀವು ಹರಾಜಿಗೆ ಹಾಕಿದರೆ ಆಯಿತು. ಅಲ್ಲಿಗೆ, ಇದೊಂದು ಕಲಾಕೃತಿಯೂ, ಪ್ಲಾಟ್‌ಫಾರಂ ಕೂಡ ಆದ ಹಾಗಾಗುತ್ತದೆ.

ಡಿಜಿಟಲ್ ಆರ್ಟ್ ಏನೂ ಹೊಸತಲ್ಲ. ಕಂಪ್ಯೂಟರ್‌ಗಳು ಬಂದಾಗಲೇ ಡಿಜಿಟಲ್ ಆರ್ಟ್‌ ಕೂಡ ಹುಟ್ಟಿಕೊಂಡಿದ್ದವು. ಆದರೆ, ಒಂದು ಕಲಾಕೃತಿಗೆ ಡಿಜಿಟಲ್ ರೂಪದಲ್ಲಿ ವಿಶಿಷ್ಟತೆ ಇರಲಿಲ್ಲ. ಅಂದರೆ, ಡಿಜಿಟಲ್ ರೂಪದಲ್ಲಿರುವ ಒಂದು ವಸ್ತುವನ್ನು ನಾವು ನಮ್ಮ ಸ್ವಂತದ್ದು ಎಂದು ಅಧಿಕಾರಯುತವಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಕಲಾಕೃತಿಗೆ ಕಲಾಕಾರ ತನ್ನ ಹೆಸರನ್ನು ಹಾಕಿದ್ದರೆ, ಅದನ್ನು ಅಳಿಸಿ, ಯಾರು ಬೇಕಾದರೂ ಬಳಸಿಕೊಳ್ಳಬಹುದಾಗಿತ್ತು. ಆದರೆ, ಎನ್‌ಎಫ್‌ಟಿ ಇಂದ ಒಂದು ಡಿಜಿಟಲ್ ಸಾಮಗ್ರಿಯ ಮಾಲೀಕತ್ವವನ್ನು ವ್ಯಕ್ತಿಯೊಬ್ಬ ಹೊಂದಬಹುದು.

ಸದ್ಯ, ಈ ವಿಧದ ಕಲಾಕೃತಿಗಳಿಗೆ ಈಗ ಭಾರಿ ಬೇಡಿಕೆ ಇದೆ. ಯುವ ಕಲಾವಿದರು ಕೋಟ್ಯಂತರ ಹಣ ಗಳಿಸುತ್ತಿದ್ದಾರೆ. ವಿಶ್ವದ ಹಲವು ಜನಪ್ರಿಯ ಹರಾಜು ಸಂಸ್ಥೆಗಳು ತಮ್ಮದೇ ಪ್ಲಾಟ್‌ಫಾರಂ ರಚಿಸಿಕೊಂಡು ಅವುಗಳಲ್ಲಿ ಎನ್‌ಎಫ್‌ಟಿ ಕಲಾಕೃತಿಗಳ ಹರಾಜು ಹಾಕುತ್ತಿವೆ. ಭಾರತದಲ್ಲೂ ವಾಜಿರ್‌ಎಕ್ಸ್‌ ಎಂಬ ಸಂಸ್ಥೆ ಎನ್‌ಎಫ್‌ಟಿ ಹರಾಜು ನಡೆಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು