ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕೀಲಿಮಣೆ ‘ಕ-ನಾದ’

Last Updated 21 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಕನ್ನಡವನ್ನು ಗಣಕಯಂತ್ರದಲ್ಲಿ ಮೂಡಿಸಲು ನಮಗೆ ಆಂಗ್ಲ ಕೀ ಬೋರ್ಡ್ ಮಧ್ಯಸ್ಥಿಕೆ ಬೇಕು. ಆಲೋಚನೆಗಳು ಕನ್ನಡದ್ದಾದರೂ ಮೂಡುವ ಅಕ್ಷರ ಕನ್ನಡದ್ದಾದರೂ ಇಂಗ್ಲಿಷ್‌ ಅಕ್ಷರಗಳ ಮೂಲಕವೇ ಹಾದು ಹೋಗುವ ಅನಿವಾರ್ಯತೆ ನಮ್ಮದು.

ಈ ಸಮಸ್ಯೆಗೆ ಪರಿಹಾರವಾಗಿ ನಿಟ್ಟೂರು ಮೂಲದ ಅಮೆರಿಕದ ಸಾಫ್ಟ್‌ವೇರ್‌ ಉದ್ಯಮಿ ಡಾ.ಗುರುಪ್ರಸಾದ್‌ ಹಾಗೂ ಭಾಷಾ ತಜ್ಞ ಬಿ.ವಿ.ಕೆ. ಶಾಸ್ತ್ರಿ ಅವರ ತಂಡ ’ಕ – ನಾದ’ ಎಂಬ ಭಾರತೀಯ ಬ್ರಾಹ್ಮೀ ಮೂಲದ ಭಾಷೆಗಳಿಗೆ ಏಕ ರೂಪ ಕೀಲಿಮಣೆ ಆವಿಷ್ಕಾರ ಮಾಡಿದ್ದಾರೆ. ದಾನಿಗಳ ಸಹಾಯದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಮತ್ತು ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯ ಕಂಪ್ಯೂಟರ್‌ಗಳಿಗೆ ‘ಕ-ನಾದ‘ ಕೀಲಿಮಣೆಗಳನ್ನು ಉಚಿತವಾಗಿ ಅಳವಡಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೀಬೋರ್ಡ್ ಬಳಸುವ ತರಬೇತಿ ನೀಡಿದ್ದಾರೆ.

‘ಕ-ನಾದ ಕೀಲಿಮಣೆ ಕನ್ನಡ ಭಾಷೆಯನ್ನು ಗಣಕ ಯಂತ್ರದ ಸಹಾಯದಿಂದ ಕಲಿಸಲು ಹಾಗೂ ಕಲಿಯಲು ಅನುಕೂಲ ಮಾಡಿಕೊಡುವ ಒಂದು ವಿಶೇಷ ವಿನ್ಯಾಸದ ಕೀಲಿಮಣೆ’ ಎಂಬುದು ತಂತ್ರಾಂಶ ತಜ್ಞ ಗುರುಪ್ರಸಾದ್ ಅಭಿಪ್ರಾಯ.

ಇತ್ತೀಚೆಗೆ ಚೀಮಂಗಲ, ವರದಾನಯಕನಹಳ್ಳಿ ಶಾಲೆಗಳಿಗೆ ಕೀಲಿಮಣೆ ಬಳಸುವ ತರಬೇತಿ ನೀಡಿದ ಅವರು ‘ಕೀಲಿಮಣೆಯು ಕಂಪ್ಯೂಟರಿಗೆ ಭಾಷಾ ವರ್ಣಮಾಲೆಯನ್ನು ಕಳುಹಿಸಲು ಬಳಸುವ ಸಾಧನ. ಈ ನಾಲ್ಕು ದಶಕಗಳಲ್ಲಿ ಆಂಗ್ಲ ಭಾಷಿಕ ಕೀಲಿಮಣೆ (QWERTY) ಮೇಲಿನ ಶ್ರೇಣಿಯ ಕ್ರಮದಲ್ಲಿ ಇರುವ ಈ ಸಾಧನವು ವಿಶ್ವದಾದ್ಯಂತ ಬಳಕೆಯಲ್ಲಿ ಇದೆ. ಭಾರತೀಯ ಭಾಷೆಗಳ ವರ್ಣಾಕ್ಷರಗಳನ್ನು ಕಂಪ್ಯೂಟರಿನಲ್ಲಿ ಟಂಕಿಸಲು ಇದೇ ಆಂಗ್ಲ ಭಾಷಿಕ ಕೀಲಿಮಣೆಯನ್ನೇ ಬಳಸಲಾಗುತ್ತಿದೆ. ತಂತ್ರಾಂಶ ಪರಿಷ್ಕರಣೆ (software processing) ಮೂಲಕ ಆಂಗ್ಲಭಾಷಿಕ ಕೀಗಳ ಮೇಲೆ ಕನ್ನಡ ಅಕ್ಷರಗಳನ್ನು ಸಂಯೋಜನೆ ಮಾಡುವುದರಿಂದ ಕಂಪ್ಯೂಟರಿನ ಪರದೆಯ ಮೇಲೆ ಕನ್ನಡ ಅಕ್ಷರಗಳು ಮೂಡುತ್ತವೆ. ಆಂಗ್ಲಭಾಷೆಯ ಆಧಾರದ ಮೇಲೆ ನೀಡಲಾಗುತ್ತಿರುವ ಮಾತೃಭಾಷಾ-ಕಂಪ್ಯೂಟರ್ ತರಬೇತಿ ಮೂಲ ಉದ್ದೇಶವನ್ನು ಸಫಲಗೊಳಿಸುವುದಿಲ್ಲ. ಅದಕ್ಕಾಗಿ ಕ-ನಾದ ಎಂಬ ಭಾರತೀಯ ಭಾಷಾ ಕಲಿಕೆಗೆ ಒಂದು ವಿಶೇಷ ಕೀಲಿಮಣೆ ರೂಪಿಸಿದ್ದೇವೆ’ ಎನ್ನುತ್ತಾರೆ ಅವರು.

‘ಹೊಸ ಕೀಲಿಮಣೆಯ ಅಕ್ಷರ ವಿನ್ಯಾಸವನ್ನು ಭಾರತೀಯ ಬ್ರಾಹ್ಮೀ ಭಾಷೆಗಳ ವರ್ಣಮಾಲೆಯ ಸ್ವರೂಪ – ಸ್ವಭಾವ, ಸಂಯೋಜನೆಗಳಿಗೆ ಅನುಸಾರವಾಗಿ ರೂಪಿಸಲಾಗಿದೆ. ಇಲ್ಲಿ ನಾವು ಪ್ರತಿಪಾದಿಸುತ್ತಿರುವ ಅಂಶ: ಕನ್ನಡದ ಅ-ಆ-ಇ-ಈ ಕಲಿಯಲು – ಕಲಿಸಲು A-B-C-D ಯ ಊರುಗೋಲು ಬೇಕಿಲ್ಲ. ಈ ರೀತಿಯಾಗಿ ಕನ್ನಡವನ್ನು ಕನ್ನಡವಾಗಿ ಕಲಿಸಿ ಬೆಳೆಸಲು ಶಾಲಾ ಹಂತಗಳಲ್ಲಿ ಪ್ರಾಥಮಿಕ ದೇಶ -ಭಾಷೆ, ಮಾತೃ ಭಾಷೆ, ಸಂಸ್ಕೃತಿ -ಭಾಷೆಯಾಗಿ ಬೆಳೆಸುವ ಕಾರ್ಯದಲ್ಲಿ ಕ-ನಾದ ಕೀಲಿಮಣೆ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ’ ಎಂಬುದು ಗುರುಪ್ರಸಾದ್ ವಿವರಣೆ.

ಕ-ನಾದ ಕೀಲಿ ಮಣೆ ಅಳವಡಿಸಿದರೆ ಹದಿನಾರು ಬ್ರಾಹ್ಮೀ ಲಿಪಿಯ ಭಾಷೆಗಳಲ್ಲಿ ಸರಳವಾಗಿ ಟೈಪ್‌ ಮಾಡಬಹುದು...ಕನ್ನಡ, ತುಳು, ತಮಿಳು, ಮಲೆಯಾಳಂ, ಕಾಶ್ಮೀರ (ಶಾರದಾ ಸ್ಕ್ರಿಪ್ಟ್‌), ಗುರುಮುಖಿ(ಪಂಜಾಬಿ), ತೆಲುಗು, ಒರಿಯಾ, ಬೆಂಗಾಲಿ, ಗುಜರಾತಿ ಈ ಎಲ್ಲ ಭಾಷೆಗಳಿಗೂ ಒಂದೇ ಕೀಲಿಮಣೆ ಸಾಕು.

ಅಮೆರಿಕದ ಕೆಲ ದಾನಿಗಳ ಸಹಾಯದಿಂದ ಈ ಕೀಲಿಮಣೆಗಳನ್ನು ಗುರುಪ್ರಸಾದ್, ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಅಳವಡಿಸುತ್ತಿದ್ದಾರೆ. ಎಳೆಯ ವಯಸ್ಸಿನಿಂದಲೇ ಕಂಪ್ಯೂಟರಿನಲ್ಲಿ ಕನ್ನಡವನ್ನು ಬಳಕೆ ಮಾಡುವಂತೆ ಆಗಬೇಕು ಎಂಬುದು ಇದರ ಉದ್ದೇಶವಾಗಿದೆ.

ಕೀಲಿಮಣೆ ಹುಟ್ಟಿನ ಕಥೆ...
ಗುರುಪ್ರಸಾದ್‌ ಮೈಸೂರು ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ. ಶಿಕ್ಷಣ ಪಡೆದಿದ್ದಾರೆ. ಇಸ್ರೊದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ, 1989ರಲ್ಲಿ ಅಮೆರಿಕಕ್ಕೆ ತೆರಳಿದರು. ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಬಳಿಕ ಸ್ವಂತ ಸಾಫ್ಟ್‌ವೇರ್‌ ಸಂಸ್ಥೆ ತೆರೆದು ಕಳೆದ 29 ವರ್ಷಗಳಿಂದ ಅಮೆರಿಕದಲ್ಲೇ ನೆಲೆಸಿದ್ದಾರೆ. ತಾವು ಅಭಿವೃದ್ದಿಪಡಿಸಿರುವ ‘ನಾದಾ’ ಕೀಲಿ ಮಣೆಗಳ ವಿತರಣೆಗಾಗಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದ ಅವರನ್ನು ‘ಯುವ ಪುರವಣಿ’ಗಾಗಿ ಮಾತನಾಡಿಸಿದಾಗ,‘ಕೀಲಿ ಮಣೆಯ’ ಅಭಿವೃದ್ಧಿ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕ-ನಾದ ಕೀಲಿ ಮಣೆಯ ಬಗ್ಗೆ ತಿಳಿಸಿ?
ಕ-ನಾದ ಕೀಲಿಮಣೆಯಲ್ಲಿ ಕನ್ನಡ ಟೈಪ್‌ ಮಾಡಲು ಬಳಕೆದಾರನ ಮನಸ್ಸು ಮತ್ತು ಬೆರಳುಗಳು ಕನ್ನಡ ವರ್ಣಮಾಲೆಯ ಕ್ರಮದಂತೆ ಕೀಲಿ ಮಣೆಗಳಲ್ಲಿ ಅಕ್ಷರ ಜೋಡಣೆ ಮಾಡಲಾಗಿದೆ. ಇದು ಸರಳ, ಸಹಜ, ಭಾಷಾ ಕಲಿಕಾ ಸಾಧನ. ಇಲ್ಲಿ ಇಂಗ್ಲಿಷ್‌ ಅಕ್ಷರಗಳ ಅಗತ್ಯವೂ ಬೀಳುವುದಿಲ್ಲ. ಅಲ್ಲದೇ ಭಾಷಾ ಶುದ್ಧತೆ ಮೂಡುತ್ತದೆ. ಈ ಕೀಲಿ ಮಣೆಯ ಬಳಕೆ ಹಾಗೂ ತರಬೇತಿಗೆ ನಾಲ್ಕು ಗಂಟೆ ಸಾಕು. ಕನ್ನಡ ವರ್ಣ ಮಾಲೆಯ ಸಾಧಾರಣ ಪರಿಚಯ ಇರುವ ಯಾರೂ ಕೂಡ ಒಂದು ಗಂಟೆಯೊಳಗೆ ಸಾಧಾರಣ ಬಳಕೆ ಹಾಗೂ ನಾಲ್ಕು ಗಂಟೆಯೊಳಗೆ ಸಂಪೂರ್ಣ ಬಳಕೆಗೆ ಸಿದ್ಧರಾಗುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಭಾಷಾ ಶುದ್ಧತೆಗೋಸ್ಕರ ನಾದ ಅತ್ಯಂತ ಉಪಯುಕ್ತ ಸಾಧನ.

ಇದರ ವಿಶೇಷತೆಗಳೇನು?
ಭಾರತೀಯ ಭಾಷಾನುಗುಣ, ಬಹು ಭಾಷಿಕ, ಬ್ರಾಹ್ಮೀ, ವರ್ಣ, ಅಕ್ಷರ ವ್ಯವಸ್ಥೆಯ ಕೀಲಿಮಣೆ. ಭಾರತೀಯ ಭಾಷೆಗಳ ಜತೆಗೆ ಆಂಗ್ಲ ವರ್ಣಾಕ್ಷರಗಳ ಸಂಯೋಜನೆಗೆ ಅವಕಾಶ. ಯುಎಸ್‌ಬಿ ಜೋಡಣೆ, ಯುನಿಕೋಡ್‌ ಸಂಕೇತ ವಿಶಿಷ್ಟತೆ. ಕೀಲಿಮಣೆಯ ವರ್ಣಾಕ್ಷರ ವಿನ್ಯಾಸವು ಬ್ರಾಹ್ಮೀ ಭಾಷೆಗೆ ಅನುಗುಣವಾದ ಸ್ವರ, ವ್ಯಂಜನ ವಿಭಾಗವನ್ನು ಅನುಸರಿಸಿ ಮಾಡಲಾಗಿದೆ. ಸರಳ, ಸಹಜ ಭಾಷಾಕಲಿಕಾ ಸಾಧನ. ಶಾಲೆಯಲ್ಲಿ ಭಾಷಾ ಬೋಧಕರಿಗೆ, ಗೃಹ ಶಿಕ್ಷಣಕ್ಕೆ, ಭಾರತೀಯ ಭಾಷೆಗಳ ಪ್ರಥಮ ಕಲಿಕೆಗೆ ಸುಲಭ ಗಣಕ ಸಾಧನ.

ಕೀಬೋರ್ಡ್‌ ಆವಿಷ್ಕಾರಕ್ಕೆ ಸ್ಛೂರ್ತಿ ಯಾರು?
ಇಂಗ್ಲಿಷ್‌ ವ್ಯಾಮೋಹಕ್ಕೆ ಒಗ್ಗಿಕೊಂಡಿರುವ ನಾವು ಮಾತೃ ಭಾಷೆಯನ್ನು ಸಂಪೂರ್ಣ ಮರೆಯುತ್ತಿದ್ದೇವೆ. ಕುಟುಂಬದವರೇ ಸೇರಿದರೂ ಮಾತೃ ಭಾಷೆಯ ಗೋಜಿಗೆ ಹೋಗುವುದಿಲ್ಲ. ಈ ಕೀಲಿಮಣೆಯ ಮೂಲಕವಾದರೂ ಮಾತೃ ಭಾಷೆ ಉಳಿಸುವ ಕೆಲಸವಾಗಲಿ ಎಂಬುದು ನನ್ನ ಮೂಲ ಉದ್ದೇಶ. ಅಮೆರಿಕೆಯಲ್ಲಿ ವಾಸಿಸುವ ನಮಗೆ ನಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಲು ಪಡುವ ಶ್ರಮ, ಭಾಷೆ ಉಳಿಸಿಕೊಳ್ಳಲು ನಡೆಸುವ ಹೋರಾಟದಲ್ಲಿ ಇದರ ಅಗತ್ಯ ಕಾಣಿಸಿತು. ನಮ್ಮ ದೇಶದಲ್ಲೂ ಇದು ಈಗಿನ ತುರ್ತಾಗಿದೆ.

ಯಾಕೆ ಹಳ್ಳಿಯ ಸರ್ಕಾರಿ ಶಾಲೆಗಳಿಗೆ ಈ ಕೀಲಿಮಣೆ ಕೊಡುತ್ತಿದ್ದೀರಿ?
ಇಂದಿನ ಮಕ್ಕಳೇ ಮುಂದೆ ಭಾಷೆಯನ್ನು ಉಳಿಸುವವರು, ಬೆಳೆಸುವವರು. ಅವರು ನಮ್ಮ ಭಾಷೆಯಲ್ಲೇ ಯೋಚಿಸಿ, ಅದನ್ನೇ ಕೀಲಿಮಣೆಯಲ್ಲಿ ಬಳಸಿ, ಕಂಪ್ಯೂಟರ್ ಪರದೆಯ ಮೇಲೆ ಅದನ್ನೇ ನೋಡುತ್ತಾರೆ. ತಂತ್ರಾಂಶವನ್ನು ಸಹ ಕನ್ನಡದಲ್ಲಿಯೇ ಸಿದ್ಧಪಡಿಸುವ ಅವಕಾಶ ಅವರಿಗೆ ಮುಂದಿನ ದಿನಗಳಲ್ಲಿ ಸಿಗುತ್ತದೆ. ಶಾಲೆಯಲ್ಲಿ ಭಾಷಾ ಬೋಧಕರಿಗೆ, ಮನೆಯಲ್ಲಿನ ಶಿಕ್ಷಣಕ್ಕೆ, ಭಾರತೀಯ ಭಾಷೆಗಳ ಪ್ರಥಮ ಕಲಿಕೆಗೆ ಸುಲಭ ಗಣಕ ಸಾಧನವಿದು. ಇದು ನಮ್ಮ ಕನ್ನಡದ ಉಳಿವಿಗೆ ದೊಡ್ಡಮಟ್ಟದ ಕೊಡುಗೆಯಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT