ಸೋಮವಾರ, ಮಾರ್ಚ್ 1, 2021
28 °C

ದೇಶೀಯ ಮೆಸೇಜಿಂಗ್‌ ಆ್ಯಪ್‌ 'ಹೈಕ್‌ ಸ್ಟಿಕರ್‌ ಚಾಟ್‌' ಮರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ವಾಟ್ಸ್‌ಆ್ಯಪ್‌' ಖಾಸಗಿ ಮಾಹಿತಿ ಸುರಕ್ಷತೆಯ ತಕರಾರು, ಈ ನಡುವೆ ದಿಢೀರ್‌ ವಿಸ್ತರಿಸಿಕೊಂಡ 'ಸಿಗ್ನಲ್‌', ತಟಸ್ಥವಾಗಿ ಮುಂದುವರಿಯುತ್ತಿರುವ ಟೆಲಿಗ್ರಾಂ, ಮರೆತು ಹೋದ ಆತ್ಮನಿರ್ಭರ ಭಾರತದ 'ಎಲಿಮೆಂಟ್ಸ್',...ಹೀಗೆ ಹೊಸ ವರ್ಷದಲ್ಲಿ ಕೊರೊನಾ ವೈರಸ್‌, ಕೋವಿಡ್‌–19 ಲಸಿಕೆಗಿಂತಲೂ ಹೆಚ್ಚು ಮೆಸೇಜಿಂಗ್‌ ಆ್ಯಪ್‌ಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಚರ್ಚೆ ಗದ್ಧಲ, ಗೊಂದಲಗಳ ಮಧ್ಯೆ ದೇಶೀಯ 'ಹೈಕ್‌ ಸ್ಟಿಕರ್‌ ಚಾಟ್‌' ಆ್ಯಪ್‌ ಮರೆಗೆ ಸರಿದಿದೆ.

ಭಾರ್ತಿ ಎಂಟರ್‌ಪ್ರೈಸಸ್‌ ಒಡೆತನದ 'ಹೈಕ್‌ ಸ್ಟಿಕರ್‌ ಚಾಟ್‌' ಮೆಸೇಜಿಂಗ್‌ ಆ್ಯಪ್‌ ಅಧಿಕೃತವಾಗಿ ಕಾರ್ಯ ಸ್ಥಗಿತಗೊಳಿಸಿದೆ. ಜನವರಿ 14ರಂದು ಹೈಕ್‌ ಆ್ಯಪ್‌ ಟ್ವಿಟರ್‌ನಲ್ಲಿ ಬಳಕೆದಾರರಿಗೆ ವಿದಾಯ ಪ್ರಕಟಿಸಿದೆ. ಇದಕ್ಕೂ ಮುನ್ನ ಜನವರಿ 6ರಂದು ಹೈಕ್‌ ಪ್ಲಾಟ್‌ಫಾರ್ಮ್‌ನ ಸಿಇಒ ಕೆವಿನ್‌ ಭಾರ್ತಿ ಮಿತ್ತಲ್‌ ಟ್ವೀಟ್‌ ಮಾಡಿ, 2021ರ ಜನವರಿಯಲ್ಲಿ 'ಹೈಕ್‌ ಸ್ಟಿಕರ್‌ ಚಾಟ್‌' ಕೊನೆಯಾಗಲಿದೆ ಎಂದಿದ್ದರು.

ಖಾಸಗಿ ಮಾಹಿತಿ ಸುರಕ್ಷತೆ ಹಾಗೂ ದೇಶೀಯವಾಗಿ ದತ್ತಾಂಶ ಸಂಗ್ರಹದ ಬಗ್ಗೆ ಭಾರತದ ಬಳಕೆದಾರರು ಮಾತನಾಡುತ್ತಿರುವ ಸಮಯದಲ್ಲಿ ದೇಶೀಯವಾಗಿ ಅಭಿವೃದ್ಧಿಯಾಗಿರುವ ಅಪ್ಲಿಕೇಷನ್‌ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿರುವುದೇಕೆ? –ಈ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ಹೈಕ್‌ ಆ್ಯಪ್‌ನ ಅಭಿಮಾನಿಗಳು, 'ಪುನಃ ಆರಂಭಿಸಿ, ಹೊಸ ರೂಪದಲ್ಲಿ ಬನ್ನಿ, ಆ್ಯಪ್‌ ಗಾತ್ರ ಇನ್ನಷ್ಟು ಹಗುರವಾಗಿಸಿ ಮತ್ತೆ ಕಾರ್ಯಾರಂಭಿಸಿ,...' ಎಂದೆಲ್ಲ ಟ್ವೀಟ್‌ ಮೂಲಕ ಸಲಹೆ ನೀಡಿದ್ದಾರೆ.

'ನಿಮ್ಮ ನಂಬಿಕೆಗೆ ನಮ್ಮ ನಮನಗಳು, ನಿಮ್ಮ ಬೆಂಬಲ ಇರದಿದ್ದರೆ ನಾವಿಂದು ಇಲ್ಲಿ ಇರಲಾಗುತ್ತಿರಲಿಲ್ಲ' ಎಂದು ಕೆವಿನ್‌ ಪ್ರಕಟಿಸಿದ್ದರು. ಈಗಾಗಲೇ ಗೂಗಲ್‌ ಪ್ಲೇ ಸ್ಟೋರ್‌ ಹಾಗೂ ಆ್ಯಪಲ್‌ ಆ್ಯಪ್‌ ಸ್ಟೋರ್‌ನಿಂದ ಹೈಕ್‌ ಸ್ಟಿಕರ್ ಚಾಟ್ ಆ್ಯಪ್‌ ತೆಗೆಯಲಾಗಿದೆ.

ಬಳಕೆದಾರರು ತಮ್ಮ ಆ್ಯಪ್‌ ದತ್ತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಂದರೆ, ಹೈಕ್‌ನ ಎಲ್ಲ ಅಪ್ಲಿಕೇಷನ್‌ಗಳೂ ಕೊನೆಯಾಗುತ್ತಿಲ್ಲ. ವೈಬ್‌ ಮತ್ತು ರಷ್‌ ಅಪ್ಲಿಕೇಷನ್‌ಗಳ ಅಭಿವೃದ್ಧಿ ಕಡೆಗೆ ಕಂಪನಿ ಗಮನ ಹರಿಸಿದೆ. ವೈಬ್‌ ಸೋಶಿಯಲ್‌ ಮೀಡಿಯಾ ಆ್ಯಪ್‌ ಮತ್ತು ರಷ್‌ ಗೇಮಿಂಗ್‌ ಆ್ಯಪ್‌ಗೆ ಬಳಕೆದಾರರನ್ನು ಸೆಳೆಯಲು ಟೆಲಿಗ್ರಾಂ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ನೋಂದಾಯಿಸಿಕೊಳ್ಳಲು ಹೈಕ್‌ ಕೇಳುತ್ತಿದೆ. ಆಗಲೇ 1,00,000 ಮಂದಿ ವೈಬ್‌ಗಾಗಿ ಕೋರಿರುವುದಾಗಿ ಕೆವಿನ್‌ ಪ್ರಕಟಿಸಿದ್ದಾರೆ.

ರಷ್‌ ಐಒಎಸ್‌ನಲ್ಲಿ ಡೌನ್‌ಲೋಡ್‌ಗೆ ಸಿಗುತ್ತಿದ್ದು, ಪ್ಲೇ ಸ್ಟೋರ್‌ಗೆ ಇನ್ನಷ್ಟೇ ಸೇರ್ಪಡೆಯಾಗಬೇಕಿದೆ. ಆದರೆ, ವೈಬ್‌ ಅನಾವರಣದ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು