ಗುರುವಾರ , ಆಗಸ್ಟ್ 18, 2022
25 °C

ಚತುರ ಮಸೂರವ ಕಂಡಿರಾ?

ಕ್ಷಮಾ ವಿ. ಭಾನುಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಕೆಲವರು ಅರಳು ಹುರಿದಂತೆ ಪಟ ಪಟ ಮಾತಾಡುತ್ತಾರೆ; ಮಾತಿನಲ್ಲಿ ಅವರು ಉಲ್ಲೇಖಿಸುವ ಕವಿನುಡಿಗಳು, ವಚನಗಳು ಅವರ ವಾಕ್ಚತುರತೆಗೆ ಕನ್ನಡಿ ಹಿಡಿದಂತೆ. ಈಗಂತೂ ಮಾತೊಂದು ಬಂದರೆ ಸಾಕು ಜಗತ್ತನ್ನೇ ಗೆಲ್ಲಬಹುದು ಎಂಬ ಪರಿಸ್ಥಿತಿ. ಕೆಲವರಂತೂ ಮಾತಿಗೆ ನಿಂತರೆ ಬೆಬ್ಬೆಬ್ಬೆ! ಅವರಿಗೆ ಭಾಷಣದ ಮುದ್ರಿತಪ್ರತಿ ಕೈಯಲ್ಲಿರಲೇಬೇಕು ಅಥವಾ ಮುಂದಿನ ವಿದ್ಯುನ್ಮಾನ ಪರದೆಯ ಮೇಲೆ ಹಾಜರಿರಬೇಕು. ಇಲ್ಲವೇ ಕಿವಿಯಲ್ಲಿ ಧರಿಸಿದ ಪುಟಾಣಿ ಇಯರ್‌ಪಾಡ್‌ಗಳಲ್ಲಿ ಪ್ರತಿ ವಾಕ್ಯದ ಮೊದಲ ಪದ ಜ್ಞಾಪಿಸಿದರೆ ಮಾತ್ರ, ಭಾಷಣದ ಗಾಡಿ ಮುಂದಕ್ಕೆ ಓಡುವುದು. ಒಬ್ಬೊಬ್ಬರಿಗೆ ಒಂದೊಂದು ಬಗೆ; ಇದೇನು ತಪ್ಪಲ್ಲ ಬಿಡಿ. ಕೆಲವರಿಗೆ ಅಂಗಡಿಗೆ ಹೋಗುವ ಮುನ್ನ ತಲೆಯಲ್ಲಿ ನೆನಪಿದ್ದ ದಿನಸಿ ಪಟ್ಟಿ, ಅಂಗಡಿಯ ಬಾಗಿಲಿನಲ್ಲಿ ಕಲಸುಮೇಲೋಗರ! ಕೆಲವು ಕುಂಟು ನೆನಪು, ಹಲವು ಮಸುಕು ಮಸುಕು ಎಂಬ ಪರಿಸ್ಥಿತಿ. ಅದರ ಬದಲು ನಮ್ಮ ಕಣ್ಣ ಮುಂದೆಯೇ ಭಾಷಣವೂ ದಿನಸಿಪಟ್ಟಿಯೂ ಹತ್ತಬೇಕಿರುವ ವಿಮಾನದ ವಿವರವೂ ಕೊಳ್ಳುತ್ತಿರುವ ಚಿನ್ನದ ಬಿಡಿಬಿಡಿ ಲೆಕ್ಕಾಚಾರವೂ ಮೂಡುವ ಹಾಗಿದ್ದರೆ? ಅದೂ ಎಲ್ಲಿ? ನಮ್ಮ ಫೋನಿನಲ್ಲೋ, ಚತುರ (ಸ್ಮಾರ್ಟ್‌) ಗಡಿಯಾರದಲ್ಲೋ ಅಲ್ಲ, ನಮ್ಮದೇ ಕಣ್ಣಪರದೆಯಲ್ಲಿ! ಹೀಗೂ ಸಾಧ್ಯವೇ ಎನಿಸಿತಲ್ಲವೇ? ಮಕ್ಕಳಿಗೆ ಬಿದ್ದ ಕನಸೇನೋ ಎನಿಸುವ ಇದನ್ನು ನನಸು ಮಾಡುವಲ್ಲಿ ಸೈ ಎನಿಸಿಕೊಂಡಿದ್ದಾರೆ, ಮೋಜೋ ಸಂಸ್ಥೆಯ ಸಂಶೋಧಕರು.

ಕನ್ನಡಕ ಧರಿಸುವ ಇಚ್ಛೆ ಇಲ್ಲದವರು ‘ಕಾಂಟಾಕ್ಟ್‌ ಲೆನ್ಸ್‌’ ಅನ್ನು ಧರಿಸುವುದು ಗೊತ್ತೇ ಇದೆ. ಈ ಪುಟಾಣಿ ಮಸೂರಗಳು ಅತ್ಯಂತ ಸೂಕ್ಷ್ಮವಾಗಿ, ತೆಳುವಾಗಿ ಇದ್ದು, ಹುಷಾರಾಗಿ ಅವನ್ನು ಕಣ್ಣಗುಡ್ಡೆಯ ಮೇಲೆ ಇರಿಸಿಕೊಳ್ಳಬೇಕು. ನಂತರ, ದೃಷ್ಟಿದೋಷವು ಇದ್ದದ್ದು ಹೌದೇ ಎಂಬಂತೆ ಎಲ್ಲವೂ ನಿಚ್ಚಳವಾಗಿ ಕಾಣುವುದು ಲಕ್ಷಾಂತರ ಜನರ ಅನುಭವವೇ! ಈಗ ಮೋಜೋ ಸಂಸ್ಥೆಯು ತಯಾರಿಸಿರುವ ಚತುರ ಮಸೂರವು (ಸ್ಮಾರ್ಟ್‌ ಲೆನ್ಸ್‌), ದೃಷ್ಟಿದೋಷ ಸರಿಪಡಿಸುವ ಕೆಲಸದ ಜೊತೆಗೆ ಇನ್ನೂ ಹತ್ತು ಹಲವು ಅನುಕೂಲಗಳನ್ನು ನಿಮಗೆ ಕೊಡಮಾಡಲಿದೆಯಂತೆ! ಅದೊಂದು ವಿದ್ಯುನ್ಮಾನ ಪರದೆಯಾಗಿ ಕಂಗೊಳಿಸಲಿದ್ದು, ಅದರ ಮೇಲೆ, ಬೇಕಾದ ಮಾಹಿತಿಯನ್ನು ಪ್ರದರ್ಶನವಾಗುವ ಹಾಗೆ ಮಾಡಿ, ನೀವು ಯಾರಿಗೂ ತಿಳಿಯದಂತೆ ಓದಬಹುದು! ನಿಮ್ಮ ಭಾಷಣವೋ ಪಾಸ್‌ಪೋರ್ಟ್‌ ಮಾಹಿತಿಯೋ ಷೇರುಮಾರುಕಟ್ಟೆಗೆ ಬೇಕಾದ ಅಂಕಿಅಂಶಗಳೋ – ಹೀಗೆ ಏನು ಬೇಕಾದರೂ ಈ ಕಣ್ಣೊಳಗಿನ ಪರದೆಯ ಮೇಲೆ ಮೂಡುವಂತೆ ಮಾಡಬಹುದು. ಅದು, ಇದನ್ನು ಧರಿಸಿದ ನಿಮಗೆ ಮಾತ್ರ ಕಾಣುತ್ತಿರುತ್ತದೆಯೇ ಹೊರತು, ನಿಮ್ಮ ಎದುರಿಗಿರುವವರಿಗೆ ಖಂಡಿತ ಅಲ್ಲ. ಇಷ್ಟೆಲ್ಲಾ ಮಾಹಿತಿ ಕಾಣಬೇಕಾದರೆ ಪರದೆ ಕೊಂಚ ದೊಡ್ಡದಿದ್ದರೆ ಚೆನ್ನ ಅಲ್ಲವೇ? ಹಾಗಾಗಿ, ಈ ಚತುರ ಮಸೂರವು ನಿಮ್ಮ ಕಣ್ಣಗುಡ್ಡೆಯಷ್ಷೇ ಅಗಲ ಇರುವುದಿಲ್ಲ; ಬದಲಿಗೆ, ಕಣ್ಣುಗಳ ಬಿಳಿಯ ಭಾಗಕ್ಕೂ ಹರಡಿಕೊಳ್ಳುತ್ತದೆ.

ಈ ಚತುರ ಮಸೂರವು ಪರದೆಯಂತೆ ಕೆಲಸ ಮಾಡುವುದಷ್ಟೇ ಅಲ್ಲ, ನಿಮ್ಮ ಆರೋಗ್ಯದ ಕಾಳಜಿ ವಹಿಸಲೂ ಸಹಾಯ ಮಾಡುತ್ತದೆ. ಕಂಗಳಲ್ಲಿರುವ ನೀರಿನಲ್ಲಿ ಗ್ಲುಕೋಸ್‌ನ ಪ್ರಮಾಣ ಎಷ್ಟಿದೆ, ಇತರ ಜೀವರಾಸಾಯನಿಕಗಳ ಪ್ರಮಾಣ ಎಷ್ಟಿದೆ ಎಂಬುದ ಆಧಾರದ ಮೇಲೆ ರಕ್ಕದಲ್ಲಿನ ಸಕ್ಕರೆ ಅಂಶ, ಮುಂದೆ ಮಧುಮೇಹ ಬರಬಹುದೇ ಅಥವಾ ಬಂದಿದ್ದರೆ ಅದರ ಮಟ್ಟ ಎಷ್ಟಿದೆ, ಕ್ಯಾನ್ಸರ್‌ ಬರುವ ಸಾಧ್ಯತೆ ಇದೆಯೇ, ಕಣ್ಣಿನೊಳಗಿನ ಒತ್ತಡ ಎಷ್ಟಿದೆ, ಅಂಗಾಂಗಗಳು ಮತ್ತು ಅಂಗಾಂಶಗಳ ಆರೋಗ್ಯ ಹೇಗಿದೆ – ಎಂಬಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲಿ ನಿಮ್ಮ ಕಣ್ಣುಗಳು ಬೆಳಕಿಗೆ ಯಾವಾಗ, ಹೇಗೆ ಸ್ಪಂದಿಸುತ್ತವೆ ಎಂಬುದನ್ನೂ ಗಮನಕ್ಕೆ ತೆಗೆದುಕೊಂಡು, ಇಂತಹ ವಿಶ್ಲೇಷಣೆ ನಡೆಸಲಾಗುತ್ತದೆ. ಇಂತಹ ಆರೋಗ್ಯ ಸಂಬಂಧಿ ಮಾಹಿತಿ ಕಲೆಹಾಕಿ, ವಿಶ್ಲೇಷಿಸಲು ಬೇಕಾದ ಸಂವೇದಕಗಳನ್ನು ಈ ಚತುರ ಮಸೂರಗಳಲ್ಲಿ ಅಡಗಿಸಲಾಗಿರುತ್ತದೆ.

ಇಷ್ಟೇ ಅಲ್ಲ, ಈ ಚತುರ ಮಸೂರಗಳ ಅನುಕೂಲಗಳು ಅಬ್ಬಬ್ಬ ಎನಿಸುವಂತಿವೆ. ಹಾಗಿದ್ದ ಮೇಲೆ ಹೊಸ ವಿದ್ಯುನ್ಮಾನ ಗ್ಯಾಡ್ಜೆಟ್‌ಗಳ ಜೊತೆಗೆ ಇದ್ಯಾಕೆ ಇನ್ನೂ ಮಾರುಕಟ್ಟೆಗೆ ಲಗ್ಗೆ ಇಟ್ಟಿಲ್ಲ ಎಂದು ಯೋಚಿಸುತ್ತಿದ್ದೀರಾ? ಇದರ ಸಮಸ್ಯೆಗಳಿಗಿನ್ನೂ ಸೂಕ್ತ ಪರಿಹಾರ ದೊರೆಯಬೇಕಿದೆ. ಇಷ್ಟೊಂದು ಚತುರ ಮಸೂರಕ್ಕೂ ಸಮಸ್ಯೆ ಇಲ್ಲದಿಲ್ಲ. ಇಂತಹ ಚತುರ ಮಸೂರವನ್ನು ಧರಿಸಿದ ಮೇಲೆ ತೆಗೆಯೋದನ್ನೇ ಮರೆತು ಬಿಡುವ ಸಾಧ್ಯತೆಯಿದೆಯಂತೆ; ಅಷ್ಟು ಅನುಕೂಲಕಾರಿ ಇದು. ಹಾಗಾಗಿ, ಕಣ್ಣೊಳಗಿನ ಅದೇ ಪರದೆಯ ಮೇಲೆ ‘ಮಸೂರವನ್ನು ಧರಿಸಿ ಬಹಳ ಹೊತ್ತಾಯ್ತು, ಅದನ್ನ ಕಳಚಿಡಿ’ ಎಂಬ ಎಚ್ಚರಿಕೆ ಸಂದೇಶ ಪ್ರಕಟವಾಗುತ್ತದಂತೆ. ಅಷ್ಟು ಬಾರಿ ಈ ಮಸೂರಗಳನ್ನು ತೆಗೆಯಬೇಕಾಗುವುದು ಏಕೆ ಗೊತ್ತೇ? ಇದೊಂದು ಸಾಮಾನ್ಯ ಮಸೂರವಲ್ಲ ಸ್ವಾಮಿ, ಇದೊಂದು ವಿದ್ಯುನ್ಮಾನ ಸಾಧನ! ಹಾಗಿದ್ದಮೇಲೆ, ಇದನ್ನು ಚಾರ್ಜ್‌ ಮಾಡಬೇಕಲ್ಲವೇ? ನಮ್ಮ ಮೊಬೈಲು, ಸ್ಮಾರ್ಟ್‌ವಾಚ್‌ಗಳಂತೆ ಇದನ್ನೂ ಹೆಚ್ಚು ಬಳಸಿದರೆ ಹೆಚ್ಚು ಬೇಗ ಚಾರ್ಜ್‌ ಮಾಡಬೇಕಾಗುತ್ತದೆ.

ಇನ್ನು ಪರೀಕ್ಷೆ ಬರೆಯುವ ಮಕ್ಕಳು ಇದನ್ನು ಧರಿಸಿ ಬಂದು, ನಕಲು ಮಾಡುತ್ತಿಲ್ಲ ಎಂದು ಹೇಗೆ ನಂಬುವಿರಿ? ಪ್ರಶ್ನೆಗೆ ಬೇಕಾದ ಉತ್ತರವನ್ನು ಕಣ್ಣೊಳಗೆ ಅಡಗಿದ ಪರದೆಯ ಮೇಲೆ ಓದಿಕೊಂಡು, ಸೂಸೂತ್ರವಾಗಿ ಬರೆದು, ಮೇಲ್ವಿಚಾರಕರ ಮೂಗಿನ ಕೆಳಗೇ ರಾಜಾರೋಷವಾಗಿ ಕಾಪಿ ಹೊಡೆಯುವವರನ್ನು ತಡೆಯುವುದು ಹೇಗೆ? ಜೊತೆಗೆ, ಇದು ಕೇವಲ ಪರದೆಯಂತಲ್ಲ, ಕ್ಯಾಮೆರಾ ಆಗಿ ಕೂಡ ಕಾರ್ಯನಿರ್ವಹಿಸಬಹುದಂತೆ! ಅಂದರೆ ಇದರ ಅರ್ಥ, ಎದುರಿಗಿರುವವರ ಖಾಸಗಿತನವು ಸದ್ದೇ ಇಲ್ಲದಂತೆ ಬಟಾಬಯಲು! ಗೂಗಲ್‌ ಸಂಸ್ಥೆಯ ಚತುರ ಕನ್ನಡಕಗಳು ಇದೇ ಕಾರಣಕ್ಕೇ ಸೋಲನ್ನನುಭವಿಸಿದ್ದು ಗೊತ್ತೇ ಇದೆ. ಚತುರ ಕನ್ನಡಕಗಳಲ್ಲಾದರೂ, ಎದುರಿಗಿರುವವರನ್ನು ಎಚ್ಚರಿಸಲು ಕೆಂಪುದೀಪವಿರುತ್ತದೆ. ಅದು ಆನ್‌ ಆಗಿದ್ದರೆ, ನಮ್ಮ ಕನ್ನಡಕವು ವಿಡಿಯೊ ರೆಕಾರ್ಡ್‌ ಮಾಡುತ್ತಿದೆ ಅಥವಾ ಫೋಟೊ ಸೆರೆಹಿಡಿಯುತ್ತಿದೆ ಎಂದು ಎದುರಿನವರಿಗೆ ತಿಳಿಯುತ್ತದೆ. ಆದರೆ, ಈ ಚತುರ ಮಸೂರಗಳ ಮೂಲಕ ಗಮನಕ್ಕೇ ಬರದಂತೆ ಫೋಟೊ, ವಿಡಿಯೊ ಮಾಡಿ ದೇಶಗಳೇ ನಡುಗುವಂತಹ ಹಗರಣಗಳು ಆಗಬಹುದು ಅಥವಾ ಬೆಳಕಿಗೆ ಬರಬಹುದು. ಯಾರನ್ನು ನೋಡಿದಾಗ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ, ಯಾವುದನ್ನು ಹೆಚ್ಚು ಹೊತ್ತು ಗಮನಿಸುತ್ತೇವೆ ಮುಂತಾದ ಮಾಹಿತಿಗಳೂ ವಿಶ್ಲೇಷಿತಗೊಂಡು ನಮ್ಮ ಖಾಸಗಿತನವೂ ಜಗತ್ತಿನ ಚಹಾದೊಂದಿಗೆ ನೆಂಚಿಕೊಳ್ಳುವ ಚೂಡಾ ಆಗಬಹುದು. ಇಂತಹ ಸಮಸ್ಯೆಗಳನ್ನು ನೀಗಿಕೊಂಡು, ಮಾರುಕಟ್ಟೆಗೆ ಬರುವ ಧಾವಂತದಲ್ಲಿದೆ ಮೋಜೋ ಮಸೂರ. ಹಾಗಾಗಿ, ಈ ಚತುರ ಮಸೂರದ ಮೋಡಿ ನೋಡಲು ಒಂಚೂರು ಕಾಯಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು