ಭಾನುವಾರ, ಜೂಲೈ 5, 2020
25 °C

ರಿಮೂವ್ ಚೀನಾ ಆ್ಯಪ್ಸ್‌ನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದ ಗೂಗಲ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

remove china apps

ಮುಂಬೈ: ಟಿಕ್‌ಟಾಕ್‌ಗೆ ಭಾರತೀಯರ ಉತ್ತರ ಎಂದು ಬಿಂಬಿಸಿದ್ದ ಮಿತ್ರೊನ್ (Mitron) ಆ್ಯಪ್‌ನ್ನು ಮಂಗಳವಾರ ಗೂಗಲ್ ಪ್ಲೇ ಸ್ಟೋರ್‌ನಿಂದ ಕಿತ್ತು ಹಾಕಿದ ನಂತರ ಇದೀಗ ರಿಮೂವ್ ಚೀನಾ ಆ್ಯಪ್ಸ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.
ಈ ಆ್ಯಪ್‌ನ್ನು ತೆಗೆದು ಹಾಕಿದ್ದು ಯಾಕೆ? ಮತ್ತೆ ಈ ಆ್ಯಪ್ ಲಭ್ಯವಾಗಲಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸದ್ಯ ಲಭ್ಯವಾಗಿಲ್ಲ.

ಜೈಪುರ ಮೂಲದ ಒನ್ ಟಚ್ ಆ್ಯಪ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಆ್ಯಪ್‌ ಆಗಿದೆ ರಿಮೂವ್ ಚೀನಾ ಆ್ಯಪ್ಸ್. ಈ ಆ್ಯಪ್‌ನ್ನು ಪ್ಲೇ ಸ್ಟೋರ್‌ನಿಂದ ರದ್ದು ಮಾಡಲಾಗಿದೆ ಎಂದು ಇದೇ ಕಂಪನಿ ಟ್ವೀಟ್ ಮಾಡಿದೆ. 

ಪ್ಲೇ ಸ್ಟೋರ್ ನಿಯಮಗಳನ್ನು ಉಲ್ಲಂಘಿಸಿದರೆ ಮಾತ್ರ ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ ತೆಗೆದುಹಾಕುತ್ತದೆ. ಮಿತ್ರೊನ್ ಆ್ಯಪ್‌ಗೆ ಆಗಿದ್ದೂ ಅಷ್ಟೇ.

ಇದನ್ನೂ ಓದಿಗೂಗಲ್ ಪ್ಲೇಸ್ಟೋರ್‌ನಿಂದ 'ಮಿತ್ರೊನ್' ನಾಪತ್ತೆ

ಸಿಎನ್‌ಬಿಸಿ ಟಿವಿ 18 ವರದಿಯ ಪ್ರಕಾರ ಗೂಗಲ್ ಕಂಪನಿಯು ಈ ಅಪ್ಲಿಕೇಶನ್ ಅನ್ನು ರೆಡ್ ಫ್ಲ್ಯಾಗ್ ಮಾಡಿದೆ ಮತ್ತು ಅದರ ಸ್ಪ್ಯಾಮ್ ಮತ್ತು ಕನಿಷ್ಠ ಕ್ರಿಯಾತ್ಮಕತೆ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅದನ್ನು ರದ್ದುಗೊಳಿಸಲು ನಿರ್ಧರಿಸಿದೆ. 'ಪುನರಾವರ್ತಿತ ವಿಷಯ’ ಇದೆ ಎಂದು ನೀತಿಯ ಮತ್ತೊಂದು ಷರತ್ತು ಉಲ್ಲೇಖಿಸಿದೆ. ಇದರರ್ಥ ಯಾವುದೇ ಮೂಲ ವಿಷಯ ಅಥವಾ ಮೌಲ್ಯವನ್ನು ಸೇರಿಸದೆ ಇತರ ಅಪ್ಲಿಕೇಶನ್‌ಗಳಿಂದ ವಿಷಯವನ್ನು ನಕಲಿಸುವುದು ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಚೀನಾ ವಿರೋಧಿ ಭಾವನೆ: ವೈರಲ್ ಆಯ್ತು 'Remove China Apps'

ರಿಮೂವ್ ಚೀನಾ ಆ್ಯಪ್ಸ್‌ನ್ನು ನೀವು ಈಗಾಗಲೇ ಡೌನ್‌ಲೋಡ್ ಮಾಡಿದ್ದರೆ ಅದು ಕಾರ್ಯವೆಸಗುತ್ತದೆ. ಆ್ಯಪ್‌ನ ಹೆಸರೇ ಸೂಚಿಸುವಂತೆ ಇದು ನಿಮ್ಮ ಫೋನ್‌ನಲ್ಲಿರುವ ಚೀನಾದಲ್ಲಿ ಅಭಿವೃದ್ಧಿಪಡಿಸಿರುವ ಎಲ್ಲ ಆ್ಯಪ್‌ಗಳನ್ನು ಡಿಲೀಟ್ ಮಾಡುತ್ತದೆ. ನಿಮ್ಮ ಕೈಯಲ್ಲಿರುವ ಮೊಬೈಲ್‌ನ್ನು ಪೂರ್ತಿ ಸ್ಕ್ಯಾನ್  ಮಾಡಿ ಅಲ್ಲಿರುವ ಚೀನಾ ಮೂಲದ ಆ್ಯಪ್‌ಗಳನ್ನು ಪಟ್ಟಿ ಮಾಡುತ್ತದೆ. ಯಾವ ಆ್ಯಪ್‌ನ್ನು ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ಅನ್ ಇನ್‌ಸ್ಟಾಲ್ ಮಾಡಬೇಕು ಎಂಬುದು ವೈಯಕ್ತಿಕ ಆಯ್ಕೆಯಾಗಿದೆ.

ತಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಚೀನಾದ ಅಪ್ಲಿಕೇಶನ್‌ಗಳನ್ನು ಅಳಿಸುವ ಉದ್ದೇಶದಿಂದ ಭಾರತದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಫೋನ್‌ನಲ್ಲಿ ಇದನ್ನು ಇನ್‌ಸ್ಟಾಲ್  ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ತನಕ ಇದು ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಸಿಗುವ ಆ್ಯಪ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.

ಚೀನಾದಲ್ಲಿ ಅಭಿವೃದ್ಧಿಪಡಿಸಿದ ಆ್ಯಪ್‌ಗಳ ರೆಪೊಸಿಟರಿ ಡೇಟಾಬೇಸ್‌ನೊಂದಿಗೆ ಹೋಲಿಸುವ ಮೂಲಕ ಅಪ್ಲಿಕೇಶನ್ ಡೆವಲಪರ್‌ನ ಮೂಲ ದೇಶವನ್ನು ಗುರುತಿಸುವ ಕಾರ್ಯವನ್ನು ಈ ಆ್ಯಪ್ ಮಾಡುತ್ತದೆ ಎಂದು ಕೌಂಟರ್ ಪಾಯಿಂಟ್‌ನ ಸೈಬರ್ ಸೆಕ್ಯುರಿಟಿ ಸಂಶೋಧಕ ಸತ್ಯಜಿತ್ ಸಿನ್ಹಾ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಡಾಟ್ ಕಾಂ ವರದಿ ಮಾಡಿದೆ. ಆ್ಯಪ್ ಬಳಸಲು ಸುರಕ್ಷಿತವಾಗಿದೆ ಮತ್ತು ಅದನ್ನು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿರುವವರು ಚಿಂತೆಗೊಳಗಾಗುವ ಅಗತ್ಯವಿಲ್ಲ. ಇಲ್ಲಿರುವ ಆ್ಯಪ್ ಸ್ಕ್ಯಾನ್, ಇನ್‌ಸ್ಟಾಲ್ ಆಗಿರುವ ಅಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ (ಎಪಿಕೆ) ಮೇಲೆ ಮಾತ್ರ ಗಮನ ಹರಿಸುತ್ತದೆ. ಆದ್ದರಿಂದ, ಸಂಗ್ರಹಿಸಿದ ವೈಯಕ್ತಿಕ ಡೇಟಾದ ಮೇಲೆ ಯಾವುದೇ ಇದು ಪರಿಣಾಮ ಬೀರುವುದಿಲ್ಲ ಎಂದು ಸಿನ್ಹಾ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು