ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶರಥನ ಬಯಕೆಗಿದೆ ದೇವಸಭೆಯ ಬೆಂಬಲ

Last Updated 31 ಜುಲೈ 2018, 12:29 IST
ಅಕ್ಷರ ಗಾತ್ರ

ಋಷ್ಯಶೃಂಗನ ನೇತೃತ್ವದಲ್ಲಿ ಪುತ್ರಕಾಮೇಷ್ಟಿಯಾಗಕ್ಕೆ ಸಿದ್ಧತೆಗಳು ನಡೆದಿವೆ. ಅದೇ ಸಂದರ್ಭದಲ್ಲಿ ದೇವತೆಗಳ ಒಂದು ಸಭೆ ನಡೆದಿದೆ. ಇದು ದಶರಥ ಮುಂತಾದವರ ಸಮ್ಮುಖದಲ್ಲಿ ನಡೆದ ಸಭೆಯಲ್ಲ; ಪರೋಕ್ಷವಾಗಿ ನಡೆದಿರುವ ಸಭೆ:

ದೇವತೆಗಳು, ಗಂಧರ್ವರು, ಸಿದ್ಧರು, ದೇವರ್ಷಿಗಳು–ಎಲ್ಲರೂ ಒಂದಾಗಿ ಬ್ರಹ್ಮದೇವನಲ್ಲಿಗೆ ಬಂದರು. ‘ಬ್ರಹ್ಮದೇವ! ರಾವಣನೆಂಬ ರಾಕ್ಷಸನು ನಿನ್ನ ಅನುಗ್ರಹದಿಂದ ಬಲಶಾಲಿಯಾಗಿ ನಮ್ಮೆಲ್ಲರನ್ನೂ ಪೀಡಿಸುತ್ತಿದ್ದಾನೆ. ಅವನನ್ನು ದಂಡಿಸಲು ನಮಗೆ ಶಕ್ತಿಯಿಲ್ಲ. ನೀನು ಅವನ ತಪಸ್ಸಿಗೆ ಮೆಚ್ಚಿ ಹಿಂದೆ ವರವನ್ನು ಕೊಟ್ಟಿದ್ದೀಯೆ. ಆದ್ದರಿಂದ ಅದನ್ನು ಗೌರವಿಸುತ್ತ ಅವನ ಬಾಧೆಯನ್ನು ಸಹಿಸಿಕೊಳ್ಳಬೇಕಾಗಿದೆ. ಆ ದುಷ್ಟನು ಮೂರು ಲೋಕಗಳನ್ನೂ ಹೆದರಿಸುತ್ತಿದ್ದಾನೆ. ಲೋಕಪಾಲಕರನ್ನೂ ದ್ವೇಷಿಸುತ್ತಿದ್ದಾನೆ. ದೇವೇಂದ್ರನನ್ನೂ ಪದಚ್ಯುತನನ್ನಾಗಿ ಮಾಡಬೇಕೆಂದಿದ್ದಾನೆ. ಋಷಿಗಳು, ಯಕ್ಷರು, ಗಂಧರ್ವರು, ಅಸುರರು, ಬ್ರಾಹ್ಮಣರು– ಇವರನ್ನೆಲ್ಲ ಅತಿಕ್ರಮಿಸಲು ತೊಂದರೆಪಡಿಸುತ್ತಿದ್ದಾನೆ. ಅವನನ್ನು ಹಿಡಿಯುವವರೇ ಇಲ್ಲ. ನಿನ್ನ ವರಬಲದಿಂದ ಅವನ ತಲೆ ತಿರುಗಿದೆ. ಅವನೆದುರಿಗೆ ಸೂರ್ಯನು ಜ್ವಲಿಸುವುದಿಲ್ಲ. ಗಾಳಿ ಬೀಸುವುದಿಲ್ಲ. ಸದಾ ಅಲೆಗಳಿಂದ ಅಪ್ಪಳಿಸುವ ಸಮುದ್ರರಾಜನೂ ಕೂಡ ರಾವಣನನ್ನು ಕಂಡರೆ ಅಲ್ಲಾಡದೆ ನಿಂತುಬಿಡಬಹುದು. ಘೋರರೂಪಿಯಾದ ಆ ರಾಕ್ಷಸನಿಂದ ನಮಗೆ ಬಹಳ ಭಯವಾಗಿದೆ. ಹೇ ಭಗವಂತ! ಅವನನ್ನು ಸಂಹರಿಸುವುದಕ್ಕೆ ನೀನು ಏನಾದರೂ ಉಪಾಯವನ್ನು ಮಾಡಬೇಕು’ ಎಂದು ಪ್ರಾರ್ಥಿಸಿದರು.

ಆಗ ಬ್ರಹ್ಮ ಸ್ವಲ್ಪ ಯೋಚಿಸಿ ‘ಸರಿ; ಆ ದುರಾತ್ಮನನ್ನು ಸಂಹರಿಸತಕ್ಕ ಉಪಾಯವು ತಿಳಿಯಿತು. ದೇವತೆಗಳೆ, ರಾವಣನು ಯಕ್ಷ, ಗಂಧರ್ವ, ದೇವ, ದಾನವ, ರಾಕ್ಷಸರಿಂದ ತಾನು ಅವಧ್ಯನಾಗಬೇಕೆಂದು ವರವನ್ನು ಕೇಳಿಕೊಳ್ಳಲು, ನಾನು ‘ಆಗಲಿ’, ಎಂದು ಹೇಳಿದೆ. ಆ ರಾಕ್ಷಸನು ಆಗ ಅನಾದರದಿಂದ ಮನುಷ್ಯರ ಹೆಸರನ್ನು ಎತ್ತಲಿಲ್ಲ. ಆದ್ದರಿಂದ ಅವನು ಮನುಷ್ಯನಿಂದಲೇ ವಧ್ಯನಾಗಬೇಕು. ಬೇರೆ ವಿಧದಲ್ಲಿ ಅವನಿಗೆ ಮರಣವು ಸಾಧ್ಯವಿಲ್ಲ’ ಎಂದನು.

ಬ್ರಹ್ಮನ ಮಾತನ್ನು ಕೇಳಿ ದೇವತೆಗಳಿಗೆ ಬಹಳ ಸಂತೋಷವಾಯಿತು. ಅಷ್ಟರಲ್ಲಿ ಜಗದೀಶ್ವರನಾದ ಮಹಾವಿಷ್ಣುವು ಶಂಕಚಕ್ರಗದಾಪಾಣಿಯಾಗಿ ಪೀತಾಂಬರವನ್ನು ಧರಿಸಿ ದಿವ್ಯಕಾಂತಿಯನ್ನು ಸೂಸುತ್ತ ಅಲ್ಲಿಗೆ ಬಂದನು. ಬಂದು ಪ್ರಸನ್ನಚಿತ್ತನಾಗಿ ಬ್ರಹ್ಮನ ಬಳಿ ನಿಂತನು. ದೇವತೆಗಳೆಲ್ಲರೂ ಅವನಿಗೆ ತಲೆಬಾಗಿ ಸ್ತುತಿಸುತ್ತ ‘ಹೇ ಮಹಾವಿಷ್ಣು! ಲೋಕಹಿತಕ್ಕಾಗಿ ನಿನ್ನಲ್ಲಿ ಒಂದು ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಅಯೋಧ್ಯಾಪತಿಯಾದ ದಶರಥಮಹಾರಾಜನಿಗೆ ನೀನು ಪುತ್ರನಾಗಿ ಅವತರಿಸು. ಆತನು ಧರ್ಮಜ್ಞ; ಉದಾರಿ, ಮಹರ್ಷಿಯಂತೆ ತೇಜಸ್ವಿಯಾದವನು. ಅವನ ಪತ್ನಿಯರಾದ ಕೌಸಲ್ಯೆ, ಸುಮಿತ್ರೆ, ಕೈಕೇಯಿ – ಈ ಮೂವರು ಹ್ರೀ, ಶ್ರೀ, ಕೀರ್ತಿಗಳಂತೆ ಇದ್ದಾರೆ, ನೀನು ಅವರಲ್ಲಿ ನಾಲ್ಕು ಅಂಶಗಳಿಂದ ಪುತ್ರನಾಗಿ ಜನಿಸು. ಹೀಗೆ ಮನುಷ್ಯನಾಗಿ ಜನಿಸಿ ಯುದ್ಧದಲ್ಲಿ ರಾವಣನನ್ನು ಸಂಹರಿಸಬೇಕು. ಅವನು ಲೋಕಕಂಟಕನಾಗಿ ಬೆಳೆದು ನಿಂತಿದ್ದಾನೆ. ನಮ್ಮಿಂದ ಅವನನ್ನು ಕೊಲ್ಲುವುದು ಶಕ್ಯವಿಲ್ಲ. ಹೇ ಮಹಾವಿಷ್ಣು! ಆ ರಾಕ್ಷಸನು ಶೌರ್ಯದ ಕೊಬ್ಬಿನಿಂದ ನಮ್ಮೆಲ್ಲರನ್ನೂ ಮಹರ್ಷಿಗಳನ್ನೂ ಪೀಡಿಸುತ್ತಿದ್ದಾನೆ. ಋಷಿಗಳೂ ಗಂಧರ್ವರೂ ಅಪ್ಸರಃಸ್ತ್ರೀಯರೂ ನಂದನವನದಲ್ಲಿ ತಮ್ಮ ಪಾಡಿಗೆ ವಿಹರಿಸುತ್ತಾ ಇದ್ದರೆ, ಈ ಕ್ರೂರನು ಅಲ್ಲಿಗೆ ಹೋಗಿ ಅವರನ್ನು ಹಿಂಸೆಪಡಿಸುತ್ತಿದ್ದಾನೆ. ಅವನನ್ನು ಸಂಹಾರ ಮಾಡಿಸಬೇಕೆಂದು ನಾವೆಲ್ಲರೂ ಮುನಿಗಳೊಡನೆ ಇಲ್ಲಿಗೆ ಬಂದು ನಿನ್ನ ಮೊರೆಹೊಕ್ಕಿದ್ದೇವೆ. ಹೇ ದೇವ, ನಮ್ಮೆಲ್ಲರಿಗೂ ನೀನೇ ಗತಿ. ದೇವಶತ್ರುಗಳನ್ನು ಸಂಹರಿಸುವುದಕ್ಕೋಸ್ಕರ ನೀನು ಮನುಷ್ಯಲೋಕದಲ್ಲಿ ಅವತರಿಸಲು ಮನಸ್ಸುಮಾಡಬೇಕು’ ಎಂದು ಪ್ರಾರ್ಥಿಸಿದರು.

(ಅನುವಾದ: ಎನ್‌. ರಂಗನಾಥ ಶರ್ಮಾ)

* * *

ಕಾವ್ಯವಾಗಿ ಸಾಗುತ್ತಿದ್ದ ರಾಮಾಯಣಕ್ಕೆ ಬಾಲಕಾಂಡದ ಈ ಹದಿನೈದನೆಯ ಸರ್ಗವು ಪುರಾಣದ ಆವರಣವನ್ನು ಒದಗಿಸಿದೆ. ರಾಮನ ಪಾತ್ರಕ್ಕೆ ದೈವತ್ವದ ಆಯಾಮವನ್ನು ಒದಗಿಸಿದೆ. ಇಡಿಯ ರಾಮಾಯಣದಲ್ಲಿ ರಾಮ ‘ತಾನು ದೇವರು’– ಎಂಬ ನೆಲೆಯಲ್ಲಿ ತೋರಿಕೊಳ್ಳುವ ಪ್ರಸಂಗ ಇಲ್ಲವೇ ಇಲ್ಲ ಎಂದರೆ ತಪ್ಪಾಗದು. ಆದರೆ ಈ ಭಾಗ ಮಾತ್ರವೇ ಒಟ್ಟು ರಾಮಾಯಣವನ್ನು ‘ಧಾರ್ಮಿಕತೆ’ಯ ಹಂದರದ ಮೇಲೆ ನಿಲ್ಲಿಸುತ್ತಿದೆ ಎನಿಸುತ್ತಿದೆ. ಆದರೆ ಪ್ರಾಚೀನ ಮಹಾಕಾವ್ಯಗಳ ಮನೋಧರ್ಮಕ್ಕೆ ಈ ನಿಲುವು ತುಂಬ ಪರಕೀಯವೂ ಅಲ್ಲವೆನ್ನಿ!

ಈ ಪ್ರಸಂಗದಲ್ಲಿ ಹಲವು ಧ್ವನಿಗಳನ್ನು ಕಾಣಬಹುದು.

ನಮ್ಮ ಎಲ್ಲ ಸಂಕಲ್ಪಗಳೂ ಕ್ರಿಯೆಗಳೂ ಕೂಡ ಸೃಷ್ಟಿಯ ಯಾವುದೋ ಮಹಾಸಂಕಲ್ಪದೊಂದಿಗೆ ನೇರ ನಂಟನ್ನು ಹೊಂದಿರುತ್ತವೆ ಎನ್ನುವಂತಿದೆ, ಈ ಪ್ರಸಂಗ. ಎಲ್ಲೋ ದೂರದಲ್ಲಿ ಬಡಿದ ಚಿಟ್ಟೆಯ ರೆಕ್ಕೆಗಳು ಇಲ್ಲಿ ಬಿರುಗಾಳಿಯನ್ನೇ ಎಬ್ಬಿಸಬಲ್ಲದು ಎನ್ನುವುದುಂಟು. ಇಂಥ ವಿದ್ಯಮಾನವನ್ನು ‘ಬಟರ್‌–ಫ್ಲೈ ಎಫೆಕ್ಟ್‌’ (ಪತಂಗ ಪರಿಣಾಮ) ಎಂದು ವಿಜ್ಞಾನಿಗಳು ಕರೆದಿದ್ದಾರೆ. ಇರಲಿ; ನಾವಿಲ್ಲಿ ನೋಡಬೇಕಾದದ್ದು – ದೈವಸಂಕಲ್ಪ. ಎಂದರೆ ಅಗೋಚರವಾದ ಶಕ್ತಿಯೊಂದು ನಮ್ಮ ಎಲ್ಲ ಆಗುಹೋಗುಗಳಿಗೂ ಕಾರಣವಾಗಿರುತ್ತದೆ ಎಂದು ಈ ಪ್ರಸಂಗ ಹೇಳುತ್ತಿದೆಯೆ?

ರಾವಣ ಎಂಬುವನೊಬ್ಬ ರಾಕ್ಷಸ; ಅವನು ತಪಸ್ಸನ್ನು ಆಚರಿಸಿ ಬ್ರಹ್ಮನಿಂದ ವರವನ್ನು ಪಡೆದಿದ್ದಾನೆ. ಅದು ಎಂಥ ವರ? ಅವನಿಗೆ ಸಾವೇ ಬರಬಾರದು–ಇದು ಅವನು ಪಡೆದಿರುವ ವರ. ಅವನು ವರವನ್ನು ಕೇಳುವಾಗ ಯಾರಿಂದೆಲ್ಲ ಅವನಿಗೆ ಸಾವು ಎದುರಾಗಬಹುದು ಎಂದು ಯೋಚಿಸಿದ್ದಾನೆ. ಅದರಂತೆ ದೇವತೆಗಳು, ರಾಕ್ಷಸರು, ಗಂಧರ್ವರು – ಹೀಗೆ ಎಲ್ಲ ಜೀವಿಗಳನ್ನೂ ಪಟ್ಟಿ ಮಾಡಿದ್ದಾನೆ. ಆದರೆ ಆ ಪಟ್ಟಿಯಲ್ಲಿ ಅವನು ಮನುಷ್ಯನನ್ನು ಸೇರಿಸುವುದನ್ನು ಮರೆತಿದ್ದಾನೆ. ಹೀಗಾಗಿ ಮನುಷ್ಯನೊಬ್ಬನಿಂದ ಅವನ ಸಾವು ಖಚಿತ ಎಂದಾಯಿತಲ್ಲವೆ? ಎಂದರೆ ಸಾವನ್ನು ಯಾರೂ ಕೂಡ ತಪ್ಪಿಸಿಕೊಳ್ಳಲು ಆಗದು ಎಂಬುದು ಇಲ್ಲಿರುವ ಒಂದು ಸಂದೇಶ. ಅಷ್ಟೇ ಅಲ್ಲ, ದುಷ್ಟಬುದ್ಧಿಯ ಬುದ್ಧಿವಂತಿಕೆ ದೋಷಪೂರ್ಣವೇ ಹೊರತು ಅದು ಪರಿಪೂರ್ಣವಾಗಿಯೂ ಇರದು; ಯಾರಿಗೂ ಒಳಿತನ್ನು ಒದಗಿಸದು ಎನ್ನುವುದೂ ಕೂಡ ಈ ಪ್ರಸಂಗದಲ್ಲಿ ಧ್ವನಿತವಾಗುತ್ತದೆ.

ಇನ್ನೂ ಒಂದು ಸ್ವಾರಸ್ಯವನ್ನು ಗಮನಿಸಬಹುದು – ರಾಕ್ಷಸಬುದ್ಧಿಗೆ ಮನುಷ್ಯತನದ ಬಗ್ಗೆ ಇರುವ ಅಸಡ್ಡೆ! ಮನುಷ್ಯನಿಂದ ತನಗೆ ಮರಣ ಬರಲು ಸಾಧ್ಯವೇ ಇಲ್ಲ ಎನ್ನುವುದು ರಾವಣನ ನಂಬಿಕೆ. ಹೀಗಾಗಿಯೇ ಅವನು ಕೇಳಿದ ವರದಲ್ಲಿ ಮನುಷ್ಯನನ್ನು ಲೆಕ್ಕಿಸಲೇ ಇಲ್ಲ!

ಮಹಾವಿಷ್ಣು ಮನುಷ್ಯನಾಗಿ ಭೂಮಿಯ ಮೇಲೆ ಜನಿಸಿದ ಎನ್ನುವುದು ಒಂದು ಮಹಾಸಂದೇಶವೇ ಹೌದು. ಮಾನವನಲ್ಲಿರುವ ಅಪಾರಶಕ್ತಿಯ ಹಿರಿಮೆಯನ್ನು ಎತ್ತಿಹಿಡಿಯುವುದೇ ರಾಮಾವತಾರದ ಸಂದೇಶ. ಮನುಷ್ಯ ಯಾವ ಎತ್ತರಕ್ಕೆ ಏರಬಲ್ಲ – ಎನ್ನುವುದಕ್ಕೆ ರಾಮಾಯಣ ಅಪೂರ್ವ ಉದಾಹರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT