ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಮ್ಯಾಪ್ಸ್‌ ಹೇಗೆ ಕೆಲಸ ಮಾಡುತ್ತದೆ?

Last Updated 1 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಗೂಗಲ್‌ ಮ್ಯಾಪ್ಸ್‌ ಎಂಬ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಇದು ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣಿಸುವ ಬಗೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವವರು ತಮ್ಮ ಪ್ರಯಾಣ ಯಾವ ಮಾರ್ಗದ ಮೂಲಕ ಇರಬೇಕು ಎಂಬುದನ್ನು ಒಂದು ಬಟನ್‌ ಕ್ಲಿಕ್‌ ಮಾಡಿ ತೀರ್ಮಾನಿಸಬಹುದು. ತಾವು ಹೋಗಬೇಕಾದ ಸ್ಥಳದ ವಿಳಾಸವನ್ನು ಕೂಡ ಒಂದು ಕ್ಲಿಕ್‌ ಮೂಲಕ ತಿಳಿದುಕೊಳ್ಳಬಹುದು. ಇದೆಲ್ಲ ಸಾಧ್ಯವಾಗುವುದು ಉಚಿತವಾಗಿ ಲಭ್ಯವಿರುವ ಉಪಗ್ರಹ ನಕ್ಷೆ ಸೇವೆಯ ಕಾರಣದಿಂದಾಗಿ.

ಅಮೆರಿಕದಲ್ಲಿರುವ ನಿಮ್ಮ ಸಂಬಂಧಿಕರ ಮನೆ ಇರುವ ಬೀದಿ ಹೇಗಿದೆ ಎಂಬುದನ್ನೂ ಈ ಗೂಗಲ್‌ ಮ್ಯಾಪ್ಸ್‌ ಮೂಲಕವೇ ಮನೆಯಲ್ಲಿ ಕುಳಿತೇ ನೋಡಬಹುದು. ವಿವಿಧ ದತ್ತಾಂಶ ಕೋಶಗಳಿಂದ ಆಯ್ದ ಮಾಹಿತಿ ಆಧರಿಸಿ ಗೂಗಲ್‌ ಮ್ಯಾಪ್ಸ್‌ ಕೆಲಸ ನಿರ್ವಹಿಸುತ್ತದೆ. ಆದರೆ, ಅತ್ಯಂತ ಮಹತ್ವದ ಮಾಹಿತಿಯನ್ನು ಉಪಗ್ರಹ ಚಿತ್ರಗಳಿಂದ ಪಡೆಯುತ್ತದೆ. ಅಲ್ಲಿಂದ ಪಡೆದ ಮಾಹಿತಿಯನ್ನು ಅಕ್ಷಾಂಶ, ರೇಖಾಂಶ, ವಿಳಾಸ, ಪಿನ್‌ ಕೋಡ್‌ ಜೊತೆ ತಾಳೆ ಮಾಡಲಾಗುತ್ತದೆ.

ಗೂಗಲ್‌ ಮ್ಯಾಪ್ಸ್‌ನಲ್ಲಿ ನಿರ್ದಿಷ್ಟ ವಿಳಾಸ ಟೈಪ್‌ ಮಾಡಿ ಹುಡುಕಿದಾಗ, ನೀವು ಟೈಪ್‌ ಮಾಡಿದ ವಿಳಾಸದ ವಿವರಗಳನ್ನು ಗೂಗಲ್‌ ತನ್ನ ಸರ್ವರ್‌ಗೆ ರವಾನಿಸುತ್ತದೆ. ಅಲ್ಲಿ, ಆ ವಿಳಾಸಕ್ಕೆ ಅತ್ಯಂತ ಸೂಕ್ತವಾಗಿ ತಾಳೆಯಾಗುವುದು ಯಾವುದು ಎಂಬುದನ್ನು ಹುಡುಕಲಾಗುತ್ತದೆ. ಆ ಹುಡುಕಾಟದಲ್ಲಿ ಸಿಕ್ಕಿದ್ದು, ಮೊಬೈಲ್‌ ಅಥವಾ ಕಂಪ್ಯೂಟರ್ ಪರದೆ ಮೇಲೆ ಕಾಣಿಸುತ್ತದೆ.

ಪ್ರಯಾಣಕ್ಕೆ ಸೂಕ್ತ ಮಾರ್ಗ ಯಾವುದೆಂದು ಗೂಗಲ್‌ ಮ್ಯಾಪ್‌ ಮೂಲಕ ಹುಡುಕಲು ಮುಂದಾದಾಗ, ಗೂಗಲ್‌ ಎಂಬ ತಂತ್ರಜ್ಞಾನ ದೈತ್ಯನು ತನ್ನ ಮ್ಯಾಪ್‌ ಸರ್ವರ್‌ನಲ್ಲಿರುವ ಮಾಹಿತಿ ತಡಕಾಡುತ್ತಾನೆ. ಆ ಸರ್ವರ್‌ನಲ್ಲಿ, ಅತ್ಯಂತ ತ್ವರಿತವಾಗಿ ಹೋಗಲು ಇರುವ ಮಾರ್ಗಗಳ ವಿವರ ಇರುತ್ತದೆ. ಯಾವ ಮಾರ್ಗ ಬಳಸಿದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಗಮ್ಯ ತಲುಪಬಹುದು ಎಂಬುದನ್ನೂ ಗೂಗಲ್‌ ಮ್ಯಾಪ್ಸ್‌ ತೋರಿಸುತ್ತದೆ.

ಬ್ಲೂಟೂತ್‌ ಚಿಲಕ

ನೋಕ್‌ ಎಂಬುದು ವಿಶ್ವದ ಮೊಟ್ಟಮೊದಲ, ಬ್ಲೂಟೂತ್‌ ಆಧಾರಿತ ಚಿಲಕ. ಸ್ಮಾರ್ಟ್‌ಫೋನ್‌ ಬಳಸಿ ಈ ಚಿಲಕ ಹಾಕಬಹುದು ಹಾಗೂ ಚಿಲಕ ತೆಗೆಯಲೂ ಸಾಧ್ಯ. ಕೀಲಿಕೈ ಎಲ್ಲಿಟ್ಟೆವು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಅಥವಾ ಆ ಕೀಲಿಕೈ ಕಳೆದುಹೋಗದಂತೆ ನಿಗಾ ವಹಿಸುವ ಅಗತ್ಯ ಈ ಚಿಲಕದ ವಿಚಾರದಲ್ಲಿ ಇಲ್ಲ!

ಈ ಚಿಲಕವನ್ನು ಯಾರು, ಎಲ್ಲಿ, ಯಾವಾಗ ತೆರೆದರು ಎಂಬ ಮಾಹಿತಿ ಕೂಡ ಮೊಬೈಲ್‌ ಮೂಲಕ ಲಭ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT