ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಸೋಲಾರ್ ರೆಫ್ರಿಜರೇಟರ್

ಔರಾದ್‌ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಿನೂತನ ಪ್ರಯೋಗ
Last Updated 28 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಔರಾದ್: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ಸೌರಶಕ್ತಿ ಬಳಕೆಯ ರೆಫ್ರಿಜರೇಟರ್‌ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಜನ ಸಾಮಾನ್ಯರಿಗೆ ವಿಶೇಷವಾಗಿ ರೈತರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಾಗಲು ಈ ರೆಫ್ರಿಜರೇಟರ್ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ 12 ಓಲ್ಟ್ ಸೋಲಾರ್ ಪ್ಯಾನಲ್ ಬಳಸಲಾಗಿದೆ. ಇದರಿಂದ ಬರುವ ಸೂರ್ಯನ ಬೆಳಕು ವಿದ್ಯುತ್ ಆಗಿ ಪರಿವರ್ತನೆಗೊಂಡು ಚಾರ್ಜ್‌ ಕಂಟ್ರೋಲ್‌ಗೆ ರವಾನೆಯಾಗುತ್ತದೆ. ಅಲ್ಲಿಂದ ಬ್ಯಾಟರಿಯಲ್ಲಿ ಸಂಗ್ರಹವಾಗಿ ಪೆಲ್ಟಿಯರ್ ಚಿಪ್‌ಗೆ (ಎಸ್ಎಸ್‌ಡಿ) ವರ್ಗಾವಣೆಯಾದಾಗ ರೆಫ್ರಿಜರೇಟರ್‌ಗೆ ಬೇಕಾಗುಷ್ಟು ತಂಪು ಸಿಗುತ್ತದೆ. ಐದು ಲೀಟರ್ ಸಾಮರ್ಥ್ಯದ ರೆಫ್ರಿಜರೇಟರ್ ಮಾಡುವಷ್ಟು ಕೆಲಸ ಇದು ಮಾಡುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಕಮುನಿಕೇಷನ್ ವಿಭಾಗದ ಮುಖ್ಯಸ್ಥ ಅರುಣ ಮೊಕಾಶಿ ಹೇಳುತ್ತಾರೆ.

ಇಸಿ ವಿಭಾಗದ ವಿದ್ಯಾರ್ಥಿ ಲೋಕೇಶ್ ಸ್ವಾಮಿ, ಸಿದ್ದಯ್ಯ ಸ್ವಾಮಿ, ಆಕಾಶ ನಾಯಕ್, ಪ್ರಿಯಾಂಕಾ ಮತ್ತು ರತ್ನಮ್ಮ ಅವರು ವಿನೂತನ ಪ್ರಯೋಗದ ಮೂಲಕ ಹೊಸ ವಿನ್ಯಾಸದ ರೆಫ್ರಿಜರೇಟರ್‌ ಕಂಡು ಹಿಡಿದಿದ್ದಾರೆ. ಸೋಲಾರ್ ಪ್ಯಾನಲ್‌ಗೆ ₹ 2,500, ಚಾರ್ಜ್‌ ಕಂಟ್ರೋಲ್‌ಗೆ ₹ 500, 12 ಓಲ್ಟ್ ಬ್ಯಾಟರಿಗೆ ₹ 800, ಪೆಲ್ಟಿಯರ್ ಚಿಪ್‌ಗೆ ₹300 ಸೇರಿ ಸುಮಾರು ₹5 ರಿಂದ 8 ಸಾವಿರ ಖರ್ಚಿನಲ್ಲಿ ಈ ರೆಫ್ರಿಜರೇಟರ್ ವಿನ್ಯಾಸ ಸಿದ್ಧಪಡಿಸಿದ್ದಾರೆ.

‘ರೈತರು ತಮ್ಮ ಹೊಲದಲ್ಲಿ ಬೆಳೆದ ತರಕಾರಿ, ಹಣ್ಣು, ಹಾಲು ಸಣ್ಣ ಪ್ರಮಾಣದಲ್ಲಿ ಸಂಗ್ರಹಿಸಲು ಇದು ಅನುಕೂಲಕರ. ಇದನ್ನು ದೊಡ್ಡದಾಗಿ ಕೂಡ ಮಾಡಿಕೊಳ್ಳಲು ಸಾಧ್ಯವಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಎಸಿಯಾಗಿ ಬಳಸಿಕೊಳ್ಳಬಹುದಾಗಿದೆ’ ಎಂದು ವಿದ್ಯಾರ್ಥಿ ಲೋಕೇಶ್ ಸ್ವಾಮಿ ತಿಳಿಸಿದರು.

‘ಈ ಹಿಂದೆ ನಮ್ಮ ವಿದ್ಯಾರ್ಥಿಗಳು ಸೌರಶಕ್ತಿ ಚಾಲಿತ ಬೈಸಿಕಲ್ ಸಿದ್ಧಪಡಿಸಿದ್ದರು. ಈಗ ಸೌರಶಕ್ತಿ ಬಳಸಿ ರೆಫ್ರಿಜರೇಟರ್ ತಯಾರಿಸಿರುವುದು ಅಪರೂಪ. ಇದೊಂದು ಪ್ರಾಥಮಿಕ ಹಂತದ ಪ್ರಯೋಗ. ಇದನ್ನು ಯಶಸ್ವಿಯಾದರೆ ಈ ರೀತಿಯ ಪರಿಸರ ರೆಫ್ರಿಜರೇಟರ್‌ಗೆ ಭಾರಿ ಬೇಡಿಕೆ ಬರುತ್ತದೆ’ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಉಪನ್ಯಾಸಕ ಸಚಿನ್ ಜಿರೋಬೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT