ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಚ್‌ಸ್ಕ್ರೀನ್‌ಗೆ ಗುಡ್‌ಬೈ?

Last Updated 30 ಜನವರಿ 2019, 19:30 IST
ಅಕ್ಷರ ಗಾತ್ರ

ಟಚ್‌ಸ್ಕ್ರೀನ್ ಆಯ್ಕೆ ಇಲ್ಲದೆಯೇ ಮೊಬೈಲ್ ಫೋನ್ ಬಳಕೆ ಸಾಧ್ಯವೇ? ಹೌದು. ಸಾಧ್ಯವಿದೆ ಎನ್ನುವುದಕ್ಕೆ ಕೆಲವು ತಾಂತ್ರಿಕ ಅಂಶಗಳು ಈಗಾಗಲೇ ಮೊಬೈಲ್ ಫೋನ್‌ನಲ್ಲಿ ಅಡಕವಾಗಿವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಫೇಸ್ ಅನ್‌ಲಾಕ್‌ ತಂತ್ರಜ್ಞಾನ. ಹೀಗೆ ಸ್ಮಾರ್ಟ್‌ಫೋನ್‌ ಪರದೆಯನ್ನು ಮುಟ್ಟದೆ ಒಂದು ಸೀಮಿತ ಅಂತರದಲ್ಲಿ ಬೆರಳಾಡಿಸುವ ಮೂಲಕ ಕರೆ ಸ್ವೀಕರಿಸುವ, ಸಂದೇಶ ಕಳುಹಿಸುವ ಜತೆಗೆ ಆ್ಯಪ್‌ಗಳನ್ನೂ ನಿರ್ವಹಿಸುವ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರುವ ಪ್ರಯತ್ನ ನಡೆಯುತ್ತಿದೆ.

ತಂತ್ರಜ್ಞಾನ ಎಷ್ಟು ವೇಗವಾಗಿ ಬದಲಾಗುತ್ತಿದೆ ಎನ್ನುವುದನ್ನು ಕೆಲವೊಮ್ಮೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಮೊಬೈಲ್‌ ಕೀ ಪ್ಯಾಡ್‌ ಒತ್ತಿ ಸಾಕಾಯಿತು ಎನ್ನುವಷ್ಟರಲ್ಲಿ ಟಚ್ ಸ್ಕ್ರೀನ್‌, ವರ್ಚುವಲ್‌ ಕೀಬೋರ್ಡ್‌ ಬಂತು. ಅನ್‌ಲಾಕ್‌ ಪ್ಯಾಟರ್ನ್‌ ಅಥವಾ ಪಾಸ್‌ವರ್ಡ್ ಇಡುವುದು ರಗಳೆ ಎಂದಾಗ ಫೇಸ್‌, ಫಿಂಗರ್‌ ಪ್ರಿಂಟ್‌ ಅನ್‌ಲಾಕ್‌ ಆಯ್ಕೆಗಳು ಬಂದವು. ಇಷ್ಟಕ್ಕೇ ಮುಗಿಯಿತು ಎನ್ನುತ್ತಿರುವಾಗಲೇ ‘ಟಚ್‌’ಗೆ ಗುಡ್‌ಬೈ ಹೇಳಿ ಎನ್ನುತ್ತಿದೆ ಎಲ್‌ಜಿ ಕಂಪನಿ.

ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ ಪ್ರಸ್ತುತಪಡಿಸಲಿರುವ ಟೀಸರ್‌ನಲ್ಲಿ ಎಲ್‌ಜಿ ಕಂಪನಿ ಭವಿಷ್ಯದ ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಆಗಲಿರುವ ಬದಲಾವಣೆಗಳ ಬಗ್ಗೆ ವಿವರಿಸಿದೆ. ಎಲ್‌ಜಿಯ ಸಾಮಾಜಿಕ ಮಾಧ್ಯಮದಲ್ಲಿ ಈ ಟೀಸರ್ ಶೇರ್‌ ಮಾಡಲಾಗಿದೆ. ವ್ಯಕ್ತಿಯೊಬ್ಬ ಮೊಬೈಲ್‌ ಸ್ಕ್ರೀನ್‌ ಮೇಲೆ ಕೈ ಆಡಿಸುವ ಮೂಲಕ ‘goodbye touch’ ಎನ್ನುವ ಸಂದೇಶ ನೀಡಲಾಗಿದೆ. ಈ ಟೀಸರ್‌ ಹೆಸರು ಎಲ್‌ಜಿ ಪ್ರೀಮಿಯರ್‌.

ಸದ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಟಚ್‌ಸ್ಕ್ರೀನ್‌ ಕೈಬಿಡುವ ಪ್ರಯತ್ನದಲ್ಲಂತೂ ಕಂಪನಿ ಇಲ್ಲ. ಲಿಪ್‌ ಮೋಷನ್‌ – ಸ್ಟೈಲ್‌ಗೆಸ್ಚರ್ ಕಂಟ್ರೋಲ್‌ ಇಂಟರ್‌ಫೇಸ್‌ ಮೂಲಕ ಕೆಲವು ಬದಲಾವಣೆಗಳನ್ನು ತರಲು ಮುಂದಾಗಿದೆ. ಉದಾಹರಣೆಗೆ ಮೊಬೈಲ್‌ ಪರದೆಯಲ್ಲಿ ಸೆನ್ಸರ್‌ ಅಳವಡಿಸಿ, ಕೈ ಚಲನೆಯನ್ನು ಗ್ರಹಿಸುವಂತೆ ಮಾಡಲಾಗಿದೆ.
ಈ ರೀತಿಯ ಪ್ರಯತ್ನಗಳು ಹಿಂದೆಯೂ ಬಹಳಷ್ಟು ಸಾರಿ ನಡೆದಿದ್ದರೂ ಪೂರ್ಣ ಫಲ ದೊರೆತಿಲ್ಲ. ಸ್ಯಾಮ್‌ಸಂಗ್ ಐದು ವರ್ಷಗಳ ಹಿಂದೆ ತನ್ನ ಕೆಲವು ಹ್ಯಾಂಡ್‌ಸೆಟ್‌ಗಳಿಗೆ ಏರ್‌ಗೆಸ್ಚರ್‌ ಸೌಲಭ್ಯ ನೀಡಿತ್ತು. ಕರೆ ಬಂದಾಗ ಫೋನ್‌ ಪರದೆಯ ಮೇಲೆ ಕೈಯಾಡಿಸುವ ಮೂಲಕ ಅಥವಾ ಸ್ವೈಪ್‌ಮಾಡಿ ಕರೆ ಸ್ವೀಕರಿಸಬಹುದು. ಕೆಲವು ಹ್ಯಾಂಡ್‌ಸೆಟ್‌ಗಳಲ್ಲಿ ಫೇಷಿಯಲ್‌ ಟ್ರ್ಯಾಕಿಂಗ್‌ ಮೂಲಕ ಹ್ಯಾಂಡ್ಸ್ ಫ್ರೀ ಸ್ಕ್ರಾಲಿಂಗ್‌ ಆಯ್ಕೆ ನೀಡಿದೆ.

ಕೆಲವು ಪ್ರಯತ್ನಗಳು

ಫೋನ್‌ನಲ್ಲಿ ಗೆಸ್ಚರ್ ಕಂಟ್ರೋಲ್ ಅಳವಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಅವುಗಳಲ್ಲಿ ಕೆಲವು ಇಲ್ಲಿವೆ.

ಜಿಯಾಮೆಟ್ರಿಕ್‌ ಫಿಗರ್ಸ್‌: ಸ್ಕ್ರೀನ್ ಮೇಲೆ V ಎಂದು ಬರೆಯುವ ಮೂಲಕ ಫ್ಲ್ಯಾಷ್‌ಲೈಟ್‌ ಸ್ವಿಚ್‌ ಆನ್‌ ಆಗುವಂತೆ ಮಾಡುವ, ವೃತ್ತ ಬರೆದು ಫೋನ್‌ ಕ್ಯಾಮೆರಾ ಅನ್‌ಲಾಕ್‌ ಮಾಡುವ, ಎರಡು ಗೆರೆ ಎಳೆಯುವ ಮೂಲಕ ಮ್ಯೂಸಿಕ್‌ ಪ್ಲೇ ಅಥವಾ ಪಾಸ್‌ ಮಾಡುವ ಆಯ್ಕೆಗಳು ಇವೆ. ಒನ್ ಪ್ಲಸ್, ಒಪ್ಪೊ, ವಿವೊ, ಪ್ಯಾನಸಾನಿಕ್ ನಂತಹ ಕಂಪನಿಗಳು ಈ ಆಯ್ಕೆಗಳನ್ನು ನೀಡುತ್ತಿವೆ.

ಕರೆ ಸ್ವೀಕರಿಸಲು

ಕರೆ ಸ್ವೀಕರಿಸಲು ಸ್ವೈಪ್ ಮಾಡುವ ಅಥವಾ ಟಚ್ ಮಾಡುವ ಅಗತ್ಯ ಇಲ್ಲ. ಕರೆ ಬಂದಾಕ್ಷಣ ಫೋನ್ ಅನ್ನು ಕಿವಿಯ ಹತ್ತಿರ ತಂದರೆ ಸಾಕು. ಮೈಕ್ರೊಮ್ಯಾಕ್ಸ್, ಇಂಟೆಕ್ಸ್ ಮತ್ತು ಕಾರ್ಬನ್‌ನಂತಹ ಭಾರತದ ಫೋನ್ ಬ್ರ್ಯಾಂಡ್‌ಗಳಿಗಾಗಿ ಕ್ಯೂಬ್ 26 ಕಂಪನಿ ಇಂತಹ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ಫೋನ್‌ನ ಪ್ರಾಕ್ಸಿಮಿಟಿ ಸೆನ್ಸರ್ (ಬಳಕೆದಾರನ ಕಿವಿಯ ಹತ್ತಿರ ಬಂದಾಗ ಕರೆ ಸ್ವೀಕರಿಸುವಂತೆ) ಮೂಲಕ ಕೆಲಸ ಮಾಡುತ್ತದೆ. ಫೋನ್‌ನಲ್ಲಿ ಮಾತನಾಡುತ್ತಿರುವಾಗ ಸ್ಕ್ರೀನ್ ಆಫ್ ಆಗುವುದರಿಂದ ಪರದೆಗೆ ಕಿವಿ ತಾಗಿ ಕರೆ ಕಟ್ ಆಗುವುದು ತಪ್ಪುತ್ತದೆ.

ಫೋನ್ ಬಾಗಿಸುವುದು (ಟಿಲ್ಟಿಂಗ್)

ಇದು ಗೇಮ್ ಆಡುವಾಗ ಹೆಚ್ಚು ಬಳಕೆಗೆ ಬರುತ್ತದೆ. ಅದರಲ್ಲಿಯೂ ರೇಸಿಂಗ್ ಗೇಮ್ ಆಡುವಾಗ ಕಾರನ್ನು ರಸ್ತೆಯ ತಿರುವುಗಳಲ್ಲಿ ಸರಿಯಾದ ದಿಕ್ಕಿನಲ್ಲಿ ಚಲಿಸುವಂತೆ ಮಾಡಲು ಫೋನ್ ಅನ್ನು ತುಸು ಆಚೀಚೆ ಬಾಗಿಸಬೇಕಾಗುತ್ತದೆ. ಫೋನ್‌ನ ವೇಗೋತ್ಕರ್ಷದ ಆಧಾರದ ಮೇಲೆ ಇದು ಕೆಲಸ ಮಾಡುತ್ತದೆ. ರಿಯಲ್ ರೇಸಿಂಗ್, ಆಸ್ಫಾಲ್ಟ್ 8, ಟೆಂಪಲ್ ರನ್ ಹೀಗೆ ಇನ್ನೂ ಹಲವು ಗೇಮ್‌ಗಳನ್ನು ಹೆಸರಿಸಬಹುದು.
ಈ ರೀತಿಯ ಗೇಮ್ ಆಡುವವರಿಗೆ, ಪರದೆಯ ಮೇಲೆ ಟ್ಯಾಪ್ ಮಾಡುವುದಕ್ಕಿಂತಲೂ ಟಿಲ್ಟ್ ಮೂಲಕ ಸ್ಟೇರಿಂಗ್ ಕಂಟ್ರೋಲ್ ಮಾಡುವುದರಿಂದ ಸಿಗುವ ಅನುಭವ ಹೇಗಿರುತ್ತದೆ ಎನ್ನುವುದು ಅರಿವಾಗಿರುತ್ತದೆ.
ಫೋನ್ ಅಲುಗಾಡಿಸುವ ಮೂಲಕ ಇಲ್ಲವೇ ಒಂದು ನಿರ್ದಿಷ್ಟ ದಿಕ್ಕಿಗೆ ಬಾಗಿಸುವ ಮೂಲಕ ಮ್ಯೂಸಿಕ್ ಬದಲಾಯಿಸುವ ವ್ಯವಸ್ಥೆಯೂ ಕೆಲವು ಫೋನ್‌ಗಳಲ್ಲಿದೆ.

ಡಿಸ್ ಪ್ಲೇ ಲೈಟ್

ಆ್ಯಕ್ಟಿವ್ ಡಿಸ್ ಪ್ಲೇ ತಂತ್ರಜ್ಞಾನ ಗೆಸ್ಚರ್ ಕಂಟ್ರೋಲ್‌ಗೆ ಸೂಕ್ತ ಉದಾಹರಣೆ ಎನ್ನಬಹುದು. ಫೋನ್ ಹಿಡಿದುಕೊಂಡಾಕ್ಷಣ ಡಿಸ್ ಪ್ಲೇ ಲೈಟ್ ತನ್ನಷ್ಟಕ್ಕೇ ಆನ್ ಆಗುತ್ತದೆ. ಸ್ಮಾರ್ಟ್ ಪೋನ್‌ನ ವೇಗೋತ್ಕರ್ಷದ ಮೂಲಕ ಇದು ಸಾಧ್ಯವಾಗುತ್ತದೆ. ಮೊಟೊ ಎಕ್ಸ್ ಸ್ಮಾರ್ಟ್ ಫೋನ್‌ನಲ್ಲಿ ಇದು ಮೊದಲಿಗೆ ಬಳಕೆಗೆ ಬಂತು. ಆ್ಯಪಲ್ ಕಂಪನಿಯ ಐಒಎಸ್ 10 ಇರುವ ಐಫೋನ್‌ಗಳಲ್ಲಿಯೂ ಈ ಆಯ್ಕೆ ಇದೆ.

ಕಣ್ಣಿನ ಚಲನೆ

ಫೋನ್‌ನ ಎದುರಿಗಿದ್ದಾಗ, ಫ್ರಂಟ್ ಕ್ಯಾಮೆರಾ ಬಳಕೆದಾರನ ಕಣ್ಣಿನ ಚಲನೆಯನ್ನು ಗ್ರಹಿಸುತ್ತದೆ. ಇದು ಐ ಟ್ರ್ಯಾಕಿಂಗ್. ಸ್ಯಾಮ್‌ಸಂಗ್ ಎಸ್ 5ನಲ್ಲಿ ಮೊದಲಿಗೆ ಇದನ್ನು ಬಳಸಲಾಯಿತು. ವಿಡಿಯೊ ಪ್ಲೇ ಆಗುತ್ತಿದ್ದಾಗ, ಮೊಬೈಲ್ ಹಿಡಿದಿರುವಾತ ಬೇರೆಡೆಗೆ ಕಣ್ಣನ್ನು ಹೊರಳಿಸಿದರೆ ಆಗ ವಿಡಿಯೊ ಪಾಸ್ ಆಗುವಂತೆ ವ್ಯವಸ್ಥೆಗೊಳಿಸಲಾಗಿದೆ. ಇದು ಪರಿಣಾಮಕಾರಿಯಾಗಿದ್ದರೂ ಅಷ್ಟೇನು ಜನಪ್ರಿಯವಾಗಲಿಲ್ಲ. ಹೀಗಾಗಿ ಕಂಪನಿಯು ಇದನ್ನು ಸೇಫ್ಟಿ ಸ್ಕ್ರೀನ್ ಎನ್ನುವ ಆ್ಯಪ್‌ನಲ್ಲಿ ಅಳವಡಿಸಿದೆ.

ಮಕ್ಕಳು ಮೊಬೈಲ್ ಅನ್ನು ಕಣ್ಣಿಗೆ ಅತಿ ಹತ್ತಿರದಲ್ಲಿ ಇಟ್ಟುಕೊಂಡು ಗೇಮ್ ಆಡುವುದು ಅಥವಾ ವಿಡಿಯೊ ನೋಡಿದರೆ ತಕ್ಷಣವೇ ಸ್ಕ್ರೀನ್ ಬ್ಲಾಕ್ ಆಗುತ್ತದೆ. ಮೊಬೈಲ್ ಅನ್ನು ಕಣ್ಣಿನಿಂದ ಒಂದು ನಿರ್ದಿಷ್ಟ ದೂರದಲ್ಲಿ ಹಿಡಿದುಕೊಂಡರೆ ಸ್ಕ್ರೀನ್ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ. ಈ ಆ್ಯಪ್ ಉಚಿತವಾಗಿದ್ದು, ಆಂಡ್ರಾಯ್ಡ್ ಪೋನ್‌ಗಳಲ್ಲಿ ಬಳಸಬಹುದು.

ಈ ಎಲ್ಲಾ ಆಯ್ಕೆಗಳನ್ನು ಗಮನಿಸಿದರೆ, ಪರದೆಯನ್ನು ಮುಟ್ಟದೇ ಗೆಸ್ಚರ್ ಮೂಲಕವೇ ಫೋನ್ ನಿರ್ವಹಣೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗುವುದಿಲ್ಲ. ಆದರೆ ಎಷ್ಟರಮಟ್ಟಿಗೆ ಬಳಕೆಗೆ ಅನುಕೂಲ ಮಾಡಿಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT