ಸೋಮವಾರ, ಜನವರಿ 17, 2022
27 °C

ಶಾಕ್‌ ಆಗದಿರಿ! ಹಾರಲಿವೆ ವಿದ್ಯುತ್ ವಿಮಾನಗಳು

ಶರತ್‌ ಭಟ್‌ ಸೇರಾಜೆ Updated:

ಅಕ್ಷರ ಗಾತ್ರ : | |

Prajavani

ಮಕ್ಕಳು ಆಡುವ ಪುಟಾಣಿ ವಿಮಾನಗಳು ಬ್ಯಾಟರಿಯಿಂದ ಒಂದಷ್ಟು ನೆಗೆಯುವುದನ್ನು ನೋಡಿದ್ದಾಗಿದೆ. ವಿದ್ಯುತ್ಕೋಶಗಳನ್ನು ಬಳಸಿ ಬಾನ ತೇರುಗಳನ್ನು ಉಡಾಯಿಸಿದರಾಗದೇ ಎಂಬ ಹುಡುಕಾಟ ಈಗ ಆರಂಭವಾಗಿದೆ.

‘ವಿಮಾನ ಆಕಾಶದಲ್ಲೇ ಯಾಕೆ ಉಳಿಯುತ್ತದೆ ಅಂದರೆ ಅದಕ್ಕೆ ಕೆಳಗೆ ಬೀಳಲಿಕ್ಕೆ ಪುರುಸೊತ್ತಿಲ್ಲ’ ಎಂಬಲ್ಲಿಂದ ಹಿಡಿದು, ‘ನಮ್ಮನ್ನು ನಮ್ಮ ಪಾಸ್‌ಪೋರ್ಟ್ ಫೋಟೊದ ಹಾಗೆ ಕಾಣುವಂತೆ ಮಾಡಲು ನಿಸರ್ಗ ಹೂಡಿರುವ ಒಳಸಂಚಿಗೆ ವಿಮಾನಯಾನ ಅಂತ ಹೆಸರು’ ಎಂಬ ಚತುರೋಕ್ತಿಯವರೆಗೆ ಏರೋಪ್ಲೇನೆಂಬ ಗಾಳಿತೇರು ನಮ್ಮಲ್ಲಿ ಪ್ರಚೋದಿಸಿರುವ ಚಿಂತನೆಗಳ ಪಟ್ಟಿ ದೊಡ್ಡದಿದೆ. ಈಗ ರೋಲ್ಸ್ ರಾಯ್ಸ್ ಎಂಬ ಸಂಸ್ಥೆಯವರು, ‘ಜಗತ್ತಿನ ಅತ್ಯಂತ ಕ್ಷಿಪ್ರಗತಿಯ ವಿದ್ಯುತ್ತಿನ ವಿಮಾನ ನಮ್ಮದೇ’ ಎಂದು ಸುದ್ದಿ ಮಾಡಿರುವ ಕಾರಣ, ವಿದ್ಯುಚ್ಛಕ್ತಿಯ ವಿಮಾನದ ಬಗ್ಗೆ ಮಾತಾಡುವ ಕಾಲ ಬಂದಿದೆ ಅನ್ನಬಹುದು. ನಮ್ಮಲ್ಲಿ ಹಳ್ಳಿಗಳಿಗೆ ದಿನಪೂರ್ತಿ ಕೊಡಲಿಕ್ಕೇ ವಿದ್ಯುತ್ತಿಲ್ಲ, ಇನ್ನು ವಿಮಾನಗಳಿಗೆ ಎಲ್ಲಿಂದ ಕೊಡೋಣ ಅಂತ ನಮ್ಮಂಥವರಿಗೆ ಕಂಡರೂ ದೊಡ್ಡ ವಿಷಯವೇನಲ್ಲ ಅನ್ನಿ. ಆದರೆ ವಿಮಾನಗಳಿಗೆ ಕೊಡುವುದು ಈ ವಿದ್ಯುತ್ತನ್ನಲ್ಲ, ಎಲೆಕ್ಟ್ರಿಕ್ ಕಾರುಗಳಿಗೆ, ಡ್ರೋನುಗಳಿಗೆ ಎಲ್ಲ ಕೊಡುವಂತೆ ಬ್ಯಾಟರಿಯೇ ಇವುಗಳಿಗೆ ಅನ್ನದಾತ, ಉಡ್ಡಯನದಾತ!

ಮಕ್ಕಳು ಆಡುವ ಪುಟಾಣಿ ವಿಮಾನಗಳು ಬ್ಯಾಟರಿಯಿಂದ ಒಂದಷ್ಟು ನೆಗೆಯುವುದನ್ನು ನೋಡಿದ್ದಾಗಿದೆ. ದೊಡ್ಡವರು ಆಡುವ ದೊಡ್ಡ ವಿಮಾನಗಳಿಗೂ ವಿದ್ಯುತ್ಕೋಶದ ಉಣಿಸು ಯಾಕಪ್ಪಾ, ಅಂತ ತಲೆಕೆಡಿಸಿಕೊಂಡರೆ, ಅದಕ್ಕಿಂತಲೂ ಹೆಚ್ಚು ತಲೆಕೆಡಿಸಬಲ್ಲ ಉತ್ತರವೊಂದು ಸಿಗುತ್ತದೆ! ಚಿತ್ರಮಯವಾದ ಮೋಡಗಳ ಮೆಲ್ವಾಸಿನ ಮೇಲೆ ಹಾಯೆನಿಸುವಂತೆ ನಾವು ವಿಮಾನದಲ್ಲಿ ತೇಲುವುದು ಪ್ರಕೃತಿಗೆ ಒಳ್ಳೆಯದೇನಲ್ಲ. ಜಗತ್ತಿನ ಸುಮಾರು ಶೇ. 2.8ರಷ್ಟು ಇಂಗಾಲದ ಡೈ ಆಕ್ಸೈಡಿನ ಸೂಸುವಿಕೆಗೆ ವಿಮಾನಗಳೇ ಕಾರಣವಂತೆ. ಬಾನಾಡಿಗಳು ಒಂದು ವರ್ಷದಲ್ಲಿ ಸುಮಾರು ಒಂದು ಮೆಟ್ರಿಕ್ ಗಿಗಾ ಟನ್‌ನಷ್ಟು, ಅಂದರೆ ಸುಮಾರು 1000000000000 ಕೆಜಿಯಷ್ಟು ಇಂಗಾಲದ ಡೈ ಆಕ್ಸೈಡನ್ನು ಉಗುಳುತ್ತವೆ! ಈ ಮಟ್ಟಕ್ಕೆ ಇದು ನಿಸರ್ಗವನ್ನು ಹಾಳುಮಾಡುವುದರಿಂದ, ಇದರ ಬದಲಿಗೆ ವಿದ್ಯುತ್ಕೋಶಗಳನ್ನು ಬಳಸಿ ಬಾನ ತೇರುಗಳನ್ನು ಉಡಾಯಿಸಿದರಾಗದೇ ಎಂಬ ಹುಡುಕಾಟ ಸಹಜವಾಗಿಯೇ ಶುರುವಾಗಿದೆ. ಇದರಿಂದ ಕಂಪನಿಗಳಿಗೆ ಲಾಭ ಮಾಡುವ ಅವಕಾಶಗಳೂ ಇಲ್ಲದಿಲ್ಲ. ಹಾಗೆ ಹಾರುವ ಸಣ್ಣಪುಟ್ಟ ಬಾನಕ್ಕಿಗಳು ಆಗೀಗ ಬಂದೂ ಇವೆ. ಆದರೆ ಪಯಣಿಗರನ್ನು ಹೊತ್ತೊಯ್ಯುವ ವಾಣಿಜ್ಯವಿಮಾನಗಳಿಗೆ ಸರಿದೊರೆಯಾಗುವ ಮಟ್ಟಕ್ಕೆ ಅವು ಯಾವ ರೀತಿಯಲ್ಲೂ ತಯಾರಾಗಿಲ್ಲ ಎಂಬುದು ವಾಸ್ತವ.

ಎಲೆಕ್ಟ್ರಿಕ್ ಕಾರುಗಳು ಬಂದಿವೆ, ಬ್ಯಾಟರಿಗಳನ್ನೂ ಬಳಸಿ ಡ್ರೋನು ಹಾರಿಸಿಯೂ ಆಗಿದೆ; ಮತ್ತಿನ್ನೇನು ಕಷ್ಟ ಅನ್ನುವುದು ಮೊದಲು ತಲೆಯಲ್ಲಿ ಸುಳಿಯುವ ಪ್ರಶ್ನೆ. ಬ್ಯಾಟರಿಗಳ ಶಕ್ತಿ ಈಗ ಬಳಸುವ ಗ್ಯಾಸೋಲಿನ್ ಮತ್ತಿತರ ಇಂಧನಗಳ ಮುಂದೆ ಅದೆಷ್ಟು ಪೇಲವ ಅಂತ ನೋಡಿದರೆ ಒಂದು ಉತ್ತರ ಸಿಕ್ಕಂತೆ. ಈಗ ನಾವು ಒಂದು ಜಂಬೋ ಜೆಟ್ ಅನ್ನು ಬ್ಯಾಟರಿಗಳ ಬಲದಿಂದ ಹಾರಿಸಿದೆವು ಅಂತಿಟ್ಟುಕೊಳ್ಳೋಣ. ಈಗಿನ ಇಂಧನಗಳು ಉತ್ಪಾದಿಸುವಷ್ಟು ಶಕ್ತಿಯನ್ನು ಉತ್ಪಾದಿಸಬೇಕು ಅಂತ ನಾವು ಹೊರಟರೆ ಅದಕ್ಕೆ ಸುಮಾರು ಐದೂವರೆ ಲಕ್ಷ ಕೆಜಿ ಭಾರದ ಬ್ಯಾಟರಿಗಳು ಬೇಕಾದಾವು! ಈ ಬ್ಯಾಟರಿಗಳ ಭಾರವನ್ನು ಹೊರುವುದಕ್ಕೆ ಮತ್ತೊಂದು ನಾಲ್ಕು ಜೆಟ್ ಎಂಜಿನ್‌ಗಳನ್ನೇ ಎಳೆದು ತರಬೇಕು ಎಂಬ ಪರಿಸ್ಥಿತಿ! ನಮ್ಮ ಬ್ಯಾಗುಗಳು ಒಂದಷ್ಟು ಭಾರ ಇದ್ದರೇ ಹಿಂದೆ ಮುಂದೆ ನೋಡುವ ವಿಮಾನದವರು ಈ ಯಮಭಾರವನ್ನು ಎಲ್ಲಿಡಬೇಕು? ಮತ್ತು ಕಾರುಗಳ ಭಾರ ಶೇ. 35 ಹೆಚ್ಚಾದರೆ ಅದಕ್ಕೆ ಶೇ. 15 ಹೆಚ್ಚು ಶಕ್ತಿ ಸಾಕು. ಆದರೆ ವಿಮಾನವೊಂದಕ್ಕೆ ಅದರ ಭಾರ ಶೇ. 35 ಹೆಚ್ಚಾದರೆ, ಇಂಧನದ ತಾಕತ್ತೂ ಶೇ. 35 ಹೆಚ್ಚಾಗಬೇಕು.

ಇನ್ನು ಕಾರನ್ನು ನಿಂತಲ್ಲಿಂದ ಹೊರಡಿಸಲಿಕ್ಕೆ ಭಾರೀ ಇಂಧನವೇನೂ ಬೇಡ, ವಿಮಾನಕ್ಕೆ ನೆಲಬಿಟ್ಟು ಮೇಲೆ ಹಾರುವುದು ಅಷ್ಟು ಸುಲಭದ ಕೆಲಸವಲ್ಲ. ಅಲ್ಲಿ ಇಂಧನಕ್ಕೆ ಭೀಮಬಲ ಬೇಕು, ಇದು ಮತ್ತೊಂದು ಕಷ್ಟ. ಇಷ್ಟಲ್ಲದೇ ವಿಮಾನಗಳದ್ದು ಕಾರುಗಳಂತೆ ಕಡಿಮೆ ದೂರದ ಪ್ರಯಾಣವಲ್ಲ, ಅವುಗಳದ್ದು ದೂರತೀರ ಯಾನ. ಅಲ್ಲಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಿ, ಬ್ಯಾಟರಿ ಬದಲಾಯಿಸುತ್ತೇವೆ. ಬಾಡಿಗೆ ಹಾಕಿ, ಸ್ವಲ್ಪ ಚಾರ್ಜ್ ಮಾಡಿ, ಒಂದು ಗೂಡಂಗಡಿಯಲ್ಲಿ ಚಾ ಕುಡಿದು ಮುಂದೆ ಹೋಗುತ್ತೇವೆ ಅನ್ನುವ ಹಾಗೂ ಇಲ್ಲ! ಹೀಗಾಗಿ ವಿದ್ಯುಚ್ಚಾಲಿತ ವಿಮಾನಗಳು ಸದ್ಯಕ್ಕಂತೂ ಹೆಚ್ಚು ದೂರ ಹೋಗಲಾರವು, ಅಮೆರಿಕಾದಂತಲ್ಲಿ ಕಡಿಮೆ ದೂರಗಳನ್ನೂ ವಿಮಾನದಲ್ಲಿ ದಾಟುವವರ ಸಂಖ್ಯೆಯೂ ದೊಡ್ಡದೇ, ಆ ಮಾತು ಬೇರೆ. ಆದರೆ ಒಟ್ಟು ಲೆಕ್ಕದಲ್ಲಿ ವಿಮಾನಗಳು ದೂರ ಹೋಗಬೇಕಾದ್ದು ಅಗತ್ಯ. ಕೆಲವು ಚತುರಮತಿಗಳು ಇದಕ್ಕೊಂದು ಸಮನ್ವಯ ಸೂತ್ರವನ್ನೂ ಕಂಡುಹಿಡಿದಿದ್ದಾರೆ; ವಿಮಾನ ಸ್ವಲ್ಪ ಬ್ಯಾಟರಿಯಲ್ಲಿ ಹಾರಲಿ, ಮತ್ತೊಂದರ್ಧ ದೂರವನ್ನು ಹಳೆಯ ಪದ್ಧತಿಯಲ್ಲೇ ಹಾರಲಿ, ಅಲ್ಲಿಗೆ ಸ್ವಲ್ಪ ಪ್ರಯೋಜನವನ್ನೂ ಪಡೆದಂತಾಯಿತು ಅಂತ ಹೈಬ್ರಿಡ್ ಯಂತ್ರಗಳ ರಚನೆಗೆ ಮುಂದಾಗಿದ್ದಾರೆ.

ಈ ಮಟ್ಟದ ವಿದ್ಯುತ್ಕೋಶಗಳ ತಯಾರಿಗೆ ತುರುಸಿನ ಕೆಲಸಗಳಂತೂ ಆಗುತ್ತಿವೆ. ಈಗ ರಾಲ್ಸ್ ರಾಯ್ಸ್ ಕಂಪನಿಯವರು ಗಂಟೆಗೆ 623 ಕಿ.ಮೀ. ವೇಗದಲ್ಲಿ ಇಂಥ ವಿಮಾನಗಳನ್ನು ಚಲಾಯಿಸಿರುವುದು ದೊಡ್ಡ ಸಾಧನೆಯೇ. ಒಂದು ಕೋಣೆಯಷ್ಟಿದ್ದ ಗಣಕಯಂತ್ರಗಳು ಈಗ ಲ್ಯಾಪ್‌ಟಾಪಾಗಿ ತೊಡೆಯ ಮೇಲೆ ಬಂದು ಕೂತಿರುವಾಗ, ಮೂರ್ತಿ ಚಿಕ್ಕದಾದರೂ ಶಕ್ತಿ ದೊಡ್ಡದಾದ ಬ್ಯಾಟರಿಗಳು ಇನ್ನೊಂದು ಹನ್ನೆರಡು ವರ್ಷಗಳಲ್ಲಿ ಬಂದಾವು. Aerodynamically, the bumble bee shouldn't be able to fly, but the bumble bee doesn't know it so it goes on flying anyway ಎಂಬ ಮಾತೇ ಇದೆಯಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು