ಶುಕ್ರವಾರ, ಡಿಸೆಂಬರ್ 13, 2019
24 °C

ನಿಮ್ಮಿಷ್ಟದ ಗ್ರೂಪ್‌ ಸೇರಿ

ವಿಶ್ವನಾಥ ಶರ್ಮಾ Updated:

ಅಕ್ಷರ ಗಾತ್ರ : | |

ಈಚಿನ ದಿನಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್‌ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬಂಧುಮಿತ್ರರು, ಸ್ನೇಹಿತರು, ತೀರಾ ಪರಿಚಯಸ್ಥರು ಗ್ರೂಪ್‌ಗೆ ಸೇರಿಸಿದರೆ ಅಡ್ಡಿ ಇಲ್ಲ. ಕೆಲವೊಮ್ಮೆ ಕಿರಿಕಿರಿ ಅನ್ನಿಸಿದರೂ ಮ್ಯೂಟ್‌ ಮಾಡಬಹುದು. ಅದರೆ ಯಾರೋ ಅಪರಿಚಿತರು ಅಥವಾ ಒಂದು ಬಾರಿ ಭೇಟಿ ಆಗಿದ್ದು ಎನ್ನುವ ಕಾರಣಕ್ಕೆ ಯಾವುದೋ ಒಂದು ಗ್ರೂಪ್‌ಗೆ ಸೇರಿಸಿದರೆ? ಎಲ್ಲರಿಗೂ ಹಿಡಿಸುವುದಿಲ್ಲ. ಇಂತಹ ಸಮಸ್ಯೆಯಿಂದ ಮುಕ್ತಿ ಪಡೆಯಲು ವಾಟ್ಸ್‌ಆ್ಯಪ್‌ ಬಳಕೆದಾರನಿಗೆ ಅವಕಾಶ ನೀಡಿದೆ.
ವಾಟ್ಸ್‌ಆ್ಯಪ್‌ನಲ್ಲಿ ಯಾರೆಲ್ಲಾ ನಿಮ್ಮನ್ನು ಗ್ರೂಪ್‌ಗೆ ಆ್ಯಡ್ ಮಾಡಬಹುದು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವುದು ಇನ್ನಷ್ಟು ಸರಳಗೊಳಿಸಲಾಗಿದೆ.

ಅನುಮತಿ ಇಲ್ಲದೇ ಗ್ರೂಪ್‌ಗೆ ಆ್ಯಡ್‌ ಮಾಡುವುದನ್ನು ತಪ್ಪಿಸಲು ಏಪ್ರಿಲ್‌ನಲ್ಲಿ ಹೊಸ ಫೀಚರ್ಸ್‌ ಜಾರಿಗೊಳಿಸಲಾಗಿತ್ತು. ಅದರಲ್ಲಿ Everyone, Nobody ಮತ್ತು My Contacts ಆಯ್ಕೆಗಳಿತ್ತು. ಅದರಲ್ಲಿ Nobody ಆಯ್ಕೆ ನೀಡಿರುವುದರಿಂದ ಸ್ನೇಹಿತರು, ಕುಟುಂಬದವರು ಗ್ರೂಪ್‌ಗೆ ಆ್ಯಡ್‌ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ Nobody ತೆಗೆದು ಅದರ ಬದಲಿಗೆ My Contacts Except ಆಯ್ಕೆ ನೀಡಲಾಗಿದೆ. ಇದರಿಂದ ನಮ್ಮ ಕಾಂಟ್ಯಾಕ್ಟ್‌ನಲ್ಲಿ ಇರುವವರಲ್ಲಿಯೂ ಯಾರೆಲ್ಲಾ ನಮ್ಮನ್ನು ಗ್ರೂಪ್‌ಗೆ ಆ್ಯಡ್‌ ಮಾಡಬಹುದು ಮತ್ತು ಮಾಡಬಾರದು ಎಂದು ನಿರ್ಧರಿಸುವ ಅವಕಾಶ ದೊರೆತಿದೆ.

ಇದನ್ನೂ ಓದಿ: ಸುಳ್ಳು ಸಂದೇಶಗಳಿಗೆ ಕಡಿವಾಣ: ವಾಟ್ಸ್ ಆ್ಯಪ್‌ ಭರವಸೆ

ಇಂತಹ ಸಂದರ್ಭದಲ್ಲಿ ಗ್ರೂಪ್‌ ಅಡ್ಮಿನ್‌ ನಮ್ಮನ್ನು ಸೇರಿಸಲು ವೈಯಕ್ತಿಕವಾಗಿ ಇನ್‌ವೈಟ್ ಕಳುಹಿಸಬೇಕು. ಈ ಇನ್ವಿಟೇಷನ್‌ಗೆ ಮೂರು ದಿನಗಳ ಕಾಲಮಿತಿ ಇದೆ. ಆ ಬಳಿಕ ಅದು ಎಕ್ಸ್‌ಪೈರ್‌ ಆಗುತ್ತದೆ. ಬಳಕೆದಾರನಿಗೆ ಗ್ರೂಪ್‌ ಮೆಸೇಜ್‌ಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಅನುಕೂಲ ಆಗುವಂತೆ ಈ ಆಯ್ಕೆ ನೀಡಲಾಗಿದೆ.

ಸಣ್ಣ ಉದ್ದಿಮೆಗೆ ಬಿಸಿನೆಸ್‌ ಕ್ಯಾಟಲಾಗ್

ವಹಿವಾಟು ನಡೆಸಲು ಹಲವು ಮಾರ್ಗಗಳಲ್ಲಿ ವಾಟ್ಸ್ಆ್ಯಪ್‌ ಬಿಸಿನೆಸ್‌ ಆ್ಯಪ್‌ ಕೂಡಾ ಒಂದು. ಸಣ್ಣ ಪ್ರಮಾಣದಲ್ಲಿ ಉದ್ದಿಮೆ ವಹಿವಾಟು ನಡೆಸುವವರಿಗೆ ಇದು ಉಪಯುಕ್ತ. ಇದನ್ನು ಗಮನದಲ್ಲಿ ಇಟ್ಟುಕೊಂಡು ವಾಟ್ಸ್‌ಆ್ಯಪ್‌ ಕಂಪನಿಯು ಇದರಲ್ಲಿ ಕ್ಯಾಟಲಾಗ್‌ ಆಯ್ಕೆಯನ್ನು ನೀಡಿದೆ.

ಬಿಸಿನೆಸ್‌ ಆ್ಯಪ್‌ನಲ್ಲಿ ಇದುವರೆಗೂ ಉತ್ಪನ್ನಗಳು ಮತ್ತು ಸೇವಗಳ ಬಗ್ಗೆ ಒಂದೇ ಬಾರಿಗೆ ಮಾಹಿತಿ ಹಂಚಿಕಳ್ಳಲು ಅವಕಾಶ ಇರಲಿಲ್ಲ. ಬಿಡಿ ಬಿಡಿಯಾಗಿ ನೀಡಬೇಕಿತ್ತು. ಲಿಂಕ್‌ಗಳನ್ನು ಷೇರ್‌ ಮಾಡಬೇಕಿತ್ತು. ಆದರೆ ಇದೀಗ ಕ್ಯಾಟಲಾಗ್‌ ಆಯ್ಕೆ ಅದಕ್ಕೆ ಪರಿಹಾರ ನೀಡಿದೆ. ಉತ್ಪನ್ನಗಳು ಮತ್ತು ಸೇವೆಗಳ ಮಾಹಿತಿ, ಚಿತ್ರ, ಬೆಲೆಯ ವಿವರ, ಉತ್ಪನ್ನ/ಸೇವೆಯ ಕೋಡ್‌ ಅನ್ನು ಒಂದೇ ಪುಟದಲ್ಲಿ ಹಂಚಿಕೊಳ್ಳಲು ಕ್ಯಾಟಲಾಗ್‌ ಉಪಯುಕ್ತವಾಗಿದೆ.

ಫೀಚರ್‌ ಪಡೆಯಲು: WhatsApp Business app > Business settings > Catalog
ಹೀಗೆ, ಕ್ಯಾಟಲಾಗ್‌ ಸೃಷ್ಟಿಸಿದ ಬಳಿಕ ಅದನ್ನು ಬಿಸಿನೆಸ್‌ ಪ್ರೊಫೈಲ್‌ನ ಒಂದು ಭಾಗವಾಗಿ ಅಥವಾ ಚಾಟ್‌ ಮೂಲಕ ಹಂಚಿಕೊಳ್ಳಬಹುದು. ಆಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿ ಈ ಆಯ್ಕೆ ಲಭ್ಯವಿದೆ. ಭಾರತವಲ್ಲದೆ, ಬ್ರೆಜಿಲ್‌, ಜರ್ಮಿನಿ, ಇಂಡೊನೇಷ್ಯಾ, ಮೆಕ್ಸಿಕೊ, ಅಮೆರಿಕ ಮತ್ತು ಯುಕೆನಲ್ಲಿ ಬಳಕೆಗೆ ಇದೆ. ಮುಂದಿನ ದಿನಗಳಲ್ಲಿ ಬೇರೆ ದೇಶಗಳಲ್ಲಿಯೂ ಈ ಆಯ್ಕೆ ನೀಡುವುದಾಗಿ ವಾಟ್ಸ್‌ಆ್ಯಪ್ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು