ಬೆಂಗಳೂರು: ‘ಕಂಪ್ಯೂಟರ್ ಗೇಮಿಂಗ್ಸ್ ಅಥವಾ ಇ–ಸ್ಪೋರ್ಟ್ಸ್ ಈಗ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಶಿಕ್ಷಣ ವ್ಯವಸ್ಥೆಯ ಮರುಸಂಯೋಜನೆ ಹಾಗೂ ವಾಣಿಜ್ಯ ಕ್ಷೇತ್ರದ ಮಹತ್ತರ ಬದಲಾವಣೆಗಳಿಗೂ ಇದು ಕಾರಣವಾಗುತ್ತಿದೆ’ ಎಂದು ಅನಿಮೇಷನ್ ತಜ್ಞ ಒವೆನ್ ಹಾರ್ಲೆ ಅಭಿಪ್ರಾಯಪಟ್ಟರು.
ಬೆಂಗಳೂರು ತಂತ್ರಜ್ಞಾನ ಶೃಂಗ 2020ರಲ್ಲಿ ಅವರು ಅನಿಮೇಷನ್, ವಿಷುವಲ್ ಇಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ಕ್ಷೇತ್ರದ ಇತ್ತೀಚಿನ ಒಲವುಗಳ ಬಗ್ಗೆ ಶುಕ್ರವಾರ ಬೆಳಕು ಚೆಲ್ಲಿದರು.
‘ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳಲ್ಲಿ 20 ವರ್ಷಗಳ ಹಿಂದೆಯೇ ಇ–ಸ್ಪೋರ್ಟ್ಸ್ ಪ್ರವರ್ಧಮಾನಕ್ಕೆ ಬಂದಿತ್ತು. ಹೊಸ ಹೊಸ ಜನರ ಜೊತೆ ನಂಟು ಬೆಸೆಯುವ, ಕ್ರೀಡಾ ರೋಚಕತೆಯ ನಿಜ ಅನುಭೂತಿ ಒದಗಿಸುವ ಗೇಮಿಂಗ್ಗಳು ಈಗಿನ ಪೀಳಿಗೆಯಲ್ಲಿ ಹುಚ್ಚು ಹಿಡಿಸುತ್ತಿವೆ. ಫೇಸ್ಬುಕ್, ಟ್ವಿಟರ್ನಂತಹ ಸಮಾಜಿಕ ಮಾಧ್ಯಮಗಳು ಸಾಮಾಜಿಕ ಅನನ್ಯತೆ ಒಂದು ಪದರವಾದರೆ ಗೇಮಿಂಗ್ ಇನ್ನೊಂದು ಪದರವಿದ್ದಂತೆ. ಇದರಲ್ಲಿರುವ ಅಗಾಧ ಸಾಧ್ಯತೆಗಳು ಶಿಕ್ಷಣಕ್ಕೆ ಹೊಸ ದಿಸೆ ತೋರಬಲ್ಲವು. ಕಲಿಕೆಯ ವಿನ್ಯಾಸವನ್ನೇ ಬದಲಿಸಬಲ್ಲವು’ ಎಂದರು.
‘ಹೊಸ ಪೀಳಿಗೆಯ ಜನರಲ್ಲಿ ಗೇಮಿಂಗ್ ಜನಪ್ರಿಯತೆ ಗಳಿಸಿದ್ದು, 70 ಲಕ್ಷ ಡಾಲರ್ ಮೌಲ್ಯದ ಮಾರುಕಟ್ಟೆಯನ್ನು ಹೊಂದಿದೆ. ಜನರ ಚಿಂತನಾ ಕ್ರಮದ ಮೇಲೆ ಪ್ರಭಾವ ಬೀರಬಲ್ಲ ಈ ಕ್ಷೇತ್ರ ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆ ಮಹತ್ವ ಕಳೆದುಕೊಳ್ಳುವಂತೆ ಮಾಡುತ್ತಿದೆ’ ಎಂದು ವಿಶ್ಲೇಷಿಸಿದರು.
‘ವರ್ಚುವಲ್ ರಿಯಾಲಿಟಿ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳಿಂದಾಗಿ ಗೇಮಿಂಗ್ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು ತೆರೆದುಕೊಂಡಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.